ಬಾಳೆಂಬ ಬಣ್ಣದ ಬುಗುರಿ

ಸುದೀಪ ಮನೆ ತಲುಪುವುದಕ್ಕೂ, ಸೀತಾಬಾಯಿ,ಕನ್ನಿಕಾ ಆಟೊದಿಂದಿಳಿಯುವುದಕ್ಕೂ ಸರಿಯಾಯಿತು. ಸದ್ಯ, ಅಮ್ಮನಿಂದ ಬೈಸಿಕೊಳ್ಳುವುದು ತಪ್ಪಿಸಿಕೊಳ್ಳುವುದು ತಪ್ಪಿತು ಅಂದುಕೊಂಡ ಸುದೀಪ. ಬೀಗ ತೆರೆದು ಲಗ್ಗೇಜುಗಳನ್ನು ಹೊತ್ತು ಒಳಸಾಗಿಸಿದ. ಕನ್ನಿಕಾಳು ಸುದೀಪನಿಗೆ ನೆರವಾದಳು. “ಪ್ರಯಾಣ ಸುಖವಾಗಿತ್ತೇನೇ ಕುನ್ನಿಕಾ?” ಎಂದು ಅವಳನ್ನು ರೇಗಿಸಲು ಮರೆಯಲಿಲ್ಲ ಸುದೀಪ.

ಕಾಫಿ ಬೆರೆಸುತ್ತಿದ್ದ ಸೀತಾಬಾಯಿಯ ಮನಸ್ಸಿನಲ್ಲಿ ಕನಸುಗಳ ಮೆರವಣಿಗೆ! ಈ ಬಾರಿ ಸುದೀಪನಿಂದ ಮದುವೆಗೆ ಒಪ್ಪಿಗೆ ಪಡೆಯಲೇಬೇಕು ಎಂಬ ನಿರ್ಧಾರದಿಂದಲೇ ಕನ್ನಿಕಾಳೊಡನೆ ಬೆಂಗಳೂರಿಗೆ ಹೊರಟು ಬಂದಿದ್ದರು.

ಮರುದಿನ ಕನ್ನಿಕಾಳ ತರಬೇತಿಯ ಮೊದಲ ದಿನ. ಅವಳನ್ನು ತರಬೇತಿ ಕಛೇರಿಯಲ್ಲಿ ಬಿಟ್ಟು ಬರಲು ಅಮ್ಮನ ಅಪ್ಪಣೆಯಾಯಿತು. ಕೇಳಿಸಿಕೊಂಡ ಕನ್ನಿಕಾಳ ಮುಖ ಹೊಸದಾಗಿ ಅರಳುತ್ತಿರುವ ಕೆಂಗುಲಾಬಿ. ಮುಜುಗರವಾದರೂ ಮನಸ್ಸಿನಲ್ಲೇ ಲೆಕ್ಕಾಚಾರ ಹಾಕಿದ ಸುದೀಪ. ಅವಳನ್ನು ಅಲ್ಲಿ ಬಿಟ್ಟು ಬಂದು ಅಮ್ಮನ ಜೊತೆ ಇಂದು ಕಳೆಯುವುದು. ತನ್ನ ಮನದಲ್ಲಿರುವುದನ್ನು ಅಮ್ಮನಿಗೆ ನೇರವಾಗಿ ತಿಳಿಸುವುದು. ಆಮೇಲೆ, ಅದೇನಾಗುತ್ತೋ ನೋಡಿಕೊಳ್ಳೋಣ…. ಅಂದುಕೊಂಡ. ಸುನಯನಳ ಜೊತೆ ಭೇಟಿ ಇದ್ದದ್ದು ಸಂಜೆಗೆ. ಅಷ್ಟರಲ್ಲಿ ಅಮ್ಮನಿಗೆ ತನ್ನ ನಿಲುವು ತಿಳಿಸಬೇಕು. ಸಂಜೆಗೆ ಅವಳನ್ನೇ ಇಲ್ಲಿಗೆ ಕರೆತಂದರಾಯಿತು ಎಂದೆಲ್ಲ ಮಂಡಿಗೆ ತಿಂದ, ಮನದೊಳಗೆ. ತುಂಬಾ ರುಚಿಯೆನಿಸಿತು, ಹಿತವಾಗಿತ್ತು.

ಕನ್ನಿಕಾಳನ್ನು ಹೊತ್ತ ಬೈಕ್ ರಸ್ತೆಯಲ್ಲಿ ವಾಹನದಟ್ಟಣೆಯ ನಡುವೆ ತೆವಳುತ್ತಿದ್ದರೆ, ಇವನ ಮನದ ತುಂಬಾ ಯೋಚನೆಯ ಹೊಗೆ. ಕನ್ನಿಕಾ ತನ್ನ ಬೆನ್ನಿಗೆ ಅಂಟಿದಂತೆ ಕುಳಿತದ್ದೂ ಅವನ ಗಮನಕ್ಕೆ ಬಂದಿರಲಿಲ್ಲ. ತನ್ನ ಕತ್ತಿನ ಹಿಂದೆ, ಕಿವಿಯ ಬುಡದಲ್ಲಿ ಪಿಸುಗುಡುತ್ತಿದ್ದ ಅವಳ ಬಿಸಿಯುಸಿರಿನ ಏರಿಳಿತವೂ ಅವನನ್ನು ತಟ್ಟಿರಲಿಲ್ಲ. ಅವಳ ಕಛೇರಿಯ ಮುಂದೆ ನಿಲ್ಲಿಸಿದಾಗ ಅವಳ ಮುಖ ಕುಂಬಳಕಾಯಿ ಆಗಿದ್ದದ್ದು ಮಾತ್ರ ಅವನ ಕಣ್ಣಿಗೆ ಗೋಚರಿಸಿತು. “ಈ ಬೆಂಗಳೂರಿನ ಟ್ರಾಫಿಕ್ಕೇ ಹೀಗೆ ಕಣೇ. ಹೊಂದಿಕೊಳ್ಳೋದನ್ನ ಕಲಿ. ಸಂಜೆ ಐದೂಕಾಲಿಗೆ ಮತ್ತೆ ಇಲ್ಲೇ ಹಾಜರಾಗುತ್ತೇನೆ. ಬರಲಾ?” ಅಂದು ರೊಯ್ಯನೆ ಅಲ್ಲೇ ಯೂ-ಟರ್ನ್ ಹೊಡೆದು, ಮುಖ ತಿರುಗಿಸಿ ಹೊರಟೇಬಿಟ್ಟ. ಅವಳ ಸಿಟ್ಟಿಗೂ ಧೂಳು ಮುಸುಕಿತು.

ಮನೆಗೆ ಬಂದಾಗ ಅಮ್ಮನಿಗೆ ಅಚ್ಚರಿ. ಅವರೇನೋ ಸ್ನಾನ ಮುಗಿಸಿ ಅಡುಗೆಗೆ ತಯಾರಿ ನಡೆಸಿದ್ದರು. ತಾನೂ ಪುಟ್ಟ ಅಡುಗೆಮನೆಯಲ್ಲಿ ಮಣೆ ಎಳೆದುಕೊಂಡು ಕೂತ. ಮಗ ಮಾತಿಗೆ ಜಾಡು ಹುಡುಕುತ್ತಿರುವ ಸೂಚನೆ ಸೀತಾಬಾಯಿಗೆ ಸಿಕ್ಕಿತು.
“ಏನಂದಳು ಕನ್ನಿಕಾ?” ಕೇಳಿದರು.
“ಅವಳೇನಂತಾಳೆ? ಅವಳನ್ನು ಆಫೀಸಿನಲ್ಲಿ ಬಿಟ್ಟು, ಇವತ್ತು ನಿನ್ನ ಜೊತೆ ಸುಮ್ನೆ ಮಾತಾಡ್ತಾ ಕಾಲ ಹಾಕ್ತೀನಿ ಅಂತ ಮನೆಗೇ ಬಂದೆ.”
ಮಗನ ಮೇಲೆ ಮಮತೆ ಉಕ್ಕಿತು. ಅವನ ಪುಂಡ ಕೂದಲನ್ನು ಬೆರಳುಗಳಲ್ಲಿ ನೇವರಿಸುತ್ತಾ,
“ಬೇಗ ಮದುವೆ ಆಗೋ ಅಂದ್ರೆ ಕೇಳಲ್ಲ. ಈಗ ಅಮ್ಮನ ಮುಂದೆ ಕೂತಿರೋ ಆಸೇನಾ? ಹೆಂಡ್ತಿ ಬರ್ಲಿ, ಆಮೇಲೆ ನನ್ನ ಕೇಳೋರಿಲ್ಲ, ಅಲ್ವಾ?” ಛೇಡಿಸಿದರು.
“ಹೆಂಡ್ತೀನೂ ಇಲ್ಲೇ ಕೂಡಿಸ್ಕೊಂಡು ನಿನ್ನ ಮುಂದೆ ಕೂತಿರ್ತೇನಮ್ಮ, ಅದಕ್ಕೇನು?”
“ಯಾರಪ್ಪಾ ಅಂಥ ಗುಣವಂತೆ, ನನ್ನ ಮುಂದೆ ಕೂತಿರುವಷ್ಟು ತಾಳ್ಮೆ ಇರುವವಳು?” ಮತ್ತೆ ಛೇಡಿಸಿದರು, ಕನ್ನಿಕಾಳ ಹೆಸರನ್ನು ನಿರೀಕ್ಷಿಸುತ್ತಾ.
“ಅಮ್ಮ, ನೇರವಾಗಿ ಹೇಳ್ತೇನೆ, ಕೇಳು. ಸುತ್ತು ಬಳಸಿ ಮಾತು ಬೇಡ. ಅದು ನಿನಗೂ ಹಿಡಿಸೋದಿಲ್ಲ, ನನಗ್ಗೊತ್ತು. ನಿನ್ನ ತಲೆಯಲ್ಲಿ ಕನ್ನಿಕಾ ನಿನ್ನ ಸೊಸೆ ಅಂತ ಗಾಳಿಗೋಪುರ ಕಟ್ಟಿದ್ದೀಯ, ಅದೂ ನನಗ್ಗೊತ್ತು. ಅದೆಲ್ಲ ಆಗೋದಿಲ್ಲ. ಅವಳ ಮೇಲೆ ನನಗೆ ಎಂದಿಗೂ ಆ ಭಾವನೆ ಬಂದಿರಲೇ ಇಲ್ಲ. ಎಂದಿಗೂ ಬರೋದಿಲ್ಲ. ಪಕ್ಕದ ಮನೆಯಲ್ಲಿ ಬೆಳೀತಿರೋ ನನ್ನ ತಂಗಿ ಅಂತಲೇ ನಾನು ಅವಳನ್ನ ಕಂಡಿದ್ದು. ಅಂಥವಳನ್ನು ಮದುವೆಯಾಗು ಅಂತ ಒತ್ತಾಯ ಮಾಡ್ತೀಯ?”
“ಹಾಗಂದ್ರೆ ಹೇಗೋ? ಅವಳೇ ನನ್ನ ಸೊಸೆ ಅಂದುಕೊಂಡಿದ್ದೆ. ನಮ್ಮ ಮನೆಗೆ ಚೆನ್ನಾಗಿ ಹೊಂದಿಕೊಂಡ ಹುಡುಗಿ. ನಿನ್ನಪ್ಪ ಇದ್ದಕ್ಕಿದ್ದ ಹಾಗೆ ತೀರಿಕೊಂಡಾಗ, ಆ ನಾರ್ಣಪ್ಪ ನಮಗೆ ಮಾಡಿದ ಸಹಾಯಕ್ಕೆ…”
“ಹೌದಮ್ಮ, ಅವರು ಸಹಾಯ ಮಾಡಿದ್ದಾರೆ. ಹಾಗಂತ, ನನ್ನ ತಂಗಿಯಂಥವಳನ್ನೇ ಮದುವೆಯಾಗೋದು ಸರಿಯೇ? ಅಣ್ಣನಾಗಿ ಅವಳಿಗೆ ನಾನೇ ಗಂಡು ನೋಡ್ತೇನೆ. ಅವಳ ಮದುವೆಯ ಜವಾಬ್ದಾರಿ ನನ್ನದು ಅಂತಲೇ ಹೇಳು ನಾರ್ಣಪ್ಪನವರಿಗೆ. ಆದರೆ, ನನ್ನ ಮದುವೆಯ ಕಲಶಗಿತ್ತಿ ಅವಳು, ಮದುವಣಗಿತ್ತಿಯಲ್ಲ; ಗೊತ್ತಾಯ್ತಾ?”

ಮಗನ ಖಡಾಖಂಡಿತ ಮಾತು ಕೇಳಿ ಸೀತಾಬಾಯಿ ಖಿನ್ನರಾದರು. ಅಡುಗೆ ಮುಗಿಸಿ ಉಸ್ಸೆನ್ನುತ್ತಾ ಅಲ್ಲೆಲ್ಲ ಒರಸಿದರು. ಅಮ್ಮನಲ್ಲಿದ್ದ ನಿರುತ್ಸಾಹ ಗಮನಿಸಿದ ಸುದೀಪ.
“ನಡಿಯಮ್ಮ, ದೇವಸ್ಥಾನಕ್ಕೆ ಹೋಗಿ ಬರೋಣ. ಅಲ್ಲಿ ನಿನಗೆ ನೆಮ್ಮದಿ ಸಿಗ್ತದೆ. ಬಾ”
ದೇವಸ್ಥಾನವೆಂದಿದ್ದಕ್ಕೆ ಅವನನ್ನು ಹಿಂಬಾಲಿಸಿದರು. ಬೈಕ್ ಅಮ್ಮನಿಗೆ ಹಿಡಿಸುವುದಿಲ್ಲವೆಂದು ಆಟೋ ಕರೆದ ಸುದೀಪ.

