’ಅಮ್ಮಾ, ನಾನು ಜಂಭ ಮಾಡ್ಲಾ?’ – ಮನೆಮಂದಿಯೊಡನೆ ಟಿವಿಯ ಯಾವುದೋ ಸಿನಿಮಾದಲ್ಲಿ ಮುಳುಗಿದ್ದ ನಾನು ಪುಟ್ಟ ಮಗಳ ವಿಚಿತ್ರ ಕೋರಿಕೆಗೆ ಬೆರಗಾದೆ. ಇದೇನು ಹೊಸ ಆಟ ಕಲಿತಿದೆ ಮಗು? ಎಂದು ಉಳಿದವರಿಗೂ ಕುತೂಹಲ. ‘ಸರಿ ಮಾಡು, ನೋಡೋಣ’ ಎಂದು ಎಲ್ಲರೂ ಅವಳು ತೋರಿಸಲಿರುವ ಜಂಭವನ್ನು ನೋಡಲು ಕುತೂಹಲದಿಂದ ಕಾದೆವು. ನಮ್ಮೆಲ್ಲರ ಗಮನ ತನ್ನತ್ತ ಇದೆ ಎಂದು ಖಚಿತಪಡಿಸಿಕೊಂಡ ನಮ್ಮನೆ ಪುಟಾಣಿ ಪುಟ್ಟಿ, ತುಟಿಯನ್ನು ತಿರುಚಿ, ಸೊಟ್ಟ ಮಾಡಿ, ಎಡಕ್ಕೊಮ್ಮೆ, ಬಲಕ್ಕೊಮ್ಮೆ ತಿರುಗಿಸಿ ಜಂಭ ಮಾಡಿದಳು! ಯಾವುದೋ ಸಿನಿಮಾ ನೋಡಿ ಕಲಿತಿದ್ದಿರಬಹುದಾದ ತನ್ನ ಹೊಸ ವಿದ್ಯೆ ಪ್ರದರ್ಶಿಸಿದ ಹೆಮ್ಮೆ ಅವಳಿಗೆ. ನಮಗೆಲ್ಲಾ ಆ ಬಲು ಮುದ್ದಾದ ಜಂಭ ನೋಡಿ ಇನ್ನಿಲ್ಲದ ನಗು. ‘ಎಲ್ಲಿ ಇನ್ನೊಂದ್ಸಲ ಜಂಭ ಮಾಡು’ ಎಂದು ಮಾಡಿಸಿ, ನೋಡಿನೋಡಿ ಖುಷಿಪಟ್ಟಿದ್ದೆವು. ಮನೆಗೆ ಬಂದ ಅತಿಥಿಗಳಿಗೂ ಪುಟ್ಟಿಯ ಜಂಭ ನೋಡುವ ಯೋಗ!
ವರ್ಷಗಳ ಹಿಂದಿನ ಘಟನೆ ಮತ್ತೆ ನೆನಪಾಗಿದ್ದು, ಕೆಲವು ದಿನಗಳ ಹಿಂದೆ ನಮ್ಮ ಮನೆಗೆ ಬಂದಿದ್ದ ಸ್ನೇಹಿತರ ಮಗುವಿನಿಂದಾಗಿ. ಆ ಮಗು ಕೂಡ ಅಂದು ಮಗಳು ಕೇಳಿದಷ್ಟೇ ಮುಗ್ಧವಾಗಿ, ಮುದ್ದಾಗಿ ‘ಆಂಟಿ, ನಾನು ಸಿಲ್ಲಿ ಫೇಸ್ ಮಾಡ್ಲಾ?’ ಎಂದು ಇಂಗ್ಲಿಷಿನಲ್ಲಿ ಕೇಳಿತು. ಸಿಲ್ಲಿಯಾಗಿ ಯೋಚಿಸುವುದು, ವರ್ತಿಸುವುದೂ ಗೊತ್ತು. ಇದೇನಪ್ಪಾ ಇದು ಸಿಲ್ಲಿ ಫೇಸ್ ಎಂದನ್ನಿಸಿ, ‘ಮಾಡು, ನೋಡ್ತೀನಿ’ ಅಂದೆ. ಆಗ ಮಗು, ಥೇಟ್ ಅಂದು ಮಗಳು ಮಾಡಿದಂತೆಯೇ ತುಟಿ ತಿರುಚಿ, ಸೊಟ್ಟ ಮಾಡಿ ‘ಸಿಲ್ಲಿ ಫೇಸ್’ ಮಾಡಿಯೇಬಿಡ್ತು! ಉಕ್ಕಿ ಬರುವ ನಗುವನ್ನು ನಿಯಂತ್ರಿಸಲೇ ಇಲ್ಲ ನಾನು!
