ಕವಿ : ಎಸ್ ವಿ ಪರಮೇಶ್ವರ ಭಟ್ಟ
ಸಂಗೀತ : ಮೈಸೂರು ಅನಂತಸ್ವಾಮಿ

ಗಾಯಕಿ : ಸುನೀತ ಅನಂತಸ್ವಾಮಿ

ಪ್ರೀತಿಯ ಕರೆಕೇಳಿ ಆತ್ಮನ ಮೊರೆಕೇಳಿ
ನೀ ಬಂದು ನಿಂದಿಲ್ಲಿ
ದೀಪ ಹಚ್ಚಾ

ನಲ್ಲ ನೀ ಬಂದಂದು ಕಣ್ಣಾರೆ ಕಂಡಂದು
ಮನೆಯೆಲ್ಲ ಹೊಳೆದಂತೆ
ದೀಪ ಹಚ್ಚಾ

ಬಾಳ ಮುಂಬೆಳಗುರಿದು ಹಗರಣದ ಬೈಗಿಳಿದು
ಕಪ್ಪೇರಿ ಬಂದಿತು
ದೀಪ ಹಚ್ಚಾ

ಕರಿಗೆಜ್ಜೆ ಕುಣಿಸುತ್ತಾ ಕಣ್ಣೀರ ಮಿಡಿಯುತ್ತಾ
ಇರುಳಾಕೆ ಬಂದಳು
ದೀಪ ಹಚ್ಚಾ

ಕಾಲರಾಯನ ಗಾಲಿ ಕತ್ತಲಲೆ ತಿರುಗಲಿ
ನನ್ನೆದೆಗೆ ನಿನ್ನೊಲವ
ದೀಪ ಹಚ್ಚಾ

ದೇಹದ ಗೂಡಲಿ ನಿನ್ನೊಲವು ಮೂಡಲಿ
ಜಗವೆಲ್ಲ ನೋಡಲಿ
ದೀಪ ಹಚ್ಚಾ

ಬಾನಿನಂಗಳದಲ್ಲಿ ಚುಕ್ಕಿ ಹೊಳೆದೆಸೆವಂತೆ
ನನ್ನ ಮನದಂಗಳದಿ
ದೀಪ ಹಚ್ಚಾ

ಬೆಲ್ಲದಂತೆಲ್ಲ ಬಗೆ ಕರಗುತಲಿಹುದೊಳಗೆ
ನಿನ್ನನೆ ಬೇಡುವೆ
ದೀಪ ಹಚ್ಚಾ

ದೀಪಿಲ್ಲ ಧೂಪಿಲ್ಲ ಝಳಝಳವಿನಿಸಿಲ್ಲ
ಕಳಕಳವಾಯ್ತೆಲ್ಲ
ದೀಪ ಹಚ್ಚಾ

ಹಳೆಬಾಳು ಸತ್ತಿತ್ತು ಕೊಳೆಬಾಳು ಸುಟ್ಟಿತ್ತು
ಹೊಸಬಾಳು ಹುಟ್ಟಿತ್ತು
ದೀಪ ಹಚ್ಚಾ

ಸಾವಿನ ಒಳಸಂಚು ಮಾಯದ ಕಣ್ಮಿಂಚು
ನಿನ್ನೆದುರು ನಂದಿತು
ದೀಪ ಹಚ್ಚಾ

ಪ್ರೀತಿಯ ರತಿಗೆ ನೀ ಬೆಳಕಿನ ಆರತಿ
ಬೆಳಗಿ ಕಲ್ಲಾರತಿ
ದೀಪ ಹಚ್ಚಾ

ಮೋಹದ ಮತಿಗೆ ನೀ ಸುಟ್ಟು ತೋರುವ ದೀಪ
ಸುಜ್ಞಾನಪ್ರದೀಪ
ದೀಪ ಹಚ್ಚಾ

ಜ್ಯೋತಿಸ್ವರೂಪನೆ ಸ್ವಯಂಪ್ರಕಾಶನೆ
ತೇಜೋರೂಪನೆ
ದೀಪ ಹಚ್ಚಾ

ವಿಶ್ವಮೋಹಿತಚರಣ ವಿವಿಧವಿಶ್ವಾಭರಣ
ಆನಂದದ ಕಿರಣ
ದೀಪ ಹಚ್ಚಾ

ನೀನೆಂಬ ಜ್ಯೋತಿಯಲಿ ನಾನೆಂಬ ಪತಂಗ
