ಅಕ್ಕಿ ಹಿಟ್ಟು, ಸಣ್ಣ ರವೆ, ತೆಂಗಿನಕಾಯಿ ತುರಿ, ಅಚ್ಚ ಮೆಣಸಿನ ಪುಡಿ, ಇಂಗು, ಉಪ್ಪು, ಒಂದು ಸೌಟಿನಷ್ಟು ಬಿಸಿ ಎಣ್ಣೆ ಬೆರೆಸಿ ತಯಾರಿಸಿದ ಹಿಟ್ಟಿನಿಂದ ತಯಾರಾಗಿರುವ ಹಸಿ ಕೋಡುಬಳೆಗಳು.

ಬೇಯುತಲಿದ್ದರೂ……

ಕುದಿಯುವ ಎಣ್ಣೆಯಲ್ಲಿ, ಹದವಾಗಿ ಬೆಂದು, ಗರಿಗರಿಯ ಹಂತದಲ್ಲಿ..

ಪಕೋಡ, ಬೋಂಡಗಳಂತಹ ಎಣ್ಣೆದಾಹೀ ತಿಂಡಿಗಳಿಗೆ ಹೋಲಿಸಿದರೆ ಕೋಡುಬಳೆ ಬಂಗಾರ. ಇದು ಎಣ್ಣೆ ಹೀರೋದು ಬಹಳ ಕಡಿಮೆ. ಹಾಗಿದ್ದೂ, ಈ ವಿಧಾನದಲ್ಲಿ ಹೀರಿರುವ ಅಲ್ಪಸ್ವಲ್ಪ ಎಣ್ಣೆಯೂ ಬಸಿದು ಹೋಗಲು ಅನುಕೂಲ.

ತಟ್ಟೆ ತುಂಬಿ, ಹೊಟ್ಟೆ ತುಂಬಲು ರೆಡಿಯಾಗಿರುವ ಕೋಡುಬಳೆಗಳು.

ಅಳಿದುಳಿದ ಕೋಡುಬಳೆಗಳು ಡಬ್ಬಿಯಲ್ಲಿ ದಾಸ್ತಾನು. ತಳಭಾಗದಲ್ಲಿ ಒಂದೆರಡು ಪೇಪರ್ ಟವಲ್ ಹಾಸಿದರೆ, ಅವು ಕೋಡುಬಳೆಯಲ್ಲಿದ್ದ ಎಣ್ಣೆ ಅಂಶವನ್ನು ಹೀರಿಕೊಂಡು, ಕೋಡುಬಳೆ ಮೂಲಕ ನಮ್ಮ ದೇಹ ಸೇರುವ ಕೊಬ್ಬಿನ ಪ್ರಮಾಣವನ್ನು ಕಡಿಮೆಯಾಗಿಸುತ್ತದೆ.

43 thoughts on “ಕೋಡುಬಳೆ ಕಾರ್ಯಾಗಾರ”

  1. ಆದರೆ ಇಷ್ಟು ರುಚಿಯಾದ ಕೋಡುಬಳೆ ತಿಂದ ಮೇಲೆ ಬರುವ ಕೊಬ್ಬಿಗೇನು ಸಲಹೆ ? ಃ)

  2. “ಆದರೆ ಇಷ್ಟು ರುಚಿಯಾದ ಕೋಡುಬಳೆ ತಿಂದ ಮೇಲೆ ಬರುವ ಕೊಬ್ಬಿಗೇನು ಸಲಹೆ ?”

    ೧. ಕಡಿಮೆ ತಿನ್ನುವುದು – ಉತ್ತಮ
    ೨. ಮನಸಾರೆ ತಿಂದು, ಓಡಿ, ಆಡಿ ಅರಗಿಸಿಕೊಳ್ಳುವುದು – ಅತ್ಯುತ್ತಮ

  3. nimma kodbale nodi srujan nanage madikoduvanthe helida
    hage madiddu ayithu .chitragalu tumbha chennagi bandive bayali neeru baruthe .

  4. ಎಲವೋ ಕೋಡುಬಳೆ ಬಂಗಾರ,
    ನಿನ್ನ ಕ್ಯಾಲೋರಿ , ಕಾರ್ಬು ಎಷ್ಟೆಂದು ಜಗಜ್ಜಾಹೀರು ಗೊಳಿಸಲೇ…
    ಏನೋ ಪಾಪದ ತುಳಸಿಯಮ್ಮನಿಗೆ ಮಂಕು ಬೂದಿ ಎರಚಿ ಮೆರೆಯಬೇಡ

    ನಾವೆಲ್ಲಾ ಎಣ್ಣೆದಾಹಿಗಳು ನೀನು ಮಾತ್ರ ಬಂಗಾರವೋ..
    ಧಿಕ್ಕಾರ ಧಿಕ್ಕಾರ….

    -ಬೋಂಡ ಪಕೋಡ ಯೂನಿಯನ್

  5. ಸಹನಾ, ನಿಮ್ಮನೆಯಲ್ಲಿ ಮಾಡಿದ್ದ ಲಗೋರಿ ಕೋಡುಬಳೆ, ಕೂಲಿಂಗ್ ಗ್ಲಾಸ್ ತೊಟ್ಟಿದ್ದ ಕೂಲ್ ಕೋಡುಬಳೆಗಳು ನನಗೂ ಸಿಕ್ಕಿದವು. (ಜೊತೆಗೆ ‘ಭಾಗ್ಯದ ಕೋಡುಬಳೆಗಾರ ಹೋಗಿ ಬಾ ನನ್ ಬ್ಲಾಗಿಗೆ..’ ಎಂಬ ಜೋಶಿಯವರ ಪಂಗೀತ )ಆದರೆ ಅವು ಇಮೈಲಿನಲ್ಲಿದ್ದರಿಂದ ರುಚಿ ನೋಡಲು ಆಗಲಿಲ್ಲ. 🙂

  6. ಅಮ್ಮುವಿನಮ್ಮ,

    ನಾನು ಪಕೋಡ, ಬೋಂಡಾಗಿಂತ ಎಣ್ಣೆ ಕುಡಿಯೋದು ಕಡಿಮೆನೇ. ಹೌದೋ ಅಲ್ಲವೋ? ನೀವೇ ಹೇಳಿ. ಅಹುದಾದರಹುದೆನ್ನಿ. ನಿಮ್ಮ ದಮ್ಮಯ್ಯಾ… ಕಾರ್ಬು, ಕ್ಯಾಲೋರಿ ಅಂತ ನನ್ನ ಹುಳುಕುಗಳನ್ನೆಲ್ಲಾ ಹೊರಗೆಳೆದು ಮರ್ಯಾದೆ ಹರಾಜು ಹಾಕಬೇಡಿ. ನಾನಂದ್ರೆ ನಿಮಗೆ ಇಷ್ಟ ಇಲ್ವಾ?

