ರಚನೆ – ಕನಕದಾಸರು

ರಾಯಚೂರು ಶೇಷಗಿರಿ ದಾಸ್

ವಿದ್ಯಾಭೂಷಣ

ದೇವಿ ನಮ್ಮ ದ್ಯಾವರು ಬಂದರು
ಬನ್ನಿರೇ ನೋಡಬನ್ನಿರೇ ||ಪಲ್ಲವಿ||

ಕೆಂಗಣ್ಣ ಮೀನನಾಗಿ ನಮ್ಮ ರಂಗ
ಗುಂಗಾಡಿ ಸೋಮನ್ನ ಕೊಂದಾನ್ಮ್ಯ
ಗುಂಗಾಡಿ ಸೋಮನ್ನ ಕೊಂದು ವೇದವ
ಬಂಗಾರದೊಡಲನಿಗಿತ್ತಾನ್ಮ್ಯ

ದೊಡ್ಡ ಮಡುವಿನೊಳಗೆ ನಮ್ಮ ರಂಗ
ಗುಡ್ಡವ ಹೊತ್ತುಕೊಂಡು ನಿಂತಾನ್ಮ್ಯ
ಗುಡ್ಡವ ಹೊತ್ತುಕೊಂಡು ನಿಂತು
ಸುರರನ್ನು ದೊಡ್ಡವರನ್ನಾಗಿ ಮಾಡಾನ್ಮ್ಯ

ಚೆನ್ನ ಕಾಡಿನ ಹಂದಿಯಾಗಿ ನಮ್ಮ ರಂಗ
ಚಿನ್ನದ ಕಣ್ಣನ ಕೊಂದಾನ್ಮ್ನ್ಯ
ಚಿನ್ನದ ಕಣ್ಣನ ಕೊಂದು ಭೂಮಿಯ
ವನ್ನಜಸಂಭವಗಿತ್ತಾನ್ಮ್ಯ

ಸಿಟ್ಟಿಲಿ ಸಿಂಹನಾಗಿ ನಮ್ಮರಂಗ
ಹೊಟ್ಟೆಯ ಕರುಳ ಬಗೆದಾನ್ಮ್ಯ
ಹೊಟ್ಟೆಯ ಕರುಳ ಹಾರವ ಮಾಡಿಕೊಂಡು
ಪುಟ್ಟಗೆ ಪಟ್ಟವ ಕಟ್ಟಾನ್ಮ್ಯ

ಹುಡುಗ ಹಾರುವನಾಗಿ ನಮ್ಮ ರಂಗ
ಬೆಡಗಿಲಿ ಮುಗಿಲಿಗೆ ಬೆಳೆದಾನ್ಮ್ಯ
ಬೆಡಗಿಲಿ ಮುಗಿಲಿಗೆ ಬೆಳೆದು ಬಲಿಯನ್ನು
ಅಡಿಯಿಂದ ಪಾತಾಳಕ್ಕೊತ್ಯಾನ್ಮ್ಯ

ತಾಯ ಮಾತನು ಕೇಳಿ ಸಾಸಿರ ತೋಳಿನ
ಆವಿನ ಕಳ್ಳನ ಕೊಂದಾನ್ಮ್ಯ
ಆವಿನ ಕಳ್ಳನ ಕೊಂದು
ಭೂಮಿಯ ಅವನೀಸುರರಿತ್ತಾನ್ಮ್ಯ

ಪಿಂಗಳ ಕಣ್ಣಿನ ಮಂಗಗಳ ಕೂಡಿ
ಛಂಗನೆ ಲಂಕೆಗೆ ಪೋದಾನ್ಮ್ಯ
ಛಂಗನೆ ಲಂಕೆಗೆ ಪೋಗಿ ನಮ್ಮ ರಂಗ
ಹೆಂಗಸು ಕಳ್ಳನ ಕೊಂದಾನ್ಮ್ಯ

ಕರಿಯ ಹೊಳೆಯಲಿ ತುರುಗಳ ಕಾಯುತ್ತಾ
ಉರಗನ ಮಡುವ ಧುಮುಕ್ಯಾನ್ಮ್ಯ
ಉರಗನ ಹೆಡೆ ಮೇಲೆ ಹಾರಾರಿ ಕುಣೀವಾಗ
ವರವ ನಾರಿಯರಿಗೆ ಕೊಟ್ಟಾನ್ಮ್ಯ

ಕಂಡಕಂಡಲ್ಲಿ ಕುಂಡೆಯ ಬಿಟ್ಟುಕೊಂಡು
ಭಂಡತನದಲಿ ತಿರುಗಾನ್ಮ್ಯ
ಕಂಡಕಂಡಲ್ಲಿ ತಿರುಗಿ ತ್ರಿಪುರರ
ಹೆಂಡಿರನ್ನೆಲ್ಲಾ ಕೆಡಿಸಾನ್ಮ್ಯ