ದೇವಳದ ಜಗಲಿಯಲ್ಲಿ ಕೂತು ಮತ್ತೆ ಲೆಕ್ಕಾಚಾರ ಹಾಕತೊಡಗಿದ. ಅಮ್ಮನ ಮನದ ತುಮುಲ ಪೂರ್ತಿಯಾಗಿ ಅವನಿಗೆ ಅರ್ಥವಾಗಿತ್ತೋ ಇಲ್ಲವೋ, ಆದರೆ ಅವರಿಗೆ ಗೊಂದಲವಾಗಿರುವುದು ಅವನ ಅರಿವಿಗೆ ಬಂದಿತ್ತು. ಸೀತಾಬಾಯಿ ಮಣ-ಮಣ ಮಾಡುತ್ತಾ ಸುತ್ತು ಬರುತ್ತಿದ್ದರು. ಪ್ರತೀ ಸುತ್ತಿಗೂ ಒಂದು ನಮಸ್ಕಾರ. ಅವರ ದೈವಭಕ್ತಿ ಅವನಿಗೆ ಒಮ್ಮೆ ನಗು ತರಿಸಿತಾದರೂ ಅವರಿಗೆ ಅದರಲ್ಲೇ ಸಮಾಧಾನ ಇದೆಯೆನ್ನುವುದು ತಿಳಿದಿತ್ತು. ಸುಮ್ಮನೇ ಅವರನ್ನೇ ನೋಟದಲ್ಲಿ ಹಿಂಬಾಲಿಸುತ್ತಾ ಕುಳಿತ. ತನ್ನ ಮುಂದೆ ದಾಟಿ ಸಾಗುತ್ತಿದ್ದವರ ಪರಿವೆಯೇ ಇರಲಿಲ್ಲ ಅವನಿಗೆ. ಇವನ ಅನ್ಯಮನಸ್ಕತೆಯ ಪರಿವೆ ಅಮ್ಮನಿಗಿರಲಿಲ್ಲ. ಅಮ್ಮನ ನೆರಳಿನಂತಾಗಿದ್ದ ಅವನ ನೋಟದ ಪರಿಧಿಗೆ ಬಂದ ಒಂದು ಆಕೃತಿ ದೇವರ ಮುಂದೆ ನಿಂತದ್ದನ್ನು ಕಂಡಾಗ “ಸುನೀ…” ಅನ್ನುತ್ತಾ ಜಗಲಿಯಿಂದ ಹಾರಿದ, ಅವಳ ಪಕ್ಕದಲ್ಲಿ ನಿಂತ. ಆಕೆಯ ನೋಟದಲ್ಲೂ ಅಚ್ಚರಿಯಿತ್ತು.
“ಅರೆ, ಸುದೀಪ… ನೀನಿಲ್ಲಿ! ಈ ಹೊತ್ತಲ್ಲಿ! ಆಫೀಸ್ ಇಲ್ವಾ?”
“ಹ್ಞಾಂ! ಹ್ಞೂಂ! ಇತ್ತು… ಇಲ್ಲ… ರಜೆ ಹಾಕಿದೆ….” ಏನೇನೋ ಒದರಿ ಕೊನೆಗೆ “ಅಮ್ಮ ಬಂದಿದ್ದಾರೆ” ಅಂದ. ಅಷ್ಟರಲ್ಲಿ ಪ್ರದಕ್ಷಿಣೆ ಮುಗಿಸಿದ ಸೀತಾಬಾಯಿ ದೇವರ ಮುಂದೆ ನಮಸ್ಕರಿಸಿ ಎದ್ದು ನಿಂತರು. ಅಮ್ಮನ ಕಡೆ ತಿರುಗಿದ ಸುದೀಪ, “ಅಮ್ಮ, ಇವರು ಕುಂದಾಪುರದ ನೀಲಿಕೇರಿಯವರು, ಸುನಯನಾ” ತೊದಲಿದ.
“ನಿನ್ನ ಸ್ನೇಹಿತನ….” “ಹೌದು, ನನ್ನ ಗೆಳೆಯನ ಊರಿನವರು. ಆವತ್ತು ಹೋಗಿ ಬಂದದ್ದು ಹೇಳಿದ್ದೆನಲ್ಲ” ಅಮ್ಮನ ಅರ್ಧ ಮಾತನ್ನು ಪೂರ್ತಿಗೊಳಿಸಿದ. ಸೀತಾಬಾಯಿಯವರ ಮುಖದಲ್ಲಿ ಏನೋ ಒಂದು ಮಿಶ್ರ ಭಾವನೆ. ಸುನಯನಾ ಅದನ್ನು ಕಂಡಳೇನೋ ಅಂದುಕೊಂಡ. ಅವಳ ನೋಟ ಬೇರೆಲ್ಲೋ ಇತ್ತು, ಬಚಾವಾದಂತೆ ಅನಿಸಿತವನಿಗೆ. ಅಷ್ಟರಲ್ಲಿ ಅಮ್ಮನೇ “ಹೋಗೋಣವೇನೋ” ಅಂದು, ಸುನಯನಾ ಕಡೆ ತಿರುಗಿ “ನಿಮ್ಮ ಮನೆಯವರ ಜೊತೆ ಬಾರಮ್ಮ ಮನೆಗೆ” ಅಂದರು. ಸುನೀ ಮತ್ತು ಸುದೀಪ ನೋಟ ಹಂಚಿಕೊಂಡರು, ಅಮ್ಮನ ಕಣ್ಣಿಗೂ ಅದು ಬಿತ್ತು. ಮೌನವಾಗಿಯೇ ಹೊರನಡೆದ ಸುದೀಪ, ಅಮ್ಮನೊಡನೆ ಆಟೋ ಹತ್ತಿ ಮನೆ ಸೇರಿದ.

ತಿಂಗಳುಗಳ ನಂತರ ಅಮ್ಮನ ಕೈಯಡುಗೆಯ ಊಟ, ಆದರೂ ಯಾಕೋ ರುಚಿಸಲಿಲ್ಲ. ಅಮ್ಮ ಕೋಣೆಯಲ್ಲಿ ಅಡ್ಡಾಗಿದ್ದರೆ ಇವನಿಗೆ ಸುನೀ ಚಿಂತೆ ಹತ್ತಿತ್ತು. ಜಗಲಿಯಲ್ಲಿ ಕೂತು ರಸ್ತೆಯ ಮೇಲಿನ ಬಿಸಿಲಿನ ಝಳ ದೃಷ್ಟಿಸುತ್ತಿದ್ದ, ಮೊಬೈಲ್ ಫೋನ್ ಕಿಣಿಕಿಣಿಗುಟ್ಟಿತು. ಯಾಮಿನಿಯ ಕರೆ. ತಲ್ಲಣ, ಗೊಂದಲಗಳ ನಡುವೆಯೇ ಉತ್ತರಿಸಿದ.
“ಸುದೀಪ್, ನೀವು ನಮ್ಮನೆಗೆ ನಾಳೆ ಸಂಜೆ ಬರಬೇಕು. ಸೃಷ್ಟಿಯ ಬರ್ತ್’ಡೇ ಮಾಡ್ತಿದ್ದೇವೆ. ಖಂಡಿತಾ ಬನ್ನಿ.”
“ನೋಡ್ತೇನೆ, ಖಂಡಿತಾ ಅಂತ ಹೇಳಲ್ಲ. ಅಮ್ಮ ಬಂದಿದ್ದಾರೆ, ಊರಿಂದ.”
“ಇನ್ನೂ ಒಳ್ಳೇದಾಯ್ತು, ಅವರನ್ನೂ ಕರ್‍ಕೊಂಡ್ ಬನ್ನಿ. ಅಪ್ಪನೂ ಹೇಳ್ತಿದ್ದಾರೆ, ನೀವು ಬರಲೇಬೇಕು. ಇಲ್ಲದಿದ್ರೆ ನಮಗೆಲ್ಲ ಬೇಜಾರಾಗತ್ತೆ, ಸೃಷ್ಟಿಗೂ…”
ಪುಟಾಣಿ ಚಿನಕುರುಳಿಯ ಜೊತೆ ಕಾಲ ಕಳೆಯುವ ಕಲ್ಪನೆಯೇ ಮುದ ನೀಡಿತು, “ಸರಿ, ಬರ್ತೇವೆ” ಅಂದ.ಸಂಜೆ ಕನ್ನಿಕಾಳನ್ನು ಮನೆಗೆ ಕರೆತಂದು ಬಿಟ್ಟು ಮತ್ತೆ ಹೊರಗೆ ನಡೆದ. ಅದೇ ದೇವಸ್ಥಾನದ ಜಗಲಿಯಲ್ಲಿ ಕೂತು ಸುನಯನಾಳಿಗೆ ಕರೆ ಮಾಡಿದ. ಆಕೆಯಿಂದ ಉತ್ತರವಿಲ್ಲ. ಪದೇ ಪದೇ ಮೂರ್ನಾಲ್ಕು ಬಾರಿ ಪ್ರಯತ್ನಿಸಿ ಹತಾಶನಾದ. ಅವಳ ಗೆಳತಿಯ ಸಂಪರ್ಕವೂ ಇಲ್ಲದಿರುವುದನ್ನು ನೆನಪಿಸಿಕೊಂಡು ತನ್ನನ್ನೇ ಶಪಿಸಿಕೊಂಡ. ಆ ರಾತ್ರೆಯ ನೀರವದಲ್ಲಿ ಮನೆಯೊಳಗಿನ ಮೂರು ಜೀವಗಳಿಗೂ ಒಂದೊಂದು ಬಗೆಯ ನಿಟ್ಟುಸಿರು.

                                                                     ***

ಸಂಜೆ ಕನ್ನಿಕಾಳನ್ನು ಮನೆಗೆ ಕರೆತಂದು ಬಿಟ್ಟು ಮತ್ತೆ ಹೊರಗೆ ನಡೆದ. ಅದೇ ದೇವಸ್ಥಾನದ ಜಗಲಿಯಲ್ಲಿ ಕೂತು ಸುನಯನಾಳಿಗೆ ಕರೆ ಮಾಡಿದ. ಆಕೆಯಿಂದ ಉತ್ತರವಿಲ್ಲ. ಪದೇ ಪದೇ ಮೂರ್ನಾಲ್ಕು ಬಾರಿ ಪ್ರಯತ್ನಿಸಿ ಹತಾಶನಾದ. ಅವಳ ಗೆಳತಿಯ ಸಂಪರ್ಕವೂ ಇಲ್ಲದಿರುವುದನ್ನು ನೆನಪಿಸಿಕೊಂಡು ತನ್ನನ್ನೇ ಶಪಿಸಿಕೊಂಡ. ಆ ರಾತ್ರೆಯ ನೀರವದಲ್ಲಿ ಮನೆಯೊಳಗಿನ ಮೂರು ಜೀವಗಳಿಗೂ ಒಂದೊಂದು ಬಗೆಯ ನಿಟ್ಟುಸಿರು.

ಬೆಳಗ್ಗೆ ಕನ್ನಿಕಾಳನ್ನು ಆಫೀಸಿಗೆ ಕರೆದೊಯ್ದಾಗ ಆಕೆ ಸುದೀಪನ ಬೆನ್ನಿಗೆ ಅಂಟಲಿಲ್ಲ. ಅವಳ ಗಾಂಭೀರ್ಯದಲ್ಲಿ ಅರ್ಥವಿತ್ತು. ಸಂಜೆ ಅಮ್ಮನೂ ಕನ್ನಿಕಾಳೂ ಸಡಗರವಿಲ್ಲದೇ ತಯಾರಾದರೆ ಸುದೀಪ ಉದಾಸನಾಗಿದ್ದ. ಯಾಮಿನಿಯ ಮನೆಯ ದಾರಿ ತಿಳಿದದ್ದೇ. ನಡೆದರೆ ಸುಮಾರು ಇಪ್ಪತ್ತು ನಿಮಿಷಗಳ ಹಾದಿ. ನಡೆಯುವ ಉತ್ಸಾಹ ಇರಲಿಲ್ಲವಾಗಿ, ಆಟೋ ಹಿಡಿದ. ಮನೆಯ ಮುಂದೆ ನಿಂತಾಗ ಯಾಮಿನಿಯ ಅಪ್ಪನೇ ಗೇಟ್ ಬಳಿ ನಿಂತಿದ್ದರು, ಯಾರಿಗೋ ಕಾಯುತ್ತಿರುವಂತೆ.

“ಬನ್ನಿ, ಬನ್ನಿ ತಾಯೀ. ನೀವು ಬಂದಿದ್ದು ಸಂತೋಷ. ಬಾ ಮಗಳೇ. ಯಾಮಿನಿ ಒಳಗಿದ್ದಾಳೆ.” ಹಿಗ್ಗುತ್ತಾ ನುಡಿದರು ರಾಯರು. ಅವರ ಸರಳತೆ ಅಮ್ಮನ ಬಿಗುವನ್ನು ಒಂದಿಷ್ಟೇ ಇಷ್ಟು ಸಡಿಲಾಗಿಸಿತು. ಒಳಗೆ ಸೃಷ್ಟಿ ಯಾಮಿನಿಯ ಕೊರಳಿಗೆ ಜೋತುಬಿದ್ದು ಏನೋ ಕ್ಯಾತೆ ತೆಗೆದಿದ್ದಳು. ಸುದೀಪನನ್ನು ಕಂಡ ಕೂಡಲೇ, “ಸುದೀ ಮಾಮ. ಇದ್ಯಾರು ಅಜ್ಜಿ? ಯಾರು ಈ ಆಂಟೀ? ನಂಗೆ ಬಲೂನ್ ತಂದ್ಯಾ? ಎಲ್ಲಿ ಹಾಕ್ತೀ?” ಕೊನೆಯಿಲ್ಲದ ಪ್ರಶ್ನೆಗಳು. ಅವಳ ಮುದ್ದು ಮಾತಿಗೆ ಅಮ್ಮನ ಮುಖದ ನೆರಿಗೆಗಳು ಸಡಿಲಾದವು. ಕನ್ನಿಕಾ ಮಂಡಿಯೂರಿ ಮಗುವಿನ ಕೆನ್ನೆಗೆ ಮುತ್ತಿಟ್ಟಳು. ಯಾಮಿನಿಯ ಕಣ್ಣುಗಳಲ್ಲೆದ್ದ ಪ್ರಶ್ನೆಗೆ ಸುದೀಪ ಉತ್ತರಿಸಿದ, “ಯಾಮಿನಿ, ಇವರು ನನ್ನಮ್ಮ, ಇವಳು ತಂಗಿ, ಕನ್ನಿಕಾ…”
“ಓಹ್, ನಿಮಗೆ ತಂಗಿಯಿದ್ದದ್ದು ಗೊತ್ತೇ ಇರಲಿಲ್ಲ”
“ನಾನು ಹೇಳಿರಲೇ ಇಲ್ಲ”
ತಿಳಿನಗು ಹಗುರಾದ ನಡುಮನೆಯಲ್ಲಿ ಹರಡಿತು.

