ಕಲ್ಪನೆ ಕುಂಚವ ಭಾವದಿ ಹೊರಳಿಸಿ
ರಚಿಸಲು ಕುಳಿತೆನು ನುಡಿಚಿತ್ರ
ಹೃದಯದಿ ತುಂಬಿದ ಒಲುಮೆಯೆ ಬರೆಸಿದೆ
ನಿನಗಾಗೆಂದೇ ಈ ಪತ್ರ

ತೂರುತ ಬರುವ ಮುಳ್ಳಿನ ಮಾತಿಗೆ
ಸಾತ್ವಿಕ ನಡತೆಯ ಬಿಳಿಹೂವು
ನಕಾರ ಯೋಚನೆ ಸನಿಹ ಬರದಂತೆ
ರೋಗ ನಿರೋಧಕ ಕಹಿಬೇವು

ಉಕ್ಕುತ ಬಿಕ್ಕುತ ಸೊಕ್ಕುತ ಬರುವ
ಆವೇಗದ ಬೆಂಕಿಯ ತಡೆವ ಕೂಲ್ ಗಾಜು
ಮೃದುಮನ ನರಳಿಸೊ ನೆತ್ತರ ಗಾಯಕೆ
ನೋವ ಮಾಯಿಸುವ ಬ್ಯಾಂಡೇಜು

ಬಾಯಾರಿದ ಪಥಿಕನ ತಣಿಸುವ
ಸಿಹಿ ನೀರಿನ ತಣ್ಣನೆ ಬಾವಿ
ಬರಿಗಾಲಿಗೆ ಬರೆ ಹಾಕುವ ರಸ್ತೆಗೆ
ಏಸಿ ಚಾಲಿಸಿದ ಎಸ್ಯುವಿ

ದುಡುಕಿನ ಮನಸಿನವಾಂತರ ಮದ್ದಿಗೆ
ಕಹಿಯೇ ಇಲ್ಲದ ಸಿಹಿ ಗುಳಿಗೆ
ಬರೆಯುತ ಹೋದರೆ ಸಾಗಿದೆ ಮನದಲಿ
ನೆನಪಿನ ಸುಮಧುರ ಮೆರವಣಿಗೆ

ಭರವಸೆ ಕಳೆದ ಕಾಳರಾತ್ರಿಯಲಿ
ತಿಂಗಳ ಬೆಳಕಿನ ಕೃಪೆ ನೀನು
ಬಣ್ಣಿಸ ಹೊರಟರೆ ಪದಗಳೇ ಸೋತವು
ನುಡಿಯಲಿ ತಾನೇ ನಾನಿನ್ನೇನು?

9 thoughts on “ನಿನಗಾಗಿ”

  1. ಎಸ್ಯುವಿಯೊಳಗೆ ಕೂಲ್ ಗಾಜು ಏರಿಸಿ ಸಾಗುವ ನಿನ್ನ ಜೀವನ ಪಯಣ ಯಾವುದೇ ಬ್ಯಾಂಡೇಜು, ಮದ್ದುಗಳ ಅಗತ್ಯ ಬೀಳದೆ ಸುಂದರ ಹೂಗೊಂಚಲಾಗಿರಲಿ ಗೆಳತಿ.

  2. ಇದು ಕವನಪತ್ರನಾ ? ಅಕ್ಕ. ತುಂಬಾ ಚೆನ್ನಾಗಿದೆ. ಸಧ್ಯಕ್ಕಂತು ಬಿಳಿಹೂವು ಮತ್ತು ಕಹಿಬೇವು ಮರೆಯೋಲ್ಲ,ತುಂಬಾ ಇಷ್ಟವಾಯ್ತು ಕವನ.

  3. ಕಾಕಾ, ಧನ್ಯವಾದಗಳು.

