ರಚನೆ : ಬನ್ನಂಜೆ ಗೋವಿಂದಾಚಾರ್ಯ
ಗಾಯನ : ವಿದ್ಯಾಭೂಷಣ

ಹಾಡು ಕೇಳಿ

ಉಡುಪಿಯ ಕಂಡೀರಾ? ಉಡುಪಿಯ ಕೃಷ್ಣನ ಕಂಡೀರಾ?
ಕೃಷ್ಣನ ಕಂಡೀರಾ? ಕೃಷ್ಣನ ಉಡುಪಿಯ ಕಂಡೀರಾ?

ಜಗದೊಡೆಯ ಬಂದ ಉಡುಪಿಯಲಿ ನಿಂದ ಪಡುಗಡಲ ದಾರಿಯಿಂದ
ಮಿಗಿಲುಂಟೇ ಚಂದ ಕಣ್ಗಳಾನಂದ ಆನಂದಕಂದನಿಂದ
ದ್ವಾರಕೆಯ ವಾಸ ಓ ಹೃಷಿಕೇಶ ಸಾಕೆನಿಸಿತೇನೋ ಈಶ?
ವಾರಿಯಲಿ ಬಂದೆ ದಾರಿಯಲಿ ನಿಂದೆ ನೀ ದಾಟಿ ದೇಶ ದೇಶ

ಕಡಗೋಲು ಕೈಯ ಕಡುನೀಲಿ ಮೈಯ ಈ ಬಾಲರೂಪ ಕಂಡು
ಪೊಡಮಡದ ಶಿರವೊ ಜೋಡಿಸದ ಕರವೊ ಬರೀ ಹುಲ್ಲು ಮಣ್ಣು ಜೊಂಡು
ಆ ಮುಗುಳು ನಗೆಗೆ ಆ ನಿಂತ ಬಗೆಗೆ ಮರುಳಾದಳಂತೆ ಗೋಪಿ
ಶ್ರೀಮಧ್ವಗೊಲಿದ ಕೃಷ್ಣನನೆ ಗೆಲಿದ ವೆಗ್ಗಳದ ನಾಡು ಉಡುಪಿ

ಪಡುಗಡಲ ತೀರದಿಂದೆದ್ದು ಬಾರ ಕಡೆಗೋಲು ಹಗ್ಗ ಹಿಡಿದು
ಬಿಡುಗಡೆಯ ದಾರಿ ಭಕ್ತರಿಗೆ ತೋರಿ ನಮ್ಮೆದೆಯ ಬೆಣ್ಣೆ ಕಡೆದು
ಆನಂದತೀರ್ಥರೀ ಕರೆಗೆ ಪಾರ್ಥಸಾರಥಿಯು ಕರಗಿ ಬಂದು
ತಾನಿಂದ ಕಲ್ಲಿನೊಳಗಿಂದ ಇಲ್ಲಿ ವೈಕುಂಠವನ್ನೇ ತಂದು

******************************************

8 thoughts on “ಕೃಷ್ಣನ ಕಂಡಿರಾ? – ಬನ್ನಂಜೆ ಗೋವಿಂದಾಚಾರ್ಯ”

 1. ಉಡುಪಿಯ ಕೃಷ್ಣನನ್ನು ಇದಕ್ಕಿಂತ ಮನೋಹರವಾಗಿ ವರ್ಣಿಸಬಹುದೆ?
  ನಮಗೆಲ್ಲ ಅದನ್ನು ಉಣಿಸಿದ್ದಕ್ಕೆ ಧನ್ಯವಾದಗಳು.

 2. ಈ ವಿದ್ಯಾಭೂಷಣರಿಗೂ ಕೃಷ್ಣನಿಗೂ ಅದೇನು ಸಂಬಂಧವೋ ಕಾಣೆ.. ಎಷ್ಟು ಚೆನ್ನಾಗಿ ಹಾಡ್ತಾರೆ ಕೃಷ್ಣನ ಮೇಲಿನ ಹಾಡುಗಳನ್ನ.. ಗುನುಗಾಗಿ ಕಾಡುವಂತೆ..