ಹೊರಗೆ ಆಟೋ ನಿಂತ ಸದ್ದಾದಾಗ ಎಲ್ಲರ ನೋಟ ಗೇಟ್ ಕಡೆ. ರಾಯರು ಸಂಭ್ರಮದಿಂದ “ಯಾಮಿನೀ” ಅಂದರು. ಪುಟ್ಟ ಹುಡುಗಿಯಂತೆ ಜಿಗಿಯುತ್ತಾ ಹೊರಗೋಡಿದ ಯಾಮಿನಿ ಆಟೋದಿಂದ ಇಳಿದ ಸ್ಫುರದ್ರೂಪಿ ತರುಣನನ್ನು ತಬ್ಬಿಕೊಂಡದ್ದು ಮಾತ್ರ ಇನ್ನೂ ನಡುಮನೆಯಲ್ಲಿದ್ದ ಇವರೆಲ್ಲರ ನೋಟಕ್ಕೆ ದಕ್ಕಿತು. ಆತನ ಹಿಂದೆಯೇ ಇಳಿದ ಸುನಯನಾಳನ್ನು ಕಂಡಾಗ ಅಮ್ಮನ ಕಣ್ಣಲ್ಲಿ ಕುತೂಹಲ, ಸುದೀಪನಲ್ಲಿ ಕೋಲಾಹಲ. ತರುಣನ ಕೈಹಿಡಿದು, ಇನ್ನೊಂದು ಕೈಯಲ್ಲಿ ಮಗಳನ್ನು ತಬ್ಬಿಹಿಡಿದು ಒಳಬರುತ್ತಿದ್ದ ಯಾಮಿನಿ ಅಪರಿಚಿತಳಂತೆ ಕಂಡಳು ಸುದೀಪನಿಗೆ. ಆ ದಿನ ರಾಯರು ತನ್ನ ಮನೆಗೆ ಬಂದು ತನ್ನಲ್ಲಿ ಹೇಳಿದ, ಕೇಳಿದ ಮಾತುಗಳ ಅರ್ಥ ಹುಡುಕಹೊರಟು ಕಣ್ಣು ಕತ್ತಲಿಟ್ಟಂತೆ ಅನಿಸಿತವನಿಗೆ. ಒಂದು ಮೂಲೆಯ ಕುರ್ಚಿಯಲ್ಲಿ ಕುಕ್ಕರಿಸಿದ.

ಎಲ್ಲರೂ ನಡುಮನೆಯಲ್ಲಿ ಸೇರಿದಾಗ ರಾಯರು ಸುದೀಪನತ್ತ ನೋಡಿದರು. ಅವನ ಗೊಂದಲ ಅರ್ಥವಾದವರಂತೆ, ಅವನ ಬಳಿ ನಡೆದರು. ಪಕ್ಕದ ಕುರ್ಚಿಯಲ್ಲಿ ಕುಳಿತು ಹೇಳಿದರು, “ನೋಡಪ್ಪಾ, ಇವನು ನನ್ನ ಮಗ, ಯಾಮಿನಿಯ ಅಣ್ಣ, ಸೃಷ್ಟಿಯ ಅಪ್ಪ, ದಿಗಂತ್. ಪುನರ್ಜನ್ಮ ಪಡೆದ ಹಾಗೆ ಮತ್ತೆ ನಗುತ್ತಾ ಈ ಮನೆಗೆ ಬಂದಿದ್ದಾನೆ. ಅದಕ್ಕೆ ಕಾರಣ ಆ ದೇವತೆ, ಸುನಯನಾ ಅಂತ. ದಿಗಂತನ ಬಾಳು ದೊಡ್ಡ ಕಥೆ. ಅದೆಲ್ಲ ಈಗ ಬೇಡ. ಸದ್ಯಕ್ಕೆ ಇಷ್ಟು ತಿಳಕೋ, ಬದುಕಲ್ಲಿ ಆಘಾತಗಳು ಬಂದಾಗ ತಡೆಯುವ ಶಕ್ತಿ ಭಗವಂತನೇ ಕೊಡಬೇಕು. ಆತ ಕೊಡಲಿಲ್ಲವಾದ್ರೆ ನನ್ನ ಮಗನ ಹಾಗೆ ನೊಂದ ಜೀವ ಏನೇನೋ ದಾರಿ ಹುಡುಕಿಕೊಳ್ಳತ್ತೆ. ಅದರ ಪರಿಣಾಮ ಸುಂದರವಾಗಿರಲ್ಲ. ನಾವೇನೋ ಅದೃಷ್ಟವಂತರು. ಸುನಯನಾ ನಮ್ಮ ಪಾಲಿನ ಸುಂದರ ದೇವತೆಯಾಗಿ ಬಂದರು, ದಿಗಂತನಿಗೆ ಜೀವನದಲ್ಲಿ ಮತ್ತೆ ಉತ್ಸಾಹ, ಲವಲವಿಕೆ ಮೂಡಿಸಿದ್ದಾರೆ….” ರಾಯರ ಮಾತುಗಳೆಲ್ಲ ಇವನ ತಲೆಯಲ್ಲಿ ಅಯೋಮಯವಾಗುತ್ತಿದ್ದವು.

ಬೆಂಗಳೂರಲ್ಲಿ ಸುನೀಯನ್ನು ಮೊದಲ ಬಾರಿ ಭೇಟಿಯಾಗಿ ಸುಮಾರು ಆರು ತಿಂಗಳೇ ಕಳೆದಿತ್ತು. ಅದಾಗಿ ಎರಡು ಬಾರಿ ಮಾತ್ರ ಆಕೆಯನ್ನು ಮುಖತಃ ಕಂಡಿದ್ದ. ಒಮ್ಮೆ ಯಾವುದೋ ತರಕಾರಿ ಅಂಗಡಿಯೆದುರು, ಮತ್ತೊಮ್ಮೆ ನಿನ್ನೆ ದೇವಸ್ಥಾನದಲ್ಲಿ, ಅಮ್ಮನ ಜೊತೆ ಹೋದಾಗ. ಈ ನಡುವೆ ಫೋನ್ ಸಂಭಾಷಣೆ ಕೂಡಾ ಅಪರೂಪಕ್ಕೊಮ್ಮೆ ಮಾತ್ರ. ಆಗಲೇ ಯಾವಾಗಲೋ ಆಕೆ ಯಾವುದೋ ಆಸ್ಪತ್ರೆಯಲ್ಲಿ ಸ್ವಯಂಸೇವಕಿಯಾಗಿ ಹೋಗುತ್ತಿರುವ ಬಗ್ಗೆ ಹೇಳಿದ್ದಳು ಅನ್ನುವುದು ಅವನ ನೆನಪಿಗೆ ಬಂತು. ತಮ್ಮಿಬ್ಬರ ಸಂಭಾಷಣೆಗಳನ್ನೆಲ್ಲ ಮೆಲುಕುಹಾಕುತ್ತಿದ್ದಂತೆ, ಆಕೆ ತನ್ನಲ್ಲಿ ಸ್ನೇಹಿತನನ್ನು ಕಂಡಿದ್ದಳು ಅನ್ನುವುದು ಅವನಿಗೇ ಸ್ಪಷ್ಟವಾಯಿತು. ತಾನೇ ಕನಸು ಕಂಡವನು. ಈ ಆರು ತಿಂಗಳುಗಳಲ್ಲಿ ಆಕೆ ತನ್ನನ್ನು ಇನಿಯನ ಸ್ಥಾನದಲ್ಲಿ ಕಂಡಿರಲಿಲ್ಲ ಅನ್ನುವುದು ಅರಿವಾಯಿತು. ಕನ್ನಿಕಾಳ ಕನಸು ತಾನು ಒಡೆದೆ, ತನ್ನ ಕನಸು ವಿಧಿಗೆ ಆಟವಾಯಿತು ಅಂದುಕೊಂಡ. ಅಮ್ಮನ ಜೊತೆ ರಾಯರು ಮಾತಾಡುತ್ತಿದ್ದುದು ಅವನ ಕಣ್ಣಿಗೆ ಬಿತ್ತು. ಏಳುವ ಶಕ್ತಿ ಇರಲಿಲ್ಲ. ಕನ್ನಿಕಾ ತಂದಿತ್ತ ಹಣ್ಣಿನ ರಸದ ಲೋಟ ಗಟಗಟನೆ ಖಾಲಿಮಾಡಿದ. ಕಿಸಕ್ಕನೆ ನಕ್ಕಳು ಕನ್ನಿಕಾ. ಅವನೊಳಗಿನ ಕೋಲಾಹಲ ಅವಳಿಗೂ ತಿಳಿಯಿತೇ? ತಕ್ಕ ಶಾಸ್ತಿಯಾಯ್ತೆಂದು ನಕ್ಕಳೇ? ಸೃಷ್ಟಿ ಸುನಯನಾಳ ತೊಡೆಯೇರಿ ಅವಳನ್ನು ಮುದ್ದುಗರೆಯುತ್ತಿತ್ತು. ಯಾರನ್ನಾದರೂ ತನಗಿಷ್ಟ ಬಂದಂತೆ ಮುದ್ದಿಸುವ ಅವಳ ಸ್ವಾತಂತ್ರ್ಯ ಇವನನ್ನು ಅಣಗಿಸಿದಂತೆ ಕಂಡಿತು.

ತಾನು ಮೆಚ್ಚಿದ ಇಬ್ಬರು ಚೆಲುವೆಯರು, ತನ್ನನ್ನು ಆರಾಧಿಸಿದ ಒಬ್ಬಳು ಸುಂದರಿ. ಮೂವರ ಚಲನವಲನಗಳನ್ನು ಗಮನಿಸುತ್ತಾ ನಿರ್ಲಿಪ್ತನಂತೆ ಕೂತಿದ್ದ ಸುದೀಪನೆಡೆಗೆ ಅಮ್ಮ ನಗುತ್ತಾ ಬಂದಾಗ, ಎಲ್ಲ ತಿಳಿದವನಂತೆ ಗೋಣು ಹಾಕಿದ. ಸೀತಾಬಾಯಿ ಮೆತ್ತಗೆ ಕೇಳಿದರು, “ಏನೋ ಮಗಾ… ದೊಡ್ಡ ಮನಸ್ಸಿನ ಹುಡುಗಿ ಯಾಮಿನಿ. ನಿನ್ನ ಆಫೀಸಿನಲ್ಲೇ ಇದಾಳಲ್ಲ, ನಿನಗೂ ಗೊತ್ತು. ಏನಂತೀಯಾ? ರಾಯರಿಗೆ ಏನು ಉತ್ತರ ಕೊಡಲಿ?” “ಒಂದರ್ಧ ಘಂಟೆ ಇರಮ್ಮ, ಈಗ ಬಂದೆ” ಅನ್ನುತ್ತಾ ಹೊರಗೋಡಿದ ಸುದೀಪ. ಕಸಿವಿಸಿಗೊಳ್ಳುವ ಸರದಿ ಮನೆಮಂದಿಗೆಲ್ಲ.

ಹೇಳಿದಂತೆ ಅರ್ಧ ಘಂಟೆಯಲ್ಲೇ ಬಂದ. ಅಮ್ಮನ ಕೈಯಲ್ಲಿ ಹೂವು, ಹಣ್ಣುಗಳ ಜೊತೆಗೆ ಒಂದು ಪೊಟ್ಟಣವನ್ನೂ ಇಡುತ್ತಾ ಹೇಳಿದ, “ಅಮ್ಮಾ, ನೀನೂ ರಾಯರೂ ಇದ್ದೀರಿ. ಸೃಷ್ಟಿಯ ಬರ್ತ್’ಡೇ ಇವತ್ತು. ಇದಕ್ಕಿಂತ ಶುಭ ದಿನ ನನಗೆ ಬೇರೆ ಇಲ್ಲ. ನೀವಿಬ್ಬರೂ ಒಪ್ಪಿದರೆ, ಯಾಮಿನಿಗೆ ಈ ಉಂಗುರ ತೊಡಿಸಿಯೇ ಬಿಡ್ತೇನೆ. ನೀವಿಬ್ಬರೂ ಹ್ಞೂಂ ಅನ್ನಿ, ಆಶೀರ್ವಾದ ಮಾಡಿ, ಸಾಕು.”

ಮಗನ ಪುಂಡುಗೂದಲಿನಲ್ಲಿ ಅಮ್ಮ ಕೈಯಾಡಿಸಿದರು. ಕೊರಳುಬ್ಬಿ, ಕಣ್ತುಂಬಿ, ತಲೆಯಾಡಿಸಿದರು. ತನ್ನವರನ್ನು ನೆನಪಿಸಿಕೊಂಡರು.
                                                                      ||ಶುಭಂ||                                                  

                                                                          ***                                                                    

ಒಮ್ಮೊಮ್ಮೆ ಹೀಗೂ ಆಗುವುದು!

