ಕವಿ – ಕೆ. ಎಸ್ ನಿಸಾರ್ ಅಹಮದ್

ಕನ್ನಡವೆಂದರೆ ಬರಿ ನುಡಿಯಲ್ಲ,
ಹಿರಿದಿದೆ ಅದರರ್ಥ ;
ಜಲವೆಂದರೆ ಕೇವಲ ನೀರಲ್ಲ.
ಅದು ಪಾವನ ತೀರ್ಥ.

ಕನ್ನಡವೆಂದರೆ ಬರಿ ನಾಡಲ್ಲ ;
ಭೂಪಟ, ಗೆರೆ, ಚುಕ್ಕೆ ;
ಮರವೆಂದರೆ ಬರಿ ಕಟ್ಟಿಗೆಯೆ?
ಶ್ರೀಗಂಧದ ಚಕ್ಕೆ.

ಕನ್ನಡ ಬರಿ ಕರ್ನಾಟಕವಲ್ಲ
ಅಸೀಮ, ಅದು ಅದಿಗಂತ ;
ದೇವರು ಕೇವಲ ವಿಗ್ರಹವಲ್ಲ,
ಅಂತರ್ಭಾವ ಅನಂತ.

ಕನ್ನಡವೆಂದರೆ ಜನಜಂಗುಳಿಯಲ್ಲ
ಜೀವನ ಶೈಲಿ, ವಿಧಾನ ;
ವಾಯುವೆಂದರೆ ಬರಿ ಹವೆಯೇ ಅಲ್ಲ :
ಉಸಿರದು, ಪಂಚಪ್ರಾಣ.

ಕನ್ನಡವಲ್ಲ ತಿಂಗಳು ನಡೆಸುವ
ಗುಲ್ಲಿನ ಕಾಮನಬಿಲ್ಲು ;
ರವಿ ಶಶಿ ತಾರೆಯ ನಿತ್ಯೋತ್ಸವವದು,
ಸರಸತಿ ವೀಣೆಯ ಸೊಲ್ಲು.

2 thoughts on “ಕನ್ನಡವೆಂದರೆ….”

  1. ತ್ರಿವೇಣಿ,
    ನಿಸಾರ ಅಹಮದರ ಸುಂದರ ಗೀತೆಯನ್ನು ನೀಡಿದ್ದಕ್ಕಾಗಿ ನಿಮಗೆ ಧನ್ಯವಾದಗಳು.

  2. ಕನ್ನಡದ ಕವಿ ನಿಸಾರ್ ಮಾಸ್ಟರ ಕವನ ಒದುವುದೇ ನಿತ್ಯೊತ್ಸವ.
    ನನ್ನ ಎನ್ ಸಿ. ಸಿ.ಗುರುವಿಗೆ ( ೧೯೫೯ – ೬೦) ನಮನ.

    regards
    Pejathaya

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.