 3. ಉಡುಪಿಯ ಕೃಷ್ಣನನ್ನು ಇಷ್ಟ ಚೆನ್ನಾಗಿ ಬಣ್ಣಿಸಿದ ಬನ್ನಂಜೆಯವರಿಗೆ ಪ್ರಣಾಮಗಳು.

 4. ನಮಸ್ಕಾರ ತ್ರಿವೇಣಿ ಅವರಿಗೆ.
  ಕೆಲವು ವಾರಗಳಿಂದ ತುಳಸಿವನಕ್ಕೆ ಆಗಾಗ ಬಂದು ಹೋಗುತ್ತಿದ್ದೇನೆ. ಬಹಳ ಚನ್ನಾಗಿದೆ ತುಳಸಿ ವನ. ಹೋದ ಬಾರಿ ’ಸೋನು, ಫೋನು ಮತ್ತು ನಾನು’ ಮನ ಮುಟ್ಟಿತ್ತು, ಬಾಯಿ ಕಟ್ಟಿತ್ತು. ಈ ಬಾರಿ ಬನ್ನಂಜೆಯವರ ’ಉಡುಪಿಯ ಕಂಡೀರ’ ನೋಡಿದಾಗ ೧೦-೧೨ ವರ್ಷಗಳ ಹಿಂದೆ ಮೊದಲ ಬಾರಿ ಈ ಹಾಡನ್ನು ಕೇಳಿದ್ದು ನೆನಪಾಯಿತು. ’ಉಡುಪಿಯ ಕಂಡೀರ’ ಮತ್ತು ’ಪಾಜಕದ ಗಿಣಿಯೆ’ ಇವೆರಡು ಹಾಡುಗಳು ಮೊದಲ ಬಾರಿ ಕೇಳಿದಾಗಲೇ ನನ್ನನ್ನು ಸೆಳೆದವು. ಮತ್ತೆ ಮತ್ತೆ ಕೇಳಬೇಕು ಅನಿಸುವದು ವಿದ್ಯಾಭೂಷಣರ ಹಾಡಿನ ಮೋಡಿಯೋ, ಬನ್ನಂಜೆಯವರ ಪದಗಳೋ ಅಥವ ಅವೆರಡರ ಸಮಷ್ಟಿಯೋ! ವಿದ್ಯಾಭೂಷಣರು ಬೇ ಏರಿಯಾಕ್ಕೆ ಬಂದಾಗ ’ಓ ಪಾಜಕದ ಗಿಣಿಯೆ’ ಹಾಡಿದ್ದರು, ಅದರ ಬಗ್ಗೆ ಇಲ್ಲಿ (http://aniljoshis.blogspot.com/2007/06/blog-post.html) ಬರೆದುಕೊಂಡಿದ್ದೆ ಅವತ್ತು ಅನಿಸಿದ್ದನ್ನ.

 5. ಅನಿಲಜೋಶಿಯವರೇ ನಮಸ್ಕಾರ. ನೀವಂದಂತೆ ವಿದ್ಯಾಭೂಷಣರ ಹಾಡಿನ ಮೋಡಿಯ ಬಗ್ಗೆ ಎರಡು ಮಾತಿಲ್ಲ. ಆದರೂ ಬನ್ನಂಜೆಯವರ ಸಾಹಿತ್ಯಕ್ಕೆ ನನ್ನ ಒಂದೆರಡು ಅಂಕಗಳು ಹೆಚ್ಚು. 🙂

  ಬನ್ನಂಜೆಯವರು ಭಕ್ತಿಗೀತೆಗಳಲ್ಲದೆ ಕೆಲವು ಭಾವಗೀತೆಗಳನ್ನೂ (ಕವನಗಳು) ಬರೆದಿದ್ದಾರೆ. ಕೇಳಿದ್ದೀರಾ? “ಕದ ಮುಚ್ಚಿರೆ ಎದೆ ಎಚ್ಚರ ಕಳಕೊಂಡಿದೆ ಖೋಡಿ” (ಶಿವಮೊಗ್ಗ ಸುಬ್ಬಣ್ಣ), ಮುಗಿಲ ಮಾಡ ತೂತು ಕೊರೆದು ನೀರನೆರೆದರು, ನೀರ ನೂಲಿನಿಂದ ಮುಗಿಲು ನೆಲವ ಹೆಣೆದರು” – ಇದನ್ನು ಬಿ.ಕೆ.ಸುಮಿತ್ರ ಮತ್ತು ಸಂಗಡಿಗರು ಹಾಡಿದ್ದಾರೆ.

