ಅಂಗಡಿಯಿಂದ ಕೊಂಡುತಂದಿದ್ದ ದಿನಸಿಯನ್ನು ಕಾರಿನಿಂದ ಒಳತಂದಿಟ್ಟು, ಕುಡಿಯಲೆಂದು ಲೋಟಕ್ಕೆ ನೀರು ತುಂಬಿಸುತ್ತಿದ್ದಾಗಲೇ ಬಾಗಿಲ ಕರೆಘಂಟೆಯ ಸದ್ದು. ಫೋನ್ ಮಾಡಿ ಮುಂಚಿತವಾಗಿ ತಿಳಿಸದೆ, ನಾವಾಗಿ ಕರೆಯದೆ, ಯಾರ ಮನೆಗೆ ಯಾರೂ ಬಾರದ ಈ ದೇಶದಲ್ಲಿ, ಇದ್ದಕ್ಕಿದ್ದಂತೆ ಬಡಿದುಕೊಳ್ಳುವ ಕರೆಘಂಟೆಯ ಸದ್ದು ನನ್ನನ್ನು ಬೆಚ್ಚಿಸುತ್ತದೆ. ಫೆಡೆಕ್ಸ್‌ನವನು ಯಾವುದೋ ಪ್ಯಾಕೇಜು ತಂದಿದ್ದು, ಸಹಿಗಾಗಿ ಕಾದಿರಬಹುದೆಂದೆಣಿಸಿ ಬಾಗಿಲಿನ ಮಾಯಾಕಿಂಡಿಯಲ್ಲಿ ಇಣುಕಿದೆ. ಸಮವಸ್ತ್ರ ತೊಟ್ಟ ಕೊರಿಯರಣ್ಣನ ನಿರೀಕ್ಷೆಯಲ್ಲಿದ್ದ ನನಗೆ ಕಂಡಿದ್ದು ಮುಳ್ಳಿನ ಮೇಲೆ ನಿಂತಿದ್ದಂತೆ, ಚಡಪಡಿಸುತ್ತಾ ನಿಂತಿದ್ದ ಹೆಂಗಸಿನ ಮುಖ.
ಅವಳ ಮುಖಚರ್ಯೆ ಭಾರತೀಯತೆಯನ್ನು ಸಾರಿದರೂ ನನ್ನ ಪರಿಚಿತಳಂತೂ ಅಲ್ಲ! ಇವಳಾರಿರಬಹುದು? ಈ ಹೊತ್ತಿನಲ್ಲಿ ನನ್ನಲ್ಲೇನು ಕೆಲಸ? ಬಾಗಿಲು ತೆರೆಯಲೇ? ಬೇಡವೇ? ಅಪರಿಚಿತರಿಗೆ ಬಾಗಿಲು ತೆರೆದು ಅಪಾಯವನ್ನು ಆಹ್ವಾನಿಸಿಕೊಂಡವರ- ಅಲ್ಲಿ ಇಲ್ಲಿ ಓದಿದ, ಕೇಳಿದ ಘಟನೆಗಳೆಲ್ಲಾ ನೆನಪಾಗಿ ಕೈ ಚಿಲುಕದತ್ತ ಸರಿಯಲು ಅನುಮಾನಿಸಿತು. ಕ್ಷಣವೊಂದು ಯುಗವಾದಂತೆ ಚಡಪಡಿಕೆಯಲ್ಲಿದ್ದ ಹೆಂಗಸು ಮತ್ತೊಮ್ಮೆ ಕರೆಘಂಟೆ ಒತ್ತಿದಳು. ಯೋಚನೆಗಳನ್ನು ತಳ್ಳಿ ಬಾಗಿಲು ತೆರೆದೆ.