ಸೋತ ಉಲಿ ಏಳಲಿ
ದೀಪ ಹಚ್ಚಾ

ಭವದಂಧಕಾರದಿ ಎನ್ನ ಸಂಸಾರದಿ
ನಿಂದೀಪ ಬೆಳಗಲಿ
ದೀಪ ಹಚ್ಚಾ

ನನ್ನಂತರಂಗದಿ ನಂದದೆ ನಿಂದೀಪ
ನಂದಾದೀಪವಾಗಿರಲಿ
ದೀಪ ಹಚ್ಚಾ

*******************
ಸಾಹಿತ್ಯ ಕೃಪೆ: ಅವಧಿ

 photo:sritri

“ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು”

11 thoughts on “ನೀ ಬಂದು ನಿಂದಿಲ್ಲಿ ದೀಪ ಹಚ್ಚಾ”

  1. ತ್ರಿವೇಣಿ ಅಕ್ಕಾ,
    ನಿಮಗೂ ನಿಮ್ಮ ಮನೆಯವರೆಲ್ಲರಿಗೂ ದೀಪಾವಳಿ ಶುಭಾಶಯಗಳು.
    ನಾನು ಮೊದಲ ಸಲ ಈ ಹಾಡು ಕೇಳಿದ್ದು,, ನನ್ನ ಗೆಳತಿ ಹಾಡಿದ್ದು.ಕಳೆದ ವಾರದಿಂದ ಯಾಕೋ ಅವಳನ್ನ ತುಂಬಾ ನೆನಪಿಸಿಕೊಳ್ತಾ ಇದ್ದೆ. ಈ ಹಾಡಿಗಾಗಿ ನಿಮಗೆ ಧನ್ಯವಾದಗಳು.

  2. ತ್ರಿವೇಣಿಯವರೇ…..
    ದೀಪಾವಳಿಗೇ ಸರಿಯಾಗಿ ದೀಪದ ಹಾಡು…. ತುಂಬಾ ಚೆನ್ನಾಗಿದೆ. ಎಷ್ಟೊಂದು ಸಲ ಕೇಳಿದ್ದೇನೇ.. ಆದರೂ ಮತ್ತೇ ಮತ್ತೇ ಕೇಳಬೇಕು ಅನ್ನಿಸುತ್ತೇ….
    ನಿಮಗೂ ಮತ್ತು ನಿಮ್ಮ ಮನೆಯವರೆಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು……..
    ಶ್ಯಾಮಲ

  3. ತ್ರಿವೇಣಿ,
    ಪರಮೇಶ್ವರ ಭಟ್ಟರ ಮನ ಮಿಡಿಯುವ ಗೀತೆಗಾಗಿ ಧನ್ಯವಾದಗಳು.
    ದೀಪಾವಳಿಯು ನಿಮಗೆಲ್ಲ ಮಂಗಳವನ್ನು ತರಲಿ.

  4. ವೇಣಿ,
    ಪರಮೇಶ್ವರ ಭಟ್ಟರ ಆಶಾದಾಯಕ ಗೀತೆ ದೀಪಾವಳಿಗೆ ಸರಿಯಾಗಿದೆ.
    ಸಂಗೀತ ಮಾತ್ರ ಸ್ವಲ್ಪ ನಿರಾಶಾದಾಯಕ (ಶೊಕಗೀತೆಯಂತಿದೆ).