    -ಕೋಡುಬಳೆ

  7. ಅಕಟಕಟಾ!!! ತುಳಸೀವನದಲ್ಲಿ ಕೋಡುಬಳೆಗಳೆ!
    ಹ್ಮ..ಇರಲಿ. ಮೆದ್ದು ನೋಡೋಣವೆಂದರೆ ಕ್ಯಾಲೊರಿಯ ಪ್ರಶ್ನೆ! ಹ್ಹಾ ದೇವಾ…
    ಕೋಡುಬಳೆಗಳನ್ನೆಲ್ಲ ಇಲ್ಲಿಂದ ಮಾಯವಾಗಿಸುವತನಕ ಕ್ಯಾಲೊರಿ ಯೋಚನೆ ಬಿಟ್ಟುಬಿಡುವುದೇ ಸೂಕ್ತವೇ? ತಲತಲಾಂತರಗಳಿಂದ ಬಂದ ಕ್ಯಾಲೋರಿ ಕಾಳಜಿಯನ್ನು ಕೇವಲ ಒಂದು ಕೋಡುಬಳೆಗಾಗಿ ತ್ಯಜಿಸಿದನೆಂಬ ಅಪವಾದ ಬಾರದಿರುವುದೇ? ಮೆದ್ದರೆ ಸುಪ್ತದೀಪ್ತಿ ಕಿವಿಹಿಂಡಿ ಬುದ್ಧಿ ಹೇಳರೆ? ಒಂದೇ ಒಂದನ್ನೂ ಮೆಲ್ಲದ ಪಕ್ಷ ತುಳಸಿಯಮ್ಮ ದುಃಖಿಸದೇ ಇರುವರೆ?
    ಹ್ಹಾ! ಭಗವಂತಾ, ನನಗೇನೂ ತೋಚುತ್ತಿಲ್ಲ.
    ಅತ್ತ ಕೋಡುಬಳೆ ಇತ್ತ ಕ್ಯಾಲೋರಿ!
    ಅತ್ತ ತುಳಸಿಯಮ್ಮ ಇತ್ತ ಸುಪ್ತದೀಪ್ತಿ.
    ಎನ್ನುವಂತಾಗಿಬಿಟ್ಟಿತೇ? ಅಕಟಕಟಾ….
    ಕಂಸದಲ್ಲಿ ಮೀಸೆ ತಿರುವುತ್ತಾನೆ. ತೆರೆ ಬೀಳುವುದು.

  8. ಅಯ್ಯೋ ಇದೆಂಥ ಇದು ಒಬ್ಬರು ಬಾಯಲ್ಲಿ ಲಿಟರು ಗಟ್ಟಲೆ ನೀರು ತರಿಸುತ್ತಾರೆ, ಮಗದೊಬ್ಬರು ಕ್ಯಾಲರಿ, ಪಾಲರಿ ಅಂತ ಬೆದರಿಸುತ್ತ ಇದ್ದಾರೆ!!

    ಈ ಹಾಳು ಊರಿನಲ್ಲಿ ಕೂತು ಬರಿ ಕನಸು ಕಾಣುತ್ತ ಇರುವೆ, ಅಮ್ಮನಿಗೆ ಈಗಲೇ ಫೋನ್ ಮಾಡಿದ್ದೇನೆ, ಬರುವ ವೀಕೆಂಡ್ ಊರಿಗೆ ಹೋಗಿ ಚಕ್ಕುಲಿ, ಕೋಡುಬಳೆ ತಿಂದು ಬರುವೆ.

    ಬಂಗಾರದಂತ ಕೋಡುಬಳೆ ಗೆ ಜೈ !!

  9. ಚಂದಾ ಮಾಮ ಚಕ್ಕುಲಿ ಮಾಮ ಅಂತೆಲ್ಲಾ ಸ್ತುತಿಗೊಳ್ಳುವ ನನಗೇ ಇಲ್ಲದ ಮರ್ಯಾದೆ ಈ ಕೋಡು ಬಳೆಗೇಕೆ?

    ಅವನು ಬಂಗಾರವಾದರೆ ನನಗೆ ಪ್ಲ್ಯಾಟಿನಂ ಅಂತ ನೀವು ಕರೆಯುವಿರಾದರೆ
    ಸರಿ… ಇಲ್ಲದಿದ್ದರೆ ನೋಡಿ ತುಳಸಿಯಮ್ಮ….. ನಾನೂ ಬೋ.ಪ ಯೂನಿಯನ್ ಸೇರುವವನೇ….

    ಅಲ್ಲಾ ನೀವೆಂದಾದರೂ ಚಂದಾಮಾಮ ಕೋಡ್ ಬಳೆ ಮಾಮ ಅಂತ ಹಾಡು ಕೇಳಿದ್ದೀರಾ…?

  10. ಚಕ್ಕುಲಿ ಮಾಮಾ, ನಿನ್ನ ರುಚಿಗೆ ನೀನೇ ಸಾಟಿ. ಆದರೆ ನೀನು ಅಪರೂಪದ ಅತಿಥಿ. ಬಯಸಿದಾಗ ಮಾಡಿ ತಿನ್ನುವುದು ಕಷ್ಟ. ಹಾಗಾಗಿ ನೀನು ಬಡವರ ಕೈಗೆಟುಕದ ಪ್ಲಾಟಿನಮ್ಮೇ ಆಗಿರು. ಬೋ.ಪ ಯೂನಿಯನ್ ಸೇರುತ್ತೇನೆಂದು ಮಾತ್ರ ಹೆದರಿಸಬೇಡ.