ಒಮ್ಮೊಮ್ಮೆ ಹೀಗೂ ಆಗುವುದು … ಯಾರನ್ನೋ ಜೀವ ಬೇಡುವುದು…

ಸಂಜೆ ಆಫೀಸಿನಿಂದ ಮನೆಗೆ ಹೋಗಲು ಸುದೀಪ ಎದ್ದಾಗ ಪ್ಯೂನ್ ರಂಗ ಹಲ್ಲು ಕಿರಿಯುತ್ತಾ ದರ್ಶನ ನೀಡಿದ
`ಆರಾಮಾ ಸಾ..’ಅಂತಾ ಕೈ ಮುಂದೆ ಚಾಚಿ `ನೀವೇನೂ ನಮ್ಮುನ್ನ ಇತ್ತೀಚಿಗೆ ನೋಡ್ ಕೊಳದೇ ಇಲ್ಲಾ…’ಅಂತ ತನ್ನ ಎಂದಿನ ಪಲ್ಲವಿ ಹಾಡಿದ
ರಂಗನ ಪ್ರಕಾರ `ನೋಡ್ ಕೊಳದೂ’ ಅಂದ್ರೆ ಅವನ ಕಾಫಿಗೆ ,ಬೀಡಿಗೆ ದುಡ್ಡು ಕೊಡೋದು ಎಂಬುದು ಸುದೀಪನಿಗೆ ಸರ್ವವಿದಿತವಾಗಿದ್ದರಿಂದ ರಂಗನ ಕೈಗೆ ಇಪ್ಪತ್ತು ತುರುಕಿ
ಅವನು ಕೊಟ್ಟ ಕಾಗದದ ಕಡೆಗೆ ಆತುರದಿಂದ ಗಮನ ಹರಿಸಿದ.
ಅಮ್ಮನ ಕಾಗದ…ಊರಿಂದ ಬಂದಿದೆ…
ಅವನ ಮನ ಅಮ್ಮನ ನೆನಪಿಂದ ತುಂಬಿಹೋಯಿತು!
ಆ ಕ್ಷಣ ಅವನಿಗೆ ಅಮ್ಮನನ್ನು ನೋಡ ಬೇಕೆನಿಸಿ ಬಿಟ್ಟಿತು!
ಏನ್ ಸಾ ಕಾಗಜ ಕೈಲಿ ಹಿಡ್ಕೊಂಡು ಸುಮ್ನೆ ನಿಂತ್ ಬಿಟ್ರಲ್ಲಾ… ಏನ್ ಬರ್ದವ್ರೆ ಅಂತ ವಸಿ ಒಡುದ್ ನೋಡೀ..’ ರಂಗ ಎಚ್ಚರಿಸಿದಾಗಲೇ ಇಹಕ್ಕೆ ಮರಳಿದ್ದು ಸುದೀಪ
ಅಮ್ಮ ಕಾಗದ ಬರೆಯುವುದೇ ಅಪರೂಪ ಈಗಂತೂ ಎಲ್ಲ ಮಾತೂ ಪೋನ್ ನಲ್ಲೇ ಆಗಿ ಬಿಡುತ್ತೆ ಅಂತ ಅಂದುಕೊಳ್ಳುತ್ತಾ ಕಾಗದ ಓದಿದ ಕಾಗದದಲ್ಲಿ ವಿಶೇಷವೇನೂ ಇಲ್ಲ
ಏನೋ ಅಮ್ಮನಿಗೆ ಕಾಗದ ಬರೆಯುವ ಮೂಡು ಬಂದಿರಬೇಕು ಬರೆದಿದ್ದಾರೆ ಎಂದುಕೊಳ್ಲುತ್ತಾ ಕೊನೆಯ ಸಾಲುಗಳನ್ನು ಓದತೊಡಗಿದ
ಅಮ್ಮ ಬರೆದಿದ್ದರು.
`ಇಷ್ಟು ದಿನದಿಂದ ನೀನು ಬೆಂಗಳೂರಿಗೆ ಬಂದು ನಿನ್ ಜೊತೆಲಿ ಸ್ವಲ್ಪ ದಿನ ಇರು ಅಂತ ಹೇಳುತ್ತಿದ್ದೆ ಅದಕ್ಕೆ ಈಗ ಕಾಲ ಕೂಡಿ ಬಂದಿದೆ ಅಂತ ಕಾಣುತ್ತೆ ಹನ್ನೆರಡನೇ ತಾರೀಕು ಸಂಜೆ
ನಾವಿಬ್ಬರೂ ಬೆಂಗಳೂರು ತಲುಪುತ್ತಿದ್ದೇವೆ ಸಂಜೆ ಬೇಗ ಮನೆಗೆ ಬರುವುದು…’
`ನಾವಿಬ್ಬರೂ’ ಅಂದ್ರೆ ಯಾರು?
`ಕನ್ನಿಕಾಗೆ ಇಲ್ಲಿನ ಗ್ರಾಮೀಣ ಬ್ಯಾಂಕ್ ನಲ್ಲಿ ಕೆಲಸವಾಗಿದೆ ಟ್ರೈನಿಂಗ್ ಗೆ ಅಂತ ಎರಡು ತಿಂಗಳು ಬೆಂಗಳೂರಿಗೆ ಹಾಕಿದ್ದಾರೆ ಬೆಂಗಳೂರಲ್ಲಿ ಮನೆಯೇ ಇರಬೇಕಾದ್ರೆ
ಅವಳು ಹಾಸ್ಟೇಲ್ನಲ್ಲಿ ಇರುವುದು ಯಾಕೆ ಅಂತ ನಾನೇ ನಾರ್ಣಪ್ಪನವರನ್ನು ಬಲವಂತವಾಗಿ ಒಪ್ಪಿಸಿದೆ.ಆರು ತಿಂಗಳ ಪ್ರೊಬೆಷನ್ ಮುಗಿದ ಮೇಲೆ ಬೆಂಗಳೂರಿಗೇ
ಬೇಕಾದ್ರೆ ಹಾಕಿ ಕೊಡ್ತಾರಂತೆ.. ಮದ್ವೆ ಆದಮೇಲೂ ಏನೂ ತೊಂದರೆ ಇಲ್ಲಾ…’ ಅಮ್ಮ ಬರೆದಿದ್ದರು.

ಸುದೀಪನಿಗೆ ಸರ್ಪ್ರೈಸ್ ಮಾಡೋಣಾ ಅತ್ತೆ’ ಅಂತ ಕನ್ನಿಕಾ ಈ ವಿಶ್ಯ ಪೋನ್ ನಲ್ಲಿ ಹೇಳಲು ಬಿಡಲಿಲ್ಲ
ನಂಗೆ ತಡೀಲಿಲ್ಲ ಬರೆದು ಬಿಟ್ಟಿದ್ದೇನೆ ಕನ್ನಿಕಾಗೆ ನಾನು ನಿನಗೆ ಮೊದಲೇ ತಿಳಿಸಿದ್ದೆ ಅಂತ ಗೊತ್ತಾಗೋದು ಬೇಡಾ ಸಣ್ಣಹುಡುಗಿ ಪಾಪ ಬೇಜಾರು ಮಾಡಿ ಕೊಳ್ಳುತ್ತೆ…’

ಸುದೀಪನ ಎದೆ ದಸಕ್ ಅಂತು!
ಅಮ್ಮನನ್ನು ಕಂಡರೆ ಸುದೀಪನಿಗೆ ಪ್ರಾಣ… ಕನ್ನಿಕ ಎಂಬ ಚಿನಕುರುಳಿ ಮಾತಿನ ಪಟಾಕಿ ಕಂಡರೂ ಅವನಿಗೆ ಇಷ್ಟವೇ…

ಆದರೆ……..

ಆದರೆ ನಾಳೆ ಸುನಯನಳೊಂದಿಗೆ ತನ್ನ ಭೇಟಿ…ನೆನ್ನೆ ಅನಿರೀಕ್ಷಿತವಾಗಿ ಯಾಮಿನಿಯ ತಂದೆ ತಂದ ಒಸಗೆ..
ಇವುಗಳ ಮಧ್ಯೆ ತಾನು ಸಿಕ್ಕು ದಿಕ್ಕು ತಪ್ಪಿದಂತಾಗಿರುವಾಗ ಕನ್ನಿಕಾ ಮತ್ತು ಅಮ್ಮನ ಬರವು ಯಾಕೋ ಆತಂಕ ತರುತ್ತಿದೆ…

ಉಸಿರು ಬಿಡುತ್ತಾ ತಲೆ ಅಲುಗಿಸಿದ ಸುದೀಪ.  `ಯಾಕೆ ಸಾ ಎಲ್ಲಾ ಚೆಂದಾಗವ್ರಂತಾ…’ ರಂಗ ಕೇಳಿದಾಗ ಅವನನ್ನೇ ದುರುಗುಟ್ಟಿಕೊಂಡು ನೋಡಿದ
ರಂಗ ತಲೆ ಕೆರೆದು ಕೊಳ್ಳುತ್ತಾ `ಸಾ… ಅದು ಕಾಜಗ ಬಂದು ಒಂದು ಹತ್ತು ದಿನ ಆಯ್ತು ನಿಮಗೆ ಕೊಡವಾ ಅಂತ ಜೋಬಲ್ಲಿ ಇಟ್ಕೊಂಡು ಮರ್ತುಬಿಟ್ಟೆ
ಇವತ್ತು ಪ್ಯಾಂಟ್ ಜೋಬಲ್ಲಿ ಸಿಕ್ತು ನೋಡಿ… ಬಡಾನೆ ತಂದೆ…’ ಅಂತ ಹಲ್ಲು ಕಿರಿದ!

                                       ***

ಸುದೀಪನ ಎದೆ ಎರಡನೇ ಬಾರಿಗೆ ದಸಕ್ ಅಂತು!

ಇವತ್ತು ಎಷ್ಟು ತಾರೀಕೋ ರಂಗ? ಏನೋ ಅನುಮಾನದಿಂದ ಬಿಸಿಲಿಳಿಯುತ್ತಿದ್ದ ಸಂಜೆ ಐದರ ಮರದ ನೆರಳು ನೋಡುತ್ತಾ ಕೇಳಿದ.

ಇವತ್ತು ಅನ್ನೆರಡು ಅಲ್ವರಾ..? ರಂಗ ಕೈ ತುರಿಸುತ್ತಾ ಹೇಳಿದಾಗ… ಸುದೀಪನ ಎದೆ ಮೂರನೇ ಬಾರಿಗೆ ದಸಕ್ ಅಂತು!

ಈ ಹಾಳು ಮೂತಿಯ ರಂಗನ ಮುಂದೆ ನಿಂತಿದ್ದರೆ ನನ್ನ ಎದೆ ಒಡೆದೇ ಹೋಗುತ್ತೆ ಅಂತ ಗೊಣಗಿ ಕೊಳ್ಳುತ್ತಾ ಮನೆ ಕಡೆಗೆ ಓಡಿದ ಸುದೀಪ.

                                                           ***

ಮನಸು ಗೊಂದಲದ ಗೂಡು

ಇಳಿಸಂಜೆಗೆ ಕರೆಗಂಟೆಯ ಸದ್ದಿಗೆ ಎಚ್ಚರಾಗಿ ಬಾಗಿಲು ತೆರೆದವನಿಗೆ ಕಾಣಿಸಿದ್ದು ಯಾಮಿನಿಯ ತಂದೆ!
ನಿದ್ದೆ ತುಂಬಿದ ತನ್ನ ಕಣ್ಣುಗಳು… ಮುದುರಿದ ತನ್ನ ಬಟ್ಟೆಗಳು… ಕೊಳಕಾದ ತನ್ನ ರೂಮು…ಅವರನ್ನು ಒಳಗೆ ಕರೆಯಲೂ ಸಂಕೋಚವೆನಿಸಿತು ಅವನಿಗೆ…
`ಅಯ್ಯೋ ತಾವು ನನ್ನನ್ನ ಹುಡುಕಿಕೊಂಡು ಇಷ್ಟು ದೂರ ಯಾಕೆ ಬರಕ್ಕೆ ಹೋದ್ರೀ…ಯಾಮಿನೀ ಹತ್ರ ಹೇಳಿ ಕಳಿಸಿದ್ದರೆ ನಾನೇ ಬಂದು ನಿಮ್ಮನ್ನ ನೋಡ್ತಿದ್ದೆ’ಎಂದ
ಅದಕ್ಕವರು `ಇಲ್ಲಪ್ಪಾ…ಕೆಲವು ಕೆಲಸ ಮಾಡುವಾಗ ಯಾವುದು ಸಂಪ್ರದಾಯವೋ ಹಾಗೇ ಮಾಡಬೇಕೂ.. ಈಗ ನಾನೇ ನಿಮ್ಮನೆಗೆ ಬರಬೇಕಿತ್ತು …ಹಾಗೆಲ್ಲಾ
ನಿಮಗೆ ಹೇಳಿಕರೆಸಿ ಹೇಳಲಾಗುವಂಥಾ ಸಮಾಚಾರವಲ್ಲ ಇದೂ…’ ಎನ್ನುತ್ತಾ ಕುರ್ಚಿಯ ಮೇಲಿನ ಧೂಳು ಜಾಡಿಸಿ ಕೂತೇ ಬಿಟ್ಟರು

`ನಿನ್ನನ್ನೊಂದು ಮಾತು ಕೇಳಬಹುದೇ ಸುದೀಪಾ…’ಎಂದು ಅವನ ಭುಜದ ಮೇಲೆ ಕೈ ಇಟ್ಟು ಕೇಳಿದ ಆ ವೃದ್ದರಿಗೆ ಏನೆಂದು ಉತ್ತರಿಸುವುದೋ ಅವನಿಗೆ ತಿಳಿಯಲಿಲ್ಲ
ಕೊನೆಗೆ ಅವನು ಹೇಳಿದ್ದು` ನಾನು ಚಿಕ್ಕಂದಿನಲ್ಲೇ ತಂದೆ ಕಳೆದುಕೊಂಡು ಬೆಳೆದವನು ನೀವು ನನ್ನ ತಂದೆ ಸಮಾನವೆಂದು ತಿಳಿಯುತ್ತೇನೆ ನೀವೇನು ಹೇಳಬೇಕೆಂದಿದ್ದೀರೋ
ಸಂಕೋಚವಿಲ್ಲದೇ ಹೇಳಿ… ನನ್ನ ಕೈಲಾದ್ದನ್ನು ನಾನು ಖಂಡಿತಾ ನಡೆಸಿ ಕೊಡುತ್ತೇನೆ’ ತನ್ನ ಅಕೌಂಟ್ನಲ್ಲಿ ಎಷ್ಟು ಹಣವಿದೆ ಮನದಲ್ಲೇ ಲೆಕ್ಕ ಹಾಕುತ್ತಾ ನುಡಿದ.
`ಮುದ್ದಿನ ಗಿಣಿ ಸೃಷ್ಟಿಗಾಗಿ ಎಷ್ಟು ಹಣ ಖರ್ಚಾದರೂ ಪರವಾಗಿಲ್ಲಾ’ ಅಂದಿತು ಮನಸ್ಸು.ಸ್ವಾಭಿಮಾನಿ ಯಾಮಿನೀ ನನ್ನಿಂದ ಹಣ ತೆಗೆದು ಕೊಳ್ಳಲು ಒಪ್ಪುತ್ತಾಳೇಯೇ?ಅವನ ಮನ ಪ್ರಶ್ಣಿಸಿತು.

