“ಮಯೂ(yU)ರ”ದಲ್ಲಿ ಪ್ರಕಟಿತ ಹನಿಗವನಗಳು
ತಿದ್ದುಪಡಿ
ಮಗು,
ಸರಿಯಾಗಿ ಓದಿ ನೋಡು-
ಈ ಪ್ರಪಂಚದಲ್ಲಿರುವ
ವಿಸ್ಮಯಗಳು ಏಳೇ ಏಳಲ್ಲ
ನಿನ್ನನ್ನೂ ಸೇರಿಸಿಕೊಂಡು
ಅಂತಹ ಆನಂದದ ಅದ್ಭುತಗಳು
ಎಂಟಿರಬೇಕು!
***
ಕೋರಿಕೆ
ನಲ್ಲಾ,
ನನ್ನ ಅಂತರಂಗದ
ಮೃದಂಗವಾದನಕ್ಕೆ
ನೀನು ತಲೆದೂಗಿ
ದನಿಗೂಡದಿದ್ದರೂ ಬೇಡ,
ಕಿವುಡಾಗದಿದ್ದರೆ ಸಾಕು
***
ಹೋಲಿಕೆ
ಅವನಿಗೆ
ನಮ್ಮಿಬ್ಬರ ಪ್ರೀತಿಗೊಂದು
ಸುಂದರ ಹೋಲಿಕೆ ಕೊಡು
ನೋಡೋಣ ಎಂದೆ-
ಅವನಾದರೋ
ನನ್ನ ಹೆರಳ ಬಿಳಿಗುಲಾಬಿಯ ಒಮ್ಮೆ
ನವಿರಾಗಿ ಮುದ್ದಿಸಿ
ನಕ್ಕು ಬಿಟ್ಟ.
***
ಕನ್ನಡಿ
ಇನಿಯಾ,
ನನ್ನ ಕಣ್ಣುಗಳು
ವಿಕಸಿತ ಕಮಲವಲ್ಲ
ಪ್ರಶಾಂತ ತಿಳಿಗೊಳವಲ್ಲ
ಮಿನುಗುವ ನಕ್ಷತ್ರವಲ್ಲ
ಫಳಗುಟ್ಟುವ ಮೀನೂ ಅಲ್ಲ
ಅದು ಕೇವಲ-
ನಿನ್ನೊಲವ ಪ್ರತಿಫಲಿಪ
ಕನ್ನಡಿ ಮಾತ್ರ!
***