ನಿನ್ನೆ, ಜುಲೈ, ಹದಿಮೂರರ ಸಂಜೆ, ಅರೋರಾದ ಬಾಲಾಜಿ ದೇವಸ್ಥಾನದಲ್ಲಿ, ವಿದ್ಯಾರಣ್ಯ ಕನ್ನಡಕೂಟದ ವಾರ್ಷಿಕ ‘ದಾಸ ದಿನ’ ಆಚರಣೆಯ ಪ್ರಯುಕ್ತ ಗಾಯಕ ಶ್ರೀನಿವಾಸ ಜೋಷಿಯವರ ಸಂಗೀತ ಕಾರ್ಯಕ್ರಮವಿತ್ತು. ಪಂಡಿತ ಭೀಮಸೇನ ಜೋಷಿಯವರ ಮಗನೂ, ಶಿಷ್ಯನೂ ಆದ ಶ್ರೀನಿವಾಸ ಜೋಷಿಯವರು ಹಾಡುತ್ತಿದ್ದರು. ತಂದೆಯನ್ನು ನೆನಪಿಸುವ ಅದೇ ರೂಪ, ಅಷ್ಟೊಂದು ಪಕ್ವಗೊಂಡಿರದ, ಆದರೆ ಅದೇ ದನಿ! ಸಹಜವಾಗಿ ಎಲ್ಲರ ಮನಸ್ಸಿನಲ್ಲಿ ತುಂಬಿ ಮೊರೆಯುತ್ತಿದ್ದ ಹಲವಾರು ನಿರೀಕ್ಷೆಗಳು! ಪ್ರಸಿದ್ಧರ ಮಕ್ಕಳಿಗೆ, ಹೆತ್ತವರ ನೆರಳಿನಿಂದ ಹೊರಬಂದು ತಮ್ಮದೇ ಛಾಪನ್ನು ಮೂಡಿಸಿಕೊಳ್ಳುವುದು ಅದೆಷ್ಟು ಕಷ್ಟವಲ್ಲವೇ ಅನ್ನಿಸಿತು. ಜನರ ಮನಸ್ಸು ಅವರಿಗೇ ಅರಿವಿಲ್ಲದಂತೆ, ಕೈಯಲ್ಲಿ ತಕ್ಕಡಿ ಹಿಡಿದು ಅಳೆಯತೊಡಗುತ್ತದೆ. ಆ ದನಿಯೊಡನೆ ಈ ದನಿಯ ಹೋಲಿಕೆ ಬೇಡವೆಂದರೂ ಶುರುವಾಗುತ್ತದೆ.
ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತದಲ್ಲಿ ಈ ಗಾಯಕನದು ಅದ್ಭುತ ಪರಿಣತಿ, ಅದನ್ನೇ ಹಾಡುವ ಒಲವು. ಆದರೆ, ದಾಸದಿನದ ಪ್ರಯುಕ್ತ, ಕೆಲವು ದಾಸರ ಕೃತಿಗಳನ್ನು ಹಾಡುವಂತೆ ಮೊದಲೇ ಕೋರಿಕೊಳ್ಳಲಾಗಿತ್ತದ್ದರಿಂದ ಅವರು ಅದನ್ನು ಹಾಡಲು ಒಪ್ಪಿದ್ದರು. ಮೊದಲೊಂದು ಪ್ರಾರ್ಥನೆಯ ಗೀತೆಯನ್ನು ಪ್ರಾರಂಭಿಸಿ, ನಂತರ ದಾಸಸಾಹಿತ್ಯಕ್ಕೆ ಲಗ್ಗೆಯಿಟ್ಟರು. ವಾದಿರಾಜರ ‘ಹರಿಸ್ಮರಣೆ ಮಾಡೊ ನಿರಂತರ’, ವಿಜಯದಾಸರ ‘ಸದಾ ಎನ್ನ ಹೃದಯದಲ್ಲಿ’ ಬಿಟ್ಟರೆ ಉಳಿದಿದ್ದೆಲ್ಲಾ ಪುರಂದರ ದಾಸರ ಪದಗಳು!