ಅವಳು ಸರಕ್ಕನೆ ನನ್ನನ್ನು ಸರಿಸಿ ಒಳಬಂದಿದ್ದು ನನ್ನಲ್ಲಿ ಮತ್ತಷ್ಟು ಅನುಮಾನಗಳನ್ನು ಹುಟ್ಟುಹಾಕಿತು. ನನ್ನ ಮಾತಿಗೆ ಕಾಯದೆ ಆತುರದಿಂದ ಅವಳು ತನ್ನ ಪರಿಚಯ ಮಾಡಿಕೊಂಡಳು. ಅವಳ ಮನೆ ಇರುವುದು ನನ್ನ ನೆರೆಹೊರೆಯಲ್ಲಿಯೇ ಎಂದಳು. ತನ್ನ ಮನೆ ನಂಬರ್ ಹೇಳಿದಳು. ಆ ಮನೆ ನಾನು ನಿತ್ಯ ಕಾರೋಡಿಸಿಕೊಂಡು ಹೋಗಿಬರುವ ಹಾದಿಯಲ್ಲಿಯೇ ಇರುವುದೆಂಬುದು ನನ್ನರಿವಿಗೆ ಹೊಳೆಯಿತು. ಆ ಮನೆಯ ಎದುರು ಆಗೀಗ ಆಕೆಯನ್ನು ಕಾರಿನ ಕಿಟಕಿಯಿಂದ ಅಸ್ಪಷ್ಟವಾಗಿ ಕಂಡದ್ದೂ ನೆನಪಾಗಿ ಆತಂಕ ಮರೆಯಾಗಿ ನಿಂತೇ ಇದ್ದ ಅವಳನ್ನು ಕುಳ್ಳಿರಿಸಿದೆ. ಮುಳ್ಳಿನ ಮೇಲೆ ಕೂತಂತೆ ತಲ್ಲಣಿಸುತ್ತಿದ್ದ ಅವಳು, ‘ನಿನ್ನಿಂದ ಒಂದು ಚಿಕ್ಕ ಸಹಾಯವಾಗಬೇಕು? ದಯವಿಟ್ಟು ಮಾಡುತ್ತೀಯಾ?…’ ಎಂದಳು. ಇದು ನನ್ನಿಂದ ಏನೋ ಪಡೆಯಲು, ಬಹುಶಃ ಹಣಕಾಸಿನ ನೆರವಿಗೆ ಇದು ಪೀಠಿಕೆ ಎಂದುಕೊಳ್ಳುತ್ತಾ, ‘ನನಗೆ ಕೆಲಸವಿದೆ… ಅದೇನು ಬೇಗ ಹೇಳು…’ ಎಂದೆ, ನಿರಾಸಕ್ತಿಯ ದನಿಯಲ್ಲಿ.
ಅವಳು ತನ್ನ ಕೈಚೀಲದಿಂದ ನೂರರ, ಐವತ್ತರ ನಾಲ್ಕಾರು ಡಾಲರು ನೋಟುಗಳನ್ನು ತೆರೆದು ನನ್ನ ಮುಂದಿಟ್ಟಳು. ನಾನು ಆಶ್ಚರ್ಯದಿಂದ ‘ಈ ಹಣವನ್ನು ನನಗೇಕೆ ಕೊಡುತ್ತಿದ್ದೀಯಾ?’ ಕೇಳಿದೆ. ‘ಈ ಹಣ ನಿನಗಲ್ಲ. ಇದನ್ನು ನೀನು ಹೇಗಾದರೂ ಮಾಡಿ ನನ್ನ ಮಕ್ಕಳಿಗೆ ತಲುಪಿಸಬೇಕು. ನನ್ನ ಹಿರಿಯ ಮಗನೂ, ನಿನ್ನ ಮಗನೂ ಒಂದೇ ತರಗತಿಯಲ್ಲಿಯೇ ಓದುತ್ತಿದ್ದಾರೆಂದು ನನಗೆ ಗೊತ್ತಿದೆ. ಹಾಗಾಗಿ ನಿನ್ನಿಂದ ಈ ಕೆಲಸ ಈ ಸಾಧ್ಯವೆಂದು ಬಂದಿದ್ದೇನೆ.’ ಎಂದು ತನ್ನ ಮಗನ ಹೆಸರು, ಚಹರೆಗಳನ್ನು ಹೇಳಿ ದೈನ್ಯದಿಂದ ಕುಳಿತಳು. ‘ನಿನ್ನ ಮಗನಿಗೆ ನೀನೇ ಕೊಡಬಹುದಲ್ಲ? ನಾನೇಕೆ?’ ನನ್ನಲ್ಲಿ ತುಂಬಿ ತುಳುಕುತ್ತಿದ್ದ ಪ್ರಶ್ನೆಗಳು…
