ಚಿತ್ರ – ಒಂದಾಗೋಣ ಬಾ (೨೦೦೩)
ಸಾಹಿತ್ಯ ಮತ್ತು ಸಂಗೀತ – ಹಂಸಲೇಖ
ಗಾಯಕ – ಫಯಾಜ್‍ಖಾನ್ ಮತ್ತು ಸಂಗಡಿಗರು

ಹಾಡು ಇಲ್ಲಿದೆ –

ಹಂಸಲೇಖ

ಒಂದ್ಹೆಜ್ಜೆ ನಾವೇ ಹೋಗೋಣಯ್ಯ
ಸಿಹಿ ಸಜ್ಜೆ ತಿನಿಸಿ ಬರೋಣಯ್ಯ
ಮನೆ ಬಾಗಿಲು ತೆರೆದ ಸೂರ್ಯ
ಬೆಳಕಿದ್ದರೆ ಮನಸಿಗೆ ಧೈರ್ಯ
ಮನೆ ದೇವರಿಗೂ ಕುಲದೇವರಿಗೂ
ಬೆಳಕಲ್ಲೇ ಆರತಿ ||ಪ||

ಮಹಾಮಹಾ ಮರಗಳೇ ಉರುಳುವವೋ
ಬೇರು ಸಹಿತ ಎಬ್ಬಿ
ಭೋರೆನ್ನುತ ಬರೋ ಆ ನದಿಯ
ರಭಸದಲೆಗೆ ಸಿಕ್ಕಿ
ತಲೆಬಾಗುವ ಆ ಹುಲ್ಲಿಗೆ
ಜಲದ ಭೀತಿ ಎಲ್ಲಿದೆ?

ತಲೆಬಾಗೋ…..
ಹುಲುಮಾನವ ನೀನು ಪ್ರೀತಿಗೆ ||೧||

ಮನೆ ಬಾಗಿಲು ತೆರೆದ ಸೂರ್ಯ
ಬೆಳಕಿದ್ದರೆ ಮನಸಿಗೆ ಧೈರ್ಯ
ಮನೆ ದೇವರಿಗೂ ಕುಲದೇವರಿಗೂ
ಬೆಳಕಲ್ಲೇ ಆರತಿ ||ಪ||

ಕೂಡಿ ತಿನ್ನೋ ಆನಂದ
ಬಿಡಿಬಿಡಿಯಲಿಲ್ಲ
ಕೂಡಿ ಬಾಳೋ ಸಂತೋಷ
ಹೊಡಿಬಡಿಯಲಿಲ್ಲ
ಪೈರಿಗೂ ಪೈರಿಗೂ ವೈರವೇ?
ಕಾಳಿಗೂ ಕಾಳಿಗೂ ಕದನವೇ?

ಜೊತೆಯಾಗೋ….
ಹುಲುಮಾನವ ನೀನು ಪ್ರೀತಿಗೆ ||೨||

ಮನೆ ಬಾಗಿಲು ತೆರೆದ ಸೂರ್ಯ
ಬೆಳಕಿದ್ದರೆ ಮನಸಿಗೆ ಧೈರ್ಯ
ಮನೆ ದೇವರಿಗೂ ಕುಲದೇವರಿಗೂ
ಬೆಳಕಲ್ಲೇ ಆರತಿ ||ಪ||

***

9 thoughts on “ಒಂದಾಗೋಣ ಬಾ – ಒಂದ್ಹೆಜ್ಜೆ ನಾವೇ ಹೋಗೋಣಯ್ಯ”

 1. ಪ್ರೇಮಲೋಕ, ರಣಧೀರ ಮುಂತಾದ ಕೆಲ ಚಿತ್ರಗಳ ಸಾಹಿತ್ಯ ನೋಡಿದ ಮೇಲೆ ಹಂಸಲೇಖ ಅವರು ಬರೇ ಪೋಕರಿ ಸಾಹಿತ್ಯಗಳಿಗಷ್ಟೇ ಸೂಕ್ತ ಎಂದು ನಾನು ಭಾವಿಸಿದ್ದೆ. ಆದರೆ ಎಷ್ಟೋ ಚಿತ್ರಗಳಿಗೆ ಅವರು ಅಪ್ಪಟ ಸಾಹಿತ್ಯ ನೀಡಿರುವುದನ್ನು ನಂಬಲು ನನಗೆ ಬಹಳ ವರ್ಷ ಬೇಕಾಯಿತು. ಒಂದಾಗೋಣ ಬಾ ಚಿತ್ರದ ಈ ಸಾಹಿತ್ಯವೇ ಸಾಕು ಹಂಸಲೇಖ ಅವರ ಪ್ರತಿಭೆಗೆ ಸಾಕ್ಷಿಯಾಗಿ.