ಸುದೀಪನ ಮನ ಈ ಎಲ್ಲಾ ತರ್ಕ ಮಾಡುತ್ತಿರುವಾಗ ಯಾಮಿನಿಯ ತಂದೆ ಕೇಳಿದ ಮಾತು ಅವನನ್ನು ಅಚ್ಚರಿಯ ಸಾಗರದಲ್ಲಿ ತೇಲಿಸಿ ಮುಳುಗಿಸಿತು!ಮುಳುಗಿಸಿ ತೇಲಿಸಿತು!
`ನನ್ನ ಮಗಳು ಯಾಮಿನಿಗೆ ಬಾಳು ಕೊಡುತ್ತೀಯಾ ಸುದೀಪಾ..’ ಕನಸೇ… ಇಲ್ಲಾ ಇದು ನನಸು!
`ನೀನು ನನಗಿಂತಾ ವಯಸ್ಸಿನಲ್ಲಿ ಚಿಕ್ಕವನು ಆದರೂ ಬೇಡುತ್ತಿದ್ದೇನೆ …ಅವಳು ಮಹಾ ಸ್ವಾಭಿಮಾನಿ ನಿನ್ನನ್ನು ಎಂದಿಗೂ ತಾನೇ ಬಾಯಿ ಬಿಟ್ಟು ಕೇಳಲಾರಳು
ಯಾಮಿನೀ ನಿನ್ನನ್ನು ಪ್ರಾಣಪದಕದಂತೆ ಪ್ರೀತಿಸುತ್ತಾಳೆ ಸುದೀಪ…ಇದು ಬಲವಂತವಲ್ಲ ನಿನ್ನಂಥ ಯೋಗ್ಯ,ಗುಣಿಯೊಬ್ಬನ ಕೈಗೆ ನನ್ನ ಮಗಳನ್ನು ಒಪ್ಪಿಸ ಬೇಕೆಂಬ
ತಂದೆಯೊಬ್ಬನ ಸಹಜ ಬಯಕೆ…’

ಸುದೀಪನಿಗೆ ಮನಸ್ಸೆಲ್ಲಾ ಅಯೋಮಯ… ಸುಮ್ಮನೇ ಕೂತುಬಿಟ್ಟ!
ಮೌನವಾದ ಸುದೀಪನನ್ನು ನೋಡಿ ಬೇರೆಯದೇ ಅರ್ಥ ಮಾಡಿಕೊಂಡ ಯಾಮಿನಿಯ ತಂದೆ ಹೀಗೆಂದರು` ತಿಳಿಯಿತು… ಸೃಷ್ಟಿಯ ಬಗ್ಗೆ ಅಲ್ಲವೇ ನಿನ್ನ ಪ್ರಶ್ನೆ..?
ಯಾಮಿನಿಗೆ ಭಾಷೆ ಕೊಟ್ಟಿರುವುದರಿಂದ ಸೃಷ್ಟಿಯ ಹಿನ್ನಲೆಯ ಬಗ್ಗೆ ಜಾಸ್ತಿ ವಿವರ ಹೇಳಲಾರೆ ಆದರೆ ಇಷ್ಟು ಮಾತ್ರ ನಿಜ… ಸೃಷ್ಟಿ ಬೇರೊಂದು ಅಂಗಳದ ಹೂವು…
ನಮ್ಮ ಮನೆ ಅಂಗಳದಲ್ಲಿ ನಲಿದು ಬೆಳೆಯುತ್ತಿದೆ ಯಾಮಿನಿಯ ಆಕಾಶದಂತೆ ವಿಶಾಲವಾದ ಮನದ ಕುರುಹೋ ಎಂಬಂತೆ ನಕ್ಷತ್ರವಾಗಿ ಮಿನುಗುತ್ತಿದೆ…’

ಇದು ಇನ್ನೊಂದು ಆನಂದದ ಅಭಿಷೇಕ!ಸುದೀಪ ವಿಸ್ಮಿತನಾಗಿ ಹೋದ!
`ಹೇಳು ದೇವರ ರೂಪದಂತಿರುವ ಕಂದಮ್ಮ ಸೃಷ್ಟಿಯ ಅಪ್ಪನಾಗುತ್ತೀಯಾ?ಆ ಮಗುವಿಗೊಂದು ಅಪ್ಪನ ಹೆಸರು ಕೊಡುತ್ತೀಯಾ?
ಅವರು ಅವನ ಕೈ ಹಿಡಿದು ಕೇಳಿದಾಗ ಸುದೀಪ ಹಣೆಯಲ್ಲಿ ನೆರಿಗೆ ,ತುಟಿಯಲ್ಲಿ ಮಂದ ಸ್ಮಿತ,ಮನದ ತುಂಬಾ ಆನಂದದ ಅಲೆಗಳ ನಡುವೆ ಕೊಚ್ಚಿ ಹೋಗುತ್ತಿದ್ದ

`ನೀನು ಯೋಚನೆ ಮಾಡಿ ಹೇಳಪ್ಪಾ…ನೀನು ಒಪ್ಪದೇ ಹೋದರೂ ನೀನು ಎಂದೆಂದಿಗೂ ನನ್ನ ಸ್ನೇಹಿತನೇ… ಸೃಷ್ಟಿಯ ಮುದ್ದಿನ ಮಾಮಾನೇ.. ಇಷ್ಟು ನೆನಪಿರಲಿ’ಎನ್ನುತ್ತಾ
ಯಾಮಿನಿಯ ತಂದೆ ನಿರ್ಗಮಿಸಿದ್ದೂ ಅವನಿಗೆ ತಿಳಿಯಲಿಲ್ಲ

*****************

ಕಣ್ಣ ಮುಂದೆ ನಾರ್ಣಪ್ಪನವರ ಚಿತ್ರ ತೇಲಿ ಬಂತು. ತಂದೆ ಇಲ್ಲದೇ ಬೆಳೆದ ತನ್ನನ್ನು ತಂದೆಯಂತೆ ನೋಡಿಕೊಂಡ ದೊಡ್ಡ ಮನಸ್ಸಿನ ವ್ಯಕ್ತಿ…
ತನ್ನ ಹದಿಹರೆಯದಲ್ಲಿ ಇವರಂತೆ ತಾನಾಗುವುದು,ಇಷ್ಟು ವಿಶಾಲ ಮನಸ್ಸು ಹೊಂದುವುದು ತನ್ನ ಬಾಳಿನ ಗುರಿಗಳಲ್ಲೊಂದು ಎಂದು ತಾನು ಯೋಚಿಸುತ್ತಿದ್ದದು ನೆನಪಿಗೆ ಬಂತು
ತನಗೆ ನಾರ್ಣಪ್ಪನವರು ತೋರಿಸಿದ ಮಮತೆ ತಾನು ಏಕೆ ಮುದ್ದು ಸೃಷ್ಟಿಗೆ ತೋರ ಬಾರದೂ…?

ಕೆರೆಯ ನೀರನ್ನು ಕೆರೆಗೆ ಚೆಲ್ಲಿದಂತೆ!ಮಮತೆ ,ವಾತ್ಸಲ್ಯ ಕುಡಿಯೊಡೆದು ಬೆಳೆಯ ಬೇಕಾದ್ದೇ ಹಾಗಲ್ಲವೇ? ಯಾವುದೇ ಬಂಧನವಿಲ್ಲದೇ..?

ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ…
ಹರಿಯ ಕರುಣದೊಳಾದ ಭಾಗ್ಯವ ಹರಿಸಮರ್ಪಣೆ ಮಾಡಿ ಬದುಕಿರೋ…

ಬೀದಿಯಲ್ಲಿ ಯಾರೋ ಹಾಡಿಕೊಂಡು ಹೋಗುತ್ತಿದ್ದರು…

                                                              ***

ಮುಂದೇನು ಎಂದು ಹೇಳುವರು ಯಾರು?

ಪರಸ್ಪರ “ಹೇಗಿದ್ದೀ?” “ಚೆನ್ನಾಗಿದ್ದೇನೆ”ಗಳ ನಂತರ “ಪರದೇಶ ಹೇಗಿತ್ತು?” ಪ್ರಶ್ನೆ ಅಚಾನಕ್ಕಾಗಿ ಸುದೀಪನ ಬಾಯಿಂದ ಹೊರಬಿತ್ತು. ಒಂದೆರಡು ಕ್ಷಣಗಳ ಮೌನದ ಮೇಲೆ ಬಂದ ಉತ್ತರ ಸುನಯನಳದ್ದೇ ಹೌದಾ ಅನ್ನುವ ಸಂಶಯವೂ ಅವನಿಗೆ ಬರುವಂತಾಯ್ತು. “ಪರದೇಶವೇನೋ ಚೆನ್ನಾಗಿದೆ ಸುದೀಪ, ಆದರೆ ಪರದೇಶಿಯೊಡನೆ ಜೀವನ ಸರಿಯಾಗಲಿಲ್ಲ” ಅಂದಳು. “ಯಾಕೇಂತ ನಾನು ಕೇಳಲ್ಲ, ನಿನ್ನ ನೋವನ್ನು ಕೆದಕಲ್ಲ” ಅಂದ. “ಇಲ್ಲ, ನಿನ್ನ ಜೊತೆ ಹೇಳಿಕೊಳ್ಳಕ್ಕೆ ನನಗೇನೂ ತೊಂದರೆಯಿಲ್ಲ. ಸುದೀಪ, ನೀನಾದರೂ ನನ್ನ ಕಥೆ ಕೇಳುತ್ತೀ ಅನ್ನುವ ನಂಬಿಕೆ ನನಗಿತ್ತು. ಅಪ್ಪ-ಅಮ್ಮನಿಗೂ ಇದನ್ನ ಹೇಳಿಲ್ಲ, ನೊಂದುಕೊಳ್ತಾರೆ ಅಂತ. ನಿನಗೆ ಸಮಯವಿದ್ದರೆ ನಾಳೆ ಸಂಜೆ ಭೇಟಿಯಾಗುತ್ತೀಯಾ?”

“ನಾಳೆ ಯಾಕೆ? ಈಗಲೇ ಹೇಳು, ನಿನಗೆ ಅಭ್ಯಂತರ ಇಲ್ಲದಿದ್ರೆ…”
“ಈಗಲೇ….! ಸರಿ ಹೇಳ್ತೇನೆ. ಅನಿಲ್ ಒಳ್ಳೆ ವ್ಯಕ್ತಿಯೇ. ಆದ್ರೆ ಮದುವೆ ಬಗ್ಗೆ ಏನೇನೂ ಆಸಕ್ತಿಯಿರಲಿಲ್ಲ. ಪಕ್ಕಾ ಸನ್ಯಾಸಿ ಆತ. ಅಂಥವನನ್ನು ಹಿಡಿದಿಟ್ಟ ಹಾಗೆ ಮದುವೆ ಮಾಡಿಸಿದ್ರು ಅವನ ಅಪ್ಪ-ಅಮ್ಮ. ಮದುವೆಗೆ ಮೊದಲು ನನ್ನ ಜೊತೆ ಮಾತಾಡಿ ಎಲ್ಲ ಹೇಳಿ, ನಾನೇ ಅವನನ್ನು ನಿರಾಕರಿಸುವಂತೆ ಕೇಳಬೇಕು ಅಂತ ಇದ್ದನಂತೆ, ಅದಕ್ಕೂ ಅವರು ಅವಕಾಶ ಕೊಡಲಿಲ್ಲ. ಮದುವೆಯಾಗಿ ಅವನೂರಿಗೆ ಹೋದ ಮೇಲೆಯೇ ನನಗಿದೆಲ್ಲ ಗೊತ್ತಾಗಿದ್ದು. ನನ್ನನ್ನ ಚೆನ್ನಾಗಿಯೇ ನೋಡಿಕೊಂಡ; ತಂಗಿ ಥರ, ಹೆಂಡತಿ ಥರ ಅಲ್ಲ. ಹೇಳು, ಅಂಥ ಬಾಳು ಎಷ್ಟು ದಿನ ನಡೆದೀತು? `ನಾನು ಊರಿಗೆ ಹೋಗುತ್ತೇನೆ’ ಅಂದೆ. ಮರುದಿನವೇ ಟಿಕೆಟ್ ತಂದುಕೊಟ್ಟ. `ನಿನಗೆ ಅನ್ಯಾಯ ಆಗಿದೆ, ಅದನ್ನು ಸರಿಪಡಿಸುವ ಶಕ್ತಿ ನನಗಿಲ್ಲ’ ಅಂತ ನೊಂದುಕೊಂಡ. ಹಿಂದೆ ನೋಡದೆ ಬಂದುಬಿಟ್ಟೆ. ಎರಡು ವಾರ ಆಯ್ತು. ಇನ್ನೂ ಊರಿಗೆ ಹೋಗಿಲ್ಲ, ಅಪ್ಪ-ಅಮ್ಮನಿಗೆ ನಾನು ಬಂದಿರೋದು ಗೊತ್ತಿಲ್ಲ. ಇಲ್ಲಿ ಗೆಳತಿ ಮನೆಯಲ್ಲಿದ್ದೇನೆ. ಇನ್ನೇನು ಮಾಡೋದೋ ಗೊತ್ತಿಲ್ಲ. ವಿಷಯ ಗೊತ್ತಾದ್ರೆ ಅಪ್ಪ ಹಾರಾಡ್ತಾರೆ, ನನ್ನದೇ ತಪ್ಪು, ನಾನು ಕಾಯಬೇಕಿತ್ತು ಅಂತಾರೆ, ನನಗ್ಗೊತ್ತು. ಅಮ್ಮ ಸುಮ್ಮನೆ ಕಣ್ಣೀರು ಹಾಕ್ತಾರೆ. ಅದಕ್ಕೇ ಅವರಿಗೆ ಹೇಳಿಲ್ಲ, ಊರಿಗೆ ಹೋಗಿಲ್ಲ. ಏನು ಮಾಡಕ್ಕೂ ದಿಕ್ಕೇ ತೋಚುತ್ತಿಲ್ಲ ಸುದೀಪ. ನೀನೇ ಹೇಳು ಏನಾದ್ರೂ ಪರಿಹಾರ…..” ಯಾರದ್ದೋ ಕಥೆ ಅನ್ನುವಂತೆ ಹೇಳಿ ಮುಗಿಸಿದ ಅವಳ ಮುಖ ಕಲ್ಪಿಸಿಕೊಂಡ. ಒಂದೇ ಕ್ಷಣ. ಖುಷಿಯಿಂದ ಹಾರಿ ಕುಳಿತ. ಮದುವೆಯಾದರೂ ನನ್ನ ಸುನಿ ನನ್ನವಳೇ. ವಿಚ್ಛೇದನಕ್ಕೆ ಅರ್ಜಿ ಹಾಕಿದ್ದೀಯಾ ಅನ್ನುವ ಧೈರ್ಯ ಇಲ್ಲದಿದ್ದರೂ “ಇದಂತೂ ಮುಗಿದ ಕಥೆ ಸುನೀ. ಈಗಲಾದರೂ ಕೇಳ್ತೇನೆ, ನನ್ನ ಮದುವೆ ಆಗ್ತೀಯಾ?” ಕೇಳಿಯೇಬಿಟ್ಟ. ಆದರೆ ಅಲ್ಲಿಂದ ಉತ್ತರ ಬರಲಿಲ್ಲ. ಮೊಬೈಲ್ “ನೋ ಸಿಗ್ನಲ್” ತೋರಿಸಿ ಕಣ್ಣು ಮಿಟುಕಿಸಿತು.

