ಬಂದಿದೆ ದೂರು ಬರಿದೆ ಪಾಂಡವರಿಗೆ

ರಚನೆ : ಕನಕದಾಸರು

ಬಂದಿದೆ ದೂರು ಬರಿದೆ ಪಾಂಡವರಿಗೆ
ಕೊಂದವರಿವರು ಕೌರವರನೆಂಬಪಕೀರ್ತಿ ||ಪಲ್ಲವಿ||

ಮುನ್ನಿನ ವೈರದಿ ಕಡುಸ್ನೇಹವ ಮಾಡಿ
ಉನ್ನಂತಲೆತ್ತ ಪಗಡೆಯಾಡಿಸಿ
ತನ್ನ ಕುಹಕದಿಂದ ಕುರುಬಲವನು ಕೊಂದ
ಘನ್ನಘಾತುಕ ಶಕುನಿಯೋ? ಪಾಂಡವರೋ? ||೧||

ಮರಣ ತನ್ನಿಚ್ಚೆಯೊಳುಳ್ಳ ಗಾಂಗೇಯನು
ಧುರದಲಿ ಷಂಡನ ನೆಪದಿಂದಲಿ
ಸರಳ ಮಂಚದ ಮೇಲೆ ಮಲಗಿ ಮೊಮ್ಮಗನನ್ನು
ಕೊರಳ ಕೊಯ್ದವ ಭೀಷ್ಮನೋ? ಪಾಂಡವರೋ? ||೨||

ಮಗನ ನೆವದಿ ಕಾಳಗವ ಬಿಸುಟು ಸುರ
ನಗರಿಗೆ ನಡೆದು ವೈರಾಗ್ಯದಿಂದ
ಜಗವರಿಯಲು ಕುರುವಂಶಕೆ ಕೇಡನು
ಬಗೆದು ಕೊಂದವ ದ್ರೋಣನೋ? ಪಾಂಡವರೋ? ||೩||

ತೊಟ್ಟ ಬಾಣವ ತೊಡಲೊಲ್ಲದೆ ಮಾತೆಗೆ
ಕೊಟ್ಟ ಭಾಷೆಗೆ ನಾಲ್ವರ ಕೊಲ್ಲದೆ
ನೆಟ್ಟನೆ ರಣಮುಖದಲಿ ತನ್ನ ಪ್ರಾಣವ
ಬಿಟ್ಟು ಕೊಂದವ ಕರ್ಣನೋ? ಪಾಂಡವರೋ? ||೪||

ಮಥಿನಿಸಿ ಸೂತತನವ ಮಾಡಿ ರಣದೊಳಗೆ
ಅತಿ ಹೀನಗಳೆಯುತ ರವಿಸುತನ
ರಥದಿಂದಿಳಿದು ಪೋಗಿ ಕೌರವರ ಬಲವನು
ಹತ ಮಾಡಿದವ ಶಲ್ಯನೋ? ಪಾಂಡವರೋ ? ||೫||

ಜಲದೊಳು ಮುಳುಗಿ ತಪವ ಮಾಡಿ ಬಲವನು
ಛಲದಿಂದೆಬ್ಬಿಸಿ ಕಾದುವೆನೆಂದವ
ಕಲಿ ಭೀಮಸೇನನ ನುಡಿ ಕೇಳಿ ಹೊರಹೊರಟು
ಕುಲವ ಕೊಂದವ ಕೌರವನೋ? ಪಾಂಡವರೋ? ||೫||

ಕೌರವ ಪಾಂಡವರಿಗೆ ಭೇದವ ಪುಟ್ಟಿಸಿ
ಗೌಜೊಡ್ಡಿ ಕುರುಕ್ಷೇತ್ರದಿ ಕಾದಿಸಿ
ಸಂಶಯವಿಲ್ಲದೆ ಕುರುಬಲವನು ಕೊಂದ
ಹಿಂಸಕನು ಆದಿಕೇಶವನೋ? ಪಾಂಡವರೋ ||೬||

*****************************

4 thoughts on “ಬಂದಿದೆ ದೂರು ಬರಿದೆ ಪಾಂಡವರಿಗೆ”

  1. ತ್ರಿವೇಣಿಯವರಿಗೆ ನಮಸ್ಕಾರಗಳು,

    ಎಷ್ಟೊಂದು ಅರ್ಥಗರ್ಭಿತವಾಗಿದೆ ಕನಕದಾಸರ ಈ ಪದ್ಯ. ಮೇಲ್ನೋಟಕ್ಕೆ ಕೌರವರ ನಿರ್ನಾಮ ಮಾಡಿದ್ದು ಪಾಂಡವರೆನಿಸಿದರು ಪರೋಕ್ಷ ಕೈಗಳು ಎಷ್ಟಿವೆ ನೋಡಿ.

    ಸಕಾರಣವೊ, ಅಕಾರಣವೊ ನೀವು ಇಂಥ ರಚನೆಗಳನ್ನು ಓದಲು ಕೊಡುತ್ತಿದ್ದೀರಿ. ದಯವಿಟ್ಟು ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ

    -ಧನ್ಯವಾದಗಳೊಂದಿಗೆ,
    ಬಸವರಾಜು

  2. Guru says:

    ಕನ್ನಡದ ಬ್ಲಾಗುಗಳನ್ನು ಹುಡುಕುತ್ತಿರಬೇಕಾದರೇ,,, ನಿಮ್ಮ ಈ ತುಲಸಿವನಕ್ಕೆ ಅಗಮಿಸಿದೇ.. ತುಂಬಾ ಚೆನ್ನಾಗಿದೆ ನಿಮ್ಮ ಬ್ಲಾಗ್.
    ಕನಕದಾಸರ ಈ ಕೀರ್ತನೆ ತುಂಬ ಚೆನ್ನಾಗಿ ಇದೆ… ನಿಮ್ಮ ಬ್ಲಾಗ್ ತುಂಬ ಇಷ್ಟ ಆಯಿತು,,, ಅಲ್ಲಿ ಎಲ್ಲಿಂದನೋ ಇಲ್ಲಿಯ ನಿಮ್ಮ ಮನೆಗೆ (ತುಳಸಿವನಕ್ಕೆ) ಕರೆತರುವ ಕ್ರಿಯೇಟಿವಿಟಿ ಚೆನ್ನಾಗಿ ಇದೆ….