‘ಕರುಣಿಸೋ ರಂಗಾ ಕರುಣಿಸೋ… ಹಗಲು ಇರಳು ನಿನ್ನ ಸ್ಮರಣೆ ಮರೆಯದಂತೆ’… ಎಂದು ಅವರು ಮುಂದಿನ ಹಾಡನ್ನು ಘೋಷಿಸಿದೊಡನೆ ಶೋತೃ ವೃಂದದಿಂದ ಚಪ್ಪಾಳೆ. ಯಾಕೆಂದರೆ, ಆ ಹಾಡಿನೊಂದಿಗೆ ತೇಲಿಬಂದಿದ್ದು ಪಂಡಿತ್ ಭೀಮಸೇನ್ ಜೋಷಿಯವರ ನೆನಪು. ಇದೇ ಅದ್ಧೂರಿಯ ಸ್ವಾಗತ ‘ಬಾಗ್ಯದ ಲಕ್ಷ್ಮೀ ಬಾರಮ್ಮಾ…’ ಹಾಡಿಗೂ. ಭೀಮಸೇನ ಜೋಷಿಯವರ ‘ದಾಸವಾಣಿ’ ಆಲ್ಬಂನಲ್ಲಿರುವ ಈ ಹಾಡಿನ ಧ್ವನಿಮುದ್ರಣದ ಬಗ್ಗೆ ಶ್ರೀನಿವಾಸ ಜೋಷಿಯವರು ಕೆಲವು ನೆನಪುಗಳನ್ನು ಹಂಚಿಕೊಂಡರು. ಈ ಹಾಡಿನ ಧ್ವನಿಮುದ್ರಣದ ದಿನ ಹನ್ನೆರಡರ ಬಾಲಕನಾಗಿದ್ದ ಅವರೂ ಅಲ್ಲಿದ್ದರಂತೆ! ಈ ಕೃತಿಯ ರಾಗ ಸಂಯೋಜನೆಯನ್ನು ಸ್ವತಃ ಭೀಮಸೇನಜೋಷಿಯವರೇ ಮಾಡಿದ್ದಂತೆ. ಆದರೆ, ‘ಭಾಗ್ಯದ ಲಕ್ಷ್ಮೀ…’ ಸಮುದಾಯದ ಸಾಂಪ್ರದಾಯಿಕ ಆಸ್ತಿಯಾದ್ದರಿಂದ, ಸಂಗೀತ ಸಂಯೋಜಕರಾಗಿ ತಮ್ಮ ಹೆಸರನ್ನು ಹಾಕಿಕೊಳ್ಳಲು ನಿರಾಕರಿಸಿದರಂತೆ. ಆದರೆ, ಕ್ಯಾಸೆಟ್ ಕವರಿನ ಮೇಲೆ ಯಾವುದಾದರೂ ಹೆಸರು ಇರಲೇಬೇಕಾದ ಅನಿವಾರ್ಯತೆಯಿಂದ ಭೀಮಸೇನ ಜೋಷಿಯವರ ಹೆಸರನ್ನೇ ಅಲ್ಲಿ ಹಾಕಲಾಯಿತು.
ನಂತರ,‘ಭಾಗ್ಯದ ಲಕ್ಷಿ ಬಾರಮ್ಮಾ’ ಬಹಳ ಜನಪ್ರಿಯವಾಗಿದ್ದು, ಅದಕ್ಕೆ ಈ ಹಾಡನ್ನು ಒಂದು ಕನ್ನಡ ಸಿನಿಮಾದಲ್ಲಿ ಅಳವಡಿಸಿಕೊಂಡಿದ್ದೂ ಕಾರಣವಾಯಿತು ಎಂದು ನಟ ದಿವಂಗತ ಶಂಕರ್ ನಾಗ್ ಅವರನ್ನು ನೆನಪು ಮಾಡಿಕೊಂಡರು. ಆದರೆ, ಅವರಿಗೆ ಸಿನಿಮಾ ಹೆಸರು ನೆನಪಿಗೆ ಬರಲಿಲ್ಲ. ಅಲ್ಲೇ ಮುಂದಿನ ಸಾಲಿನಲ್ಲಿದ್ದ, ನಾನು ಮತ್ತು ಇನ್ನ್ಯಾರೋ ಕೂಗಿ ಹೇಳಿದೆವು… ‘ನೋಡಿ ಸ್ವಾಮಿ… ನಾವಿರೋದೇ ಹೀಗೆ!’, ‘ಅನಂತ್ ನಾಗ್-ಶಂಕರ್ ನಾಗ್ ಸಿನಿಮಾ!’ ಎಂದು. 🙂