    “ನೀವೆಂದಾದರೂ ಚಂದಾಮಾಮ ಕೋಡ್ ಬಳೆ ಮಾಮ ಅಂತ ಹಾಡು ಕೇಳಿದ್ದೀರಾ…?”

    ಇಲ್ಲ ಕೇಳಿಲ್ಲ. ‘ಒಂದು ದಿನ ಹುಚ್ಚನ ಹೆಂಡತಿ ಕೋಡುಬಳೆ ಮಾಡಿದ್ಲು’ ಅನ್ನೋ ಹಾಡು ಕೇಳಿದೀನಿ ಅಷ್ಟೇ. 🙂

  11. ಕಂಸದಲ್ಲಿ ಮೀಸೆ ತಿರುವುತ್ತಾ, ಕೋಡುಬಳೆ ತಿನ್ನುವುದೋ, ಬೇಡವೋ ಎಂಬ ದ್ವಂದ್ವ ಸಾಗರದಲ್ಲಿ ಮುಳುಗಿರುವ ಕಥಾನಾಯಕನೇ, ಮನಸ್ಸಿನ ಗೊಂದಲ, ಅನುಮಾನಗಳನ್ನೆಲ್ಲಾ ಮೂಲೆಗೊತ್ತಿ, ಮನಬಂದಷ್ಟು ಕೋಡುಬಳೆಗಳನ್ನು ಭುಂಜಿಸುವಂಥವನಾಗು. ಮೆದ್ದರೆ ಸುಪ್ತದೀಪ್ತಿ ಕಿವಿಹಿಂಡಿ ಬುದ್ಧಿ ಹೇಳುವರೆಂಬ ಭಯ ನಿನಗೆ ಬೇಡ. ಅವರು ಊರಿನಿಂದ ಬಂದಿರುವ ಮಗನ ನೆಪ ಹೇಳಿಕೊಂಡು, ಕೋಡುಬಳೆ, ಶಂಕರಪೋಳಿ ಇತ್ಯಾದಿ ಕರಿದ ತಿನಿಸುಗಳನ್ನು ಮಾಡಿ ಸವಿಯುತ್ತಿರುವುದರಿಂದ, ನಿನಗೆ ಬುದ್ಧಿ ಹೇಳುವ ನೈತಿಕ ಹಕ್ಕನ್ನು ಅವರು ಕಳೆದುಕೊಂಡಿದ್ದಾರೆಂದು ಬಲ್ಲ ಮೂಲಗಳಿಂದ ಸುದ್ದಿ ಸಂಗ್ರಹಿಸಲಾಗಿದೆ.

  12. ಬಾಲು, ತುಳಸಿವನಕ್ಕೆ ಸ್ವಾಗತ.

    “ಈ ಹಾಳು ಊರಿನಲ್ಲಿ ಕೂತು ಬರಿ ಕನಸು ಕಾಣುತ್ತ ಇರುವೆ..”

    ನೀವಿರುವ ಆ ಹಾಳೂರು ಯಾವುದು? ಎಲ್ಲಿದೆ? ಎಂದು ತಿಳಿಯಲಿಲ್ಲ. ಯಾಕೆ ಕೇಳುತ್ತಿದ್ದೇನೆಂದರೆ, ನೀವಿರುವ ಊರು ಹತ್ತಿರವಿದ್ದರೆ, ಮುಂದಿನ ವೀಕೆಂಡ್ ನೀವು ಅಮ್ಮನಿಂದ ಮಾಡಿಸಿತರುವ ಚಕ್ಕುಲಿ, ಕೋಡುಬಳೆಯಲ್ಲಿ ನಮಗೂ ಪಾಲು ಸಿಕ್ಕೀತೇನೋ ಎಂಬ ಆಸೆ.

  13. ರಾಮ ರಾಮಾ, ದೇವರೇ, ಇದೇನಾಗಿ ಹೋಗಿದೆ ಇಲ್ಲಿ!? ಶಾಲೆಗೆ ಹೋದ ಮಗ ಮನೆಗೆ ಬಂದ ಸಂದರ್ಭದಲ್ಲಿ ಅವನಿಗೆ ಬೇಕು ಬೇಕಾದ ತಿಂಡಿಗಳನ್ನು ಮಾಡಿಕೊಡುವಲ್ಲಿ ಈ ಮಾತೆ ಮಗ್ನಳಾಗಿರುವ ಸಮಯದಲ್ಲಿ ಅದೇನೇನು ವೃಥಾರೋಪಗಳು ಅವಳ ಮೇಲೆ ಹೇರಲ್ಪಟ್ಟಿವೆ!! ಸದ್ಗುಣಿಗಳಿಗಿದು ಕಾಲವಲ್ಲಾ!!!

    ತಂಗಿ ಶಾಂತಲೆ ಇನ್ನೂ ಸಣ್ಣವಳೆಂದು ಕ್ಯಾಲೊರಿಯ ಬಗ್ಗೆ ತಿಳಿಹೇಳಿದರೆ ಕಿವಿಹಿಂಡುವರೆಂದು ಭಯಪಟ್ಟಿದ್ದಾಳೆ. ಅವಳಿಗೆ ಸರಿಯಾಗಿ ತಿಳಿಸುವ ಬದಲು ನನ್ನ ತಿಂಡಿಬಾಕತನದ ನೈತಿಕತೆಯನ್ನೇ ಬಯಲಿಗೆಳೆವ ತುಳಸಿಯಮ್ಮ, ಇದೇನು ಅನ್ಯಾಯವಮ್ಮ. ಗೆಳತಿಗೆ ಹೀಗೂ ಕೈಕೊಡಬಹುದೆ?