 2. ನನ್ನ ಬ್ಲಾಗ್ ಸರಿಯಾಗಿ ಅಪ್ ಡೇಟ್ ಮಾಡೋಕ್ಕಾಗ್ತಿಲ್ಲ ತ್ರಿವೇಣಿಯವ್ರೇ. ಮನೇಲಿ ಕಂಪ್ಯೂಟರ್ ಇಲ್ದಿರೋದ್ರಿಂದ ಬ್ಲಾಗ್ ಕೆಲ್ಸಾನೆಲ್ಲಾ ಆಫೀಸ್ನಲ್ಲೇ ಮಾಡ್ಬೇಕು. ಆಫೀಸ್ನಲ್ಲಿ ಕೆಲವೊಮ್ಮೆ ದಿಢೀರ್ನೇ ಸಿಕ್ಕಾಪಟ್ಟೆ ಪ್ರಾಜೆಕ್ಟ್ ಗಳು ಬಂದುಬಿಡ್ತಾವೆ. ಯಾವ್ದಕ್ಕೂ ಟೈಮೇ ಸಿಕ್ಕೊಲ್ಲ. ಬಿಡುವು ಸಿಕ್ಕಾಗ ತಲೇಲಿ ವಿಚಾರಗಳಿರೊಲ್ಲ. ವಿಚಾರ ಇದ್ದಾಗ ಬಿಡುವು ಇರೋದಿಲ್ಲ. ಇದು ನನ್ನ ಕಥೆ ವ್ಯಥೆ.

 3. ಸಾರಥಿ ಮಾತ್ನ ನಂಬಬೇಡಿ ಶ್ರೀತ್ರಿ ಅವರೆ,
  ಬಿಡುವು ಇದ್ದಾಗ ತಲೇಲಿ ವಿಚಾರಗಳಿರೋದಿಲ್ಲ ಅಂತ ಹೇಳಿ ಅವರು ತಮಗೆ ತಲೆ ಇದೆ ಅಂತ ತೋರಿಸಿಕೊಳ್ಳಲು ಹೆಣಗಾಡುತ್ತಿದ್ದಾರಲ್ಲ?
  ಅದು ಹೀಗಿರಬಹುದೆ?-
  “ವಿಚಾರ ಇದ್ದಾಗ ತಲೆ ಇರೋದಿಲ್ಲ, ತಲೆ ಇದ್ದಾಗ ವಿಚಾರ ಇರೋದಿಲ್ಲ”?

 4. ಮಿಸ್ಟರ್ ಮಿಥ್ಯಾರೋಪಿ ಅಕಾ ಅಸತ್ಯಾನ್ವೇಷಿಗಳೇ, ವಿಚಾರಕ್ಕೂ ತಲೆಗೂ ತಲೆತಲೆಯಾಂತರವಿರುತ್ತದೆ ಎಂಬ ಸತ್ಯ ಅರಿಯಿರಿ. ಬಿಡುವು ಸಿಕ್ಕಾಗ ಒಳಗಿದ್ದ ವಿಚಾರಗಳನ್ನು ಹೊರಹಾಕಬೇಕೆಂದು ಬಯಸುತ್ತೇನೆ. ಅದೇ ಸಮಯದಲ್ಲಿ ವಿಚಾರಗಳೂ ಸಹ ಹೊರ ಓಡಲು ಹವಣಿಸುತ್ತಿರುತ್ತವೆಯೇನೋ. ನಾನು ಆ ವಿಚಾರಗಳನ್ನು ತಲೆಯಿಂದ ಹೊರತೆಗೆದು ಬ್ಲಾಗೋ ಇಲ್ಲ ಪೇಪರಿಗೋ ಹಿಡಿದಿಡಲು ಪ್ರಯತ್ನಿಸುವುದಕ್ಕೆ ಮುನ್ನವೇ ಅವು ಆಗಲೇ ಎಸ್ಕೇಪ್ ಆಗಿಬಿಟ್ಟಿರುತ್ತವೆ. ನಿಮ್ಮಲ್ಲಿರುವ ವಿಚಾರಗಳು ಕೋಲೆಬಸವನಂತೆ ಗೋಣು ಅಲ್ಲಾಡಿಸಿ ಹೇಳಿದಂತೆ ಕೇಳುತ್ತವೆ. ನಿಜ ತಾನೆ?

 5. ಅಸತ್ಯಾನ್ವೇಷಿಗಳೇ, ಹಂಸಲೇಖ ಸಾಹಿತ್ಯ/ಸಂಗೀತದ ಬಗ್ಗೆ ಏನೋ ಮಹಾ ಅಸತ್ಯ ಅನ್ವೇಷಣೆ ಮಾಡಿ, ಬರೆದಿದ್ದೀರಾ ಎಂದುಕೊಂಡರೆ, ಸಾರಥಿಗಳ ಮೇಲೆ ನಿಮ್ಮ ಹಳೆ ದ್ವೇಷ ತೀರಿಸಿಕೊಳ್ಳುತ್ತಿದ್ದೀರಲ್ಲಾ 🙂

