ರಚನೆ – ಪುರಂದರದಾಸರು
ಮಧ್ಯಮಾವತಿ ರಾಗ, ಅಟ್ಟ ತಾಳ

ಜಂಗಮರು ನಾವು | ನೀವೇ ಕೇಳಿ ||ಪಲ್ಲವಿ||

ಜಂಗಮರು ನಾವು ಲಿಂಗಾಂಗಿಗಳು
ಮಂಗಳವಂತರ | ಭವಿಗಳೆಂಬಿರಿ ಬರಿದೆ ||ಅನು||

ಶಿವಗುರುದೈವ ಕೇಶವ ನಮ್ಮ ಮನೆದೈವ
ವರದ ಮೋಹನ ನಮ್ಮ ಗುರುಶಾಂತೇಶ
ಶಿವ ಗುರುದ್ರೋಹಮಾಡಿದ ಪರವಾದಿಗೆ
ರವರವ ನರಕದೊಳುರುಳುವದೇ ಗತಿ ||೧||

ವಿಭೂತಿ ನಮಗುಂಟು | ವಿಶ್ವೇಶ ನಮಗುಂಟು
ಶೋಭನ ಮುದ್ರೆಯು ನಮಗುಂಟು |
ಶ್ರೀ ಭಾಗೀರಥಿ ಅಗ್ನಿಮಜ್ಜನ ನಮಗುಂಟು
ಸೌಭಾಗ್ಯವೀವ ಮಹಂತಿನ ಮಠದವರು ||೨||

ವಿರಕ್ತರು ನಾವು | ಶೀಲವಂತರು ನಾವು
ವೀರಭದ್ರನ ಪ್ರಿಯ ಪ್ರಿಯ ಭಕ್ತರಾವು
ಕಾರಣಕರ್ತ ಶ್ರೀ ಪುರಂದರ ವಿಠಲನ
ಕಾರುಣ್ಯಕೆ ಮುಖ್ಯಪಾತ್ರರು ನಾವು ||೩||

ಹಿನ್ನಲೆ :- ಪುರಂದರದಾಸರು ಸೊಲ್ಲಾಪುರದಲ್ಲಿದ್ದಾಗ, ಒಮ್ಮೆ ಬ್ರಾಹ್ಮಣರಿಗೂ ಲಿಂಗಾಯತರಿಗೂ ಮತ ಸಂಬಂಧವಾದ ವಿವಾದ ಹುಟ್ಟಿತು. ವಿವಾದವು ಕೇವಲ ವಾಕ್ಕಲಹದಲ್ಲೇ ಪರ್ಯವಸಾನವಾಗಲಿಲ್ಲ. ಕೈ ಕಲೆತು ಯುದ್ಧ ಪ್ರಸಂಗವೊದಗಿತು. ಆ ಕಠಿಣ ಪರಿಸ್ಥಿತಿಯಲ್ಲಿ ದಾಸರು ಉಭಯ ಪಕ್ಷದವರನ್ನೂ ಸೇರಿಸಿ ಈ ಪದವನ್ನು ಹಾಡಿ ಸಮಾಧಾನಗೊಳಿಸಿದರು. ಮಟಮಟ ಮಧ್ಯಾಹ್ನದಲ್ಲಿ ಮತಿಗೆಟ್ಟ ಜನರು ಕೈಕಲಹಕ್ಕೆ ನಿಂತ ಸಮಯದಲ್ಲಿ, ಪುರಂದರದಾಸರು ಮತಗಳಲ್ಲಿ ಸಮರಸ ಹುಟ್ಟುವಂತೆ ಕಾಲಕ್ಕೆ ಸರಿಯಾಗಿ ಮಧ್ಯಮಾವತಿ ರಾಗದಲ್ಲಿ ದೇವರನಾಮವನ್ನು ಹಾಡಿದ್ದು ಪರಿಣಾಮಕಾರಿಯಾಯಿತು. ಜನರ ಉದ್ವೇಗವು ಉತ್ಸಾಹದಲ್ಲಿ ರೂಪಾಂತರವಾಯಿತು.

( ಕರ್ನಾಟಕ ಭಕ್ತ ವಿಜಯ, ಲೇಖಕರು – ಬೇಲೂರು ಕೇಶವದಾಸರು)

4 thoughts on “ಜಂಗಮರು ನಾವು”

 1. ಅಪರೂಪದ ಗೀತೆ ಮತ್ತದರ ಹಿನ್ನೆಲೆಯನ್ನೂ ಒದಗಿಸಿದ್ದಕ್ಕೆ ಧನ್ಯವಾದಗಳು.

  ವೇಣಿಯಮ್ಮ, ನಿಮ್ಮ ಬರಹ ಯಾವಾಗ ಬೆಳಕು ಕಾಣತ್ತೆ ಇಲ್ಲಿ? ಕಾಯುತ್ತಿದ್ದೇನೆ. ‘ಅಭಿಮಾನಿನಿ’ಯರಿಗೆ ನಿರಾಸೆ ಮಾಡಬೇಡಿ ತಾಯಿ!!

 2. ಜ್ಯೋತಿ, ನಿನ್ನ ಅಭಿಮಾನಕ್ಕೆ ಆಭಾರಿ. ನಾನು ಬೇರೊಂದು ದೀರ್ಘ ಲೇಖನದ ತಯಾರಿಯಲ್ಲಿರುವುದರಿಂದ ಸದ್ಯಕ್ಕೆ ತುಳಸಿವನದಲ್ಲಿ ದಾಸಸಾಹಿತ್ಯ, ಕವಿ-ಕಾವ್ಯಗಳದ್ದೇ ಮೆರವಣಿಗೆ. 🙂

 3. ‘ತುರುಕರು ಕರೆದರೆ ಉಣ್ಣಬಹುದೇ?’ – ಈ ಹಾಡಿನ ಸಾಹಿತ್ಯವಿದ್ದರೆ ಪ್ರಕಟಿಸುವಿರಾ? ಹಾಗೇ ಹಿನ್ನಲೆ ಗೊತ್ತಿದ್ದರೆ ತಿಳಿಸಿ.

 4. ಮುರಳಿಧರರೇ ನಮಸ್ಕಾರ.

  ‘ತುರುಕರು ಕರೆದರೆ ಉಣ್ಣಬಹುದೇ?’ ಅಲ್ಲ, ಉಣ್ಣಬಹುದಣ್ಣ!

  ನಿಮ್ಮ ಈ ಪ್ರಶ್ನೆಯಿಂದಾಗಿ ಬಹುದಿನಗಳಿಂದ ಓದಬೇಕೆಂದಿದ್ದ ಪುಸ್ತಕಗಳನ್ನು ತೆರೆದು ಓದುವಂತಾಯಿತು. ತುರುಕರುಗಳ ಜಾಡು ಹಿಡಿದು ಹೋದಾಗ ದಾಸರು ರಚಿಸಿರುವ ‘ಫಕೀರನ ಮಾಡಿದೆ ನೀನು’ ಎಂಬ ಅಪರೂಪದ ರಚನೆಯೂ ನನಗೆ ದೊರಕಿತು. ನಿಮಗೆ ಧನ್ಯವಾದಗಳು.

  ಇಂದಿನ ದಿನವೇ
  ಶುಭದಿನವು! 🙂

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.