    ಲೋಕದಲ್ಲಿ ಅನ್ಯಾಯ ಹೆಚ್ಚುತ್ತಿದೆ, ತುಳಸೀವನದಲ್ಲಿ ಶಾಂತಿ ದೊರಕಬಹುದೆಂದು ಇಲ್ಲಿ ಬಂದರೆ ಕೋಡುಬಳೆಯಂಥ ರುಚಿಕರ ತಿಂಡಿಯ ಆಮಿಷದ ಜೊತೆಜೊತೆಗೇ ಇಂಥ ರೇಶ್ಮೆ ಶಾಲಿನ ಏಟುಗಳೂ ಸಿಗಬೇಕೆ ನನಗಿಲ್ಲಿ? ಇನ್ನೆಲ್ಲಿ ಹೋಗಲಿ?
    ಇರಲಿ, ನೆನಪುಗಳನ್ನು ಬೆರೆತ ಕನಸುಗಳ ಮೊರೆಹೋಗುವೆ. ಇಲ್ಲವಾದರೆ ಕಥೆಗಳ ಕಾನನ ಹೊಕ್ಕುವೆ. ಎಲ್ಲರೂ ಸುಖವಾಗಿ ಬಾಳಿ ಬದುಕಿರಿ.

  14. ತಮಾ ಚಕ್ಕುಲಿ ಮರೀ….,
    ನಾನೂ ನೀನೂ ಕೋಡುಬಳೆ ಎಲ್ಲರೂ ಒಂದೇ ತಾಯಿಯ ಮಕ್ಕಳೆಂಬುದನ್ನು ಮರೆಯಬೇಡ ಅಕ್ಕಿ ಮಾತೆಯು ನೀನು ಕಾಲು ಕೆದರಿಕೊಂಡು ಜಗಳಕ್ಕೆ ಬರುತ್ತಿರುವುದು ನೋಡಿ ಕಣ್ಣೀರು ಸುರಿಸುತ್ತಿದ್ದಾಳೆ
    ನಾವೆಲ್ಲರೂ ಅದೇ ತಾಯಿಯ ಅಂಶ ಹಂಚಿಕೊಂದು ಸಮಾನ ಕಾರ್ಬು ಧಾರಿಗಳಲ್ಲವೇ..?
    ಇನ್ನಾದರೂ ಬುದ್ದಿ ಕಲಿ ಕಡಲೇ ಆಂಟಿ ಮಕ್ಕಳ ಗುಂಪು ತೊರೆ…

    ಇತಿ ನಿನ್ನ ಹಿತೈಷಿ
    ನಿಪ್ಪಟ್ಟು ರಾಯ

  15. ನಿಪ್ಪಟು ರಾಯನ ಹೇಳಿಕೆಯನ್ನು ನಾನೂ ಸಮರ್ಥಿಸುತ್ತೇನೆ
    ಚಕ್ಕುಲಿತಮ್ಮ ಈ ಬುದ್ದಿವಾದವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಈ ಮೂಲಕ ಆಗ್ರಹ ಪಡಿಸುತ್ತಿದ್ದೇನೆ
    ಕೋಡುಬಳೆ ಅಣ್ಣ…. ಭಯ ಪಡದಿರು ನಿನ್ನ ಹಿಂದೆ ನಾವೆಲ್ಲಾ ಇದ್ದೇವೆ

    ತುಳಸಿಯಮ್ಮ ….ಈಸಂಧರ್ಭದಲ್ಲಿ ನೀವು ಹುಚ್ಚನ ಹಾಡು ನೆನಪಿಸ ಬಾರದಿತ್ತು
    ಸ್ವತಃ ಕವಿಯತ್ರಿಯಾದ ನೀವೇ ನಮ್ಮೆಲ್ಲರ ಮೇಲೆ ಒಂದು ಛಲೋ ಹಾಡು ಬರೆಯಿರಲ್ಲಾ
    -ಇತಿ
    ಮದ್ದೂರು ವಡೆ
    (ಸಹಿ-/)

  16. ನಾನು ಇರುವ ಊರು ಹಾಳೂರು ಬೆಂದಕಾಳೂರು.
    ಆಮೇಲೆ ಅಮ್ಮ ಮಾಡಿದ ಚಕ್ಕುಲಿ ಕೋಡುಬಳೆ ನಾನು ತಿಂದು, ಮಿಕ್ಕಿದರೆ, ಅವಾಗ ನೆನಪು ಬಂದರೆ, ಅದನ್ನು ನಿಮ್ಮೊಂದಿಗೆ ಹಂಚಿ ಕೊಳ್ಳುವ ಯೋಚನೆ* ಮಾಡುವೆ. (*ಷರತ್ತುಗಳು ಅನ್ವಯ)

  17. ಸೂಪರಾಗಿದೆ ಕೋಡಿಲ್ಲದ ಕೋಡುಬಳೆಗಳ ಫೋಟೋ ನೋಡಿ ಬಾಯಲ್ಲಿ ನೀರೂರಿತು!!!
    ಕಮೆಂಟ್-ಗಳು ಇನ್ನೂ ಸ್ವಾರಸ್ಯವಾಗಿತ್ತು…

  18. ತುಳಸೀವನ ಹೊಕ್ಕು ಗರಿ ಗರಿಯಾದ ತಿನ್ನಲೋಗ್ಯವಾದ ಆದರೆ ತಿನ್ನಲಾಗದ ಇ-ಕೋಡುಬಳೆಗಳನ್ನು ಕಂಡು ಬಾಯಲ್ಲಿ ನೀರೂರಿ, ಆ ನೀರಿನ ಹನಿ ಇನ್ನೇನು ಕೀಬೋರ್ಡ್ ಮೇಲೆ ಬಿದ್ದು ಕೀಲಿಮಣೆ ಎಂಜಲಾಗುವುದರಲ್ಲಿ ಅದನ್ನು ಪಿಡಿದ ಕೋಡುಭಲ್ಲೆ ಅಲ್ಲಲ್ಲ ಕೋಡುಬಳೆ ಪ್ರೇಮಿ ’ಶ್ರೀನಾಥ್ ಭಲ್ಲೆ’ಯ ಮೆಚ್ಚಿಗೆ ಸ್ವೀಕರಿಸಿ

  19. “ನನ್ನ ತಿಂಡಿಬಾಕತನದ ನೈತಿಕತೆಯನ್ನೇ ಬಯಲಿಗೆಳೆವ ತುಳಸಿಯಮ್ಮ, ಇದೇನು ಅನ್ಯಾಯವಮ್ಮ. ಗೆಳತಿಗೆ ಹೀಗೂ ಕೈಕೊಡಬಹುದೆ?….”

