“ಮಯೂ(yU)ರ”ದಲ್ಲಿ ಪ್ರಕಟಿತ ಹನಿಗವನಗಳು
ತಿದ್ದುಪಡಿ
ಮಗು,
ಸರಿಯಾಗಿ ಓದಿ ನೋಡು-
ಈ ಪ್ರಪಂಚದಲ್ಲಿರುವ
ವಿಸ್ಮಯಗಳು ಏಳೇ ಏಳಲ್ಲ
ನಿನ್ನನ್ನೂ ಸೇರಿಸಿಕೊಂಡು
ಅಂತಹ ಆನಂದದ ಅದ್ಭುತಗಳು
ಎಂಟಿರಬೇಕು!
***
ಕೋರಿಕೆ
ನಲ್ಲಾ,
ನನ್ನ ಅಂತರಂಗದ
ಮೃದಂಗವಾದನಕ್ಕೆ
ನೀನು ತಲೆದೂಗಿ
ದನಿಗೂಡದಿದ್ದರೂ ಬೇಡ,
ಕಿವುಡಾಗದಿದ್ದರೆ ಸಾಕು
***
ಹೋಲಿಕೆ
ಅವನಿಗೆ
ನಮ್ಮಿಬ್ಬರ ಪ್ರೀತಿಗೊಂದು
ಸುಂದರ ಹೋಲಿಕೆ ಕೊಡು
ನೋಡೋಣ ಎಂದೆ-
ಅವನಾದರೋ
ನನ್ನ ಹೆರಳ ಬಿಳಿಗುಲಾಬಿಯ ಒಮ್ಮೆ
ನವಿರಾಗಿ ಮುದ್ದಿಸಿ
ನಕ್ಕು ಬಿಟ್ಟ.
***
ಕನ್ನಡಿ
ಇನಿಯಾ,
ನನ್ನ ಕಣ್ಣುಗಳು
ವಿಕಸಿತ ಕಮಲವಲ್ಲ
ಪ್ರಶಾಂತ ತಿಳಿಗೊಳವಲ್ಲ
ಮಿನುಗುವ ನಕ್ಷತ್ರವಲ್ಲ
ಫಳಗುಟ್ಟುವ ಮೀನೂ ಅಲ್ಲ
ಅದು ಕೇವಲ-
ನಿನ್ನೊಲವ ಪ್ರತಿಫಲಿಪ
ಕನ್ನಡಿ ಮಾತ್ರ!
***
ಶಾಯರಿಗಳ ಗುಂಗಿನಲಿ ನಾ ತೇಲುತಿರೆ
ವಿಸ್ಮಯ ಹುಟ್ಟಿಸಿತು ತಿದ್ದುಪಡಿಯ ಕರೆ
ಅಂತರಂಗ ತಟ್ಟಲು ನಾ ಸಲ್ಲಿಸಿದೆ ಕೋರಿಕೆ
ಹೂಂ ಹೂಂ…ಕಿವಿಗೊಡಲಿಲ್ಲ ಸ್ವಲ್ಪವೂ ಆಕೆ
ನಮ್ಮಿಬ್ಬರ ಪ್ರೀತಿಗೆ ನಾ ನೀಡಿದೆ ಹೋಲಿಕೆ
ಆದರೇನು ದೊರಕಲೇ ಇಲ್ಲ ಒಂದೂ ಕಾಣಿಕೆ
ನಾ ಕೇಳಿದೆ, ನಿನ್ನ ಕಣ್ಣುಗಳು ನನಗಾಗುವುವೇ ಕನ್ನಡಿ
ಕಣ್ಣುಮಿಟುಕಿಸಿ ಬರೆದುಬಿಟ್ಟಳು ಪ್ರೇಮಾಂತ್ಯಕ್ಕೆ ಮುನ್ನುಡಿ
ಸಾರಥಿಯವರೇ, ನಿಮ್ಮ ಕವನ ಚೆನ್ನಾಗಿದೆ. ನೀವು ಕವನ ಬರೆಯಬಲ್ಲಿರಿ ಅಂತ ಗೊತ್ತಾಯ್ತು. ಆಗಾಗ ನಿಮ್ಮ ಬೊಗಳೆಯಲ್ಲಿ ಕವನವನ್ನೂ ಬೊಗಳುತ್ತಿರಿ, ಕ್ಷಮಿಸಿ, ಬರೆಯುತ್ತಿರಿ 🙂
ಏನು….? ಶ್ರೀತ್ರಿ ಅವರು ಏನೋ ಬೊಗಳೆ ಅಂದ್ಹಾಗೆ ಕೇಳಿಸಿತಲ್ಲ…..?
ಅಸತ್ಯಾನ್ವೇಷಿಗಳೇ,
ಮೊದಲು ನಿಮ್ಮದೊಂದೇ ರಗಳೆ ಇತ್ತು. ಈಗ ಬಹಳ ಬೊಗಳೆಗಳಿವೆ 🙂