    ಗುರು

  3. sritri says:

    “ಮೇಲ್ನೋಟಕ್ಕೆ ಕೌರವರ ನಿರ್ನಾಮ ಮಾಡಿದ್ದು ಪಾಂಡವರೆನಿಸಿದರು ಪರೋಕ್ಷ ಕೈಗಳು ಎಷ್ಟಿವೆ!” ಬಸವರಾಜು, ಸರಿಯಾಗಿ ಹೇಳಿದ್ದೀರಿ. ಈ ಹಾಡಿನಲ್ಲಿ ಇಡೀ ಮಹಾಭಾರತವೇ ಅಡಗಿದೆ. ಮಹಾಭಾರತ ತಿಳಿಯದವರಿಗೆ ಅರ್ಥವಾಗುವುದು ಕಷ್ಟ. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  4. sritri says:

    ಗುರು, ಅಲ್ಲಿ, ಎಲ್ಲಿಂದಲೋ ದಾರಿ ತಪ್ಪದೆ ಇಲ್ಲಿಗೇ ಬಂದು ತಲುಪಿದ್ದಕ್ಕೆ ಅಭಿನಂದನೆಗಳು. 🙂 ಈಗ ನಮ್ಮನೆಗೆ ಬರುವ ಸರಿದಾರಿ ಗೊತ್ತಾಗಿದೆಯಲ್ಲ, ಆಗಾಗ ಬರುತ್ತಿರಿ.

Leave a Reply to sritri Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಶ್ರೀ ತುಳಸಿ ಮಹಿಮೆಯ ಹಾಡುಶ್ರೀ ತುಳಸಿ ಮಹಿಮೆಯ ಹಾಡು

ಶ್ರೀ ತುಳಸಿ ಮಹಿಮೆಯ ಹಾಡು ರಾಗಸಹಿತ: ಸ್ತೋತ್ರ: ಉದಯರಾಗ ರಾಗ: ಭೂಪಾಳಿ —————- ಶ್ರೀ ತುಳಸಿಯಾ ಸೇವಿಸಿ ||ಪ|| ಶ್ರೀ ತುಳಸಿಯಳ ಸೇವೆ ಪ್ರೀತಿಯಿಂದಲಿ ಮಾಡೆ ಗಾತರದ ಮಲವಳಿದು ಮಾತೆಯೆಂಬನಿತರೊಳು ಪಾತಕ ಪರಿಹರಿಸಿ ಪುನೀತರನು ಮಾಡುವಳು ಯಾತಕನುಮಾನವಯ್ಯಾ ||ಅ||ಪ|| ಸುಧೆಗಡಲ ಮಧಿಸುವ

ನನ್ನ ಪುಟ್ಟ ಪುರಂದರ ವಿಠಲ!ನನ್ನ ಪುಟ್ಟ ಪುರಂದರ ವಿಠಲ!

ನಮಃ ಶ್ರೀಪಾದರಾಜಾಯ ನಮಸ್ತೇ ವ್ಯಾಸಯೋಗಿನೇ| ನಮಃ ಪುರಂದರಾರ್ಯಾಯ ವಿಜಯಾರ್ಯಾಯತೇ ನಮಃ || ನಮಿಪೆ ಶ್ರೀಪಾದರಾಯರಿಗೆ ನಮನ ವ್ಯಾಸ ಯೋಗಿಗೆ ಶ್ರೀ ಪುರಂದರ ಗುರುವರಗೆ ಬಳಿಕ ವಿಜಯದಾಸರಿಗೆ ( ಕನ್ನಡಕ್ಕೆ : ನೀಲಾಂಜನ ) ದಾಸಸಾಹಿತ್ಯದಲ್ಲಿ ಪುರಂದರದಾಸರು ಅತ್ಯಂತ ಜನಪ್ರಿಯರು. ೧೩ನೆಯ ಶತಮಾನದಲ್ಲಿ

ರಂಗ ನಿನ್ನ ಕೊಂಡಾಡುವ-Ranga ninna Kondaduvaರಂಗ ನಿನ್ನ ಕೊಂಡಾಡುವ-Ranga ninna Kondaduva

ರಚನೆ : ಜಗನ್ನಾಥದಾಸರು – ಅಂಕಿತ : ಜಗನ್ನಾಥ ವಿಠಲ ರಂಗ ನಿನ್ನ ಕೊಂಡಾಡುವ ಮಂಗಳಾತ್ಮರ ಸಂಗಸುಖವಿತ್ತು ಕಾಯೊ ಕರುಣಾಸಾಗರ ||ಪ|| ಅರಿಯರೊ ನೀನಲ್ಲದೆ ಮತ್ತನ್ಯ ದೈವರ ಮರೆಯರೊ ನೀ ಮಾಡಿದ ಅನಿಮಿತ್ತೋಪಕಾರ ತೊರೆಯರೊ ನಿನ್ನಂಘ್ರಿಸೇವೆ ಪ್ರತಿವಾಸರ ಅರಿಯರೊ ಪರತತ್ವವಲ್ಲದೆ ಇತರ