‘ನಂದತನಯ ಗೋವಿಂದನ ಭಜಿಪುದಾನಂದವಾದ ಮಿಠಾಯಿ’ ಗಾಯಕಿ ಎಂ. ಎಸ್. ಶೀಲಾರ ದನಿಯಲ್ಲಿ ಹಿಂದೆಂದೋ ಕೇಳಿದ್ದ ಈ ಹಾಡನ್ನು ಈಚೆಗೆ ಮತ್ತೊಮ್ಮೆ ಕೇಳಿದೆ. ಹಾಡನ್ನು ಕೇಳುತ್ತಿದ್ದಾಗ, ಈ ಕೀರ್ತನೆಯ ರಚನಕಾರರಾದ ಪುರಂದರದಾಸರು, ನುರಿತ ವ್ಯಾಪಾರಿಯೊಬ್ಬನು ತನ್ನ ಉತ್ಪನ್ನವನ್ನು ಪ್ರಚುರಪಡಿಸಲು, ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಉಳಿದೆಲ್ಲಾ ಸರಕುಗಳಿಗಿಂತ ತನ್ನದನ್ನು ಹೆಚ್ಚು ಮಾರಾಟ ಮಾಡಲು ಅನುಸರಿಸುವ ತಂತ್ರವನ್ನೇ ಇಲ್ಲಿಯೂ ಅನುಸರಿಸಿದ್ದಾರಲ್ಲವೇ ಎನ್ನಿಸಿತು.

‘ಮಿಠಾಯಿ’ ಎಂಬುದೊಂದು ಎಲ್ಲರಿಗೂ ಪರಿಚಿತವಾಗಿರುವ, ಅಷ್ಟೊಂದು ಅಪರೂಪವೇನೂ ಆಗಿರದ ಒಂದು ಸಿಹಿ ತಿನಿಸು. ಆದರೆ ಈ ಉತ್ಪನ್ನ ನಿಜವಾಗಿ ಅತ್ಯುತ್ತಮವೇ ಆಗಿದ್ದರೂ, ಅದನ್ನು ಜನ ಒಪ್ಪುವಂತೆ ಪ್ರಸ್ತುತಪಡಿಸುವ ಅಗತ್ಯವಿದೆ. ಉತ್ತಮ ಸರಕಿಗೆ ಜಾಹೀರಾತಿನ ಅಗತ್ಯವಿಲ್ಲವೆಂದು ಕೈಕಟ್ಟಿ ಕೂಡುವ ಕಾಲ ಇಂದಿಲ್ಲ. ಬಹುಶಃ ಅಂದೂ ಇರಲಾರದು. ಪುರಂದರದಾಸರು ಇತರ ಹರಿದಾಸರಂತೆಯೇ, ಹರಿ ಸರ್ವೋತ್ತಮತ್ವವನ್ನು, ಹರಿ ಪಾರಮ್ಯವನ್ನು ಪ್ರಚಾರ ಮಾಡುವ ದೀಕ್ಷೆ ತೊಟ್ಟವರು. ಆದರೆ, ಹಲವಾರು ಮತಪಂಥಗಳು, ತಾತ್ವಿಕ ಭಿನ್ನಾಭಿಪ್ರಾಯಗಳು ಇರುವ ಕಡೆಯಲ್ಲಿ, ದಾಸರ ನಂಬಿಕೆ ಉಳಿದವರದ್ದೂ ಆಗಿರಬೇಕಾಗಿಲ್ಲ. ಹಾಗಾಗಿ, ತಾವು ನಂಬಿರುವ ತತ್ವವನ್ನು, ಪೂಜಿಸುವ ದೈವವನ್ನು ಸಾರ್ವಜನಿಕವಾಗಿ ಜನಪ್ರಿಯಗೊಳಿಸಲು ದಾಸರು ಅನುಸರಿಸಿರುವ ತಂತ್ರ ಯಾವ ಬ್ಯುಸಿನೆಸ್ ಶಾಲೆ ಕಲಿಸುವುದಕ್ಕಿಂತಲೂ ಕಡಿಮೆ ಏನಲ್ಲ.

