ರಚನೆ : ವರದೇಶ ವಿಠಲ

ಪುತ್ತೂರು ನರಸಿಂಹ ನಾಯಕ್ ದನಿಯಲ್ಲಿ

||ಜೈ ಜೈ ರಾಮ ಹರೇ ಜೈ ಜೈ ಕೃಷ್ಣ ಹರೇ ||

ಕೌಸಲ್ಯಜ ವರ ವಂಶೋದ್ಭವ ಸುರ ಸಂಸೇವಿತ ಪದ ರಾಮ ಹರೇ
ಕಂಸಾದ್ಯಸುರರ ಧ್ವಂಸಗೈದ ಯದುವಂಶೋದ್ಭವ ಕೃಷ್ಣ ಹರೇ

ಮುನಿಮಖರಕ್ಷಕ ಧನುಜರ ಶಿಕ್ಷಕ ಫಣಿಧರ ಸನ್ನುತ ರಾಮ ಹರೇ
ಘನವರ್ಣಾಂಗ ಸುಮನಸರೊಡೆಯ ವನಜಾಸನ ಪಿತ ಕೃಷ್ಣ ಹರೇ

ಶಿಲೆಯ ಪಾದರಜದಲಿ ಸ್ತ್ರೀ ಮಾಡಿದ ಸುಲಲಿತ ಗುಣನಿಧಿ ರಾಮ ಹರೇ
ಬಲು ವಕ್ರಾಗಿದ್ದ ಅಬಲೆಯ ಕ್ಷಣದಲಿ ಚೆಲುವೆಯ ಮಾಡಿದ ಕೃಷ್ಣ ಹರೇ

ಹರ ಧನು ಭಂಗಿಸಿ ಹರುಷದಿ ಜಾನಕಿ ಕರವ ಪಿಡಿದ ರಾಮ ಹರೇ
ಸಿರಿ ರುಕ್ಮಿಣಿಯನು ತ್ವರದಲಿ ವರಿಸಿದ ಶರಣರ ಪಾಲಕ ಕೃಷ್ಣ ಹರೇ

ಜನಕ ಪೇಳೆ ಲಕ್ಷ್ಮಣ ಸೀತಾ ಸಹ ವನಕೆ ತೆರಳಿದ ರಾಮ ಹರೇ
ವನಕೆ ಪೋಗಿ ತನ್ನಣುಗರೊಡನೆ ಗೋವನು ಪಾಲಿಪ ಶ್ರೀ ಕೃಷ್ಣ ಹರೇ

ತಾಟಕಿ ಖರಮಧುಕೈಟಭಾದಿ ಪಾಪಾಟವಿ ಸುರಮುಖ ರಾಮ ಹರೇ
ಆಟದಿ ಫಣಿ ಮೇಲ್ ನಾಟ್ಯವನಾಡಿದ ಖೇಟವಾಹನ ಕೃಷ್ಣ ಹರೇ

ಚದುರೆ ಶಬರಿಯಿತ್ತ ಬದರಿಯ ಫಲವನು ಮುದದಿ ಸೇವಿಸಿದ ರಾಮ ಹರೇ
ವಿದುರನ ಕ್ಷೀರಕೆ ಒದಗಿಹೋದ ಪದುಮನಾಭ ಜಯ ಕೃಷ್ಣ ಹರೇ

ಸೇವಿತ ಹನುಮ ಸುಗ್ರೀವನ ಸಖ ಜಗತ್ವಾವನ ಪರತರ ರಾಮ ಹರೇ
ದೇವಕಿ ವಸುದೇವರ ಸೆರೆ ಬಿಡಿಸಿದ ದೇವ ದೇವ ಕೃಷ್ಣ ಹರೇ

ಗಿರಿಗಳಿಂದವರ ಶರಧಿ ಬಂಧಿಸಿದ ಪರಮ ಸಮರ್ಥ ರಾಮ ಹರೇ
ಗಿರಿಯ ತನ್ನ ಕಿರಿ ಬೆರಳಲೆತ್ತಿ ಗೋವರನ ಕಾಯ್ದ ಕೃಷ್ಣ ಹರೇ

ಖಂಡಿಸಿ ದಶಶಿರ ಚೆಂಡಾಡಿದ ಕೋದಂಡಪಾಣಿ ರಾಮ ಹರೇ
ಪಾಂಡು ತನಯರಿಂದ ಚಂಡ ಕೌರವರ ದಿಂಡು ಕೆಡವಿಸಿದ ಕೃಷ್ಣ ಹರೇ

ತವಕದಿ ಅಯೋಧ್ಯಾಪುರಕೈದಿದ ತನ್ನ ಯುವತಿಯೊಡನೆ ರಾಮಹರೇ
ರವಿಸುತತನಯಗೆ ಪಟ್ಟವ ಕಟ್ಟಿದ ಭವತಾರಕ ಶ್ರೀ ಕೃಷ್ಣ ಹರೇ

ಭರತನು ಪ್ರಾರ್ಥಿಸಲರಸತ್ವವ ಸ್ವೀಕರಿಸಿದ ತ್ವರದಲಿ ರಾಮ ಹರೇ
ವರಧರ್ಮಾದ್ಯರ ಧರೆಯೊಳು ಮೆರೆಸಿದ ಪರಮ ಕೃಪಾಕರ ಕೃಷ್ಣ ಹರೇ

ಧರೆಯೊಳಗಜ್ಞಜನರನು ಮೋಹಿಪುದಕೆ ಹರನ ಪೂಜಿಸಿದ ರಾಮ ಹರೇ
ಹರನ ಪ್ರಾರ್ಥಿಸಿ ವರವನು ಪಡೆದ ಚರಿತೆ ಅಗಾಧವು ಕೃಷ್ಣ ಹರೇ

ಅತುಳ ಮಹಿಮ ಸದ್ ಯತಿಗಳ ಹೃದಯದಿ ಸತತ ವಿರಾಜಿಪ ರಾಮ ಹರೇ
ಸಿತವಾಹನ ಸಾರಥಿಯೆನಿಸಿದ ಸುರತತಿ ಪೂಜಿತ ಪದ ಕೃಷ್ಣ ಹರೇ

ರಾಮರಾಮ ಎಂದು ನೇಮದಿ ಭಜಿಪರ ಕಾಮಿತಫಲದ ರಾಮ ಹರೇ
ಪ್ರೇಮದಿ ಭಕ್ತರ ಪಾಲಿಪ ಶ್ರೀ ವರದೇಶ ವಿಠಲ ಕೃಷ್ಣ ಹರೇ

2 thoughts on “ಜೈ ಜೈ ರಾಮ ಹರೇ”

  1. ಕಾಕಾ, ನಿಮಗೂ ರಾಮನವಮಿಯ ಮತ್ತು ನಿಮ್ಮ `ಜನ್ಮ ದಿನದ’ ಶುಭಾಶಯಗಳು.

Leave a Reply to sunaath Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.