ರಚನೆ – ವಿಜಯದಾಸರು

ರಾಗ : ನಾಟಿ, ತಾಳ : ಧ್ರುವ

ವೀರ ಸಿಂಹನೆ ನಾರಸಿಂಹನೆ ದಯ ಪಾರಾ
ವಾರನೆ ಭಯ ನಿವಾರಣ ನಿರ್ಗುಣ
ಸಾರಿದವರ ಸಂಸಾರ ವೃಕ್ಷದ ಮೂಲ
ಭೇರರಿಸಿ ಕೀಳುವ ಬಿರಿದು ಭಯಂಕರ
ಘೋರವತಾರ ಕರಾಳವದನ ಆ-
ಘೋರ ದುರಿತ ಸಂಹಾರ ಮಾಯಾಕಾರ
ಕ್ರೂರ ದೈತ್ಯರ ಶೋಕ ಕಾರಣ ಉದುಭವ
ಈರೇಳು ಭುವನ ಸಾಗರದೊಡೆಯ
ಆ ರೌದ್ರನಾಮಕ ವಿಜಯ ವಿಠ್ಠಲ ನರಸಿಂಗ
ವೀರರಸಾತುಂಗ ಕಾರುಣ್ಯಪಾಂಗ ||೧||

ಮಟ್ಟ ತಾಳ

ಮಗುವಿನ ರಕ್ಕಸನು ಹಗಲಿರುಳು ಬಿಡದೆ
ಹಗೆಯಿಂದಲಿ ಹೊಯ್ದು ನಗಪನ್ನಗ ವನದಿ
ಗಗನ ಮಿಗಿಲಾದ ಆಗಣಿತ ಭಾದಿಯಲಿ
ನೆಗದು ಒಗದು ಸಾವು ಬಗೆದು ಕೊಲ್ಲುತಿರಲು ಹೇ
ಜಗದ ವಲ್ಲಭನೇ ಸುಗುಣಾನಾದಿಗನೆ
ನಿಗಮ ವಂದಿತನೆ ಪೊಗಳಿದ ಭಕುತರ
ತಗಲಿ ತೊಲಗನೆಂದೂ ಮಿಗೆ ಕೂಗುತಲಿರಲು
ಯುಗ ಯುಗದೊಳು ದಯಾಳುಗಳ ದೇವರ ದೇವ
ಯುಗಾದಿ ಕೃತನಾಮಾ ವಿಜಯ ವಿಠ್ಠಲ ಹೋ ಹೋ
ಯುಗಳ ಕರವ ಮುಗಿದು ಮಗುವು ಮೊರೆ ಇಡಲು ||೨||

ರೂಪಕ ತಾಳ

ಕೇಳಿದಾಕ್ಷಣದಲಿ ಲಾಲಿಸಿ ಭಕ್ತನ
ಮೌಳಿ ವೇಗದಲಿ ಪಾಲಿಸುವೆಂದು
ತಾಳಿಸಂತೋಷವ ತೂಳಿ ತುಂಬಿದಂತೆ
ಮೂಲೋಕದ ಪತಿವಾಲಯದಿಂದ ಸು
ಶೀಲ ದುರ್ಲಭ ನಾಮ ವಿಜಯ ವಿಠ್ಠಲ ಫಂಚ
ಮೌಳಿ ಮಾನವ ಕಂಭ ಸೀಳಿ ಮೂಡಿದ ದೇವ ||೩||

ಝಂಪೆ ತಾಳ

ಲಟಲಟಾ ಲಟಲಟಾ ಲಟಕಟಿಸಿ ವನಜಾಂಡ
ಕಟಹ ಪಟ ಪಟ ಪುಟುತ್ಕಟದಿ ಬಿಚ್ಚುತಲಿರಲು
ಪುಟ ಪುಟ ಪುಟನೆಗೆದು ಚೀರಿಹಾರುತ್ತ ಪ
ಲ್ಕಟಾ ಕಟಕಟ ಕಡಿದು ರೋಷದಿಂದ
ಮಿಟಿಮಿಟಿ ಮಿಟನೆ ರಕ್ತಾಕ್ಷಿಯಲ್ಲಿ ನೋಡಿ
ತಟಿತ್ಕೋಟಿ ಊರ್ಭಟಗೆ ಆರ್ಭಟವಾಗಿರಲು
ಕುಟಿಲ ರಹಿತ ವ್ಯಕ್ತ ವಿಜಯ ವಿಠ್ಠಲ ಶಕ್ತ
ದಿಟ ನಿಟಿಲ ನೇತ್ರ ಸುರಕಟಕ ಪರಿಪಾಲಾ ||೪||

