ರಚನೆ : ವಿಜಯದಾಸರು
ಮುಖಾರಿ ರಾಗ, ಝಂಪೆ ತಾಳ

1.

ನಿನ್ನ ದರುಶನಕೆ ಬಂದವನಲ್ಲವೊ|
ಪುಣ್ಯವಂತರ ಪಾದ ದರುಶನಕೆ ನಾ ಬಂದೆ ||ಪಲ್ಲವಿ||

ಎಲ್ಲೆಲ್ಲಿಯೂ ನಿನ್ನ ವ್ಯಾಪ್ತಿ ತಾನಾಗಿರಲು |
ಇಲ್ಲಿಗೇ ಬರುವ ಕಾರಣವಾವುದೋ |
ಸೊಲ್ಲಿಗೇ ಸ್ತಂಭದಲಿ ತೋರಿದ ಮಹಾಮಹಿಮ |
ಎಲ್ಲಿಲ್ಲವೋ ನೀನು ಬಲ್ಲ ಭಕುತರಿಗೆ ||೧||

ಕರೆದಾಗಲೇ ಓಡಿ ಬಂದೊದಗುವ ಸ್ವಾಮಿ |
ಮರಳಿ ಗಾವುದವೆಣಿಸಿ ಬರಲ್ಯಾತಕೆ |
ನೆರೆನಂಬಿದವರಿಗಾವಲ್ಲಿಯಾದರೆ ಏನೊ |
ಅರಿತವರ ಮನದಲ್ಲಿ ನಲಿದಾಡುವ ಚೆಲುವ ||೨||

ಕಠಿಣವೋ ನಿನ್ನ ಭಕುತರ ನೋಡುವ ಲಾಭ |
ಸಟೆಯಿಲ್ಲ ವೇದಗಳು ಸಾರುತಿಹವೋ |
ವಟು ಮೊದಲಾದ ಸದ್ವೈಷ್ಣವರ ದಿವ್ಯಾಂಘ್ರಿ|
ತೃಟಿಯಾದರೆನಗೆ ಸೋಂಕಲು ಗತಿಗೆ ದಾರಿ ||೩||

ನೀನಿದ್ದ ಸ್ಥಾನದಲಿ ಸಕಲ ಪುಣ್ಯಕ್ಷೇತ್ರ |
ನೀನಿದ್ದ ಸ್ಥಾನದಲಿ ಸಕಲ ತೀರ್ಥ |
ನೀನಿದ್ದ ಸ್ಥಾನದಲು ಸರ್ವ ಸಾತ್ವಿಕರುಂಟು |
ನಾನಿಂತು ಬಂದದ್ದು ನಿನಗೆ ತಿಳಿಯದೆ ಸ್ವಾಮಿ ||೪|

ಧ್ಯಾನಕೆ ಸಿಲುಕುವೆಡೆ ನಿನ್ನ ಕಾಣಲಿಬಹುದು
ಜ್ಞಾನಿಗಳು ಬರುವರೆಂತೋ ಅಲ್ಲಿ
ಅನಂತ ಜನ್ಮದಲಿ ಜಪತಪ ವ್ರತಹೋಮ |
ಏನು ಮಾಡಿದರಿಷ್ಟು ಜನ ಕೂಡುವುದೊ ದೇವ ||೫||

ಭಳಿರೆ ತಿರುಮಲರಾಯ ನಿನ್ನ ಕರುಣಾರಸಕೆ |
ನೆಲೆಗಾಣೆ ನೆಲೆಗಾಣೆ ಈ ಧರೆಯೊಳು |
ಒಲಿದು ಭಕ್ತರಿಗಾಗಿ ಮದುವೆ ಹಬ್ಬಿಸಿಕೊಂಡೆ |
ಸುಲಭ ದೇವರದೇವ ವಿಜಯ ವಿಠಲರೇಯ ||೭||

***********************************

2.