ಭೀಮಸೇನ ಜೋಷಿಯವರ ಮಾತೃಭಾಷೆ ಕನ್ನಡವಾಗಿದ್ದರೂ, ಇವರಿಗೆ ಕನ್ನಡ ಬಾರದು. ಹಿಂದಿನ ದಿನ ಸ್ನೇಹಿತರ ಮನೆಯಲ್ಲಿ ಭೇಟಿಯಾಗಿದ್ದ ಅವರನ್ನು ಈ ಬಗ್ಗೆ ಕೇಳಿದಾಗ, ‘ಕನ್ನಡ ಸ್ವಲ್ಪ ಅರ್ಥವಾಗುತ್ತದೆ, ಆದರೆ ಮಾತಾಡಲು ಬರುವುದಿಲ್ಲ’ ಎಂದಿದ್ದರು. ಎಂಟು-ಒಂಭತ್ತರ ಎಳೆವಯಸ್ಸಿನಲ್ಲೇ ಗುರುವಿಗಾಗಿ ಹುಡುಕಾಟ ನಡೆಸುತ್ತಾ, `ಕುಂದಗೋಳ’ದಲ್ಲಿ ತಮ್ಮ ಗುರುವನ್ನು ಕಂಡುಕೊಂಡು, ಕೊನೆಗೆ ತಮ್ಮ ಕಾರ್ಯಕ್ಷೇತ್ರ ಮುಂಬಯಿಯನ್ನು ತಲುಪಿ, ಅಲ್ಲೇ ನೆಲೆಸಿದ್ದ ಭೀಮಸೇನೆಜೋಷಿಯವರ ಮಗನಿಗೆ ಕನ್ನಡ ಮಾತಾಡಲು ಬರಬಹುದೆಂದು ನಾವು ನಿರೀಕ್ಷಿಸಿರಲೂ ಇಲ್ಲ ಅನ್ನಿ.
ಹಾಗಾಗಿ, ದಾಸರ ಪದಗಳ ಕನ್ನಡ ಉಚ್ಚಾರಣೆಯಲ್ಲಿ ಕೆಲವು ತಪ್ಪುಗಳಿದ್ದವಂತೆ. ‘ಭಾಗ್ಯದ ಲಕ್ಷ್ಮೀ ಬಾರಮ್ಮಾ’ ಹಾಡಿನಲ್ಲಿಯೂ ಕೆಲವು ಎದ್ದು ಕಾಣುವ ದೋಷಗಳಿದ್ದವೆಂದು ಕೆಲವರು ಹೇಳಿದರು. ನಾನು ಎಷ್ಟರ ಮಟ್ಟಿಗೆ ಆ ಗಾಯನದಲ್ಲಿ ಮುಳುಗಿಹೋಗಿದ್ದೆನೆಂದರೆ ನನಗೆ ಒಂದೂ ಗೊತ್ತಾಗಿರಲಿಲ್ಲ. ‘ತಪ್ಪು ನೋಡದೆ ಬಂದೆಯಾ?’ ಕಾರ್ಯಕ್ರಮದಲ್ಲಿ ಹಾಡಲಾದ ಮತ್ತೊಂದು ದಾಸರ ಪದ, ದೇವ ಶ್ರೀಹರಿಯ ಜೊತೆಗೆ, ನನ್ನಂತಹ, ಒಂದೂ ತಪ್ಪುಗಳನ್ನು ಗಮನಿಸದ ಶ್ರೋತೃಗಳಿಗೂ ಅರ್ಪಣೆಯಾದಂತಾಯಿತು.
