Jogula padagalu – ಕನ್ನಡ ಜೋಗುಳ ಪದಗಳು

ಯಾಕಳುವೆ ಎಲೆರಂಗ ಬೇಕಾದ್ದು ನಿನಗೀವೆ
ನಾಕೆಮ್ಮೆ ಕರೆದ ನೊರೆ ಹಾಲು| ಸಕ್ಕರೆ
ನೀ ಕೇಳಿದಾಗ ಕೊಡುವೇನು||

ಯಾತಕಳುತಾನೆಂದು ಎಲ್ಲಾರು ಕೇಳ್ಯಾರು
ಕಾಯದ ಹಾಲ ಕೆನೆ ಬೇಡಿ| ಕಂದಯ್ಯ
ಕಾಡಿ ಕೈಬಿಟ್ಟು ಇಳಿಯಾನು||

ಅಳುವ ಕಂದನ ತುಟಿಯು ಹವಳದ ಕುಡಿಹಂಗೆ
ಕುಡಿಹುಬ್ಬು ಬೇವಿನೆಸಳಂಗೆ| ಕಣ್ಣೋಟ
ಶಿವನ ಕೈಯಲಗು ಹೊಳೆದಂತೆ||

ಅತ್ತರೆ ಅಳಲವ್ವ ಈ ಕೂಸು ನನಗಿರಲಿ
ಕೆಟ್ಟರೆ ಕೆಡಲಿ ಮನೆಗೆಲಸ| ಕಂದನಂತ
ಮಕ್ಕಳಿರಲವ್ವ ಮನೆತುಂಬ||

ಜೋಗೂಳ ಹಾಡಿದರೆ ಆಗಲೇ ಕೇಳ್ಯಾನು
ಹಾಲ ಹಂಬಲವ ಮರೆತಾನು| ಕಂದಂಗೆ
ಜೋಗೂಳದಾಗೆ ಅತಿಮುದ್ದು||

ಅತ್ತು ಕಾಡುವನಲ್ಲ ಮತ್ತೆ ಬೇಡುವನಲ್ಲ
ಎತ್ತಿಕೊಳ್ಳೆಂಬ ಹಟವಿಲ್ಲ| ನಿನ್ನಂತ
ಹತ್ತು ಮಕ್ಕಳೂ ಇರಬಹುದು||

ಆಡಿ ಬಾ ಎನ್ನ ಕಂದ ಅಂಗಾಲ ತೊಳೆದೇನ
ತೆಂಗಿನ ಕಾಯಿ ತಿಳಿನೀರ| ತಕ್ಕೊಂಡು
ಬಂಗಾರದ ಮೊರೆ ತೊಳೆದೇನ||

ಕೂಸು ಇದ್ದ ಮನೆಗೆ ಬೀಸಣಿಗೆ ಯಾತಕೆ
ಕೂಸು ಕಂದಯ್ಯ ಒಳ ಹೊರಗ| ಆಡಿದರೆ
ಬೀಸಣಿಗೆ ಗಾಳಿ ಸುಳಿದಾವ||

ಹಾಲ್ಬೇಡಿ ಅತ್ತಾನ ಕೋಲಬೇಡಿ ಕುಣದಾನ
ಮೊಸರ್ಬೇಡಿ ಕೆಸರ ತುಳದಾನ|
ನನ ಕಂದನ ಕುಶಲಾದ ಗೆಜ್ಜಿ ಕೆಸರಾಯ್ತು||

ಅತ್ತರ ಅಳಲವ್ವ ಈ ಮುತ್ತ ನನಗಿರಲಿ
ಕೆಟ್ಟರ ಕೆಡಲಿ ಮನಿಗೆಲಸ |
ಮಕ್ಕಲಿರಲೆವ್ವ ಮನಿಯಾಗ||

ಅತ್ತು ಕಾಡವನಲ್ಲ ಮತ್ತೆ ಬೇಡವನಲ್ಲ
ಎತ್ತಿಕೋ ಎಂಬ ಹಟವಿಲ್ಲ,ಕಂದಮ್ಮ ನಿನ್ನಂಥ
ಹತ್ತೂ ಮಕ್ಕಳು ಇರಬಹುದು||

ಯಾತರ್ಯಾತರ ಗಾಳಿ ಎಳೆಯ ತೋಟದ ಗಾಳಿ
ಸುತ್ತಲೂ ಗಾಳಿ ಸುಳಿಗಾಳಿ | ನನ ಕಂದ
ನಿನ್ನ ತೊಟ್ಟಿಲ ಗಾಳಿ ಮನೆತುಂಬ||