ತೊಳಸದಕ್ಕಿಯ ತಿಂಬ ಕಿಲುಬು ತಳಿಗೆಯಲುಂಬ
ಕೊಳಗದಲಿ ಹಣಗಳನು ಅಳೆದು ಕೊಂಬ
ಇಲ್ಲ ಕಾಸು ಎಂದು ಸುಳ್ಳು ಮಾತಾಡಿದರೆ
ಎಲ್ಲವನು ಕಸುಕೊಂಬ ಕಳ್ಳದೊರೆಗೆ
ಜಯ ಮಂಗಳಂ| ನಿತ್ಯ ಶುಭ ಮಂಗಳಂ|

ತನ್ನ ನೋಡೇನೆಂದು ಮುನ್ನೂರು ಗಾವುದ ಬರಲು
ತನ್ನ ಗುಡಿಯ ಪೊಕ್ಕ ಜನರಿಗೆಲ್ಲ
ಹೊನ್ನು ಹಣಗಳ ಕಸಿದು ತನ್ನ ದರುಶನ ಕೊಡದೆ
ಬೆನ್ನೊಡೆಯ ಹೊಯ್ಯಿಸುವ ಅನ್ಯಾಯಕಾರಿಗೆ
ಜಯ ಮಂಗಳಂ| ನಿತ್ಯ ಶುಭ ಮಂಗಳಂ|

ಗಿಡ್ಡ ಹಾರುವನಾಗಿ ಒಡ್ಡಿ ದಾನವ ಬೇಡಿ
ದುಡ್ಡು ಕಾಸುಗಳಿಗೆ ಕೈಯ ನೀಡಿ
ಅಡ್ಡ ಬಿದ್ದ ಜನರ ವಿಡ್ದೂರಗಳ ಕಳೆದು
ದೊಡ್ಡವರ ಮಾಳ್ಪ ಸಿರಿ ವಿಜಯ ವಿಠಲಗೆ
ಜಯ ಮಂಗಳಂ| ನಿತ್ಯ ಶುಭ ಮಂಗಳಂ|

(ಸಂದರ್ಭ : ತಿರುಪತಿಯಲ್ಲಿ, ಬ್ರಹ್ಮೋತ್ಸವ ಸಮಯದಲ್ಲಿ, ವಿಜಯದಾಸರಿಗೆ ದೈವ ದರುಶನ ದೊರೆಯದಿದ್ದಾಗ, ದೇವರನ್ನು ಉದ್ದೇಶಿಸಿ ಹಾಡಿದ ಪದಗಳೆಂದು ಹೇಳಲಾಗುತ್ತದೆ.)

2 thoughts on “ನಿನ್ನ ದರುಶನಕೆ ಬಂದವನಲ್ಲವೊ”

  1. ನಮಸ್ಕಾರ ತ್ರಿವೇಣಿಯವರೇ

    ನೀವಿಲ್ಲಿ ಹಾಕುತ್ತಿರುವ ಹಾಡುಗಳನ್ನೆಲ್ಲ ದಯವಿಟ್ಟು ಹರಿದಾಸ ಸಂಪದದಲ್ಲೂ ಪೋಸ್ಟ್ ಮಾಡಿ!

    -ಹಂಸಾನಂದಿ

  2. ಹಂಸಾನಂದಿಯವರೆ, ಸಲಹೆಗೆ ಧನ್ಯವಾದಗಳು.

    ಹರಿದಾಸ ಸಂಪದಲ್ಲಿ ಕೆಲವು ಹಾಡುಗಳನ್ನು ಈಗಾಗಲೇ ಪೋಸ್ಟ್ ಮಾಡಿದ್ದೇನೆ. ಮತ್ತಷ್ಟು ಮಾಡಲಿದ್ದೇನೆ. ಹಾಗೆಯೇ rasikas.org/wiki/purandara ಗೆ ಕೂಡ ಬಹಳಷ್ಟು ಹಾಡುಗಳನ್ನು ಸೇರಿಸಬೇಕಿದೆ.

Leave a Reply to sritri Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.