ಪುರಂದರದಾಸರು ದಾಸತ್ವ ವಹಿಸುವುದಕ್ಕೆ ಮುನ್ನ ‘ನವಕೋಟಿ ನಾರಾಯಣ’ ಎಂದೇ ಪ್ರಸಿದ್ಧರಾಗಿದ್ದ ಶ್ರೀಮಂತ ವ್ಯಾಪಾರಿ. ಹಾಗಾಗಿ ವ್ಯಾಪಾರ, ವ್ಯವಹಾರ ಅವರಿಗೆ ಅಪರಿಚಿತ ಕ್ಷೇತ್ರವಾಗಿರಲಾರದು. ವ್ಯಾಪಾರೀ ಜಗತ್ತಿನಲ್ಲಿ ಬಳಕೆಯಾಗುವ ಅಸಲು, ಬಡ್ಡಿ, ಸಾಲ, ಸಂದಾಯ, ಸಂಬಳ, ಬಾಡಿಗೆ, ಸುಂಕ, ದುಡ್ಡು, ದುಗ್ಗಾಣಿ, ಚೀಟಿ ಬರೆಸುವುದು ಮುಂತಾದ ಬಹಳಷ್ಟು ಪಾರಿಭಾಷಿಕ ಪದಗಳನ್ನು ಅವರ ಕೀರ್ತನೆಗಳಲ್ಲಿ ಕಾಣಬಹುದು. ವಾಣಿಜ್ಯ ವೃತ್ತಿಯನ್ನು ಪ್ರಧಾನವಾಗಿ ಹೊಂದಿರುವ ವೈಶ್ಯ ವರ್ಗವನ್ನು ಸೂಚಿಸುವ ‘ಶೆಟ್ಟಿ’ ಎಂಬ ಪದ ಕೂಡ ಅವರ ಹಲವು ಕೀರ್ತನೆಗಳಲ್ಲಿದೆ. ಭಾರತದ ಸಿರಿವಂತ ದೈವಗಳಲ್ಲಿ ಒಂದಾದ ತಿರುಪತಿಯ ವೆಂಕಟರಮಣನನ್ನು ದಾಸರು ಅಕ್ಕರೆಯಿಂದ ‘ತಿಮ್ಮಪ್ಪ ಶೆಟ್ಟಿ’ ಎನ್ನುತ್ತಾರೆ. ಅಷ್ಟು ಮಾತ್ರವಲ್ಲದೆ, ತಮ್ಮ ಹರಿದಾಸ ಪ್ರವೃತ್ತಿಯನ್ನೂ ಕೂಡ ಅವರು ‘ಶ್ರೀಪತಿ ಪಾದಾರವಿಂದ ಸೇವೆಯೆಂಬ ವ್ಯಾಪಾರ ನಮಗಾಯಿತು’ ಎಂದು ವ್ಯಾಪಾರೀ ವೃತ್ತಿಯೊಂದಿಗೆ ಸಮೀಕರಿಸಿಕೊಂಡಿದ್ದಾರೆ.