                                                             ***

ಸರಿಯಾದ ಸಮಯಕ್ಕೇ ಕೈ ಕೊಡುವುದನ್ನೇ `ಸುದೀಪನ ಅದೃಷ್ಟ’ ಅಂತಾ ಕರಿಬಹುದೇನೋ ಅಂತ ಗೊಣಗಿಕೊಳ್ಳುತ್ತಾ ಮೇಲೆದ್ದ ಸುದೀಪ…
ಮನವೆಲ್ಲಾ ಗೊಂದಲದ ಗೂಡು…ಕಾಫೀ ಮಾಡಿಕೊಳ್ಳುತ್ತಿರುವಾಗಲೇ ಮತ್ತೆ ಮೊಬೈಲ್ ಗುಣುಗುಣಿಸಿತು
ಓ ಸುನಯನಾ… ಛಂಗನೆ ಹಾರಿಹೋಗಿ`ಹಲೋ.. ಎಂದು ಕಿರುಚಿದ
ಯಾರೋ ವೃದ್ದರ ಕಂಠ… ಗುರುತಿನ ಸ್ವರ…ಯಾರೆಂದು ನೆನಪಾಗುತ್ತಿಲ್ಲ…
ನಿಮ್ ಹತ್ರ ಸ್ವಲ್ಪ ಮಾತಾಡ್ ಬೇಕಿತ್ತಪ್ಪಾ ಐದು ನಿಮಿಷ ಸಮಯ ಇದ್ಯೇ..?
ಸುನಯನಳ ಕರೆ ನಿರೀಕ್ಷಿಸಿದ್ದವನಿಗೆ ಸಿಟ್ಟು ರೇಗಿ `ರಾಂಗ್ ನಂಬರ್…’ ಎಂದು ಕಾಲ್ ಕಟ್ ಮಾಡಿ ಮೊಬೈಲ್ ಕುಕ್ಕಿದ
ಆ ತುದಿಯಿಂದ ವೃದ್ದರು `ಸುದೀಪಾ.. ನಾನು… ನನ್ನ ಮಗಳ ಬಗ್ಗೆ ನಿನ್ ಹತ್ರ ಮಾತಾಡ್ ಬೇಕಿತ್ತೂ…’
ಅವನ ಕಿವಿಗೆ ತಾಕಿ ತಲೆಗೆ ಹೋಗಿ ಅರ್ಥ ಹೊಳೆಸುವಷ್ಟರಲ್ಲಿ ಅವನು ಕಟ್ ಮಾಡಿ ಆಗಿತ್ತು
ಯಾರದೂ…?
ನಂಬರ್ ಕೂಡಾ ಪರಿಚಿತವಲ್ಲ…ಯಾವುದೋ ಪಬ್ಲಿಕ್ ಬೂತ್ ನಿಂದ ಮಾಡಿರುವುದು…ಬಹುಷಃ ಮಗಳಿಗೆ ತಿಳಿಯಬಾರದೆಂದು…!

ನಾರ್ಣಪ್ಪನವರೇ…?ಕನ್ನಿಕಾ ಬಗ್ಗೆ ಮಾತಾಡಲು ಕರೆ ಮಾಡಿದರೇ?
ಅಥವಾ ಯಾಮಿನಿಯ ತಂದೆಯೇ…?ಸ್ವಾಭಿಮಾನಿ ಮಗಳ ಬಾಳು ಹಸನಾಗಲೆಂದು ಆಶಿಸಿ ಸುದೀಪನ ನೆರವು ,ಆಸರೆ ಬೇಡಿದರೇ…?

ಆತುರಗಾರನ ಬುದ್ದಿ ಮಟ್ಟ ಎಂದು ತನ್ನನ್ನು ತಾನೇ ಬೈದುಕೊಂಡ…
ಈ ಗಡಿಬಿಡಿಯಲ್ಲಿ ಸುನಯನ ಚಿತ್ತದಿಂದ ಮರೆಯಾದಳು

ಯಾಮಿನಿಯ ನಗುಮೊಗವನ್ನೇ ಮನದತುಂಬಾ ತುಂಬಿಕೊಳ್ಳುತ್ತಾ ನಿದ್ದೆಗೆ ಜಾರಿದ ಸುದೀಪ
ಎಂದೋ ಕನ್ನಿಕಾ ಹಾಡುತ್ತಿದ್ದ ಪದ್ಯವೊದರ ಸಾಲು ನೆನಪಿಗೆ ಬಂತು…

ಕಣಿವೆಯೊಳು ತೊರೆಬನಕೆ ಜೋಗುಳವನುಲಿಯೇ
ಯಾಮಿನಿಗೆ ಮುತ್ತಿಡುತ ಚಂದಿರನು ಮೆರೆಯೇ…

ತಾನೇ ಯಾಕೆ ಯಾಮಿನಿಯ ಬಾಳ ಬಾನಿನ ಚಂದಿರನಾಗ ಬಾರದೂ…?
ಸವಿಗನಸುಗಳಿಗೆ ಸುಂಕವೇನೂ ಇಲ್ಲವಲ್ಲ!

                                                                   ***

ಒಲವೇ..ಹೂವಾಗಿ ಬಳಿ ಬಂದೆ! – 5

ಬೆಳಗಿನ ಸೂರ್ಯನ ಕಿರಣಗಳು ಕಿಟಕಿಯ ಒಳಗೆ ತೂರಿ ಸುದೀಪನನ್ನು ಎಚ್ಚರಗೊಳಿಸಿದವು.  ಸುದೀಪನ ಮನಸ್ಸಿನಲ್ಲಿದ್ದ ಭ್ರಮೆಗಳೂ ಕತ್ತಲಿನೊಂದಿಗೆ ಕರಗಿಹೋಗಿತ್ತು.  ವಾಸ್ತವ ಬೆಳಗಿನ ಸೂರ್ಯನಂತೆ ನಿಚ್ಚಳವಾಗಿ ಕಣ್ಣೆದುರು ಹೊಳೆಯುತ್ತಿತ್ತು.  ಸುದೀಪ ಹುಸಿ ಆದರ್ಶವಾದಿಯಲ್ಲ.  ಭಾವನೆಗಳಿಗಿಂತ ಬದುಕೇ ಮುಖ್ಯವೆಂದು ನಂಬಿದವನು.    ತಾನು ಯಾಮಿನಿಯಂತೆ ಆದರ್ಶದ ಬೆನ್ನುಹತ್ತಿ ಹೋಗುವ ಶಕ್ತಿ ಇಲ್ಲದವನು ಎಂದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಸೃಷ್ಟಿ ಯಾಮಿನಿಯ ಮಗಳೇ ಆಗಿದ್ದರೆ ಆ ಸತ್ಯವನ್ನು ಅರಗಿಸಿಕೊಳ್ಳುವ ವಿಶಾಲ ಹೃದಯ ತನಗಿದೆಯೇ? ಆ ಪ್ರಶ್ನೆಯನ್ನು  ತನ್ನನ್ನೇ ತಾನು ಮತ್ತೊಮ್ಮೆ ಕೇಳಿಕೊಂಡ. ಇಲ್ಲವೆಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿತು ಅವನ ಮನಸ್ಸು. 

ಒಂದು ವೇಳೆ ತಾನು ಒಪ್ಪಿದರೂ ಸಂಪ್ರದಾಯಸ್ಥ ತಾಯಿ ಒಪ್ಪಿಯಾಳೇ?  ತನ್ನಲ್ಲಿ ಜೀವವನ್ನೇ ಇಟ್ಟುಕೊಂಡಿರುವ ತಾಯಿಯನ್ನು ನಿರಂತರ ನೋವಿನ ಕುಂಡದಲ್ಲಿ ಬೇಯಲು ಹಾಕಿ ತಾನಾದರೂ ಸುಖವಾಗಿರುವುದು ಸಾಧ್ಯವಿದೆಯೇ?   ತನ್ನ ಮನೆಗೆ ಬೆಂಕಿ ಹಚ್ಚಿಕೊಂಡು ಊರಿನ ಕತ್ತಲನ್ನು ತೊಡೆಯುತ್ತೇನೆಂದುಕೊಳ್ಳುವುದರಲ್ಲಿ ಏನರ್ಥವಿದೆ?

ಹಾಗಾದರೆ ಯಾಮಿನಿ? ಅವಳ ಸೂಜಿಗಲ್ಲಿನಂತಹ ವ್ಯಕ್ತಿತ್ವದಿಂದ ಪಾರಾಗುವುದು ಹೇಗೆ? ಹಾಗೆ.. ಈಗ ಸುನಯನಳನ್ನು ಮರೆತು ಬದುಕಿಲ್ಲವೇ ಹಾಗೆ.  ಸುನಯನ ಸುಂದರವಾದ ಕನಸು, ಯಾಮಿನಿ ಮುಗಿಲ ಮಲ್ಲಿಗೆ. ಕನ್ನಿಕಾ…?  ನನಗಾಗಿ ವಿಧಿ ವಿಧಿಸಿರುವ ವಧು ನೀನಾ ? ನೀನೇನಾ? ಆದರೆ ಅದು ಹೇಗೆ ಸಾಧ್ಯ?

                                                              ***

ಸುನೀ…ಅವನ ಧ್ವನಿ ಅವನಿಗೇ ಅಚ್ಚರಿ ಹುಟ್ಟಿಸುತ್ತಿದೆ…ಹಗಲುಗನಸೇ…? ಚಿವುಟಿಕೊಂಡ… ನೋವಾಯಿತು!
ಆಗಸ ನೀಲಿಯ ಕಂಗಳ ಒಡತಿ ತಿರುಗಿ ನೋಡಿದಳು… ಸುದೀಪಾ… ಇತ್ತ ಓಡಿ ಬಂದವಳು ಏಕೋ ಗಕ್ಕನೆ ನಿಂತಳು…ನೀನಿಲ್ಲಿ…? ತೊದಲಿದ ಸುದೀಪ.

ದೇವಸ್ಥಾನದ ಜನಜಂಗುಳಿಯ ಶಬ್ದ ಮರೆಯಾಗಿ ಇಬ್ಬರ ಎದೆಯಲ್ಲೂ ಸ್ಪಟಿಕ ಗಂಭೀರವಾಗಿ ಘಂಟಾನಾದವೇ ಮೊರೆಯತೊಡಗಿತು.
`ಸರಿ ಹೋಗಲಿಲ್ಲ ಸುದೀಪ…ಹೊರನಾಡು…ಬಂದು ಬಿಟ್ಟೆ…’ಎಂದುಸುರಿದವಳ ಕಣ್ಣಲ್ಲಿ ನೋವಿನ ತೂಫಾನೇ ಇತ್ತೇ…?
ಎಲ್ಲವನ್ನೂ ಎದುರಿಸಿ ಬಾಳಬಲ್ಲೆನೆಂಬ ದೃಡತೆ ಇತ್ತೇ…?`ಮತ್ತೆ ಸಿಗ್ತೀಯಲ್ಲಾ…’ಎಂದವಳ ಮಾತಿನ ಅರ್ಥವೇನು?
ನನ್ನಿಂದ ಯಾವ ಭರವಸೆ ಬಯಸಿದಳು ಸುನಯನಾ?

                                  ***

ಗೋಧೂಳಿ ಹೊತ್ತು… ಆಕಾಶದ ತುಂಬಾ ಓಕುಳಿಯ ರಂಗು…

“ಚೆಮ್ಮುಗಿಲ ತೋರಣವು ಬಾನಿನೊಳಗೇರೆ…
ಸ್ವರ್ಣರಥದೊಲು ಬಾನು ಮಲೆ ಮೇಲೆ ತೋರೆ…”

ಸುದೀಪನ ಮನ ಹಲ ರಂಗುಗಳು ಬಳಿದ ಅಸ್ಪಷ್ಟ ಕ್ಯಾನ್ವಾಸ್ ನಂತಿದೆ…
ಬಳಿದ ಯಾವ ಬಣ್ಣವೂ ಮನಕ್ಕೊಪ್ಪದೆ ಚಿತ್ರಕಾರ ಬೇಸತ್ತು ಕುಂಚ ಎಸೆದು ಹೊರಟು ಹೋದನೇ?

ಯಾರದೋ ಕೊರಲು…ಯಾವುದೋ ಗೀತೆ…ಹೊಂದದ ರಾಗ…ಮಸುಕು ಮಸುಕಾದ ಚಿತ್ರಗಳು…

“ಯಾರೋ ಹಾಡುವ…ಯಾರೋ ಬೇಡುವ… ಬೆರೆಯದ ವಾಣಿಗಳು…
ಯಾರೋ ಮುಗಿಲಲೀ… ಯಾರೋ ಕಣಿವೆಯಲೀ… ಹೊಂದದ ಚಿತ್ರಗಳೂ…”

ಯಾಮಿನೀ…ಸುನಯನಾ…ಕನ್ನಿಕಾ…
ಸೃಷ್ಟಿ…ಅಮ್ಮ…ನಾರ್ಣಪ್ಪನವರು…

ಮನದತುಂಬ ತುಂಬಿದ ಯಾಮಿನೀ ನಸು ನಕ್ಕಳು… ನಕ್ಷತ್ರ ಬೆಳಗಿದಂತೆ…
ಹೃದಯದಲ್ಲಿ ಮನೆಮಾಡಿದ ಸುನಯನಳದ್ದು ಮುತ್ತಿನಂಥಾ ಕಣ್ಣೀರ ಹನಿಗಳು ಆಗಸದಿಂದ ಸೋನೆ ಮಳೆ…

ಬಾಲ್ಯ ಸಖಿ ಕನ್ನಿಕಾಳ ಮುಗ್ಧ ಮುಖ…
ಮಮತೆಯ ಮಹಾಪೂರವೇ ಆದ ಅಮ್ಮನ ಶಾಂತ ಪ್ರಶಾಂತ ಮುಖ…

ಸುದೀಪ ಕಣ್ಮುಚ್ಚಿ ನಿಡಿದಾದ ಉಸಿರೆಳೆದು ಕೊಂಡ…

ಮಂಝಿಲೆ ಅಪ್ನೀ ಜಗಹ್ ಹೇ…
ರಾಸ್ತೇ ಅಪ್ನೀ ಜಗಹ್…
ಜಬ್ ಕದಂ ಹೀ ಸಾಥ್ ನಾ ದೇ…
ತೋ ಮುಸಾಫಿರ್ ಕ್ಯಾ ಕರೇ…

                                                        ***

     ಯಾರು ಹಿತವರು ನಿನಗೆ ಈ ಮೂವರೊಳಗೆ? ಕನ್ನಿಕಾ? ಯಾಮಿನಿ? ಸುನಯನಾ? ಕನ್ನಿಕಾಳನ್ನು ಅವನು ಎಂದೂ ಮುದ್ದು ತಂಗಿಯ ಸ್ಥಾನದಲ್ಲಿಟ್ಟು ನೋಡಿದ್ದಾನೆಯೇ ಹೊರತು ಅದಕ್ಕೆ ಬೇರಾವ ಪರ್ಯಾಯವಿಲ್ಲ. ತಾಯಿಗೆ ಈ ವಿಷಯ ಮನವರಿಕೆ ಮಾಡಿಸದೆ ಅವರ ಆಶಾಗೋಪುರವನ್ನು ಇಷ್ಟೆಲ್ಲಾ ಎತ್ತರಕ್ಕೆ ಬೆಳೆಸಬಾರದಿತ್ತು ಅನಿಸಿತು.
 
