ಕೈತೋಟದಲ್ಲಿ ಗಿಡಗಳ ಪಾತಿಯಲ್ಲಿ ಉದುರಿಬಿದ್ದ ಎಲೆಗಳನ್ನು ಹೆಕ್ಕುತ್ತಿದ್ದೆ. ಹಿಂದೇನೋ ಸದ್ದಾದಂತಾಗಿ ತಿರುಗಿದೆ. ಅವಳು ನಿಂತಿದ್ದಳು. ಕಣ್ಣುಗಳಲ್ಲಿ ವರ್ಷಗಳ ನಿದ್ರೆ ಬಾಕಿ ಇದ್ದಷ್ಟು ಆಯಾಸ. ಮುಖಭಾವ ಎಂದಿನಂತಿರಲಿಲ್ಲ. ಯಾವುದೋ ನಾನರಿಯದ ಸಂಕಟ ಅಲ್ಲಿದ್ದಂತಿತ್ತು. ‘ಅಂತೂ ಬಂದೆಯಾ? ಆ ದಿನ ಅದೇನೋ ಅವಸರವಿದ್ದಂತೆ ಇದ್ದಕ್ಕಿದ್ದಂತೆ ಎದ್ದು ಹೋದವಳು. ಈಗ ತಲೆ ಹಾಕುತ್ತಿದ್ದೀಯಲ್ಲ?’ ಎಂದೆ, ದೂರಿನ ದನಿಯಲ್ಲಿ. ಅವಳು ಅಸಹಾಯಕಳಂತೆ ಮುಖ ಕೆಳಗೆ ಹಾಕಿದಳು. ನನ್ನ ಸಿಟ್ಟು ಇನ್ನೂ ಮುಗಿದಿರಲಿಲ್ಲ. ‘ಎಷ್ಟು ಹಂಬಲಿಸಿದೆ ಗೊತ್ತಾ? ನಿನಗೆ ಹೇಗೆ ಗೊತ್ತಾಗಬೇಕು?’ ಎಂದೆ ಮಾತನ್ನು ಹರಿತವಾಗಿಸುತ್ತ. ಅವಳು ಮಾತಾಡಲಿಲ್ಲ. ಪಾಪ ಅನಿಸಿತು. ‘ಹೋಗಲಿಬಿಡು, ನಿನಗೆ ಬರಬೇಕೆನಿಸಿದರೂ ಅವರು ಬಿಡಬೇಕಲ್ಲ?’ ಎಂದೆ. ಹೌದೆನ್ನುವಂತೆ ಕತ್ತು ಹಾಕಿದಳು. ‘ಮತ್ತೆ, ಅಲ್ಲೆಲ್ಲಾ ಹೇಗಿದೆ? ಏನೂ ತೊಂದರೆಯಿಲ್ಲ ತಾನೇ?’ ಇಲ್ಲವೆನ್ನುವಂತೆ ತಲೆಯಾಡಿಸಿದಳು. ‘ಅದೇನು? ಇದ್ದಕ್ಕಿದ್ದಂತೆ ಬಂದಿದ್ದು?’ ಎಂದೆ. ಅವಳು ‘ನಿನ್ನನ್ನೇ ನೋಡಲು ಬಂದೆ.’ ಎನ್ನುವಂತೆ ಕೈತೋರಿ ನಕ್ಕಳು. ನಕ್ಕಾಗ ಅವಳ ಸುಂದರ ಹಲ್ಲುಗಳು ಹೊಳೆದವು.