‘ನಾನು ಈಗ ಆ ಮನೆಯಲ್ಲಿಲ್ಲ. ನನ್ನ ಗಂಡ ಮಕ್ಕಳನ್ನು ಮಾತ್ರ ಮನೆಯಲ್ಲಿಟ್ಟುಕೊಂಡು ನನ್ನನ್ನು ಮನೆಯಿಂದ ಹೊರಹಾಕಿದ್ದಾನೆ. ಅದೊಂದು ದೊಡ್ಡ ಕಥೆ. ಮತ್ತೆಂದಾದರೂ ನಿನ್ನ-ನನ್ನ ಭೇಟಿಯಾದರೆ ಆಗ ಹೇಳುತ್ತೇನೆ. ಸದ್ಯಕ್ಕೆ ನಾನು ಗೆಳತಿಯೊಬ್ಬಳ ಮನೆಯಲ್ಲಿದ್ದೇನೆ. ಅವಳ ನೆರವಿನಿಂದ ರೆಸ್ಟೊರೆಂಟೊಂದರಲ್ಲಿ ಕೆಲಸ ಸಿಕ್ಕಿದ್ದು, ಅಲ್ಲಿ ದುಡಿದು ಉಳಿಸಿದ ಹಣವನ್ನು ನನ್ನ ಮಕ್ಕಳಿಗೆ ತಲುಪಿಸಬೇಕೆನ್ನಿಸಿತು. ನನ್ನ ಮನೆಯ ಮುಂದೆಯೇ ಹಾದುಬಂದೆ, ಗಂಡನ ಕಾರು ಕಾಣಿಸಿತು. ಹಾಗಾಗಿ ಮಕ್ಕಳನ್ನು ನೋಡಲು ಸಾಧ್ಯವಾಗಲಿಲ್ಲ. ನಾನು ಹೆಚ್ಚು ಹೊತ್ತು ಇಲ್ಲಿ ಇರುವಂತಿಲ್ಲ ; ಇದ್ದರೆ ನೀನೂ ತೊಂದರೆಯಲ್ಲಿ ಸಿಲುಕುತ್ತೀ. ನನಗೆ ಸಹಾಯ ಮಾಡು, ನಿನ್ನನ್ನು ನಂಬಿದ್ದೇನೆ…’ ಎಂದು ನನ್ನ ಕೈಯನ್ನೊಮ್ಮೆ ಮೆಲ್ಲನೆ ಒತ್ತಿ, ಸುರಿಯುತ್ತಿದ್ದ ಕಣ್ಣೀರನ್ನು ತೊಡೆದುಕೊಳ್ಳಲೂ ಪುರಸೊತ್ತಿಲ್ಲದವಳಂತೆ, ತೆರೆದೇ ಇದ್ದ ಬಾಗಿಲಿನಿಂದೋಡಿ ಮರೆಯಾದಳು. ಬಿರುಬಿಸಿಲಿನ ಈ ಮಧ್ಯಾಹ್ನದಲ್ಲಿ ನಾನು ಕುಳಿತೇ ಕನಸು ಕಾಣುತ್ತಿದ್ದೇನೆಯೇ? ಎಂದುಕೊಂಡೆ : ನನ್ನ ಮುಂದಿದ್ದ ಡಾಲರು ನೋಟುಗಳು ಅಲ್ಲವೆಂದವು.
***
(`Vijaya Next’ ಪತ್ರಿಕೆಯ ‘ಅವಳ ಡೈರಿ’ ಅಂಕಣದಲ್ಲಿ ಪ್ರಕಟಿತ.)
ಯಾಕೋ ಮನಸ್ಸು ವಿಹ್ವಳವಾಯಿತು. 🙁
ಇಂತಹ ಅಸಹಾಯಕತೆ ಯಾರಿಗೂ ಬರದಿರಲಿ,ದೇವರೆ!
ಕಾಕಾ, ಹೌದು, ಇಂತಹ ಅಸಹಾಯಕತೆ ಯಾರಿಗೂ ಬರದಿರಲಿ,ದೇವರೆ! ನನ್ನ ಪ್ರಾರ್ಥನೆಯೂ ಅದೇ!
ಬದರಿ, ನನಗೂ ಹಾಗೆ ಅನ್ನಿಸಿತು. ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಏನು ಮಾಡೋದು ತ್ರಿವೇಣಕ್ಕ.. ಅಸಹಾಯಕತೆ. 🙁