    ಖಂಡಿತ ಇಲ್ಲವಮ್ಮಾ…. ಡಯಟ್ ಹೆಸರಿನಲ್ಲಿ ಮಿತ ಆಹಾರ ಸ್ವೀಕರಿಸುವ ನೀನು, ಮಗನ ನೆಪದಲ್ಲಿಯಾದರೂ ಕುರುಕು ತಿಂಡಿ ಮಾಡಿ ತಿಂದಿದ್ದು ತಿಳಿದು, ಮನಸ್ಸಿಗೆ ಅನಿಸಿದ್ದನ್ನು ಮಾಡಿತಿನ್ನುವ ನಮಗೂ ಸ್ವಲ್ಪ ನೈತಿಕ ಬಲ ಬಂದಂತಾಯಿತು ಅಷ್ಟೆ.

  20. ಅಮ್ಮುವಿನಮ್ಮ,

    ನಾವು ಮಾಡುವ ಬಹುಪಾಲು ಕುರುಕಲುಗಳೆಲ್ಲಾ ಒಂದೋ ಅಕ್ಕಿ ಮಾತೆಯ ಮಕ್ಕಳೋ, ಕಡಲೆ ಆಂಟಿಯ ಮಕ್ಕಳೋ ಆಗಿವೆ. ಮೈದಾ, ರವೆಯ ಪಾತ್ರವೂ ಕಡಿಮೆಯಿಲ್ಲ.

    “ಸ್ವತಃ ಕವಿಯತ್ರಿಯಾದ ನೀವೇ ನಮ್ಮೆಲ್ಲರ ಮೇಲೆ ಒಂದು ಛಲೋ ಹಾಡು ಬರೆಯಿರಲ್ಲಾ…”

    ಕೋಡುಬಳೆ, ಚಕ್ಕುಲಿ, ನಿಪ್ಪಟ್ಟುಗಳಿಗೆಲ್ಲಾ ಜೀವ ಬರಿಸಿ, ಮಾತಾಡಿಸುತ್ತಿರುವ ನಿಮ್ಮ ಕಲ್ಪನೆ ಬಹಳ ಚೆನ್ನಾಗಿದೆ. ಮಕ್ಕಳ ನಾಟಕಕ್ಕೆ ಉತ್ತಮ ವಸ್ತು. ಕರಿದ ತಿಂಡಿಗಳ ರುಚಿ ಮತ್ತು ಜೊತೆಗೆ ಅದರ ಕೆಡುಕುಗಳನ್ನು ಸೇರಿಸಿಕೊಳ್ಳಬಹುದು. ನನಗಿಂತಲೂ, ಮಗನ ಹೆಸರಿನಲ್ಲಿ ಬ್ಲಾಗು ನಡೆಸಿ, ಅನೇಕ ಶಿಶುಗೀತೆಗಳನ್ನು ಬರೆದಿರುವ ನೀವೇ ಪ್ರಯತ್ನಿಸಿದರೆ ಉತ್ತಮವೇನೊ. .

  21. “ನಾನು ಇರುವ ಊರು ಹಾಳೂರು ಬೆಂದಕಾಳೂರು.”

    ಬಾಲು, ಪ್ರಪಂಚದ ಎಲ್ಲಾ ತಿನಿಸುಗಳು ಸಿಗುವ ನಮ್ಮ ಬೆಂಗಳೂರನ್ನೇ ಹಾಳೂರು ಎಂದು ಹಳಿಯುತ್ತಿರುವ ನಿಮ್ಮ ಮೇಲೆ, ಬೆಂಗಳೂರು ಅಭಿಮಾನಿಗಳ ಸಂಘದವರು ಸದ್ಯದಲ್ಲೇ ದಾಳಿ ಮಾಡಲಿದ್ದಾರಂತೆ, ಹುಷಾರಾಗಿರಿ.

  22. “ಕಮೆಂಟ್-ಗಳು ಇನ್ನೂ ಸ್ವಾರಸ್ಯವಾಗಿತ್ತು…”

    ರೂpaश्री. ಬರೀ ಕಾಮೆಂಟುಗಳಲ್ಲೇ ಹೊಟ್ಟೆ ತುಂಬಿಸಿಕೊಳ್ಳಬೇಡಿ. ನಿಮ್ಮ ಮನೆಯಲ್ಲೂ ಕೋಡುಬಳೆ ಮಾಡಿ ತಿಂದು, ರುಚಿ ಹೇಗಿತ್ತೆಂದು ನನಗೂ ತಿಳಿಸಿ.

  23. ಶ್ರೀನಾಥ ಭಲ್ಲೆಯವರಿಗೆ ತುಳಸಿವನಕ್ಕೆ ಸ್ವಾಗತ. ಕೋಡುಬಳೆ ಪ್ರೇಮಿಯಾದ ನಿಮ್ಮನ್ನು ಕೋಡುಬಳೆಯ ಪರಿಮಳವೇ ಇಲ್ಲಿಗೆ ಕರೆತಂದಂತಿದೆ. ತಿನ್ನಲಾರದ ಇ-ಕೋಡುಬಳೆಗಳ ಕುರಿತ ಮೆಚ್ಚುಗೆಗೆ ಧನ್ಯವಾದಗಳು. ಬರುತ್ತಿರಿ. ತಿನ್ನಬಲ್ಲ ಕೋಡುಬಳೆಗಳೂ ಒಂದು ದಿನ ಇಲ್ಲೇ ಸಿಕ್ಕೀತು.

  24. “ಇರಲಿ, ನೆನಪುಗಳನ್ನು ಬೆರೆತ ಕನಸುಗಳ ಮೊರೆಹೋಗುವೆ. ಇಲ್ಲವಾದರೆ ಕಥೆಗಳ ಕಾನನ ಹೊಕ್ಕುವೆ. ಎಲ್ಲರೂ ಸುಖವಾಗಿ ಬಾಳಿ ಬದುಕಿರಿ.”