        ಯಾಮಿನಿಯನ್ನು ಮುಗಿಲ ಮಲ್ಲಿಗೆಯೆಂದು ಎಂದೋ ನಿರ್ಧರಿಸಿದ್ದಾಗಿದೆ.  ಯಾಮಿನಿ ತನ್ನನ್ನು ಪ್ರೀತಿಸಿರಬಹುದೆಂಬುದು ತನ್ನ ಭ್ರಮೆ ಮಾತ್ರ. ಜಗವನ್ನೇ ಪ್ರೀತಿಸಿ, ಎದೆಗಪ್ಪಿಕೊಳ್ಳುವ ಅವಳ ಮಮತೆಯ ಕಡಲಿನಲ್ಲಿ ತನಗೂ ಒಂದು ಬಿಂದುವಾಗುವ ಭಾಗ್ಯವಿರಬಹುದು ಅಷ್ಟೆ.  ಆದರೆ ಸುನಯನಾ? ಅವನಲ್ಲಿ ಇನ್ನು ಯಾವ ಅನುಮಾನವೂ ಉಳಿಯಲಿಲ್ಲ.  ಸುನಯನ ನೊಂದಿದ್ದಾಳೆ. ಯಾಕೆ? ಆ ನೀಲಿ ಕಣ್ಣಿನಲ್ಲೆದ್ದಿರುವ ನೋವಿನಲೆಗಳಿಗೆ ಮೊದಲು ಕಾರಣ ಹುಡುಕಬೇಕು. ಸಮಸ್ಯೆಯ ಮೂಲ ತಿಳಿದರೆ ತಾನೇ ಪರಿಹಾರ?
 
        ಮೊಬೈಲ್ ತೆಗೆದುಕೊಂಡು ಸುನಯನಾಳ ನಂಬರಿಗಾಗಿ ಅರಸಿದ.  ಅವಳೇ ಕೊಟ್ಟಿದ್ದಳು ಆದಿನ.  ಕರೆ ಮಾಡಿದ. ಆ ಕಡೆಯಿಂದ ಮಾರುತ್ತರ ಬಂದಿತು. ಧ್ವನಿಯೊಂದು ಇಷ್ಟು ಸಿಹಿಯಾಗಿರುವುದು ಸಾಧ್ಯವೇ!

ಆಕಾಶ ದೀಪವು ನೀನು – 4

ಸೃಷ್ಟಿ! – ನಿಜವಾಗಿ ಆ ಮಗು ಜಗತ್ತಿನ ಒಂದು ಅದ್ಭುತ ಸೃಷ್ಟಿಯೇ! ಅವಳ ಚುರುಕುತನ, ಮುದ್ದು ಮಾತಿಗೆ ಸುದೀಪ ಬೆರಗಾಗಿದ್ದ. ಸೃಷ್ಟಿಯ ಬುದ್ಧಿ ಶಕ್ತಿ ಅಸಾಧಾರಣವಾಗಿರುವುದನ್ನು ಸುದೀಪ ಗಮನಿಸಿದ. ಅವಳ ಮಾತಿನಲ್ಲಿ ವಯಸ್ಸಿಗೆ ಮೀರಿದ ಪ್ರೌಢತೆ ಇತ್ತು. ಬಿಳುಪಾದ ಗುಂಡು ಮುಖದಲ್ಲಿ ಗಾಜಿನ ಗೋಲಿಯಂತಹ ನೀಲಿ ಕಣ್ಣುಗಳು! ಅರೆ ಈ ನೀಲಿ ಕಣ್ಣುಗಳು ಎಲ್ಲಿಂದ ಬಂದವು? ಯಾಮಿನಿ ಕಪ್ಪು ಕಂಗಳ ಚೆಲುವೆ. ಬಹುಶಃ ತಂದೆಯಿಂದ? ಉಹುಂ.. ಯಾಮಿನಿಯನ್ನು ಇನ್ನೊಬ್ಬನೊಡನೆ ಕಲ್ಪಿಸಿಕೊಳ್ಳುವುದೂ ಅವನಿಂದಾಗಲಿಲ್ಲ
 

 ತಟ್ಟನೆ ಅವನಿಗೊಂದು ಘಟನೆ ನೆನಪಾಯಿತು. ಒಂದು ದಿನ ಯಾಮಿನಿ ಇನ್ನೂ ಅಫೀಸಿಗೆ ಬಂದಿರಲಿಲ್ಲ. ಆಗ ಯಾಮಿನಿಯನ್ನು ಕೇಳಿಕೊಂಡು ಯಾವುದೋ ಅನಾಥಾಶ್ರಮದವರು ಬಂದಿದ್ದರು. ಆಮೇಲೆ ಹಲವಾರು ಬಾರಿ ಅವರನ್ನು ಯಾಮಿನಿಯೊಡನೆ ಕಂಡಂತಿತ್ತು. ಯಾಮಿನಿ ಹಲವಾರು ಬಾರಿ ದೂರವಾಣಿಯಲ್ಲಿ ಆಡುತ್ತಿದ್ದ ಮಾತುಗಳು ಅಸ್ಪಷ್ಟವಾಗಿ ನೆನಪಿಗೆ ಬಂದಿತು. ಮನಸ್ಸಿನಲ್ಲಿ ಚದುರಿ ಬಿದ್ದಿದ್ದ ಎಳೆಗಳನ್ನೆಲ್ಲ ಒಂದೊಂದಾಗಿ ಜೋಡಿಸುತ್ತಾ ಹೋದ. ಖುಷಿಯಿಂದ ಚೀರುವಂತಾಯಿತು ಅವನಿಗೆ. 


ಸೃಷ್ಟಿ ಯಾಮಿನಿಯ ಮಗಳಲ್ಲ! ದತ್ತು ಪುತ್ತಿ? “ನನ್ನ ಮಗಳುಎಂದು ಹೆಮ್ಮೆಯಿಂದ ನುಡಿದಳಲ್ಲಾ? ಯಾಮಿನಿಯಂತಹ ವಿಶಾಲ ಹೃದಯದ ಹೆಣ್ಣಿಗೆ ಪ್ರೀತಿ ಧಾರೆ ಎರೆಯಲು ಆ ಮಗು ತನ್ನದೇ ಆಗಿರಬೇಕಾಗಿಲ್ಲ. ಇರಬಹುದೇನೋ ಅಂದಿತು ಒಂದು ಮನಸ್ಸು. ಆಧಾರವಿಲ್ಲದೆ ನಂಬೆನೆಂದು ಸಾರಾಸಗಟಾಗಿ ನಿರಾಕರಿಸಿತು ಇನ್ನೊಂದು ಮನಸ್ಸು! ಯಾಮಿನಿಯನ್ನೇ ಕೇಳಲೇ? ಏನೆಂದಾಳು? ಉತ್ತರಿಸಿಯಾಳೇ? ಯಾಕಿಲ್ಲ? ಯಾಮಿನಿ ಇರುವುದೇ ಹಾಗೆ. ಅವಳ ಮಾತು, ಮನಸ್ಸು ಎಲ್ಲಾ ನೇರ….ನೇರ! 

ಅಷ್ಟರಲ್ಲೇ ಯಾಮಿನಿ ಹೊರಗೆ ಬಂದು, “ಬನ್ನಿ ಸುದೀಪ್, ಬಾರೇ ಚಿನ್ನ, ಊಟ ರೆಡಿ. ಕೈಕಾಲು ತೊಳೆದು ಒಳಗೆ ಬನ್ನಿ, ಊಟ ಬಡಿಸುತ್ತೇನೆ” ಅಂದಳು. ಸೃಷ್ಟಿ ಜಿಗಿಯುತ್ತಾ ಒಳಗೋಡಿದರೆ ತಾನೂ ಹಾಗೇ ಓಡುವ ಮನಸ್ಸಾಯಿತು ಇವನಿಗೆ; ಆದರೂ ಗಂಭೀರವಾಗಿಯೇ ಒಳನಡೆದ.

ಊಟದ ಮೇಜಿನ ಮುಂದೆ ಕೇಳಲೋ, ಬೇಡವೋ, ಹೇಗೆ ಕೇಳಲಿ, ಇಲ್ಲಿ ಕೇಳಲೇ, ಆಫೀಸಿನಲ್ಲೇ ಕೇಳಲೇ… ಏನೆಲ್ಲ ಗೊಂದಲಗಳ ನಡುವೆ ಮೊಸರನ್ನದ ಜೊತೆಗಿನ ಬಾಳಕದ ಮೆಣಸು ನೆತ್ತಿ ಹತ್ತಿತು. “ನಿಧಾನಕ್ಕೆ, ಮೇಲೆ ನೋಡಿ, ನೀರು ಕುಡೀರಿ…” ಅನ್ನುತ್ತಾ ನೀರಿನ ಲೋಟ ಕೈಗಿತ್ತವಳ ಕಣ್ಣಿನಲ್ಲಿ ಕಂಡ ಸ್ನೇಹಕ್ಕೆ ಮತ್ತೆ ಕೆಮ್ಮಿದ. ಊಟ ಮುಗಿಸಿದಾಗ ಯಾಮಿನಿಯ ಅಪ್ಪ, ತಾನೂ ತಾಂಬೂಲ ಹಾಕಿಕೊಂಡು ಇವನತ್ತ ತಟ್ಟೆ ಚಾಚಿದರು. ಸಂಕೋಚದಿಂದ “ಅಭ್ಯಾಸ ಇಲ್ಲ, ಕ್ಷಮಿಸಿ” ಅಂದ. ಸಣ್ಣದಾಗಿ ನಗುತ್ತಾ, “ಸಿಗರೇಟು ಬೇಕಾಗಿತ್ತಾ? ಹೊರಗೆ ಹೋಗಬೇಕಾ?” ಅಂದರು. “ಅವೆಲ್ಲ ಏನೂ ಇಲ್ಲ” ಅಂದವನ ಮುಖವನ್ನೇ ನೋಡಿ “ಹ್ಞೂಂ” ಎಂದು ಗೋಣು ಹಾಕಿದ್ದರಲ್ಲಿ ಇವನಿಗೇನೋ ವಿಶಿಷ್ಟ ಅರ್ಥ ಕಂಡಿತ್ತು.

ಮತ್ತೊಂದರ್ಧ ಘಂಟೆ ರಾಯರ ಜೊತೆ ಅದೂ ಇದೂ ಹರಟೆ ಹೊಡೆದು ಹೊರಟು ನಿಂತವನನ್ನು ತಡೆದದ್ದು ಯಾಮಿನಿ ಮಗಳಿಗೆ ಹಾಡುತ್ತಿದ್ದ ಜೋಗುಳ… “ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು, ನಿದ್ದೆ ಬರುವಳು ಹೊದ್ದು, ಮಲಗು ಮಗುವೆ, ಜೋ…. ಜೋ ಜೋ ಜೋ….”“ಎರಡೇ ನಿಮಿಷ ಇರಿ, ಈ ಹಾಡು ಹಾಡಿದ್ರೆ ಪುಟ್ಟಿಗೆ ಕ್ಷಣದಲ್ಲೇ ನಿದ್ದೆ ಬರುತ್ತೆ. ಯಾಮಿನಿಗೂ ಹೇಳಿ ಹೊರಟೀರಂತೆ. ಕೂತಿರಿ. ನನಗೂ ಹೊತ್ತು ಹೋಗತ್ತೆ” ಅಂದ ರಾಯರ ಮಾತಿಗೆ ಎದುರಾಡದಾದ.