    ಜ್ಯೋತಿ, ನಿನ್ನ ಹಾರೈಕೆಯ ಹೊಗೊಂಚಲಿನಿಂದ ಕೆಲವು ಹೂಗಳನ್ನು ನಿನಗೇ ಮರಳಿಸುತ್ತಿದ್ದೇನೆ. ತಲುಪಿದ್ದಕ್ಕೆ ತಿಳಿಸು.

    ಭಾರ್ಗವಿ, ಥ್ಯಾಂಕ್ಸ್ ಕಣೆ. ಕಹಿಬೇವು, ಬಿಳಿಹೂಗಳ ಜೊತೆಗೆ ನನ್ನ ಅಚ್ಚುಮೆಚ್ಚು ಕರಿಬೇವನ್ನೂ ನೆನಪಿಟ್ಟುಕೊ 🙂

  4. ವೇಣಿ,
    ನನ್ನ ಹೂಗೊಂಚಲು ನಿನ್ನ ತಲುಪಿ ಅದರ ಕೆಲವು ಹೂಗಳು ಮತ್ತೆ ನನ್ನ ಬಾಗಿಲಿಗೆ ಬರೋ ಹೊತ್ತಿಗೆ ಬಾಡಿದ್ದವು ಕಣೇ. ಆದರೂ ಕೆಲವು ಹರಳು ಸಕ್ಕರೆ-ಉಪ್ಪು ಬೆರೆಸಿದ ನೀರು ಹಾಕಿ ಹೂದಾನಿಯಲ್ಲಿಟ್ಟಿದ್ದೇನೆ. ನಮ್ಮಿಬ್ಬರ ಪ್ರೀತಿಯ ನಸುಬೆಚ್ಚನೆಯಲ್ಲಿ ಅವು ಪುನಃ ನಳನಳಿಸಬಹುದು.

  5. ಓಹೋ ಮಾಲಾ, ಅಲ್ಲಿದ್ರೂ ನನ್ನ ಬ್ಲಾಗ್ ನೋಡಿ, ಉತ್ತರಿಸಿದ ನಿಮ್ಮ ಪ್ರೀತಿಗೆ ಧನ್ಯವಾದ. `ಇಲ್ಲೇ ಇರು, ಅಲ್ಲೇ ಇರು, ಬ್ಲಾಗ್ ಮೇಲೆ ಕಣ್ಣಾಡಿಸೊ ಅಭ್ಯಾಸ ಕೈಬಿಡದೇ ಇರು’ 🙂

  6. ತುಳಸಿಯಮ್ಮ,
    ಮೊನ್ನೆ ಒಂದು ಎಸ್ಸುವಿ ಬರ್ರೂ ಅಂತಾ ಹೋಯ್ತು..
    ಅದರ ಕೂಲ್ಗಾಜ್ ಹಿಂದೆ ಯಾರಿದ್ದರೂ ಅಂತಾ ತಿಳಿಲಿಲ್ಲ..
    ಈಗ ಕವನ ಓದುವಾಗ ನೀವು ಅಂತಾ ಗೊತ್ತಾಯಿಯ್ತು 🙂

    ಚೆನ್ನಾಗಿದೆ ಸಾಲುಗಳು..
    ನೋ ಬ್ಯಾಂಡ್ಯಾಜ್, ನೋ ಕಹಿ..
    ಯಾವಾಗಲೂ ಕೂಲ್ ಆಗಿರೀ !

    -ಪಾತರಗಿತ್ತಿ

  7. ಶಿವು, ಇದು ಸುಳ್ಳೇ ಸುಳ್ಳು! ನಿಮ್ಮನ್ನು ನೋಡಿದ್ರೆ ನನ್ನ ಎಸ್ಯುವಿ ನಿಲ್ಲದೆ ಇರುತ್ತಿತ್ತೇ? ಕೂಲ್ಗಾಜಿನ ಹಿಂದಿದ್ದವರಿಗೆ ಕಣ್ಣು ಕಾಣಿಸುವುದಿಲ್ಲವೆಂದು ನೀವು ತಿಳಿದಿರೊಹಾಗಿದೆ.

Leave a Reply to mala Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.