    ಬನ್ನಿ ಶುಪ್ತದೀಪ್ತಿಯವರೆ ಬನ್ನಿ, ನೆನಪು ಕನಶುಗಳ ನಡುವೆ ಮೊರೆಹೋಗಲು ನಿಮಗೆ ಶದಾ ಶ್ಥಳಾವಕಾಸವಿದೆ, ಶ್ವಾಗತವೂ ಶಹ. ಆದರೆ ಬರುವಾಗ ಹುಸಾರಾಗಿ ಬನ್ನಿ, ಮನೆಯ ಮುಂಬಾಕ್ಲಲ್ಲಿ ನಾಯಿ ಕಟ್ಟಿದಾರೆ. ನೀವು ಸ್ವಾನಪ್ರೇಮಿ ಅಂತ ಅದಕ್ಕೆ ತುಶು ತಿಳಿಶಿದರೆ ದಾರಿ ಶಲೀಶಾಗಿ ಬಿಡುತ್ತದೆ.

    ತುಳಶಿಯಮ್ಮಾ…ಆ ನಾಯಿ ಏನಾದ್ರೂ ತುಳಶೀವನಕ್ಕೆ ಕೋಡುಬಳೆಯಾಶೆಗೆ ಬಂದರಂತೂ ತುಶುವೂ ಭಯಪಡಬೇಡಿ, ಅದು ಶಾಕಿದ ನಾಯಿ. ಹೆಶರು ಮ್ಯಾಕ್ಶ್.

  25. ಹಾಗೆ ದಾಳಿ ಮಾಡಲು ಬರುವವರಿಗೆ ಚಕ್ಕುಲಿ, ಕೋಡುಬಳೆಗಳನ್ನು ಲ೦ಚ ರೂಪದಲ್ಲಿ ಕೊಟ್ಟು ಪಾರಾಗುವೆ.!!!!!

    ಏನ೦ತಿರಿ?

  26. “ತುಳಶಿಯಮ್ಮಾ…ಆ ನಾಯಿ ಏನಾದ್ರೂ ತುಳಶೀವನಕ್ಕೆ ಕೋಡುಬಳೆಯಾಶೆಗೆ ಬಂದರಂತೂ ತುಶುವೂ ಭಯಪಡಬೇಡಿ, ಅದು ಶಾಕಿದ ನಾಯಿ. ಹೆಶರು ಮ್ಯಾಕ್ಶ್.”

    – ಸಾಕಿದ ನಾಯಿ ಅಂದರೆ, ಸಾಕಿದವರನ್ನು ಮಾತ್ರ ಕಚ್ಚುವುದಿಲ್ಲ. ನನ್ನ ಗತಿ ಏನು?

  27. “ಸಾಕಿದ ನಾಯಿ ಅಂದರೆ, ಸಾಕಿದವರನ್ನು ಮಾತ್ರ ಕಚ್ಚುವುದಿಲ್ಲ. ನನ್ನ ಗತಿ ಏನು?”
    ತುಳಶಿಯಮ್ಮಾ… ನೀವು ಕೇಳಿಲ್ಲವೇ? ಶಾಕಿದನಾಯಿ ಕಚ್ಚುವುದಿಲ್ಲ, ಕಚ್ಚುವನಾಯಿ ಶಾಕುವುದಿಲ್ಲ ಅಂತ ಗಾದೆಮಾತೇ ಇದೆಯಲ್ಲವೇ?

  28. ಅಳಿದುಳಿದ ಕೋಡುಬಳೆಗಳು ಡಬ್ಬಿಯಲ್ಲಿ ದಾಸ್ತಾನು.
    ನನಗೋಸ್ಕರ ಅಂದುಕೊಂಡೆಃ-).ಧನ್ಯವಾದಗಳು.
    ಕೋಡುಬಳೆ,ಫೋಟೋ,ಪ್ರತಿಕ್ರಿಯೆಗಳು ಎಲ್ಲ ಚೆನ್ನಾಗಿವೆ.
    ಸಧ್ಯದಲ್ಲೆ ಮಾಡಿ ಬಿಡುವೆ.

  29. “ಹಾಗೆ ದಾಳಿ ಮಾಡಲು ಬರುವವರಿಗೆ ಚಕ್ಕುಲಿ, ಕೋಡುಬಳೆಗಳನ್ನು ಲ೦ಚ ರೂಪದಲ್ಲಿ ಕೊಟ್ಟು ಪಾರಾಗುವೆ.!!!!!

    ಏನ೦ತಿರಿ?”

    ನೀವು ಕೊಡುವ ಲಂಚದ ಪ್ರಮಾಣವನ್ನು ನೋಡಿ ನಂತರ ದಾಳಿಯ ಬಗ್ಗೆ ನಿರ್ಧರಿಸಲಾಗುತ್ತದಂತೆ.

  30. ಶಾಂತಲಾ, ನಿನ್ನ ಮನೆಗೆ ಹೋಗಿ, ನೀನು ಶಾಕಿದ ಸ್ವಾನ ಮ್ಯಾಕ್ಸ್ ನನ್ನು ನೋಡಿಬಂದೆ.

    “ಕೋಡುಬಳೆ,ಫೋಟೋ,ಪ್ರತಿಕ್ರಿಯೆಗಳು ಎಲ್ಲ ಚೆನ್ನಾಗಿವೆ.
    ಸಧ್ಯದಲ್ಲೆ ಮಾಡಿ ಬಿಡುವೆ.”

    ಭಾರ್ಗವಿ, ನೀನು ಪಾಕಪ್ರವೀಣೆ ಎಂಬ ಗುಟ್ಟು ನಮಗೆಲ್ಲಾ ಗೊತ್ತಾಗಿಹೋಗಿದೆ. ನೀನು ಸದ್ಯದಲ್ಲೇ ಮಾಡಿಬಿಡುವ ಕೋಡುಬಳೆ ರುಚಿಕರವಾಗಿರುವುದರಲ್ಲಿ ಅನುಮಾನವಿಲ್ಲ. ನೀನಿರುವ ಊರಿನಲ್ಲೇ ಇರುವ ಇತರ ಕೋಡುಬಳೆಪ್ರಿಯರ ಬಗ್ಗೆ ಎಚ್ಚರ! 🙂

  31. ಎಲ್ಲೋ ಓದಿದ ನೆನಪು

    ’ಸಾಕಿದ ನಾಯಿ ಕಚ್ಚೋದಿಲ್ಲ’ ಖರೆ ಆದರೆ ಅದು ಸಾಕಿದವರಿಗೆ ಗೊತ್ತು ನಾಯಿಗೆ ಗೊತ್ತಿರಬೇಕಲ್ಲ !!!

