ಕವನ – ಜಡೆ
ಕವಿ – ಜಿ. ಎಸ್. ಶಿವರುದ್ರಪ್ಪ
ಲಲನೆಯರ ಬೆನ್ನೆನೆಡೆ
ಹಾವಿನೊಲು ಜೋಲ್ವ ಜಡೆ
ಕಾಳಿಂದಿಯಂತಿಳಿದು, ಕೊರಳೆಡೆಗೆ ಕವಲೊಡೆದು
ಅತ್ತಿತ್ತ ಹರಿದ ಜಡೆ!
ಚೇಳ್ ಕೊಂಡಿಯಂಥ ಜಡೆ,
ಮೋಟು ಜಡೆ, ಚೋಟು ಜಡೆ,
ಚಿಕ್ಕವರ ಚಿನ್ನ ಜಡೆ !
ಎಣ್ಣೆ ಕಾಣದೆ ಹಿಣಿಲು ಹಿಣಿಲಾಗಿ ಹೆಣೆದ ಜಡೆ
ಬೆವರಿನಲಿ ಧೂಳಿನಲಿ ನೆನೆದಂಟಿಕೊಂಡಿರುವ
ಗಂಟು ಜಡೆ!
ಅಕ್ಕ ತಂಗಿಯ ಮುಡಿಯ
ಹಿಡಿದು ನಾನೆಳೆದಂಥ
ಮಲ್ಲಿಗೆಯ ಕೆಂಪು ಜಡೆ
ಕೇದಗೆಯ ಹೆಣೆದ ಜಡೆ
ಮಾತೃ ಮಮತಾವೃಕ್ಷ ಬಿಟ್ಟ ಬೀಳಲಿನಂತೆ
ಹರಡಿರುವ ತಾಯ ಜಡೆ !
“ಕುರುಕುಲ ಜೀವಾಕರ್ಷಣ ಪರಿಣತ” – ಆ
ಪಾಂಚಾಲಿಯ ಜಡೆ!
ಸೀತೆಯ ಕಣ್ಣೀರೊಳು ಮಿಂದ ಜಡೆ
ಓ ಓ ಈ ಜಡೆಗೆಲ್ಲಿ ಕಡೆ !
***
ಸಂಜೆಯಲಿ ಹಗಲು ಕೆದರುವ ಕತ್ತಲೆಯ
ಕಾಳ ಜಡೆ
ಬೆಳಗಿನಲಿ ಇರುಳು ಬಿಚ್ಚುವ ಬೆಳ್ಳನೆಯ
ಬೆಳಕು ಜಡೆ
ಒಮ್ಮೊಮ್ಮೆ ಮುಗಿಲಲ್ಲಿ ತೇಲುತ್ತ ಬರುವಂಥ
ಬೆಳ್ಳಕ್ಕಿಗಳ ಜಡೆ
ಕೊಂಚೆಗಳ ಜಡೆ
ಮರ ಮರದಿ ಬಳಕುತಿಹ ಹೂಬಿಟ್ಟ ಬಳ್ಳಿ ಜಡೆ !
ಕಾಡ ಬಯಲಿನ ಹಸುರು ಹಸರದಲಿ ಹರಿ ಹರಿದು
ಮುನ್ನಡೆವ ಹೊಳೆಯ ಜಡೆ !
ಶ್ರೇಣಿ ಶ್ರೇಣಿಗಳಾಗಿ ಹರಿದಿರುವ ಗಿರಿಯ ಜಡೆ !
ಗಿರಿ ಶಿವನ ಶಿರದಿಂದ ಹಬ್ಬಿ ಹಸರಿಸಿ ನಿಂದ
ಕಾನನದ ಹಸುರು ಜಡೆ
ನಕ್ಷತ್ರಗಳ ಮುಡಿದ ನಟ್ಟಿರುಳ ನಭದ ಜಡೆ
ಮುಂಗಾರು ಮೋಡಗಳು ದಿಕ್ಕು ದಿಕ್ಕಿಗೆ ಬಿಚ್ಚಿ
ಹರಡಿರುವ ಮಳೆಯ ಜಡೆ !
ಚಂದ್ರಚೂಡನ
ವ್ಯೋಮಕೇಶನ
ವಿಶ್ವವನೆ ವ್ಯಾಪಿಸುತ ತುಂಬಿರುವ ಜಡೆ
ಗಾನಗಳ ಕಾವ್ಯಗಳ ಶಿಲ್ಪಗಳ ಕಲೆಯ ಜಡೆ
ಎಲ್ಲವೂ ರಮ್ಯವೆಲ್ಲ !
ಜಡೆಯಾಚೆ ತಿರುಗಿಸಿದ ತಾಯ ಮುಖ ಮಾತ್ರ ಇಂದಿಗೂ
ಕಾಣದಲ್ಲ !
ಜಡೇ ಕವನಕ್ಕಾಗಿ ಧನ್ಯವಾದಗಳು…
ಓದಿ ಸುಸ್ತಾಗಿ ಹೋಯಿತು…!
ಹಾಗೇ ಕೊನೆಯ ಸಾಲು ಓದಿ ಯಾಕೋ ಸಂಕಟ ವಾಯ್ತು
ಪ್ರಿಯರೇ,
ಮೊದಲು ಒಂದು ಸಾರಿ ಕೂಡ ಇಲ್ಲಿ ಬಂದು ಕಣ್ಣು ಹಾಯಿಸಿದೇನೆ. ನಿಮ್ಮಷ್ಟು ಆರ್ಗನೈಸ್ಡ ಹಾಗು ಓದುಗಪರವಾಗಿರುವ ಇನ್ನೊಂದು ಪುಟವನ್ನ ನಾನು ನೋಡೇ ಇಲ್ಲ!! ಇಲ್ಲಿ ಬಂದರೇನೆ ಒಂದು spic and span ಮನೆಗೆ ಕಾಲಿಟ್ಟ ಭಾವನೆ. ಇನ್ನು ಮುಂದೆ ಬರ್ತಿರ್ತೇನೆ. ಕವಿತೆಗಳಿಗಾಗಿ ಧನ್ಯವಾದಗಳು.
-ಟೀನಾ
ಮಾಲಾ , ಜಡೆಗೀಗ “ಮೊಗ್ಗು” ಮುಡಿಸಬಹುದು. 🙂
ಟೀನಾ, ನಮ್ಮ ತೋಟಕ್ಕೆ ಆತ್ಮೀಯ ಸ್ವಾಗತ. ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು. 🙂