ಈ ತುದಿಯಲ್ಲಿ
ಕಾಯುತ್ತಿದ್ದೇವೆ ನಾವಿನ್ನೂ
ನಮ್ಮ ಸರದಿಗಾಗಿ
ಕಣ್ಣುಗಳಲ್ಲಿ ಅಳಿದುಳಿದ
ಆಸೆಯ ಕುರುಹು
ನೋಟ ಹರಿಯುವ ಉದ್ದಕ್ಕೂ
ಮೈಚಾಚಿ ಮಲಗಿದೆ ದಾರಿ
ಯಾರೂ ಅರಿಯದ
ಗುಟ್ಟು ತನ್ನಲ್ಲೇ ಬಚ್ಚಿಟ್ಟು
ನಿರ್ಲಿಪ್ತ ಮೌನದಲಿ.
ಯಾರೋ ಇಳಿಯುತ್ತಾರೆ
ಮತ್ತಾರೋ ಏರುತ್ತಾರೆ
ಅತ್ತಿತ್ತ ಹರಿಯುವ ಬಂಡಿಗೆ
ಪಯಣಿಗರ ಸುಖ-ದುಃಖಗಳರಿವಿಲ್ಲ
ಅದರದು ನಿಲ್ಲದ ನಿತ್ಯ ಪಯಣ.
ಅಹಂ ಅಳಿದ ಮರುಕ್ಷಣ
ದೂರವೇನಿಲ್ಲ ಮಿಲನ.
ದಾರಿ ನಡೆಸುವುದಿಲ್ಲ
ನಾವೇ ನಡೆಯಬೇಕು
ದೊರಕಬಹುದಷ್ಟೇ ಅಲ್ಲಲ್ಲಿ
ನೆಟ್ಟ ಕೈಮರದ ಸುಳಿವು
ಸ್ಪಷ್ಟವಾಗದ ಹೊರತು
ನಮಗೆ ನಾವೇ
ಕಂಡುಕೊಳ್ಳುವುದೆಂತು
ಇರವೇ ಅರಿವಿಲ್ಲದ
ಅಲೆವಾತ್ಮದ ಗುರುತು
ಎದ್ದೆದ್ದು ಬರುವ ಪ್ರಶ್ನೆಗಳಿಗೆಲ್ಲ
ಇನ್ನೆಲ್ಲಿದ್ದೀತು ಉತ್ತರ?
ಆ ಹೊತ್ತು ಹತ್ತಿರಾಗುವ ತನಕ
ಪಯಣಿಗರ ಯಾದಿಯಲಿ
ನಾನಿಲ್ಲ, ನೀನೂ ಇಲ್ಲ.
ತ್ರಿವೇಣಿ,
ಅನೇಕ ದಿನಗಳ ಬಳಿಕ ನಿನ್ನ ಕವನವನ್ನು ಓದುತ್ತಿದ್ದೇನೆ. ಓದಿ ಸಂತೋಷ ಪಡುತ್ತಿದ್ದೇನೆ. ಕವನ ತುಂಬ ಇಷ್ಟವಾಯಿತು.
ತುಳಸಿಯಮ್ಮ,
ತುಂಬಾ ಅರ್ಥವತ್ತಾದ ಸುಂದರ ಕವನ. ಇಷ್ಟವಾಯಿತು. ಮೋಕ್ಷದ ಹಾದಿಯಲ್ಲಿ ಜೊತೆಯಾಗಿ ಬರುವವರು ನಿಜವಾಗಿಯೂ ಯಾರೂ ಇಲ್ಲ. ಅದಕ್ಕೇ ತಾನೇ ದಾಸರು ಹೇಳಿದ್ದು “ದಾರಿ ಯಾವುದಯ್ಯ? ವೈಕುಂಠಕೆ ದಾರಿ ತೋರಿಸಯ್ಯ..” ಎಂದು!
ಕಾಕಾ, ತೇಜು, ನಿಮ್ಮ ಮಾತುಗಳು ನನಗೂ ಕವನ ಬರೆಯುವ, ಪ್ರಕಟಿಸುವ ಧೈರ್ಯ ತಂದಿದೆ. 🙂
ನಮಸ್ಕಾರ ತ್ರಿವೇಣಿಯವರಿಗೆ…
ನಿಮ್ಮ ಕವನದ “ದಾರಿ ನಡೆಸುವುದಿಲ್ಲ ನಾವೇ ನಡೆಯಬೇಕು” ಎಂಬ ಸಾಲುಗಳು ನನ್ನ ಮನಸ್ಸನ್ನು ತಟ್ಟಿತು… ನಾವೇ ನಡೆಯಬೇಕೆಂದು ಗೊತ್ತಿದ್ದರೂ ಕೂಡ, ಮಧ್ಯದಲ್ಲೇ ಹೇಗೆ ನಿರಾಶರಾಗ್ತೀವಲ್ವಾ? ಕವನ ಚೆನ್ನಾಗಿದೆ.
“ನಾವೇ ನಡೆಯಬೇಕೆಂದು ಗೊತ್ತಿದ್ದರೂ ಕೂಡ, ಮಧ್ಯದಲ್ಲೇ ಹೇಗೆ ನಿರಾಶರಾಗ್ತೀವಲ್ವಾ? ”
– ಶ್ಯಾಮಲ, ಆ ನಿರಾಶೆ ನಮ್ಮನ್ನು ಪೂರ್ತಿ ಆವರಿಸದಂತೆ ಆಗಾಗ ಇಂತಹ ಮಾತುಗಳನ್ನು ಹೇಳಿಕೊಂಡು ದಾರಿ ಸಾಗಿಸಬೇಕಷ್ಟೆ. ಪ್ರತಿಕ್ರಿಯೆಗೆ ಧನ್ಯವಾದಗಳು.