  32. ತುಳಸಿಯಮ್ಮಾ, ಭಾರ್ಗವಿ ಪಾಕಪ್ರವೀಣೆ ಅನ್ನೋ ಗುಟ್ಟು ನಿಮಗೆ ಯಾವಾಗ, ಹೇಗೆ ಗೊತ್ತಾಯಿತು? ನಮಗಂತೂ ತಿಳಿದಿರಲಿಲ್ಲವಪ್ಪ. ನಮ್ಮೂರಿಂದ ದೂಊಊಊರ ಇರುವ ಇನ್ನೊಬ್ಬ ಬ್ಲಾಗರ್ ಅಡುಗೆಗಳದ್ದೇ ವಿಚಾರ ಬರೆದು ರುಚಿ ರುಚಿಯಾಗಿ ಬಡಿಸುತ್ತಿರುತ್ತಾರೆ. ಅವರನ್ನೇ ಇವರು ಅಂದುಕೊಂಡಿರಾ ಹೇಗೆ ಮತ್ತೆ?

    ಹೌದೇನೇ ಭಾರ್ಗವಿ, ಹೌದೇನೇ? ತುಳಸಿಯಮ್ಮನವರನ್ನುವುದು ನಿಜವೇನೇ?
    ಪಾಕ ಪ್ರವೀಣೆಯಂತೆ ನೀ, ನಿಮ್ಮೂರಿನವರತ್ತ ಎಚ್ಚರದಿಂದಿರಬೇಕಂತೆ,
    ಅವರಿವರು ಜತೆಗೂಡಿ ನಿನ್ನ ಮನೆ ತಿಂಡಿಗಳ ಅಪಹರಿಸದಂತೆ….|| ಹೌದೇನೇ||

  33. ಜ್ಯೋತಿ, ನಿಮ್ಮೂರಿಂದ ದೂರವಿರುವ ಅಡುಗೆ ಬ್ಲಾಗರ್ ನನಗೆ ಗೊತ್ತಿಲ್ಲ. ನಾನು ಹೇಳಿದ್ದು ಭಾರ್ಗವಿಯನ್ನು ಉದ್ದೇಶಿಸಿಯೇ. ಸಾಕ್ಷಿ ಬೇಕಾದರೆ ಅವಳ ಬ್ಲಾಗಿನಲ್ಲಿಯೇ ಇದೆ. ಸದ್ಯ, ಅದು ಬ್ಲಾಗಿನಲ್ಲಿರುವುದರಿಂದ ತಿಂದು ಖಾಲಿಯಾಗಿರುವ ಭಯವಿಲ್ಲ.

    “ಪಾಕ ಪ್ರವೀಣೆಯಂತೆ ನೀ, ಹೌದೇನೇ ಭಾರ್ಗವಿ, ಹೌದೇನೇ? ” – ಹೀಗೆ ನೇರವಾಗಿ ಕೇಳಿದರೆ ಯಾರು ತಾನೇ, (ಸಂಕೋಚ ಸ್ವಭಾವವಿರುವವರು) ” ಹೌದು, ನಾನು ಪಾಕಪ್ರವೀಣೆ” ಎಂದು ಒಪ್ಪಿಕೊಳ್ಳುತ್ತಾರೆ? 🙂

  34. ಭಲ್ಲೆಯವರೆ,
    ’ಸಾಕಿದ ನಾಯಿ ಕಚ್ಚೋದಿಲ್ಲ’ ಖರೆ ಆದರೆ ಅದು ಸಾಕಿದವರಿಗೆ ಗೊತ್ತು ನಾಯಿಗೆ ಗೊತ್ತಿರಬೇಕಲ್ಲ !!! ಎಂದು ನೀವು ಬರೆದಿದ್ದು ನೋಡಿ, ಸುಧಾದಲ್ಲಿ “ನೀವು ಕೇಳಿದಿರಿ” ಪುಟದಲ್ಲಿ, ಬೀಚಿಯವರ ಉತ್ತರವೊಂದು ನೆನಪಾಯಿತು.

    ಪ್ರಶ್ನೆ :- “ಮನೆಯ ಬಾಗಿಲಿನ ಮೇಲೆ “ಆಸ್ತಿಕ” ಎಂದು ಬರೆದರೆ ಹಾವು ಮನೆಯೊಳಗೆ ಬರುವುದಿಲ್ಲವಂತೆ. ನೀವೂ ಹಾಗೆ ಬರೆದಿದ್ದೀರಾ?”

    ಉತ್ತರ :- ” ಇಲ್ಲ, ನಮ್ಮ ಮನೆಗೆ ಬರುವ ಹಾವುಗಳಿಗೆ ಅಕ್ಷರ ಜ್ಞಾನವಿರುವುದಿಲ್ಲ.

  35. ನಾನು ಕೋಡುಬಳೆ ಮಾಡುವ ತಯಾರಿನಡೆಸುತ್ತಿದ್ದರೇ ನನಗಿಲ್ಲಿ ಬಿರುದು ಸಿಕ್ಕಿದೆ. ಜೊತೆಗೆ ಸಿಹಿ ಕೂಡ ಮಾಡ್ಬೇಕಾಯ್ತು ಈಗಃ-).
    ತುಳಸಿಯಮ್ಮನವರು ಒಮ್ಮೆ ಕೊಟ್ಟ ಪದವಿಯನ್ನು ನಿಜವಾಗಿ ರುಚಿ ನೋಡಿದ ಮೇಲೆ, ಹಿಂತೆಗೆದುಕೊಳ್ಳುವಂತಿಲ್ಲ.ಚಂದದ ಬಿರುದಿಗೆ ಧನ್ಯವಾದಗಳು ಅಕ್ಕ.
    ಜ್ಯೋತಿ ಅಕ್ಕ, ನನಗಂತೂ ಗೊತ್ತಿಲ್ಲ, “ಪಾಕ ಪ್ರವೀಣೆ” ಅಂತ ಬಿರುದು ಸಿಕ್ಕ ಮೇಲೆ ಮತ್ಯಾಕೆ ಯೋಚನೆ ಅಲ್ವಾಃ-).

