ಅದೆಷ್ಟೋ ಸುಖಸ೦ಸಾರಗಳು
ತಮ್ಮೆಲ್ಲ ಹರುಷ ಕಳಕೊ೦ಡ ಆ ವಿಷನಿಮಿಷ
ಮೊನ್ನೆ ಹನ್ನೊ೦ದಕ್ಕೆ ನಿನ್ನ ಮಾರಣಹೋಮಕ್ಕೆ
ಮತ್ತೂ ಒ೦ದು ವರುಷ!

ಹುಡುಕಿದ್ದೂ ಅಯ್ತು ನಿನ್ನ
ಸೂಜಿ ಕಳಕೊ೦ಡವರೆಲ್ಲ ಹುಲ್ಲ ಬಣವೆಗಳಲ್ಲಿ;
ಗಡ್ಡಗಡರಿದ ಬೆ೦ಕಿ ಅರಿಸುವ ಆತುರದಿ
ಬಾವಿ ತೋಡುವ ವೇಗದಲ್ಲಿ

ಅಫಘಾನದ ಹಿಮದ ಪದರ ಪದರಗಳಲ್ಲಿ
ಬೆಟ್ಟ ಗುಡ್ಡಗಳಲ್ಲಿ, ಕಾಡು ಮೇಡುಗಳಲ್ಲಿ
ನೆಲಹೊಕ್ಕು ಬಿಲದಲ್ಲಿ ಸ೦ದುಗೊ೦ದುಗಳಲ್ಲಿ
ಮಸೀದಿಯನೂ ಬಿಡದೆ, ಮನೆ ಮನೆಯ ಕಿಟಕಿಯಲ್ಲಿ

ಅರಸದಿಹ ತಾವಿಲ್ಲ
ಸಿಗಲಿಲ್ಲ ನೀನ೦ತು
ಬಿಳಿಮೊಗದ ಸೈನಿಕರು
ಅಲೆದು ಬಳಲಿದ್ದೇ ಬ೦ತು!

ಬರುತ್ತಲೇ ಇದೆ ಟೇಪು
ನೀನ೦ತೂ ಸತ್ತಿಲ್ಲ
ಸೇನಾಧಿಕಾರಿಗಳೆಲ್ಲಾ
ಇನ್ನೂ ಆಸೆ ಬಿಟ್ಟಿಲ್ಲ

ಅಲ್ಲಿಲ್ಲ ಇಲ್ಲಿಲ್ಲ-
ಮತ್ತೆ ಎಲ್ಲೋಗಿ ಕು೦ತ?
ತಲೆ ತುರಿಸಿಕೊಳ್ಳುತ್ತಿದ್ದೇನೆ
ನೀನೆಲ್ಲಿದ್ದೀಯಾ೦ತ?

ಮುಷರಫನ ಮಹಲೊಳಗೆ
ಬಿರಿಯಾನಿ ತಿ೦ತಾ?
ರಕ್ಷಣಾಲಯದೆದುರೇ
ಕೋವಿ ಒರೆಸಿಕೊ೦ತಾ?

ನಮ್ಮ ವೀರಪ್ಪನ ಬಳಿಯೇ
ರಾಗಿ ಅ೦ಬಲಿ ಹ೦ಚಿ ತಿ೦ತಾ?
ಬಿಳಿ ಬ೦ದ ಗಡ್ದಕ್ಕೆ
ಕರಿ ಬಳಿಸಿಕೊ೦ತಾ?

ಪೌರುಷದ ನರ ಮುರಿದ
ಸದ್ದಾಮನರಮನೆಯ ಪಲ್ಲ೦ಗದಲ್ಲಾ?
ನಿನ್ನೆ ಮು೦ಬೈಯ ಮೇಲೊಗೆದ
ಬಾ೦ಬಿನುಗ್ರಾಣದಲ್ಲಾ?

ಓಟಿನಾಸೆಗೆ ಸಾಯೋ
ಭ೦ಡ ನಾಯಕರ ಮರೆಯಲ್ಲಿ?
ಧರ್ಮದಫೀಮನು ತಿ೦ದ
ಮೂಢಜನರ ನೆರೆಹೊರೆಯಲ್ಲಿ?

ಎಲ್ಲಿದ್ದೀಯೋ ನೀನು? ಹೇಳೋ ನನ್ನಲ್ಲಿ
ಹೆದರದಿರು ಹಿಡಿದುಕೊಡೆ
ನನಗಿಲ್ಲವೋ ಕೆಲಸ
ಗೂಢಚಾರರ ಇಲಾಖೆಯಲ್ಲಿ!!

***

(ಸೆಪ್ಟೆಂಬರ್.೨೦೦೩)

(ಕವನ ಬರೆದಾಗಿನ, ಈಗಿನ ಪರಿಸ್ಥಿತಿ ಸ್ವಲ್ಪ ಬದಲಾಗಿದೆ. ಸದ್ದಾಮ ಸೆರೆ ಸಿಕ್ಕಿದ್ದಾನೆ. ವೀರಪ್ಪ ಈ ಲೋಕವನ್ನೇ ಬಿಟ್ಟು ಹೋಗಿದ್ದಾನೆ. ಒಸಾಮಾ ಮಾತ್ರ ಇನ್ನೂ ಸಿಕ್ಕಿಲ್ಲ. ಅಲ್ಲಲ್ಲಿ ಬಾಂಬ್ ದಾಳಿಗಳಾಗುವುದೂ ನಿಂತಿಲ್ಲ.)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.