ಕವಿ – ಅಂಬಿಕಾತನಯದತ್ತ
ಕವನ ಸಂಕಲನ – ಸಖೀಗೀತ
೧
ಆ ಮುಖಾ . . . ಈ ಮುಖಾ
ಯಾವ ಗಂಡೊ
ಯಾವ ಹೆಣ್ಣೊ
ಪ್ರೀತಿಯೆಂಬ ಚುಂಬಕಾ
ಕೂಡಿಸಿತ್ತು
ಆಡಿಸಿತ್ತು
ಕೂಡಲದೊಲು ನೋಟವಾ
ಮೂರು ದಿನದ ಆಟವಾ
೨
ಆ ಮುಖಾ – ಈ ಮುಖಾ
ಹೆತ್ತುದೊಂದು
ಹೊತ್ತುದೊಂದು
ಎಂಥ ಹಾಸ್ಯದೀ ಸುಖಾ
ಬೆರಕೆಯಿಂದೊ
ಎರಕದಿಂದೊ
ಬಂತು ಬೇರೆ ಜೀವನಾ
ಕೃಪೆಯೊ ಕಾಮದೇವನಾ
೩
ಆ ಮುಖಾ – ಈ ಮುಖಾ
ಒಂದು ಸತ್ತು
ಒಂದು ಅತ್ತು
ಒಂದಕೊಂದು ಸಮ್ಮುಖಾ
ಬೇರೆ ಬತ್ತಿ
ದೀಪ ಹತ್ತಿ
ಬೆಳಗುತಿಹದು ಸ್ನೇಹವಾ
ತುಂಬಿ ಬೇರೆ ದೇಹವಾ
೪
ಆ ಮುಖಾ – ಈ ಮುಖಾ
ಇದ್ದು ಅಂತ
ಆಯ್ತನಂತ
ಒಗೆತನದೀ ಒಮ್ಮುಖಾ
ಅಂಟಿಗಂಟು
ಚಿಗಿತು ನಂಟು
ಇದುವೆ ನಿತ್ಯ ನೂತನಾ
ಸಂತತಿಯೆ ಚಿರಂತನಾ!
—————————–
(ನಿನ್ನೆ ಉದಯ ಟಿವಿಯಲ್ಲಿ ಹಿರಿಯರೊಬ್ಬರು – ಡಾ.ಜಿ. ಕೃಷ್ಣಪ್ಪ – ಬೇಂದ್ರೆಯವರ ಕವಿತೆಯ ಬಗ್ಗೆ ಬಹಳ ಭಾವಪೂರ್ಣವಾಗಿ ಮಾತನಾಡುತ್ತಿದ್ದರು. ಅವರ ಮಾತಿನ ನಡುವೆ ಈ ಕವನದ ಕೆಲವು ಸಾಲುಗಳನ್ನು ಹೇಳಿದರು. ಆದರೆ ಪೂರ್ತಿಯಾಗಿ ಓದೋಣವೆಂದರೆ ಕವನ ನನ್ನಲ್ಲಿರಲಿಲ್ಲ . ಕೂಡಲೇ ನಮ್ಮ ಸುನಾಥ ಕಾಕಾಗೊಂದು ಕೋರಿಕೆಯ ಪತ್ರ ಬರೆದೆ. ಕಾಕಾ ಕವನ ಕಳಿಸಿಕೊಟ್ಟರು. ಅದರಿಂದಾಗಿ ತುಳಸಿವನದಲ್ಲೀಗ ಪ್ರೀತಿಯೆಂಬ ಚುಂಬಕ! ಸುಂದರ ಕವನ ಬರೆದಿರುವ ಬೇಂದ್ರೆ ತಾತಾಗೂ, ಕವನ ಕಳಿಸಿಕೊಟ್ಟ ಕಾಕಾಗೂ ಧನ್ಯವಾದಗಳು.)
ಬೇಂದ್ರೆಯವರ ಸಖೀಗೀತದ ಒಂದೊಂದು ಕವನಗಳೂ ಒಂದೊಂಥರದ ಅಮೃತಧಾರೆ. ಕೆಲವು ಧಾರೆಗಳಿಗೆ ಒಗರು ಹೆಚ್ಚಾದರೆ ಕೆಲವದರಲ್ಲಿ ಸಿಹಿ ಹೆಚ್ಚು. ಇನ್ನು ಕೆಲವಕ್ಕೆ ಕಹಿಯ ಸೆಲೆಯೂ ಇದೆ. ಹಾಗೆಯೂ ಅವೆಲ್ಲ ಅಮೃತಧಾರೆಗಳೇ. ಧಾರೆ ಹರಿಸಿದ್ದಕ್ಕೆ ಧನ್ಯವಾದಗಳು.
ನಿಸರ್ಗದ ನಿರಂತತೆಯಿಂದ ಬೆರಗುಗೊಂಡು, ಅದನ್ನು ತಿಳಿಯಲೆತ್ನಿಸುವ ಕವಿಯ ಕವನವಿದು!
ನನಗೆ ‘ನೋಡಿದ..ಹೀಗೆ ನೋಡಿದ’ ಕವನ ಬೇಕಾಗಿತ್ತು. ನಿಮ್ಮಲ್ಲಿದ್ದರೆ ದಯವಿಟ್ಟು ಪ್ರಕಟಿಸುವಿರಾ? ಇದನ್ನು ಯಾವ ಕವಿ ಬರೆದಿದ್ದು ಎಂದು ತಿಳಿಸಿ ಪ್ಲೀಸ್..
ಆಕಾಶ್, ಬಿ. ಆರ್. ಲಕ್ಷ್ಮಣರಾಯರ ಕವಿತೆ `ಹೀಗೆ ನೋಡಿದ …’ ಇಲ್ಲಿದೆ. ಹಾಗೇ ನೋಡಿಕೊಳ್ಳಿ. 🙂