    ಅದರ ಹಿನ್ನೆಲೆ ಸಂಗೀತವೂ ಬೇಸರ-ವಿಷಾದವನ್ನೇ ಮೂಡಿಸುತ್ತದೆ. ಗೀತೆಯ ಅರ್ಥಕ್ಕೆ ಸಂಗೀತ ಜೊತೆಯಾಗುತ್ತಿಲ್ಲ. ಅನಂತಸ್ವಾಮಿಯವರು ಅದು ಹೇಗೆ ಈರೀತಿ ಸ್ವರಸಂಯೊಜನೆ ಮಾಡಿದರೋ?

  5. ಹಾಡು ಕೇಳಿದ, ಪ್ರತಿಕ್ರಿಯಿಸಿದ, ಹಬ್ಬದ ಸಂಭ್ರಮದೊಡನೆ ಹಾಡಿನ ಸವಿ ಸವಿದ ಭಾರ್ಗವಿ, ಶ್ಯಾಮಲ, ಕಾಕಾ, ಜ್ಯೋತಿ ಎಲ್ಲರಿಗೂ ಧನ್ಯವಾದಗಳು. ಹಬ್ಬ ಹೇಗೆ ಆಚರಿಸಿದ್ರಿ ಅಂತಲೂ ತಿಳಿಸಿದ್ರೆ…

    ಜ್ಯೋತಿ, ನಿನಗೆ ಈ ಹಾಡು ಶೋಕಗೀತೆಯ ರೀತಿ ಇದೆ ಅನ್ನಿಸಿತೇ?
    ಈ ಹಾಡನ್ನು ಬೇರಾವ ರಾಗದಲ್ಲೂ ಕೇಳಿಯೇ ಇಲ್ಲವಾದ್ದರಿಂದ ನನಗೆ ಹಾಗೇನೂ ಅನಿಸಿಲ್ಲ. ಈಗ ಮತ್ತೊಮ್ಮೆ ಕೇಳಿ ನೋಡುತ್ತೇನೆ.

  6. ಹಬ್ಬ ಹೇಗೆ ಆಚರಿಸಿದ್ರಿ ಅಂತಲೂ ತಿಳಿಸಿದ್ರೆ,,,,,,,
    ತಿಳಿಯ ಬೇಕಂದ್ರೆ ನಮ್ಮ ಮನೆಗೇ (ಬ್ಲಾಗ್) ಬರಬೇಕು ಅಕ್ಕಃ -).

  7. ಮಾಲಾ ನಿಮಗೂ ಹಾಗೆ ಅನ್ನಿಸಿತೇ? ಸರಿ ಹಾಗಾದರೆ, “ಗೋಳಿನ ಕರೆ ಕೇಳಿ ದೀಪ ಹಚ್ಚ ” 🙂
    ಗೋಳಾಡುವ ಮನೆ/ಮನಗಳಲ್ಲಿ ಪ್ರೀತಿಯ ದೀಪ ಬೆಳಗಿಸುವುದು ಪುಣ್ಯದ ಕೆಲಸವೇ ಅಲ್ವಾ? “ನೊಂದ ಜೀವರಿಗೆ ತಂಪನೀಯುವುದೇ ಪರಮಪೂಜೆಯೆನ್ನಿ”

  8. ತ್ರಿವೇಣಿಯವರೇ,
    ದೀಪದ ಸುಂದರ ಕವನ ನೀಡಿದ್ದಕ್ಕೆ ಧನ್ಯವಾದಗಳು..

    ದೀಪಾವಳಿಯ ಶುಭಾಶಯಗಳು !

  9. ಧನ್ಯವಾದಗಳು ಶಿವು. ಬಹಳ ದಿನಗಳ ನಂತರದ ಭೇಟಿ. ಹೇಗಿದ್ದೀರಿ?

Leave a Reply to Bhargavi Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.