‘ಅರೆ, ಜಂಭ ಮಾಡುವುದೇ ಸಿಲ್ಲಿ!’ ಎಂದು ತಿಳಿಯಲು ಇಷ್ಟು ವರ್ಷ ಬೇಕಾಯಿತೇ ನನಗೆ?
ತ್ರಿವೇಣಿ,
ಇದು ನನಗೂ ಈಗಲೇ ತಿಳಿಯಿತು.
ತಿಳಿಸಿದ್ದಕ್ಕಾಗಿ ಈ ಪುಟಾಣಿಗಳಿಗೆ ನಾನು ಕೃತಜ್ಞನಾಗಿದ್ದೇನೆ.
ಜಂಭ ಮಾಡುವುದು ಸಿಲ್ಲಿ ಅಂತ ತೋರಿಸಿದ ಪುಟಾಣಿಗಳಿಗೂ ಅದನ್ನಿಲ್ಲಿ ಬರೆದು ನಮಗೆಲ್ಲ ತಿಳಿಸಿದ ನಿನಗೂ ಧನ್ಯವಾದಗಳು ಕಣೇ.
ಇದರ ಇನ್ನೊಂದು ಮುಖ- ‘ಜಂಭ’ ಮಾಡಿದಾಗ ನಮ್ಮ ‘ಫೇಸ್ ಸಿಲ್ಲಿ’ಯಾಗಿರುತ್ತೆ.
ಪ್ರಿಯ ಅಕ್ಕ,
ವಿಷಯ ಮತ್ತು ನಿರೂಪಣ ಎರಡೂ ಇಷ್ಟ ಆಯ್ತು.
ಪ್ರೀತಿಯಿಂದ
ಸಿಂಧು
ಚೆನ್ನಾಗಿದೆ ಮಗಳು ಕಲಿಸಿದ ಪಾಠ!
ಹ ಹ. ಸಖತ್ ಇದೆ !
ಕಾಕಾ, ಎಲ್ಲಾ ತಿಳಿದಿದ್ದೂ ತಿಳಿದಿಲ್ಲವೆನ್ನುವ ನಿಮ್ಮ ದೊಡ್ಡಗುಣ ನನಗೂ ಬರುವಂತೆ ಹರಸಿ.
“ಜಂಭ ಮಾಡುವುದು ಸಿಲ್ಲಿ ಅಂತ ತೋರಿಸಿದ ಪುಟಾಣಿಗಳಿಗೂ….
ಜ್ಯೋತಿ, ಈ ಪೈಕಿ ಒಂದು ಪುಟಾಣಿ ಕಾಲೇಜಿನ ಮೆಟ್ಟಿಲೇರಲಿದ್ದಾಳೆ. ಆದರೆ ನನಗೆ ಇನ್ನೂ ಅವಳು ಪುಟಾಣಿಯೇ! 🙂
“ಇದರ ಇನ್ನೊಂದು ಮುಖ- ‘ಜಂಭ’ ಮಾಡಿದಾಗ ನಮ್ಮ ‘ಫೇಸ್ ಸಿಲ್ಲಿ’ಯಾಗಿರುತ್ತೆ.” –
ಹೂಂ…. ನನಗಾಗಿದ್ದೂ ಇದೇ ಜ್ಞಾನೋದಯ!
ಸಿಂಧು, ಎಷ್ಟೊಂದು ದಿನವಾಯಿತಲ್ಲಾ! ತುಂಬಾ ಸಂತೋಷವಾಗುತ್ತಿದೆ. ಸೃಷ್ಟಿಯಿಂದ ಇಂತಹ ಪಾಠಗಳೂ ನಿನಗೂ ಕಾದಿವೆ 🙂
‘ಚೆನ್ನಾಗಿದೆ ಮಗಳು ಕಲಿಸಿದ ಪಾಠ!’