  ಸಾರಥಿಯವರೇ, ನಿಮ್ಮ ಮಾತು ನಿಜ. ಈಗಲೂ ಬಹಳ ಜನ ಹಂಸಲೇಖ ಬಗ್ಗೆ ಅದೇ ಅಭಿಪ್ರಾಯ ಇಟ್ಟುಕೊಂಡಿದ್ದಾರೆ. ಅದಕ್ಕೆ ಹಂಸಲೇಖಾ ಅವರೇ ಕಾರಣ ಕೂಡ. ಬಹುಶ: ಹಂಸಲೇಖಾಗೆ ಚಿತ್ರರಂಗದಲ್ಲಿ ತಮ್ಮದೇ ಆದ ಒಂದು ಸ್ಥಾನವನ್ನು ಗಳಿಸಿಕೊಳ್ಳಲು ಕೆಲವು ಕಡೆ ರಾಜಿ ಅನಿವಾರ್ಯ ಆಗಿತ್ತೇನೋ ಅನ್ನಿಸುತ್ತದೆ.

  ನಾನು ಈ ಹಿಂದೆ ಹಾಕಿರುವ “ಅನುರಾಗದ ಅಲೆಗಳು” ಪೋಸ್ಟ್ ಕೂಡ ಗಮನಿಸಿ.

 6. ಸಾರಥಿಯವರೇ ತ್ರಿವೇಣಿಯವರು ಹಂಸ್‌ರ ಬರೀ ಒಳ್ಳೆಯ ಸಾಹಿತ್ಯವನ್ನು ಮಾತ್ರ ಇಲ್ಲಿ ಬರೆಯುತ್ತಾರೆ, ಹಂಸ್‌ರ ಕೆಲವೊಂದು ಹಾಡುಗಳು ಕೇಳಲಿಕ್ಕೂ ಅಸಹ್ಯವಾಗಿಯೂ ಇವೆ ಅನ್ನೋದು ಅವರಿಗೂ ಚೆನ್ನಾಗಿ ಗೊತ್ತು. ನಾನೂ ಹಂಸ್‌ರ ಅಭಿಮಾನಿಯಾದ್ದರಿಂದ ಅವರನ್ನು ಸಹಿಸಿಕೊಳ್ಳುತ್ತೇನೆ, ಅವರಲ್ಲಿ ಪ್ರತಿಭೆ ಇದೆ ಅನ್ನೋದರಲ್ಲಿ ಯಾವ ಸಂದೇಹವೂ ಇಲ್ಲ, ಆದರೆ ಆ ಮನುಷ್ಯ ಹಾಡಿನ ಫ್ಯಾಕ್ಟರಿಯಾಗಬಾರದಿತ್ತು.

 7. ಅಂತರಂಗಿಗಳೇ, ನಾನೂ ನಿಮ್ಮಂತೆ ಹಂಸಲೇಖಾ ಅವರ ಅಭಿಮಾನಿಯಾಗಿದ್ದರೂ, ನಿಮ್ಮಂತೆ ಅವರನ್ನು ಸಹಿಸಿಕೊಳ್ಳಬೇಕಾದ ಅನಿವಾರ್ಯತೆ ನನಗೇನಿಲ್ಲ. ಯಾರ ಬಗ್ಗೆಯೂ ಕುರುಡು ಅಭಿಮಾನವೂ ನನಗಿಲ್ಲ. ಆದರೆ, ಹಂಸಲೇಖ ಅವರ ಹಾಡುಗಳ ಲವಲವಿಕೆ, ತುಂಟತನಗಳನ್ನು ನಾನಂತೂ ಆನಂದಿಸುತ್ತೇನೆ. ಹಂಸಲೇಖ ಅವರ ಹಾಡುಗಳು ಅಸಹ್ಯ ಎಂದು ನನಗೆಂದೂ ಅನ್ನಿಸಿಲ್ಲ!

 8. ಅಂತರಂಗಿಗಳೇ, ನಿಮ್ಮ ಮತ್ತು ತ್ರಿವೇಣಿ ಅವರ ಅಭಿಪ್ರಾಯಗಳನ್ನು ಗಮನಿಸಿದ ಮೇಲೆ ನನಗನಿಸಿದ್ದೆಂದರೆ ಹಂಸಲೇಖ ಅವರ ಸಾಹಿತ್ಯದ ಗುಣಮಟ್ಟವು ಕೇಳುಗರ ದೃಷ್ಟಿಕೋನದ ಮೇಲೆ ಅವಲಂಬಿಸುತ್ತದೆ ಎಂದು.

  ….ಹಾಂ..ಹಾಂ.. ಇಲ್ಲಿ ಒಂದು ತರಲೆ ಸಂಶಯ. ಮೇಲೆ ನಾನು ಬರೆಯುವಾಗ, “ಕೇಳುಗರ ದೃಷ್ಟಿಕೋನ” ಎಂದು ಬಳಸುವುದರ ಬದಲು “ಕೇಳುಗರ ಶ್ರವ್ಯಕೋನ” ಎಂದು ಬಳಸಿದ್ದಿದ್ದರೆ ತಪ್ಪಾಗುತ್ತಿತ್ತೆ ಇಲ್ಲ ಸರಿಯಾಗಿರುತ್ತಿತ್ತೆ?

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.