ರಚನೆ : ಜಗನ್ನಾಥದಾಸರು
ರೂಪಾ ಮತ್ತು ದೀಪಾ ದನಿಯಲ್ಲಿ

ಬಲು ರಮ್ಯವಾಗಿದೆ ಶ್ರೀಹರಿಯ ಮಂಚ ||ಪ||
ಎಲರುಣಿ ಕುಲರಾಜ ರಾಜೇಶ್ವರನ ಮಂಚ ||ಅನುಪಲ್ಲವಿ||

ಪವನತನಯ ಮಂಚ ಪಾವನತರ ಮಂಚ
ಭುವನತ್ರಯವ ಪೊತ್ತ ಭಾರಿ ಮಂಚ
ಕಿವಿಗಳಿಲ್ಲದ ಮಂಚ ಶ್ರೀನಿಕೇತನ ಮಂಚ
ಶಿವರೂಪದಲಿ ಹಿಂದೆ ಹರಿಯನೊಲಿಸಿದ ಮಂಚ ||೧||

ನೀಲಾಂಬರವನುಟ್ಟು ನಳನಳಿಸುವ ಮಂಚ
ನಾಲಿಗೆ ಎರಡುಳ್ಳ ನೈಜಮಂಚ
ನಾಲ್ವತ್ತು ಕಲ್ಪದಿ ತಪವ ಮಾಡಿದ ಮಂಚ
ತಾಲ ಮುಸಲ ಹಲವ ಪಿಡಿದಿರುವ ಮಂಚ ||೨||

ರಾಮನನುಜನಾಗಿ ರಣವ ಜಯಿಸಿದ ಮಂಚ
ತಾಮಸ ರುದ್ರನನು ಪಡೆದ ಮಂಚ
ಭೀಮಾವರಜನೊಳು ಆವೇಶಿಸಿದ ಮಂಚ
ಜೀಮೂತ ಮಂಡಲವ ತಡೆಗಟ್ಟಿದ ಮಂಚ ||೩||

ಜೀವನಾಮಕನೆನಿಸಿ ವ್ಯಾಪ್ತನಾದ ಹರಿಯ
ಸೇವಿಸಿ ಸುಖಿಸುವ ದಿವ್ಯ ಮಂಚ
ಸಾವಿರ ಮುಖದಿಂದ ತುತಿಸಿ ಹಿಗ್ಗುವ ಮಂಚ
ದೇವಕೀ ಜಠರದಲಿ ಜನಿಸಿದ ಮಂಚ ||೪||

ವಾರುಣೀ ದೇವಿಗೆ ವರನೆನಿಸಿದ ಮಂಚ
ಸಾರುವ ಭಕುತರ ಪೊರೆವ ಮಂಚ
ಕಾರುಣ್ಯನಿಧಿ ಜಗನ್ನಾಥ ವಿಠ್ಠಲನ ವಿ-
ಹಾರಕ್ಕೆ ಯೋಗ್ಯವಾದ ಶೇಷ ಮಂಚ ||೫||

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.