ಹರೀಶ್, ಹೌದು, ಕಲಿತು ಮುಗಿಯದ, ಕಲಿಯುತ್ತಲೇ ಇರುವ ಪಾಠಗಳು ಇನ್ನೂ ಅದೆಷ್ಟಿವೆಯೋ ಅಲ್ವಾ?
“ಹ ಹ. ಸಖತ್ ಇದೆ !”
ವಿಕಾಸವಾದದ ಮೊದಲ ಹೆಜ್ಜೆ ! 🙂
ಹಾಯ್ ತ್ರಿವೇಣಿ
ಮಗು ಜಂಭ ಮಾಡುವುದು ಹೇಗಂತ ಚೆನ್ನಾಗಿ ತೋರಿಸಿಕೊಟ್ಟಿದೆ .ಅದನ್ನು ನಮಗೆ ತಿಳಿಸಿದ್ದಕ್ಕೆ ಥ್ಯಾಂಕ್ಸ್ .ಮಕ್ಕಳು ಏನು ಮಾಡಿದರು ಚಂದಾನೆ ಅಲ್ವ? ನನ್ನ ಮಗಳ ಬಾಲ್ಯದ ನೆನಪಾಯ್ತು
ಶಶಿ, ತುಳಸಿವನಕ್ಕೆ ಆದರದ ಸ್ವಾಗತ. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಇದೀಗ, ನಮ್ಮ ಸ್ನೇಹ ಸೇತು ಇಮೈಲಿನಿಂದ ಬ್ಲಾಗ್ ಲೋಕಕ್ಕೂ ವಿಸ್ತರಿಸಿದಂತಾಯಿತು. 🙂
ತುಳಸಿಯಮ್ಮ,
ನನ್ನ ಮಗಳಿಗೆ ಎರಡುವರ್ಷವಷ್ಟೇ.. ಈಗಲೇ ಅವಳು ಜಂಭ ಮಾಡುತ್ತಾ ಇರುತ್ತಾಳೆ (ನೀವು ಹೇಳಿದಂತೆ..) 🙂 ಆದಷ್ಟು ಅವಳು ಜಂಭ ಮಾಡುತ್ತಿರುವ ಫೋಟೋ ಕಳಿಸುವೆ ನೋಡಿ..:) ಇಷ್ಟವಾಯಿತು ವಸ್ತು ಹಾಗೂ ನಿರೂಪಣೆ ಎರಡೂ.
ತ್ರಿವೇಣಿ ಅಕ್ಕಾ…ಅವರೆಲ್ಲ ಜಂಭಮಾಡಿದ್ರೂಂತ ಬೇಜಾರು ಮಾಡ್ಕೋಬೇಡಿ. ನಿಮಗೆಲ್ಲ ಬೇಜಾರಾಗತ್ತೆ ಅಂದ್ರೇ ನಾನು ಆ ಥರ ಜಂಭ ಎಲ್ಲ ಮಾಡೋಲ್ಲ…. 🙂
(ಜಂಭದ ಹುಡ್ಗೀರು ಇಷ್ಟ ಆದ್ರು, ಹಾಗೇ ನೀವು ಬರೆದದ್ದೂ )
ತೇಜಸ್ವಿನಿ, ಪುಟ್ಟಿಯ ಜಂಭದ ಫೋಟೋ ನೋಡಿ ನೀವೋಬ್ಬರೆ ಖುಷಿಪಡಬೇಡಿ. ನನಗೂ ಕಳಿಸಿ, ನಿಮ್ಮ ಸಂತೋಷವನ್ನೂ ನಾನು ಹಂಚಿಕೊಳ್ಳುತ್ತೇನೆ.
ಶಾಂತಲ, ನಂಗೆ ಗೊತ್ತು ಕಣೆ. ನೀನು ಜಂಭ ಮಾಡೋ ಹುಡುಗಿಯಲ್ಲ ಅಂತ. ಅದಕ್ಕೇ ನಿನ್ನ ಕಂಡರೆ ರಾಶಿ ಪ್ರೀತಿ ಅಲ್ವಾ ನಂಗೆ ? 🙂