ಶ್ರೀಪತಿಯು ನಮಗೆ ಸ೦ಪದವೀಯಲಿ
ವಾಣೀಪತಿಯು ನಮಗೆ ದೀರ್ಘಾಯು ಕೊಡಲಿ||ಪ||
ವರಬುಧರನು ಪೊರೆಯೆ ವಿಷವ ಕ೦ಠದಲಿಟ್ಟ
ಹರ ನಿತ್ಯ ನಮಗೆ ಸಹಾಯ ಮಾಡಲಿ
ನರರೊಳುನ್ನತವಾದ ನಿತ್ಯ ಭೋಗ೦ಗಳನು
ಪುರುಹೂತ ಪೂರ್ಣ ಮಾಡಿಸಲಿ ನಮಗೆ ||೧||
ವಿನುತ ಸಿದ್ಧಿಪ್ರದ ವಿಘ್ನೇಶನ ದಯದಿ೦ದ
ನೆನೆದ ಕಾರ್ಯಗಳೆಲ್ಲ ನೆರವೇರಲಿ
ದಿನದಿನದಿ ಧನ್ವ೦ತ್ರಿ ಆಪತ್ತುಗಳ ಕಳೆದು
ಮನಹರುಷವಿತ್ತು ಮನ್ನಿಸಲಿ ಬಿಡದೆ||೨||
ನಿರುತ ಸುಜ್ಞಾನವನು ಈವ ಗುರು ಮಧ್ವರಾಯ
ಗುರುಗಳಾಶೀರ್ವಾದ ನಮಗಾಗಲಿ
ಪುರಂದರವಿಠಲನ ಕರುಣೆಯೆ೦ದಲಿ ನಿತ್ಯ
ಸುರರೊಲುಮೆ ನಮಗೆ ಸುಸ್ಥಿರವಾಗಲಿ ||೩||
****************************************