ಇರಲಿ, ಈಗ ಮೇಲೆ ಪ್ರಸ್ತಾಪಿಸಿದ ‘ಮಿಠಾಯಿ’ ಉತ್ಪನ್ನವನ್ನು ದಾಸರು ಪ್ರಚಾರ ಮಾಡುವ ಬಗೆಯನ್ನು ನೋಡೋಣ. ಅಂಗಡಿಗಳಲ್ಲಿ ಬಣ್ಣಬಣ್ಣಗಳಲ್ಲಿ ರಾರಾಜಿಸುವ ವಿವಿಧ ಬಗೆಯ ‘ಕ್ಯಾಂಡಿ’ಗಳಿಗಾಗಿ ಕಾಡುವ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ತಾಯಂದಿರು, ಮಕ್ಕಳಿಗೆ ಕ್ಯಾಂಡಿಗಳ ಬದಲು ದ್ರಾಕ್ಷಿ, ಗೋಡಂಬಿ, ಬಾದಾಮಿ ಮುಂತಾದ ಆರೋಗ್ಯಕಾರಿ ಒಣ ಹಣ್ಣುಗಳನ್ನು ಕೊಡುವುದು ಇಂದಿನ ಪದ್ಧತಿ. ಪುರಂದರದಾಸರ ಕಾಲದಲ್ಲೂ ಹೀಗೆಯೇ ಇತ್ತೋ ಅರಿಯೆ, ದಾಸರು ‘ದಧಿ, ಘೃತ, ಕ್ಷೀರಕ್ಕಿಂತಲು ಇದು ಬಹು ಅಧಿಕವಾದ ಮಿಠಾಯಿ, ಕದಳಿ, ದ್ರಾಕ್ಷಿ, ಖರ್ಜೂರ ರಸಗಳನು ಮೀರುವುದೀ ಮಿಠಾಯಿ’ ಎಂದು ತಂತ್ರಗಾರಿಕೆ ಮೆರೆದಿದ್ದಾರೆ. ಆರೋಗ್ಯಕರ ಹಣ್ಣುಗಳಲ್ಲಿರುವ ಗುಣಗಳನ್ನೆಲ್ಲಾ ಈ ಮಿಠಾಯಿ ಹೊಂದಿರುವುದರಿಂದ, ಇನ್ನು ಬೇರೆ ಪದಾರ್ಥ ಹೊಂದುವ ಅವಶ್ಯಕತೆ ಬಳಕೆದಾರನಿಗೇಕೆ? ಮಕ್ಕಳ ಬೆಳವಣಿಗೆಗೆ ಕಾರಣವಾಗುವ ಎಲ್ಲಾ ಗುಣಗಳು ತಮ್ಮಲ್ಲಿದೆಯೆಂದು ಸಾರಿಕೊಳ್ಳುವ ವಿವಿಧ ಬಗೆಯ ಪೇಯಗಳ ಜಾಹೀರಾತನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಮುಂದಿನ ಸಾಲುಗಳಲ್ಲಿಯೂ ಪ್ರಚಾರ ಜೋರಾಗಿಯೇ ನಡೆದಿರುವುದು ಕಂಡುಬರುತ್ತದೆ. ‘ಪಂಚ ಭಕ್ಷ್ಯಂಗಳ ಷಡ್ರಸಾನ್ನಗಳ ಮಿಂಚಿದಂಥ ಮಿಠಾಯಿ’ ಎನ್ನುತ್ತಾರೆ, ‘ಜಪ ತಪ ಸಾಧನಗಳಿಗಿಂತಲು ಬಹು ಅಪರೂಪದ ಮಿಠಾಯಿ’ ಎಂದು ತಮ್ಮ ‘ಉತ್ಪನ್ನ’ದ ಗುಣಗಾನ ಮಾಡುತ್ತಾರೆ. ‘ವ್ಯಾಯಾಮವನ್ನೂ ಮಾಡಬೇಡಿ, ತಿನ್ನುವುದನ್ನು ಕಿಂಚಿತ್ತೂ ಕಡಿಮೆ ಮಾಡಬೇಡಿ. ಆದರೂ ಕೆಲವೇ ದಿನಗಳಲ್ಲಿ ಸಣ್ಣಗಾಗಿ!’ ಎನ್ನುವ ಜಾಹೀರಾತುಗಳಂತೆ, ಜಪ, ತಪಗಳನ್ನು ಮಾಡಿಕೊಂಡು, ಪಡಿಪಾಟಲು ಪಡದೆ ಅತಿ ಸುಲಭವಾಗಿ ಸಿಗುವ ಮುಕ್ತಿ ಮಾರ್ಗ! ಅದೂ ದೊಡ್ಡ ಆಮಿಷವೇ. ಇಷ್ಟೆಲ್ಲಾ ಮಹತ್ವ ಹೊಂದಿರುವ ‘ಮಿಠಾಯಿ’ಯ ಬೆಲೆಯೂ ಕೂಡ ಉಳಿದ ಸರಕುಗಳಿಗಿಂತ ಅಧಿಕವೆಂದು ಸಾರುತ್ತಾರೆ. ಇದೂ ಕೂಡ ಮತ್ತೊಂದು ಜಾಹೀರಾತು ತಂತ್ರವೇ. ಬೆಲೆಯುಳ್ಳ ಬ್ರಾಂಡೆಡ್ ಉತ್ಪನ್ನಗಳ ಹುಚ್ಚು ಹತ್ತಿಸಿಕೊಂಡವರು ಒಂದಕ್ಕೆ ಹತ್ತು ಪಟ್ಟು ಬೆಲೆ ಹೆಚ್ಚು ತೆತ್ತಾದರೂ ತಮ್ಮ ‘ಬ್ರಾಂಡ’ನ್ನು ಖರೀದಿಸುತ್ತಾರೆಯೇ ಹೊರತು, ಅದರಂತೆಯೇ ಇರುವ ಅಥವಾ ಅದಕ್ಕಿಂತಲೂ ಮಿಗಿಲಾಗಿರುವ ಇತರ ಅಗ್ಗದ ಪದಾರ್ಥಗಳನ್ನು ಬಡಪಟ್ಟಿಗೆ ಕೊಳ್ಳರು. ಈ ಗುಟ್ಟನ್ನು ಬಲ್ಲ ಅನುಭವಿ ವ್ಯಾಪಾರಿಯೂ ಆಗಿದ್ದ ದಾಸರು, ‘ಜಿಪುಣಮತಿಗಳಿಗೆ ಸಾಧ್ಯವಲ್ಲದಿಹ ಪುರಂದರವಿಠಲ ಮಿಠಾಯಿ’ ಎಂದು ತಮ್ಮ ಬತ್ತಳಿಕೆಯಲ್ಲಿರುವ ಕೊನೆಯ ಬಾಣವನ್ನು ಹೊರಗೆ ತೆಗೆಯುತ್ತಾರೆ. ‘ಮಿಠಾಯಿ’ ಕೊಳ್ಳದಿದ್ದರೆ ಮಿಠಾಯಿಗಿಲ್ಲ ನಷ್ಟ, ಕೊಳ್ಳಲು ಅನುಮಾನಿಸುತ್ತಿರುವರಿಗೇ ಜಿಪುಣನೆಂಬ ಪಟ್ಟ!