‘ದೇವ ಬಂದಾ ನಮ್ಮ ಸ್ವಾಮಿ ಬಂದಾ!’ – ಈ ಹಾಡು ಭೀಮಸೇನ ಜೋಷಿಯವರ ಧ್ವನಿಯಲ್ಲೇ ನಾನು ಮೊದಲು ಕೇಳಿದ್ದು. ನಂತರವೂ ಅದೆಷ್ಟು ಬಾರಿ ಕೇಳಿದ್ದೇನೋ ಲೆಕ್ಕವಿಟ್ಟಿಲ್ಲ. ಈ ಹಾಡನ್ನು ಬೇರೆ ದನಿಗಳಲ್ಲೂ ಕೇಳಿದ್ದರೂ ನನಗೆಂದೂ ಅದು ರುಚಿಸಿಲ್ಲ. ಈ ಗಾಯಕ ಅದನ್ನು ಇನ್ನು ಹೇಗೆ ಹಾಡಿ, ಮನದಲ್ಲಿರುವ ಸುಂದರ ಚಿತ್ರವನ್ನು ಮಸುಕಾಗಿಸುತ್ತಾರೋ ಎಂದು ನನಗೆ ಅಳುಕಿತ್ತು. ಇಲ್ಲ! ಹಾಗೇನೂ ಆಗಲಿಲ್ಲ. ಶ್ರೀನಿವಾಸ ಜೋಷಿಯವರು ಹಾಡುತ್ತಿದ್ದರೆ ಮನದಲ್ಲಿ ಭೀಮಸೇನ ಜೋಷಿಯವರೇ ರೂಪತಳೆದುಕೊಳ್ಳುತ್ತಿದ್ದರು. ತಂದೆಯಿಂದ ಮಗನ ಹುಟ್ಟು, ಮಗನ ಮೂಲಕ ತಂದೆ ಇಲ್ಲಿ ಮರುಹುಟ್ಟು ಪಡೆದುಕೊಳ್ಳುತ್ತಿರುವ ಈ ಅದ್ಭುತಕ್ಕೆ ಬೆರಗಾದೆ! ಅವಿನಾಶ್ ಡಿಘೆಯವರ ಹಾರ್ಮೋನಿಯಂ, ಪ್ರಶಾಂತ್ ಪಾಂಡವ್ ಅವರ ತಬಲವಾದನ, ಶ್ರೀನಿವಾಸ್ ಅವರ ಸಂಗೀತದ ಮೆರುಗನ್ನು ನಿಸ್ಸಂಶಯವಾಗಿ ಹೆಚ್ಚಿಸಿದ್ದವು.
ಸಂಗೀತದ ನಂತರ, ಭೀಮಸೇನ ಜೋಷಿಯವರ ಬದುಕಿನ ಅಪರೂಪದ ಕ್ಷಣಗಳನ್ನು ಸೆರೆಹಿಡಿದಿದ್ದ ‘ಕಿರುಚಿತ್ರ’ವನ್ನು ಪ್ರದರ್ಶಿಸಲಾಯಿತು. ಅದರಲ್ಲಿ, ಭೀಮಸೇನ ಜೋಷಿಯವರು ಒಂದು ವರ್ಷದ ಪುಟ್ಟ ಮಗುವನ್ನು ಮುದ್ದಾಡುವ, ಆಟವಾಡುವ ದೃಶ್ಯವೊಂದು ಬಂತು. ಅದನ್ನೇ ನೋಡುತ್ತಿದ್ದ ಶ್ರೀನಿವಾಸ ಜೋಷಿಯವರು ತಕ್ಷಣ ಹಿಂತಿರುಗಿ ನಮ್ಮೆಲ್ಲರತ್ತ ನೋಡಿ ‘ಅದು ನಾನೇ!’ ಎಂದು ನಕ್ಕರು. ಕಣ್ಣುಗಳಲ್ಲಿ ಪಿತೃವಾತ್ಸಲ್ಯದ ಒಂದು ಸುಂದರ ನೆನಪಿತ್ತು.
ಸುಂದರ ಸಂಜೆ, ಸೊಗಸಾದ ಔತಣ, ಸಂಗೀತಪ್ರಿಯರೊಡನೆ ಸಂವಾದ! ಬದುಕಿನ ಸಾರ್ಥಕ್ಯಕ್ಕೆ ಸಾಲದೇ?
ಕಾರ್ಯಕ್ರಮದ ವಿವರಗಳನ್ನು ಬಹಳ ಚೆನ್ನಾಗಿ ಮತ್ತು ಅಚ್ಚು ಕಟ್ಟಾಗಿ ವಿವರಿಸಿದ್ದೀರ. ವಂದನೆಗಳು
ಶ್ರೀನಿವಾಸ್ ಅವರೇ, ಧನ್ಯವಾದಗಳು.