ರಚನೆ – ಕನಕದಾಸರು
ದೇವಿ ನಮ್ಮ ದ್ಯಾವರು ಬಂದರು
ಬನ್ನಿರೇ ನೋಡಬನ್ನಿರೇ ||ಪಲ್ಲವಿ||
ಕೆಂಗಣ್ಣ ಮೀನನಾಗಿ ನಮ್ಮ ರಂಗ
ಗುಂಗಾಡಿ ಸೋಮನ್ನ ಕೊಂದಾನ್ಮ್ಯ
ಗುಂಗಾಡಿ ಸೋಮನ್ನ ಕೊಂದು ವೇದವ
ಬಂಗಾರದೊಡಲನಿಗಿತ್ತಾನ್ಮ್ಯ
ದೊಡ್ಡ ಮಡುವಿನೊಳಗೆ ನಮ್ಮ ರಂಗ
ಗುಡ್ಡವ ಹೊತ್ತುಕೊಂಡು ನಿಂತಾನ್ಮ್ಯ
ಗುಡ್ಡವ ಹೊತ್ತುಕೊಂಡು ನಿಂತು
ಸುರರನ್ನು ದೊಡ್ಡವರನ್ನಾಗಿ ಮಾಡಾನ್ಮ್ಯ
ಚೆನ್ನ ಕಾಡಿನ ಹಂದಿಯಾಗಿ ನಮ್ಮ ರಂಗ
ಚಿನ್ನದ ಕಣ್ಣನ ಕೊಂದಾನ್ಮ್ನ್ಯ
ಚಿನ್ನದ ಕಣ್ಣನ ಕೊಂದು ಭೂಮಿಯ
ವನ್ನಜಸಂಭವಗಿತ್ತಾನ್ಮ್ಯ
ಸಿಟ್ಟಿಲಿ ಸಿಂಹನಾಗಿ ನಮ್ಮರಂಗ
ಹೊಟ್ಟೆಯ ಕರುಳ ಬಗೆದಾನ್ಮ್ಯ
ಹೊಟ್ಟೆಯ ಕರುಳ ಹಾರವ ಮಾಡಿಕೊಂಡು
ಪುಟ್ಟಗೆ ಪಟ್ಟವ ಕಟ್ಟಾನ್ಮ್ಯ
ಹುಡುಗ ಹಾರುವನಾಗಿ ನಮ್ಮ ರಂಗ
ಬೆಡಗಿಲಿ ಮುಗಿಲಿಗೆ ಬೆಳೆದಾನ್ಮ್ಯ
ಬೆಡಗಿಲಿ ಮುಗಿಲಿಗೆ ಬೆಳೆದು ಬಲಿಯನ್ನು
ಅಡಿಯಿಂದ ಪಾತಾಳಕ್ಕೊತ್ಯಾನ್ಮ್ಯ
ತಾಯ ಮಾತನು ಕೇಳಿ ಸಾಸಿರ ತೋಳಿನ
ಆವಿನ ಕಳ್ಳನ ಕೊಂದಾನ್ಮ್ಯ
ಆವಿನ ಕಳ್ಳನ ಕೊಂದು
ಭೂಮಿಯ ಅವನೀಸುರರಿತ್ತಾನ್ಮ್ಯ
ಪಿಂಗಳ ಕಣ್ಣಿನ ಮಂಗಗಳ ಕೂಡಿ
ಛಂಗನೆ ಲಂಕೆಗೆ ಪೋದಾನ್ಮ್ಯ
ಛಂಗನೆ ಲಂಕೆಗೆ ಪೋಗಿ ನಮ್ಮ ರಂಗ
ಹೆಂಗಸು ಕಳ್ಳನ ಕೊಂದಾನ್ಮ್ಯ
ಕರಿಯ ಹೊಳೆಯಲಿ ತುರುಗಳ ಕಾಯುತ್ತಾ
ಉರಗನ ಮಡುವ ಧುಮುಕ್ಯಾನ್ಮ್ಯ
ಉರಗನ ಹೆಡೆ ಮೇಲೆ ಹಾರಾರಿ ಕುಣೀವಾಗ
ವರವ ನಾರಿಯರಿಗೆ ಕೊಟ್ಟಾನ್ಮ್ಯ
ಕಂಡಕಂಡಲ್ಲಿ ಕುಂಡೆಯ ಬಿಟ್ಟುಕೊಂಡು
ಭಂಡತನದಲಿ ತಿರುಗಾನ್ಮ್ಯ
ಕಂಡಕಂಡಲ್ಲಿ ತಿರುಗಿ ತ್ರಿಪುರರ
ಹೆಂಡಿರನ್ನೆಲ್ಲಾ ಕೆಡಿಸಾನ್ಮ್ಯ
ಚೆಲ್ವ ಹೆಂಡತಿಯ ಕುದುರೆಯ ಮಾಡಿ
ಒಳ್ಳೆಯ ರಾಹುತನಾದಾನ್ಯ್ಮ
ಒಳ್ಳೆಯ ರಾಹುತನಾಗಿ ಅಸುರರ
ಡೊಳ್ಳು ಹೊಟ್ಟೆಯ ಮೇಲೆ ಒದ್ದಾನ್ಮ್ಯ
ಡೊಳ್ಳಿನ ಮ್ಯಾಲ್ ಕೈಯ ಬರಮಪ್ಪ ಹಾಕ್ಯಾನು
ತಾಳವ ಶಿವಪ್ಪ ತಟ್ಯಾನ್ಮ
ಒಳ್ಳೊಳ್ಳೆ ಪದಗಳ ಹನುಮಪ್ಪ ಹಾಡ್ಯಾನು
ಚೆಲುವ `ಕನಕಪ್ಪ’ ಕುಣಿದಾನ್ಮ್ಯ