ನಿನ್ನ ಕರುಣೆಗೆ ನಾನು ಕೇಂದ್ರವಾಗಿ
ನಿಂದಿರುವೆ ಮೌನದಲಿ ತಲೆಯ ಬಾಗಿ
ಮುಗಿಲಿಂದ, ಹಗಲಿಂದ, ಇರುಳಿಂದ ಬಂದು
ಮುಗಿಯದಾವುದೊ ಮಹಾದ್ಭುತವ ತಂದು,
ಬದುಕು ಪೊರೆ ಪೊರೆ ಬಿಚ್ಚಿ ಹದಗೊಳಿಸಲೆಂದು
ಒಳಗು ಹೊರಗೂ ತುಂಬಿ ತುಳುಕಿರುವೆ ಇಂದು.
ಅಂಜುವೆನು, ಅಳುಕುವೆನು ಅಷ್ಟಿಷ್ಟಕೆಲ್ಲ
ಮಂಜು ಮುಗಿಬೀಳುವುದು ಭೂಮಿ ಬಾನೆಲ್ಲ:
ಹಿಂಜುವುದು ನೇಸರನ ನೂರಾರು ಕಿರಣ
ಜೇಡಬಲೆ ತುಂಬೆಲ್ಲ ಮುತ್ತಿನಾಭರಣ.
ಒಂದೊಂದು ಹೂವುಗಳ ಆಯುವುದು ಹೇಗೆ?
ಆ ಬಣ್ಣ, ಆ ನವುರು ಅದಕದರ ಸೋಗೆ.
ಸೃಷ್ಟಿಯಲಿ, ದೃಷ್ಟಿಯಲಿ ನಡೆದಿಹುದು ಪೂಜೆ
ಕಷ್ಟ-ಸುಖ-ಸಂಭ್ರಮದ ಸಂತೋಷದಾಚೆ.
* ಹೂವು ಹೊರಳುವವು ಸೂರ್ಯನ ಕಡೆಗೆ (ಆಯ್ದ ಭಾವಗೀತೆಗಳ ಸಂಗ್ರಹ)
ಕಣವಿಯವ ಚೆಲುವಾದ ಕವನ ಕೊಟ್ಟಿದ್ದೀರಿ. ಧನ್ಯವಾದಗಳು.