  ನೀವು ತಿಳಿಸಿರುವ ’ಪಾಜಕದ ಗಿಣಿಯೆ’ ಹಾಡು “ಮಧ್ವಾಚಾರ್ಯ” ಚಿತ್ರಕ್ಕೆಂದು ಬರೆದ ಗೀತೆಯಂತೆ. ಬಾಲಮುರಳಿಕೃಷ್ಣರ ಸಂಗೀತ ನಿರ್ದೇಶನದಲ್ಲಿ ಈ ಹಾಡನ್ನು ವಿದ್ಯಾಭೂಷಣರು – ಆಗಿನ್ನೂ ಸನ್ಯಾಸಾಶ್ರಮದಲ್ಲಿದ್ದರು- ಹಾಡಿದಾಗ ಬಾಲಮುರಳಿಯವರು ಬಹಳ ಸಂತೋಷಪಟ್ಟರೆಂದು ಪತ್ರಿಕೆಯಲ್ಲಿ ವರದಿಯಾಗಿತ್ತು. ಆದರೆ ಚಿತ್ರದಲ್ಲಿ ಈ ಹಾಡು ಬಳಕೆಯಾಗಿಲ್ಲ.

  ನಿಮ್ಮ ಬ್ಲಾಗಿಗೆ ಬಂದಿದ್ದೆ. ರುಚಿಯಾದ, ಬಿಸಿ ಭಕ್ರಿ ತಿನ್ನಲು ಅಲ್ಲ, ಓದಲು ಮಾತ್ರ ಸಿಕ್ಕಿತು. 🙂

 6. ತ್ರಿವೇಣಿ ಅವರಿಗೆ ನಮಸ್ಕಾರ.
  ಬನ್ನಂಜೆ ಅವರ ಭಾವಗೀತೆಗಳ ಬಗ್ಗೆ ತಿಳಿಸಿದ್ದಕ್ಕೆ ವಂದನೆ. ನೀವು ಹೇಳಿದವೆರಡನ್ನೂ ನಾನು ಕೇಳಿಲ್ಲ. ಸೊಗಸಾಗಿರುವಂತಿವೆ. ಪೂರ್ತಿ ಹಾಡು ನಿಮ್ಮ ಬಳಿ ಇದ್ದರೆ ತುಳಸಿವನದಲ್ಲಿ ಅವುಗಳ ಪಾಳಿ ಬರಬಹುದೆ 🙂 ?

  ಬಿಸಿ ಭಕ್ರಿ ನಿಮಗಿಷ್ಟವಾಗಿದ್ದು ಸಂತೋಷ.

 7. “ಪೂರ್ತಿ ಹಾಡು ನಿಮ್ಮ ಬಳಿ ಇದ್ದರೆ ತುಳಸಿವನದಲ್ಲಿ ಅವುಗಳ ಪಾಳಿ ಬರಬಹುದೆ ? ”

  ಅನಿಲ್, ಸಾಹಿತ್ಯ ನೆನಪಿದೆ. ಬರೆಯಬಲ್ಲೆ. ಆದರೆ ನಿಮಗೆ ಹಾಡು ಕೇಳಿಸಲು ಸಾಧ್ಯವಿಲ್ಲ. 🙂

  ಬೆಂಗಳೂರು ಆಕಾಶವಾಣಿಯವರ ಸಂಗ್ರಹದಲ್ಲಲ್ಲದೆ, ಬೇರೆಲ್ಲೂ ಆ ಹಾಡುಗಳು ಇದ್ದಂತಿಲ್ಲ.

 8. Sri Bannanje Govindacharya is one of the prolific scholars of the nation. his lectures and verses have always been thought provoking and imparting pleasure

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.