ಚೆಲ್ವ ಹೆಂಡತಿಯ ಕುದುರೆಯ ಮಾಡಿ
ಒಳ್ಳೆಯ ರಾಹುತನಾದಾನ್ಯ್ಮ
ಒಳ್ಳೆಯ ರಾಹುತನಾಗಿ ಅಸುರರ
ಡೊಳ್ಳು ಹೊಟ್ಟೆಯ ಮೇಲೆ ಒದ್ದಾನ್ಮ್ಯ

ಡೊಳ್ಳಿನ ಮ್ಯಾಲ್ ಕೈಯ ಬರಮಪ್ಪ ಹಾಕ್ಯಾನು
ತಾಳವ ಶಿವಪ್ಪ ತಟ್ಯಾನ್ಮ
ಒಳ್ಳೊಳ್ಳೆ ಪದಗಳ ಹನುಮಪ್ಪ ಹಾಡ್ಯಾನು
ಚೆಲುವ `ಕನಕಪ್ಪ’ ಕುಣಿದಾನ್ಮ್ಯ

10 thoughts on “ದೇವೀ, ನಮ್ಮ ದ್ಯಾವರು ಬಂದರು”

 1. ಶ್ರೀತ್ರಿಯವರೇ, ಕನಕದಾಸರ ಹಾಡುಗಳಲ್ಲಿ ಕಾಗಿನೆಲೆ ಎನ್ದು ಬರುವುದಿಲ್ಲವೇ?

 2. ರಾಜೇಶ್, ನೀವು ಬರೆದಿರುವಂತೆ ಕನಕದಾಸರ ಹಾಡುಗಳಲ್ಲಿ ‘ಕಾಗಿನೆಲೆ ಆದಿಕೇಶವ’, ‘ಆದಿಕೇಶವ’ ಎಂಬ ಅಂಕಿತವೇ ಇರುತ್ತದೆ. ಇದೊಂದು ಅಪರೂಪದ ರಚನೆ. ಈ ಪದದ ಕೊನೆಯಲ್ಲಿ ಬರುವ ಬರಮಪ್ಪ, ಶಿವಪ್ಪ, ಹನುಮಪ್ಪ ಎಂಬ ಅಚ್ಚ ಗ್ರಾಮ್ಯ ಹೆಸರುಗಳೊಂದಿಗೆ, ಆದಿಕೇಶವ ಎಂಬ ಶಿಷ್ಟ ಹೆಸರು ಸರಿ ಹೊಂದಲಾರದು ಎಂದೋ ಏನೋ, ಕನಕದಾಸರು “ಕನಕಪ್ಪ” ಎಂಬ ತಮ್ಮದೇ ಹೆಸರನ್ನು ಅಂಕಿತವಾಗಿ ಬಳಸಿಕೊಂಡಿದ್ದಾರೆ.

  ದಾಸರು ಈರೀತಿಯಾಗಿ ತಮ್ಮ ಅಂಕಿತವಲ್ಲದೇ , ತಮ್ಮದೇ ಹೆಸರುಗಳನ್ನು ಕೃತಿಗಳಲ್ಲಿ ಬಳಸಿಕೊಂಡಿರುವ ಹಲವಾರು ನಿದರ್ಶನಗಳಿವೆ. ವಾದಿರಾಜರ ಅಂಕಿತ ‘ಹಯವದನ’ ಎಂದಿದ್ದರೂ ಅವರ ಹಲವಾರು ರಚನೆಗಳಲ್ಲಿ ‘ವಾದಿರಾಜ’ ಎಂಬ ಅಂಕಿತವನ್ನೂ ಕಾಣಬಹುದು.

 3. ನಮಸ್ಕಾರ,

  ನಿಮ್ಮ ನಿಲವು ಸರಿಯಾಗಿದೆ. ಕನಕದಾಸರ ಈ ರಚನೆಯಲ್ಲಿ ಭಾಷೆ ಸಂಪೂರ್ಣ ಬೇರೆಯದೆಯಾಗಿದೆ. ಇದು ಪೂರ ಗ್ರಾಮ್ಯ ಭಾಷೆಯಲ್ಲಿದೆ. ಅವರ ಕೆಳಗಿನ ಪದ್ಯದ ಭಾಷೆ ನೋಡಿದರೆ ವ್ಯತ್ಯಾಸ ತಿಳಿಯುತ್ತದೆ.
  ‘ನಿನ್ನ ಪ್ರೇರಣೆಯಂತೆ ನಡೆದು ನುಡಿದ ಮೇಲೆ
  ನಿನ್ನಿಂದ ತಪ್ಪೋ ನನ್ನಿಂದ ತಪ್ಪೋ – ಪರಮಾತ್ಮ’

  -ಬಸವರಾಜು

 4. ಬಸವರಾಜು, ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು.
  ‘ನಿನ್ನ ಪ್ರೇರಣೆಯಂತೆ ನಡೆದು ನುಡಿದ ಮೇಲೆ
  ನಿನ್ನಿಂದ ತಪ್ಪೋ ನನ್ನಿಂದ ತಪ್ಪೋ – ಪರಮಾತ್ಮ’ – ಈ ಸಾಲು ಯಾವ ಹಾಡಿನಲ್ಲಿದೆ ತಿಳಿಸುವಿರಾ?