ತ್ರಿವಿಡ ತಾಳ

ಬೊಬ್ಬಿರಿಯೆ ವೀರ ಧ್ವನಿಯಿಂದ ತನಿಗಿಡೆ
ಹಬ್ಬಿ ಮುಂಜೋಣಿ ಉರಿ ಹೊರಗೆದ್ದು ಸುತ್ತೆ
ಉಬ್ಬಸ ರವಿಗಾಗೆ ಆಬ್ಜ ನಡುಗುತಿರೆ
ಆಬ್ದಿಸಪುತ ಉಕ್ಕಿ ಹೊರ ಚೆಲ್ಲಿ ಬರುತಿರೆ
ಆಬುಜ ಭವಾದಿಗಳು ತಬ್ಬಬ್ಬುಗೊಂಡರು
ಆಬ್ಬರವೇನೆನುತ ನಭದ ಗೋಳಿಯು ತಗಿಯೆ
ಶಬ್ದ ತುಂಬಿತು ಅವ್ಯಾಕೃತಾಕಾಶ ಪರಿಯಂತ
ನಿಬ್ಬರ ತರುಗಿರಿ ಝರಿಝರಿಸಲು
ಒಬ್ಬರಿಗೊಶವಲ್ಲದ ನಮ್ಮಾ ವಿಜಯ ವಿಠ್ಠಲ
ಇಬ್ಬಗೆಯಾಗಿ ಕಂಭದಿಂದ ಪೊರಮಟ್ಟಾ ||೫||

ಅಟ್ಟ ತಾಳ

ಘುಡಿಘುಡಿಸುತ ಕೋಟಿ ಸಿಡಿಲು ಗಿರಿಗೆ ಬಂದು
ಹೊಡೆದಂತೆ ಚೇರಿ ಬೊಬ್ಬಿಡುತಲಿ ಲಂಘಿಸಿ
ಹಿಡಿದು ರಕ್ಕಸನ್ನ ಕೆಡಹಿ ಮಡುಹಿ ತುಡುಕಿ
ತೊಡೆಯ ಮೇಲಿರಿಸಿ ಹೇರೂಡಲ ಕೂರುಗುರದಿಂದ
ಪಡುವಲ ಗಡಲ ತಡಿಯ ತರಣಿಯ ನೋಡಿ
ಕಡುಕೋಪದಲ್ಲಿ ಸದಬಡಿದು ರಕ್ಕಸನ ಕೆಡಹಿ
ನಿಡಿಗರುಳನು ಕೊರಳಡಿಯಲ್ಲಿ ಧರಿಸಿದ ಸಡಗರದ ದೈವ
ಕಡುಗಲಿ ಭೂರ್ಭೂವ ವಿಜಯ ವಿಠ್ಠಲ
ಪಾಲ್ಗಡಲೊಡೆಯ ಶರಣರ ವಡವೆ ವಡನೊಡನೆ ||೬||

ಏಕ ತಾಳ

ಉರಿಮಸಗೆ ಚತುರ್ದಶ ಧರಣಿ ತಲ್ಲಣಿಸಲು
ಪರಮೇಷ್ಠಿ ಹರಸುರರು ಸಿರಿದೇವಿಗೆ ಮೊರೆಯಿಡಲು
ಕರುಣದಿಂದಲಿ ತನ್ನ ಶರಣನ್ನ ಸಹಿತ ನಿನ್ನ
ಚರಣಕ್ಕೆ ಎರಗಲು ಪರಮ ಶಾಂತನಾಗಿ
ಹರಹಿದೆ ದಯವನ್ನ ಸುರರು ಕುಸುಮ ವರುಷ
ಗರಿಯಲು ಭೇರಿ ವಾದ್ಯ ಮೊರೆಯುತ್ತರರೆ ಎನುತ
ಪರಿಪರಿ ವಾಲಗ ವಿಸ್ತಾರದಿಂದ ಕೈಕೊಳ್ಳುತ್ತ
ಮೆರೆದು ಸುರರುಪದ್ರ ಹರಿಸಿ ಬಾಲಕನ ಕಾಯ್ದೆ
ಪರದೈವ ಗಂಭೀರಾತ್ಮ ವಿಜಯವಿಠ್ಠಲ ನಿಮ್ಮ
ಚರಿತೆ ದುಷ್ಟರಿಗೆ ಭೀಕರವೋ ಸಜ್ಜನ ಪಾಲ ||೭||

ಜೊತೆ

ಪ್ರಹ್ಲಾದ ವರದ ಪ್ರಸನ್ನ ಕ್ಲೇಶಭಂಜನ
ಮಹ ಹವಿಷೆ ವಿಜಯವಿಠ್ಠಲ ನರಮೃಗವೇಷಾ ||೮||

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.