ರಚನೆ : ವಿಜಯದಾಸರು
ಗಾಯಕ : ಪುತ್ತೂರು ನರಸಿಂಹ ನಾಯಕ್
ಅಂತರಂಗದ ಕದವು ತೆರೆಯಿತಿಂದು ||ಪ||
ಎಂತು ಪುಣ್ಯದ ಫಲವು ಪ್ರಾಪ್ತಿ ದೊರಕಿತು ಎನಗೆ ||ಅ||
ಏಸುದಿನವಾಯಿತೊ ಬೀಗಮುದ್ರೆಯ ಮಾಡಿ
ವಾಸವಾಗಿದ್ದರೋ ದುರುಳರಿಲ್ಲಿ
ಮೋಸವಾಯಿತು ಇಂದಿನ ತನಕ ತಮಸಿನ
ರಾಶಿಯೊಳಗೆ ಹೂಳಿ ಕಾಣಿಸುತ್ತಿರಲಿಲ್ಲ ||೧||
ಹರಿಕರುಣವೆಂಬಂಥ ಕೀಲಿಕೈ ದೊರಕಿತು
ಗುರುಕರುಣವೆಂಬಂಥ ಶಕ್ತಿಯಿಂದ
ಪರಮಭಾಗವತರ ಸಹವಾಸದಲಿ ಪೋಗಿ
ಹರಿಸ್ಮರಣೆಯಿಂದಲಿ ಬೀಗಮುದ್ರೆಯ ತೆಗೆದೆ ||೨||
ಸುತ್ತಲಿದ್ದವರು ಪಲಾಯನವಾದರು
ಭಕ್ತಿಕಕ್ಕಡವೆಂಬ ಜ್ಞಾನದೀಪ
ಜತ್ತಾಗಿ ಹಿಡಕೊಂಡು ದ್ವಾರದೊಳಗೆ ಪೊಕ್ಕೆ
ಎತ್ತನೋಡಿದರತ್ತ ಶೃಂಗಾರ ಸದನ ||೩||
ಹೊರಗೆ ದ್ವಾರವು ನಾಲ್ಕು ಒಳಗೈದು ದ್ವಾರಗಳು
ಪರ ದಾರಿಗೆ ಪ್ರಾಣ ಜಯವಿಜಯರು
ಮಿರುಗುವ ಮಧ್ಯಮಂಟಪ ಕೋಟಿರವಿಯಂತೆ
ಸರಸಿಜನಾಭನ ಅರಮನೆಯ ಸೊಬಗು ||೪||
ಸ್ವಮೂರ್ತಿಗಣ ಮಧ್ಯ ಸಚ್ಚಿದಾನಂದೈಕ
ರಮೆಧರೆಯರಿಂದಲಾಲಿಂಗತ್ವದಿ
ಕಮಲಜಾದಿಗಳಿಂದ ತುತಿಸಿಕೊಳ್ಳುತ ಹೃದಯ-
ಕಮಲದೊಳಗಿರುವ ಶ್ರೀ ವಿಜಯವಿಠಲನ ಕಂಡೆ ||೫||