 5. ತ್ರಿವೇಣಿಯವರೇ,

  ಎಂಥಾ ಪ್ರಶ್ನೆ ಕೇಳಿ ನನಗೆ ಇಕ್ಕಟ್ಟಿಗೆ ಸಿಗಿಸಿದ್ದೀರ. ಇದು ಎಲ್ಲಿ, ಯಾವಾಗ ಓದಿದ್ದೇನೆ ಎಂದು ನೆನೆಪಿಲ್ಲ. ಅಕಸ್ಮಾತ್ ಸಿಕ್ಕರೆ ನಿಮಗೆ ಖಂಡಿತ ತಿಳಿಸುತ್ತೇನೆ. ಕೆಲವೊಮ್ಮೆ ಏನಾಗುತ್ತೆ ಅಂದರೆ ದಾಸರು, ಪ್ರಸಿದ್ಧ ವಚನಕಾರರ ಹೆಸರಿನಲ್ಲಿರುವ ರಚನೆಗಳು ಅವರದಾಗಿರುವುದಿಲ್ಲ. ಯಾರೋ ಯಾಕೋ ಬರೆದು ಸರ್ವಜ್ಞ ಇಲ್ಲವೇ ಬಸವಣ್ಣನ ಮತ್ತ್ಯಾರದೋ ಎಂದು ಹೆಸರಿಸಿರುತ್ತಾರೆ. ಉದಾಹರಣೆಗೆ “ಕಾಯಕವೇ ಕೈಲಾಸ”, ಈ ಮಾತು ಬಸವಣ್ಣನದೆಂದು ನಂಬಿಕೆ. ಆದರೆ ಇದಕ್ಕೆ ಪೂರಕ ಪುರಾವೆ ಇಲ್ಲವೆಂದು ಇತಿಹಾಸಕಾರರು ಹೇಳಿರುವುದ ಕೇಳಿದ್ದೇನೆ.

  ನಾನು ನಿಮ್ಮಲ್ಲಿರುವ ಪದ್ಯ ಪ್ರೀತಿ ಕಂಡು ಬೆರಗಾಗಿದ್ದೇನೆ. ನೀವು ಚಲನಚಿತ್ರ ಗೀತೆ ಸಾಹಿತ್ಯದಿಂದಿಡಿದು ಎಲ್ಲ ಪ್ರಕಾರದ ಗೀತೆಗಳಿಗೆ ಭಂಡಾರವೇ ಆಗಿದ್ದೀರ.

  ನಿಮ್ಮ ಜ್ಞಾನ ಕಂಡು ಸ್ವಲ್ಪ ಹೊಟ್ಟೆ ಕಿಚ್ಚು ಕೂಡ ಇದೆ ಆದರೂ ವಿಶ್ವಾಸದಿಂದ,
  ಬಸವರಾಜು

 6. ಬಸವರಾಜು , ನನ್ನನ್ನು ಹೊಗಳಿಕೆಯ ಹೊನ್ನಶೂಲಕ್ಕೇರಿಸಿದ್ದೀರಿ, ಇರಲಿ 🙂

  ಇಕ್ಕಟ್ಟಿಗೆ ಸಿಕ್ಕಿಸುವ ಮಾತೇ ಇಲ್ಲ. ಉತ್ತರ ಸಿಕ್ಕಾಗ ಮತ್ತೊಂದಾಸ್ಯದಲ್ಲಿ ಪೂರ್ಣ ಸಾಹಿತ್ಯವನ್ನೇ ಪ್ರಕಟಿಸಿಬಿಡಿ.

 7. ಮೇಲಿರುವ ದಾಸಪದವು ರಾಯಚೂರು ಶೇಷಗಿರಿದಾಸರು ಹಾಡಿರುವುದನ್ನು ತಿಳಿಸಿದ್ದೀರಿ, ಸದರಿ ಆಲ್ಬಂನ ಹೆಸರನ್ನು ದಯವಿಟ್ಟು ತಿಳಿಸಿರಿ.

 8. ಮಂಜುನಾಥ್ ಅವರೇ ನಮಸ್ಕಾರ.

  ಈ ಹಾಡು ಕನಕದಾಸರ ರಚನೆಗಳನ್ನೊಳಗೊಂಡಿರುವ `ರಂಗನ ತಂದು ತೋರೆ’ ಎಂಬ ಧ್ವನಿಸುರುಳಿಯಲ್ಲಿದೆ. ಸಂಗೀತ – ಪ್ರವೀಣ್ ಗೋಡ್ಖಿಂಡಿಯವರದು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.