  36. ಕೊಡುಬಳೆ ಬಹಳ ರುಚಿಯಾಗಿದೆ – ಆದರೆ ಮನೆಯವರ ಅಣತಿಯಂತೆ ಅರ್ಧಕ್ಕಿಂತ ಹೆಚ್ಚು ತಿನ್ನುವನ್ತಿಲ್ಲವಂತೆ. ಃ(

  37. ತವಿಶ್ರೀಯವರೇ, ಮಾಡಿದ ಕೋಡುಬಳೆಯನ್ನೆಲ್ಲಾ ನೀವೋಬ್ಬರೆ ಮುಗಿಸಬಾರದೆಂದು ನಿಮಗೆ ಅರ್ಧದ ಕಟ್ಟುಪಾಡು ವಿಧಿಸಿರಬೇಕು.

  38. ಅಯ್ಯೋ ಹಾಗಲ್ಲ ಮೇಡಂ. ಮಾಡಿದ ಕೋಡುಬಳೆಯಲ್ಲಿ ಅರ್ಧ ಭಾಗ ಕೊಡ್ತಾರಾ? ಒಂದು ಕೋಡುಬಳೆಯಲ್ಲಿ ಅರ್ಧ ಭಾಗ ಕೊಟ್ರೆ ಸಾಕಾಗಿದೆ. ’ನಿಮಗಾಗಲೇ ವಯಸ್ಸು ೫೦ ಆಯ್ತು. ಕೊಲೆಸ್ಟರಾಲ್ ಜಾಸ್ತಿ ಆಗಿ ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ನೋಡ್ಬೇಕಾದವ್ರು ನಾವು ತಾನೆ. ಸುಮ್ನೆ ಕೊಟ್ಟಷ್ಟು ತಿನ್ನಿ, ಇಲ್ಲಾಂದ್ರೆ ಮನೆ ಬಿಟ್ಟು ಹೋಗಿ ಅಂತ’, ಅಮ್ಮ ಮಗಳು ಸೇರಿ, ಮೂಲೆಗುಂಪು ಮಾಡಿಬಿಟ್ಟಿದ್ದಾರೆ. ನನ್ನ ಗೋಳು ಹೇಳ್ಕೊಳ್ಳೋಕೆ ಯಾರೂ ಸಿಗ್ತಿಲ್ಲ.

  39. ತವಿಶ್ರೀಯವರೇ, ನೀವು ಬರೆದಿದ್ದ ಅರ್ಥ ಗೊತ್ತಾಗಿತ್ತು. 🙂 ಪಾಪ! ನಿಮ್ಮ ಕಷ್ಟ ಅರ್ಥ ಮಾಡಿಕೊಳ್ಳುವ ಬದಲು ತಮಾಷೆ ಬೇರೆ ಮಾಡೋದೆ!

  40. ತವಿಶ್ರೀಯವರೇ, ನಿಮ್ಮಲ್ಲಿ ಒಮ್ಮೆಗೆ ಒಂದರ್ಧಕ್ಕಾದರೂ ಪರವಾನಗಿಯಿದೆ. ಒಪ್ಪಿಕೊಳ್ಳಿ. ಅಮ್ಮ-ಮಗಳು ಸೇರಿ ನಿಮ್ಮನ್ನು ಮೂಲೆಗುಂಪು ಮಾಡಿಲ್ಲ; ನಿಮ್ಮ ಮೇಲೆ ಪ್ರೀತಿ-ಕಾಳಜಿಯ ಕಣ್ಣು ಇಟ್ಟಿದ್ದಾರೆ, ಅಲ್ಲವೆ? ಸಂತೋಷಪಡಿ. ಅವರ ಮೇಲೆ ನಿಮ್ಮ ಆರೋಗ್ಯದ ಜವಾಬ್ದಾರಿ ಹಾಕಿ ನೀವು ನಿಶ್ಚಿಂತರಾಗಬಹುದಲ್ಲ. ಪುಣ್ಯವಂತರಯ್ಯ ನೀವು, ಗಂಡಸರು. ನಮ್ಮದೇ (ಗೃಹಿಣಿಯರದೇ) ಕಷ್ಟ. ನಮ್ಮ ಆರೋಗ್ಯವನ್ನೂ ಮನೆಯ ಇತರರ ಆರೋಗ್ಯವನ್ನೂ ಗಮನದಲ್ಲಿ ಇಟ್ಟುಕೊಂಡೂ ಇಂಥ ರುಚಿರುಚಿ ಕರಿದ ತಿಂಡಿಗಳನ್ನು ಮಾಡಿಕೊಂಡೂ ತಿನ್ನದೆ, ತಿನ್ನಿಸಲಾರದೆ, ಆರು ಕೈಗಳಲ್ಲಿ ಮೂರಕ್ಕೆ ಹಂಚಿ ಬಾಳಬೇಕಾಗಿದೆಯಲ್ಲ. ಈ ಗೋಳನ್ನು ಕೇಳುವವರು ಯಾರೂ ಇಲ್ಲ.

  41. ಜ್ಯೋತಿ, ನಿನ್ನ ಮಾತಿನಲ್ಲಿ ತವಿಶ್ರೀಯವರಿಗೆ ಸಮಾಧಾನಕ್ಕಿಂತ ಸ್ವಾನುಕಂಪವೇ ಹೆಚ್ಚಾಗಿರುವಂತಿದೆ. 🙂

  42. ವೇಣಿ, ಇದು ನನ್ನೊಬ್ಬಳ ಬಗ್ಗೆ ಬರೆದದ್ದಲ್ಲ. ಸಾಮಾನ್ಯವಾಗಿ ನಾನು ಕಂಡಿರುವ ಬಹಳಷ್ಟು ಗೃಹಿಣಿಯರ ಒಳತೋಟಿಯ ಬಗ್ಗೆ. ತವಿಶ್ರೀಯವರಿಗೆ ಸಮಾಧಾನದ ಜೊತೆಗೆ ಪರಿಸ್ಥಿತಿಯ ಇನ್ನೊಂದು ಮುಖದ ಪರಿಚಯ ಮಾಡಿಸುವ ಉದ್ದೇಶವೂ ಇಲ್ಲಿದೆ. ಅಷ್ಟೇ.

Leave a Reply to sritri Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.