ಕವಿಗಳೇ,
ಇಲ್ಲಿಂದ ಹೋದಮೇಲೆ
ನಿಮ್ಮಿಂದ ಸುದ್ದಿಯಿಲ್ಲ,
ಸಮಾಚಾರ ತಿಳಿಯೋಣವೆಂದರೆ
ಈಗ ಬಳೆಗಾರ ಬರುವುದಿಲ್ಲ
ಭವಾನಿ ಕಂಗನ್, ಮಹಿಳಾ ಬ್ಯಾಂಗಲ್
ಬಂದ ಮೇಲೆ ಅವನಿಗೂ ಕೆಲಸವಿಲ್ಲ, ಪಾಪ!
ಪತ್ರ ವ್ಯವಹಾರಕ್ಕೂ
ಪುರಸೊತ್ತಿಲ್ಲದ ಹೊತ್ತಲ್ಲಿ
ಈಮೇಲೇ ಮೇಲೆನಿಸಿತು.
ನಾವು ಕ್ಷೇಮ,
ನೀವು ಹೇಗಿದ್ದೀರಿ?
ಮೊನ್ನೆ ಊರಿಗೆ ಬಂದಿದ್ದಾಗ
ನಿನ್ನ ಮನೆಯ ಮುಂದೆಲ್ಲ ಸುತ್ತಿಸುಳಿದೆ ;
ಜಗಲಿಯಲ್ಲಿ ಅಕ್ಕಿ ಆರಿಸುತ್ತಾ ಕುಳಿತವಳಿಲ್ಲ,
ಹೊಸಿಲ ಬಳಿ ಬಂದೊಡನೆ
‘ಹೆಸರೇನು’ ಎನ್ನುವರಿಲ್ಲ,
ವಿಚಾರಿಸೋಣವೆಂದರೆ
ಹಣ್ಣಿನಂಗಡಿ ಮುಚ್ಚಿತ್ತು
ಹೂವಿನಾಕೆ ವ್ಯಾಪಾರಮುಗಿಸಿ
ಎದ್ದುಹೋಗಿದ್ದಳು.
ಇಲ್ಲೇನಾಗಿದೆ ಕೇಳಿ;
ಬಹುಮಹಡಿ ಕಟ್ಟಡಗಳ
ನಡುವಿರುವ ನನಗೆ
ಹಾಲುಚಂದಿರ ಬಂದರೂ
ಕಾಣುವುದಿಲ್ಲ,
ರಾಯರಿಗೆ ಮಾವನ ಮನೆ
ಬರೀ ಬೋರು.
ಪದುಮ ಹೊರಗಾದರೂ
ಕೂರುವುದಿಲ್ಲ
ಸಾಫ್ಟ್‌ವೇರ್ ಉದ್ಯೋಗಿ ಹೆಂಡತಿ
ಮನೆಯೊಳಗಿರುವುದಿಲ್ಲ,
ಕೋಟಿ ರೂಪಾಯಿಯೂ ಈಗ
ಅಷ್ಟೇನು ದೊಡ್ಡದುಡ್ಡಲ್ಲ ಬಿಡಿ.
ತಾವರೆಕೆರೆ, ನವಿಲೂರು, ಹೊನ್ನೂರುಗಳೆಲ್ಲ
ಈಗ ದುಬಾರಿ ಸೈಟುಗಳಾಗಿವೆ,
ಜೋಯಿಸರ ಮಗನಿಗೆ
ಹೆಣ್ಣು ಸಿಕ್ಕುವುದು
ಇದ್ದಿದ್ದೂ ಕಷ್ಟವಾಗಿದೆ
ಚಿತ್ರದುರ್ಗ-ಮೈಸೂರು
ರೈಲಿಳಿದುಹೋದವರೆಲ್ಲ
ಏನಾದರೋ ಗೊತ್ತಿಲ್ಲ.
ವಿಚಿತ್ರವೆನಿಸುವುದೆಂದರೆ
ತಿಂಗಳ ಕಂದಗಳೆಲ್ಲ
ಬೆಳೆದು ಮನೆ ತೊರೆದರೂ
ತೌರಹಂಬಲ ಕಳಚಿಕೊಳ್ಳುವುದು
ಈಗಲೂ ಅಷ್ಟೇನೂ ಸುಲಭವಲ್ಲ!
**********
ಅವಧಿಯಲ್ಲಿ ಪ್ರಕಟವಾಗಿರುವ ಕವನ. ಲಿಂಕ್ ಇಲ್ಲಿದೆ:-
ನಮಸ್ತೇ…ಸು ರಂ ಎಕ್ಕುಂಡಿ ಯವರ “ಮೊನ್ನೆ ಮೊನ್ನೆ ತಾನೆ ನಡೆಯಿತಲ್ಲ ಬಾಹುಬಲಿಯ ಮಜ್ಜನ ” (ಹಾಡಿನ ಶೀರ್ಷಿಕೆ ನೆನೆಪಿಲ್ಲ) ಹಾಡಿನ ಸಾಹಿತ್ಯ ಇದ್ದರೆ ಕಳುಹಿಸಿ..
https://tinyurl.com/y8o2f5q7
ನಮಸ್ಕಾರ.
ನೀವು ಕೇಳಿದ ಕವನವನ್ನು ಈ ಲಿಂಕಿನಲ್ಲಿ ನೋಡಬಹುದು. ಧನ್ಯವಾದಗಳು.-