ರಚನೆ : ವ್ಯಾಸವಿಠಲ
ಗಾಯಕ : ರಾಯಚೂರು ಶೇಷಗಿರಿದಾಸ್
ತಿಳಿಯದೋ ನಿನ್ನಾಟ
ತಿರುಪತಿಯ ವೆಂಕಟ ||ಪಲ್ಲವಿ||
ಪೊಳೆವ ನೀರೊಳು ಗೆಲುವ ಮೋರೆಯ
ನೆಲವ ನೋಡುವ ಸುಳಿವ ಕಂಬದಿ
ಇಳೆಯನಳೆಯುವ ಭಳಿರೆ ಭಾರ್ಗವ
ಖಳನ ಛೇಧಿಸಿ ಕೊಳಲ ಧ್ವನಿಗೆ
ನಳಿನಮುಖಿಯರ ನಾಚಿಸುವ ಬಲು
ಹಯದಳದ ಬಹು ಹವಣೆಗಾರನೆ ||ಅನು||
ಆರು ಬಲ್ಲರು ನಿಮ್ಮ ಶ್ರೀ ಲಕುಮಿ ಮನಸಿಗೆ ತೋರುವೆಯೊ ಪರಬೊಮ್ಮ
ಉಳಿದವರು ಬಲ್ಲರೆ ನೀರಜಾಸನ ಬೊಮ್ಮ ಇದು ನಿನ್ನ ಮರ್ಮ
ನೀರೊಳಗೆ ಮನೆ ಭಾರ ಬೆನ್ನಿಲಿ ಕೋರೆದಾಡೆಯ ನಾರಸಿಂಹನೆ
ಧರೆಯ ಬೇಡಿದ ಧೀರಪುರುಷನೆ ವಾರಿಬಂಧನ ಮಾರಜನಕನೆ
ನಾರಿಯರ ವ್ರತವಳಿದು ಕುದುರೆಯನೇರಿ ಮೆರೆಯುವ ಸುಂದರಾಂಗನೆ ||೧||
ಸಕಲಮಾಯವಿದೇನು ವೃಕನ ವಾಯು ಸಖನ ಸಲಹಿದೆ ನೀನು
ಭಕುತಿಯಿಂದಲಿ ತುತಿಪರಿಗೆ ಸುರಧೇನು ಸುರಕಾಮಧೇನು
ನಿಖಿಳ ವೇದೋದ್ಧಾರ ಗಿರಿಧರ ಅಖಿಳ ಭೂಮಿಯ ತಂದ ನರಹರಿ
ಯುಕುತಿಯಲಿ ನೆಲನಳೆದ ಭಾರ್ಗವ ಮುಕುತಿಗೋಸುಗ ಫಲವ ಸವಿದನೆ
ರುಕುಮನನುಜೆಯ ರಮಣ ಬೌದ್ದನೆ ಲಕುಮಿರಮಣನೆ ಕಲ್ಕಿರೂಪಿಯೆ ||೨||
ನಿನ್ನ ರೂಪಿನ ಲೀಲಾ ನೋಡುವ ಜನಕೆ ಕಣ್ಣು ಸಾವಿರವಿಲ್ಲ
ನಾ ಪಾಡಿ ಪೊಗಳಲು ಪನ್ನಗಾಧಿಪನಲ್ಲ ನೀನರಿಯದಿಲ್ಲ
ಕಣ್ಣುಮುಚ್ಚದೆ ಬೆನ್ನು ತೋರುವಿ ಮಣ್ಣು ಕೆದರುವಿ ಚಿಣ್ಣಗೊಲಿದನೆ
ಸಣ್ಣವಾಮನ ಅಣ್ಣರಾಮನೆ ಪುಣ್ಯಪುರುಷನೆ ಬನ್ನ ಬಡಕನೆ
ಹೆಣ್ಣುಗಳ ವ್ರತಕೆಡಿಸಿ ತೇಜಿಯ ಬೆನ್ನನೇರಿದ ವ್ಯಾಸವಿಠಲ||
chennaagide..
banna baDuka aMdarEnu..?
tumba chennagide