ನಾನು ನನ್ನ ಕೆಲಸ ಮುಂದುವರೆಸಿದೆ. ಅವಳು ಅಲ್ಲೇ ಇದ್ದ ಹಾಸುಗಲ್ಲಿನ ಮೇಲೆ ಕುಳಿತಳು. ‘ಮತ್ತೆ, ಇಲ್ಲಿ ನೋಡಬೇಕಾದವರನ್ನೆಲ್ಲಾ ನೋಡಿದ್ದಾಯಿತಾ?’ ಎಂದೆ. ಅವಳು ಹೂಗುಟ್ಟಿದಳು. ಕಣ್ಣು ಯಾಕೋ ಹೊಳೆದಂತಾಯಿತು. ‘ಅಳುತ್ತಿದ್ದಾಳಾ?’ ಎಂದು ಕಣ್ಣಿನಲ್ಲಿ ಕಣ್ಣಿಟ್ಟು ನೋಡಿದೆ. ಇಲ್ಲ, ಅಳುತ್ತಿರಲಿಲ್ಲ. ಅಲ್ಲಿ ಹೊಳೆದಿದ್ದು ನನ್ನನ್ನು ನೋಡಿದ ಸಣ್ಣ ತೃಪ್ತಿ ಮಾತ್ರ. ‘ಈ ಸಲವಾದರೂ ಒಂದೆರಡು ದಿನ ನನ್ನೊಂದಿಗೆ ಇದ್ದು ಹೋಗಬಹುದಲ್ಲವೇ? ನೀನಿಲ್ಲದಾಗ ಇಲ್ಲಿ ನಡೆದಿದ್ದನ್ನೆಲ್ಲಾ ನಿನಗೆ ಹೇಳಬೇಕು. ನಿನ್ನ ಜೊತೆ ಆಡಬೇಕಾದ ಮಾತು ನೂರಿದೆ. ನೀನೀಗ ಹೋದರೆ ಅವೆಲ್ಲ ಮತ್ತೆ ನನ್ನಲ್ಲೇ ಉಳಿದುಹೋಗುತ್ತವೆ… ಇರುತ್ತೀಯಾ ತಾನೇ?’ ಎಂದೆ ನನ್ನನ್ನೇ ನಂಬಿಸಿಕೊಳ್ಳುವಂತೆ. ಅವಳಿಂದ ಉತ್ತರವಿಲ್ಲ. ‘ಅರೆ… ಇದುವರೆಗೂ ಮಾತಾಡಿದ್ದೆಲ್ಲಾ ನಾನೇ. ಅವಳೇಕೆ ಮಾತಾಡುತ್ತಿಲ್ಲ?’ ಎನ್ನಿಸಿ ಸರಕ್ಕನೆ ತಿರುಗಿದೆ. ಅವಳು ನನಗೆ ಬೆನ್ನು ಹಾಕಿ ಅಲ್ಲಿಂದ ಹೊರಟಾಗಿತ್ತು. ನಾನು ಎದ್ದು ಅವಳನ್ನು ಹಿಂಬಾಲಿಸಿ ಓಡತೊಡಗಿದೆ.
ಭಾವಪೂರ್ಣ ಬರವಣಿಗೆ.
ಅವಳ ಬೆನ್ನುಹತ್ತಿ ಎಲ್ಲೀವರೆಗೆ ಹೋದೆಯೆ? ಸಿಕ್ಕಿದಳಾ? ಮುಂದುವರೆಸು, ಪ್ಲೀಸ್.
ಕಾಕಾ, ಧನ್ಯವಾದಗಳು.
ನಮಸ್ಕಾರ ತ್ರಿವೇಣಿಯವರಿಗೇ…
ಚಿಕ್ಕ ಚೊಕ್ಕದಾದ ಭಾವ ತುಂಬಿದ ಮಾತುಗಳು. ಆದರೇ ಅವಳು ಯಾರು… ಹಿಂಬಾಲಿಸಿ ಹೋದ ನಿಮಗೇ ಸಿಕ್ಕಳೆ…? ಮುಂದುವರೆಸಿ…. ಈ ದಿನ ನಿಮ್ಮ “ಮಾತಾಡ ಮಾತಾಡ ಬೇಡ ಮಲ್ಲಿಗೇ” ಯುಗಾದಿ ಸಂಚಿಕೆಯಲ್ಲಿ ಓದಿದೆ. ಚೆನ್ನಾಗಿದೆ… ನಿಮಗೂ ನಿಮ್ಮ ಕುಟುಂಬದವರಿಗೂ… “ಖರ” ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು…
ಶ್ಯಾಮಲ
ಶಾಮಲ,
ವಿಜಯ ಕರ್ನಾಟಕ, ಯುಗಾದಿ ವಿಶೇಷಾಂಕದಲ್ಲಿ ಪ್ರಕಟವಾಗಿದ್ದ ನನ್ನ ಲೇಖನವನ್ನು ಓದಿದಿರೆಂದು ತಿಳಿದು ಸಂತೋಷವಾಯಿತು. ನಿಮ್ಮೆಲ್ಲರಿಗೂ ಕೂಡ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
‘ಆದರೆ ಅವಳು ಯಾರು… ಹಿಂಬಾಲಿಸಿ ಹೋದ ನಿಮಗೇ ಸಿಕ್ಕಳೆ…?’ – ಅದೊಂದು ಸಿಗಲಾರದ ಹಂಬಲ. ‘ಅವಳು’ ಅವಳು ಮಾತ್ರವಲ್ಲ, ಯಾರೂ ಆಗಬಹುದು.