‘ಕಲ್ಲು ಸಕ್ಕರೆ ಕೊಳ್ಳಿರೊ’, ‘ಹಣ್ಣು ಬಂದಿದೆ ಕೊಳ್ಳಿರೊ’, ‘ಹೂ ಬೇಕೇ ಹೂ ಪರಿಮಳದ’, ಮುಂತಾದ ಕೀರ್ತನೆಗಳೂ ಕೂಡ ಇದೇ ಮಾದರಿಯವು. ‘ಎತ್ತು ಹೇರುಗಳಿಂದ ಹೊತ್ತು ಮಾರುವುದಲ್ಲ, ಒತ್ತೊತ್ತಿ ಗೋಣಿಯಲಿ ತುಂಬುವುದಲ್ಲ’ ಎಂದು ತಾವು ಮಾರಲು ಹೊರಟಿರುವ ‘ಫುಲ್ಲಲೋಚನನೆಂಬ ಕಲ್ಲುಸಕ್ಕರೆ’ಯ ಮಹತ್ವವನ್ನು ಕೊಂಡಾಡುವ ದಾಸರಿಗೆ, ‘ಉತ್ತಮ ಸರಕಿದು, ಅತಿ ಲಾಭ ಬರುವಂಥ’ ಎಂದು ಜನರನ್ನು ತಮ್ಮತ್ತ ಸೆಳೆಯಲು ಅಗತ್ಯವಿರುವ ಮಾರಾಟ ತಂತ್ರಗಳು ಕರತಲಾಮಲಕ. ಚಿರಪರಿಚಿತವಾದ ಕೀರ್ತನೆಯೊಂದು, ಈ ಬಾರಿ ಕೇಳಿದಾಗ ಮಾತ್ರ ಹೊಸ ಹೊಸ ಅರ್ಥಗಳನ್ನು ಹೊಳೆಸಿ, ತುದಿನಾಲಿಗೆಯ ಮೇಲೆ ‘ಮಿಠಾಯಿ’ಯನ್ನು ಇಟ್ಟು ಸವಿದಂಥ ಸಿಹಿಯಾದ ಅನುಭವವೊಂದನ್ನು ನನ್ನಲ್ಲಿ ಉಂಟುಮಾಡಿತು.

(ಫೆಬ್ರುವರಿ, ೭, ೨೦೧೧, ಸೋಮವಾರದ `ವಿಜಯ ಕರ್ನಾಟಕ’ದಲ್ಲಿ ಪ್ರಕಟವಾಗಿದೆ.)

3 thoughts on “ಆನಂದವಾದ ಮಿಠಾಯಿ – ಹೀಗೂ ಒಂದು ಹೊಳಹು”

  1. ಜನರಿಗೆ ತಿಳಿಯುವ ಭಾಷೆಯನ್ನೇ ಉಪಯೋಗಿಸುವದರಲ್ಲಿ ಪುರಂದರದಾಸರು ತೋರಿದ
    ಕೌಶಲ್ಯವನ್ನು ಸಮರ್ಥವಾಗಿ ವಿವರಿಸ್ದಿದ್ದೀರಿ. ದಾಸರ ಇತರ ವೈಶಿಷ್ಟ್ಯಗಳನ್ನೂ ತೋರಿಸುವ ಲೇಖನ ಬರೆಯಲು ವಿನಂತಿಸುತ್ತೇನೆ.

  2. ಕಾಕಾ, ಧನ್ಯವಾದಗಳು.
    ದಾಸರಿಗೆ ಜನರ ಮನಸ್ಸು ಗೊತ್ತಿತ್ತು. ಅವರ ಭಾಷೆ ಗೊತ್ತಿತ್ತು. ಆ ಭಾಷೆಯನ್ನು ಅವರು ಬಳಸುವ ರೀತಿ ಅದ್ಭುತವಾದದ್ದು .
    ಖಂಡಿತ. ಬರೆಯಲು ಪ್ರಯತ್ನಿಸುತ್ತೇನೆ.

  3. ಎಂ ಎಸ್ ಶೀಲಾರ ಹಾಡನ್ನು ಹುಡುತ್ತಿದ್ದವಳಿಗೆ ಈ ನಿಮ್ಮ ಲೇಖನ ಕಂಡಿತು! ಬಹಳ ಸುಂದರ ಬರೆಹ. ಧನ್ಯವಾದ

Leave a Reply to sritri Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.