ಅವರೆಂದಂತೆ ಎರಡೇ ನಿಮಿಷಗಳಲ್ಲಿ ಯಾಮಿನಿ ಕೋಣೆಯಿಂದ ಹೊರಗೆ ಬಂದಳು. “ನಾನಿನ್ನು ಬರ್ತೀನಿ” ಸುದೀಪ ಹೊರಟು ನಿಂತ. “ನಾಳೆ ಊಟಕ್ಕೂ ಇಲ್ಲೇ ಬನ್ನಿ” ಅಂದರು ರಾಯರು. “ಅಪ್ಪ! ಅವರಿಗೇನು ಕೆಲಸಗಳು ಇರುತ್ವೋ… ಹೇಳದೆ ಕೇಳದೆ ಅಪ್ಪಣೆ ಕೊಡಿಸ್ತೀರಲ್ಲ, ಸರಿಯಾ?” ಗದರಿಸುವಂತೆ ನುಡಿದರೂ ಅವಳ ಕಣ್ಣುಗಳು ಇವನ ಉತ್ತರ ಹುಡುಕುವಂತೆ ಅವನಿಗನ್ನಿಸಿತು. “ನಾಳೆ ತಾನೇ, ನಾಳೆ ನೋಡೋಣ” ಅನ್ನುತ್ತಾ ಮೆಟ್ಟಲಿಳಿದ ಸುದೀಪ. ಗೇಟಿನ ಬಳಿ ಬಂದವಳು ಏನೋ ಹೇಳಲು ಕಾಯುತ್ತಿದ್ದಾಳೆ ಎನ್ನಿಸಿ “ಏನು?” ಅಂದೇ ಬಿಟ್ಟ, ತಕ್ಷಣ ನಾಲಗೆ ಕಚ್ಚಿಕೊಂಡ. ಹದವಾದ ಬೆಳದಿಂಗಳಲ್ಲಿ ಯಾಮಿನಿಯ ಮುಖ ಮಿನುಗಿದ್ದನ್ನು ಗಮನಿಸಿಯೂ ಗೇಟಿನ ಕಡೆ ಬೆನ್ನು ಹಾಕಿ ಬೈಕಿನತ್ತ ನಡೆದ.
  ಸುದೀಪ ಮನೆಗೆ ಮರಳಿದಾಗ ಬಾಗಿಲ ತೆಳಗೆ ಅಂಚೆ ಪಾಕೀಟನ್ನು ಕಂಡು ತೆರೆದು ನೋಡಿದ. ತಾಯಿಯ ಪತ್ರ ಬಂದಿತ್ತು. ಕನ್ನಿಕಾಳ ತಂದೆ ಹಾಗು ತಾಯಿ ಮತ್ತೆ ಮತ್ತೆ ಕೇಳುತ್ತಿದ್ದಾರೆ. ನನಗೂ ಸಹ ಕನ್ನಿಕಾಳ ಮೇಲೆ ಮನಸ್ಸಿದೆ. ನೀನು ಬೇಗನೆ ಇಲ್ಲಿ ಬಂದು ಮುಂದಿನ ಕಾರ್ಯಕ್ಕೆ ಅನುಕೂಲ ಮಾಡಿಕೊಡು ಎನ್ನುವ ಸಾರಾಂಶ ಅದರಲ್ಲಿತ್ತು.
ಸುದೀಪ ತನ್ನಷ್ಟಕ್ಕೆ ನಕ್ಕು ಶಯ್ಯೆಗೆ ಉರುಳಿದ. ಕನಸಿನ ಕನ್ಯೆ ಕನಸಿನಲ್ಲಿ ಮೂಡಿದಳು. ಒಂದು ಎತ್ತರವಾದ ಶಿಖರದ ಮೇಲೆ ಯಾಮಿನಿ ನಿಂತುಕೊಂಡಿದ್ದಾಳೆ. ಕೆಳಗೆ ನಿಂತ ಸುದೀಪನನ್ನು ನೋಡಿ ಅವಳು ನಕ್ಕಳು. ಆ ನಗೆ ಅವನಿಗೊಂದು ಆಹ್ವಾನವಾಗಿತ್ತು. ‘ಸುದೀಪ, ನೀನು ನನ್ನ ಹತ್ತಿರ ಬರಬೇಕಾದರೆ ಈ ಎತ್ತರವನ್ನು ಏರಬೇಕಾಗುತ್ತದೆ. ಇದು ಸುಲಭವಲ್ಲ, ತಿಳಿಯಿತೇ?’ ಸುದೀಪ ತೇಕುತ್ತ, ತೇಕುತ್ತ ಮೇಲೇರತೊಡಗಿದ. ಕೊನೆಗೊಮ್ಮೆ ಅವಳ ಹತ್ತಿರ ಬಂದಾಗ ಅವಳು ಹಕ್ಕಿಯಂತೆ ಮೇಲೆ ಹಾರಿದಳು. ಸುದೀಪ ಹಾರಹೋಗಿ ದೊಪ್ಪನೆ ನೆಲಕ್ಕೆ ಬಿದ್ದ. ಅವಳು ನಕ್ಕು ಕೆಳಗೆ ಬಂದು ಇವನ ಕೈ ಹಿಡಿದು ಮೇಲೆಬ್ಬಿಸಿ, ಇವನ ಕಣ್ಣಲ್ಲಿ ಕಣ್ಣಿಟ್ಟು ನೋಡಿದಳು. ಇಡೀ ವಿಶ್ವವನ್ನೇ ತೊಯ್ಯಿಸುವ ಪ್ರೀತಿಯ ಧಾರೆ ಅವಳ ಕಣ್ಣುಗಳಲ್ಲಿ ಸುದೀಪನಿಗೆ ಕಂಡಿತು. ಇವಳು ಸಾಮಾನ್ಯ ಹೆಣ್ಣಲ್ಲ, ಇವಳಲ್ಲಿ ಮಾನವ ಸ್ನೇಹ ಹಾಗೂ ಆದರ್ಶ ಮೈಗೂಡಿವೆ. ಇವಳ ಕೈಹಿಡಿವವನು ಇವಳಂತಹ ಆದರ್ಶವಾದಿಯೇ ಆಗಬೇಕು ಎಂದುಕೊಂಡ ಸುದೀಪ.
…………………………………………………………………………     …………………………………………………………………………………

ನೆನಪಾಗಿ ಕಾಡುವ ಸುನಯನಾ – 3

ತಪ್ಪಿಸಿಕೊಳ್ಳಲು ಪ್ರಯತ್ನಿಸಿದಷ್ಟೂ ಸುನಯನ ಮತ್ತೆ ಮತ್ತೆ ಕಾಡ ಹತ್ತಿದಳು….

***************************
“ಬನ್ನಿ ಒಳಗೆ” ….ಮನೆಯ ಮುಖ್ಯದ್ವಾರದ ಎರಡೂ ಬದಿಗೆ ಕೈ ಆನಿಸಿ ನಿಂತ ಸುನಯನ. ಹೊಳೆಯುವ ಕಣ್ಣು, ದುಂಡುಮುಖ, ಅರೆಬಿರಿದ ತುಟಿ, ತಿದ್ದಿದ ಹುಬ್ಬು, ಹಣೆಯನ್ನು ಸ್ವಲ್ಪವೇ ಸ್ವಲ್ಪ ಆವರಿಸಿದ್ದ ಮೋಹಕ ಮುಂಗುರುಳು, ಸ್ನಿಗ್ಧನಗು… ಮತ್ತದೆಲ್ಲಕ್ಕೂ ಕಳಶವಿಟ್ಟಂತಿದ್ದ ಆಕೆಯ ಗುಳಿಬಿದ್ದ ಕೆನ್ನೆ….ಸುನಯನಳನ್ನು ಅದೇ ಮೊದಲ ಬಾರಿ ನೊಡುತ್ತಿದ್ದ ಸುದೀಪ ಸ್ತಭ್ದನಾದ…

“ಏನು ಹಾಗೆ ನೋಡ್ತಿದೀರಾ? ದಾಕ್ಷಿಣ್ಯ ಬೇಡ. ಬನ್ನಿ ಒಳಗೆ”…..

ಸುದೀಪನ ಮೈ ತುಂಬ ವಿದ್ಯುದ್ಸಂಚಾರ. ನಾನು ಇಂಥ ಚೆಲುವೆಯ ಜೊತೆ ಒಂದೇ ಕೊಡೆಯಡಿಯಲ್ಲಿ ಬಂದದ್ದಾ? ಆಗ ಮುಖನೋಡಬೇಕೆನ್ನಿಸಿದರೂ ಆಗಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಭುಜಕ್ಕೆ ಭುಜ ತಾಕಿದಾಗ ವಿಚಿತ್ರ ಖುಶಿಯೆನ್ನಿಸುತ್ತಿತ್ತು ಅಷ್ಟೆ.

“ಮನೆಯವರದ್ದೆಲ್ಲ ಊಟ ಆಯ್ತು. ನಮ್ಮಿಬ್ಬರದ್ದೆ ಬಾಕಿ” ಅಂತಂದ ಸುನಯನ ಬಾಳೆ ಎಲೆ, ಮಣೆ, ನೀರಿನ ಲೊಟವನ್ನಿಟ್ಟು ಸುದೀಪನನ್ನ ಊಟಕ್ಕೆ ಕರೆದಳು.

“ನಿಮ್ಮದು…..” ಅಂತ ಕೇಳಿದ ಸುದೀಪ.
“ನಾನೂ ಊಟ ಮಾಡ್ತೇನೆ. ನಿಮಗೆ ಮೊದ್ಲು ಬಡಿಸಿ..”
“ನಮ್ಮ ಮಗಳು ಬಡಿಸ್ತಾಳೆ. ಸಂಕೋಚ ಬೇಡ. ನಮ್ಮಲ್ಲಿಯ ಅಡುಗೆ ನಿಮಗೆ ಇಷ್ಟವಾಗುತ್ತೋ ಇಲ್ವೋ…” ಆಕೆಯ ತಾಯಿ ಉಪಚಾರಕ್ಕೆ ಬಂದಿದ್ದರು….
“ನನಗೆ ದೊಡ್ಡಸ್ತಿಕೆಯಿಲ್ಲ. ಬೇಕಿದ್ರೆ ನಾನೇ ಕೇಳ್ತೀನಿ..ರಸ್ತೆಯಲ್ಲಿ ಅಲೆಯುತ್ತಿದ್ದ ನನ್ನನ್ನ ಕರೆದು ಊಟ ಹಾಕಿಸ್ತಿದೀರಿ. ತುಂಬ ಉಪಕಾರ ಆಯ್ತು” …ಸುದೀಪ ಒಳ್ಳೆ ಹುಡುಗನ ಪೋಸು ಕೊಡಲು ಆರಂಭಿಸಿದ…

” ನೀವು ಕೆಲಸ ಮಾಡ್ತಿದೀರಾ?” ಆಕೆಯ ತಂದೆಯ ಆಗಮನ…

“ಏನಪ್ಪಾ, ಏನು ಕೆಲಸ ಮಾಡ್ತಾ ಇದೀಯಾ ಅಂತ ನಾನು ಕೇಳಿದ್ದು. ನಿನ್ನ ನೋಡಿದ್ರೆ ಏನೋ ಭಾರಿ ಕನಸು ಕಾಣ್ತಾ ಇರೋ ಹಾಗಿದೆಯಲ್ಲಾ! ”
ಹಹ್ಹಹ್ಹ…. ಯಾರೋ ಜೋರಾಗಿ ನಕ್ಕಂತಾಗಿ ಸುದೀಪ ಬೆಚ್ಚಿ ಬಿದ್ದ. ಅರೇ, ‘ಇದ್ಯಾರೋ ಹಿರಿಯರು, ಎಲ್ಲಿದ್ದೇನೆಂದು’ ಎಚ್ಚರಗೊಂಡ ಸುದೀಪನಿಗೆ ತನ್ನನ್ನೇ ಪಿಳಿ-ಪಿಳಿ ನೋಡುತ್ತಿದ್ದ ಸೃಷ್ಟಿ ಕಾಣಿಸಿದಳು, ಹೌದು, ಥೇಟ ಸುನಯನನಳ ಕಂಗಳೇ!!! ಆ ಮುದ್ದು ಮರಿಯ ಸುಂದರ ಸಮ್ಮೋಹಕ ಕಣ್ಣುಗಳು, ಸುದೀಪನ ಮನಸ್ಸನ್ನು ನೀಲಿಕೇರಿಯ ನೆನಪಿನಂಗಳಕ್ಕೆ ಜಾರಿಸಿಬಿಟ್ಟಿದ್ದವು.
“ಇವರು ಸ್ವಲ್ಪ ಹಾಗೇ ಅಪ್ಪಾ, ಸ್ವಲ್ಪ ಕನಸು ಕಾಣೋದು ಜಾಸ್ತಿ” ಯಾಮಿನಿಯ ಮಾತುಗಳಿಂದ, ಆ ಹಿರಿಯರು ಅವಳ ತಂದೆ ಎಂದು ಅರಿವಾಗಿ ‘ನಮಸ್ಕಾರ’ ಹೇಳಿದ.

“ಬಾರಪ್ಪಾ, ನಿಧಾನಕ್ಕೇ ಕೂತ್ಕೊಂಡು ಮಾತಾದಡೋಣ. ಪಾಪ, ಆಗಲಿಂದ ಸುಮ್ನೇ ನಿಂತೇ ಇದೀಯಲ್ಲಾ” ಆತ್ಮೀಯವಾಗಿ ಕರೆದವರನ್ನಿ ಹಿಂಬಾಲಿಸಿ, ಒಳಗಿನ ಸೋಫಾ ಮೇಲೆ ಕುಳಿತ. ‘ಯಾಮಿನಿಗೇ ಮದುವೆ ಇಲ್ಲ, ಆದರೆ ಮಗಳಿದ್ದಾಳೆ’ ಎನ್ನುವ ಗೊಂದಲ, ಮತ್ತೆ ಮತ್ತೆ ಕಾಡುವ ಸುನಯನಳ ನೆನಪುಗಳಲ್ಲಿ ಮುಳುಗಿ ಮೂಕನಂತಿದ್ದ . ‘ಪಾಪ, ಬಹಳ ಸಂಕೋಚದ ಹುಡುಗ’ ಎಂದು ಭಾವಿಸಿದ ರಾಯರು “ನಮ್ಮ ಯಾಮಿನಿ ನಿನ್ನ ವಿಷಯ ಬಹಳ ಹೇಳ್ತಿರ್ತಾಳೆ. ಯಾವೂರು, ಅಪ್ಪ ಅಮ್ಮ ಏನು ಮಾಡ್ತಾರೆ?” ಎಂದು ಲೋಕಾಭಿರಾಮ ಶುರು ಮಾಡಿದರು. ಅವರ ಅಪ್ಯಾಯತೆಯಿಂದ ಚೇತರಿಸಿಕೊಂಡ ಸುದೀಪ “ಮಂಗಳೂರು ಹತ್ತಿರ ನಮ್ಮೂರು. ಅಪ್ಪ ಇಲ್ಲ, ಚಿಕ್ಕವನಾಗಿದ್ದಾಗಲೇ ಹೋಗಿಬಿಟ್ರು. ಅಮ್ಮ ಒಬ್ರೇ, ಊರಲ್ಲೆ ಇದಾರೆ” ಎಂದು ಪರಿಚಯ ಹೇಳಿಕೊಂಡ.

ಆಷ್ಟು ಹೊತ್ತಿಗೆ ಸೃಷ್ಟಿಯನ್ನೆತ್ತಿಕೊಂಡ ಯಾಮಿನಿ ಅಲ್ಲಿಗೆ ಬಂದಳು.

`ಬಾ ಪುಟ್ಟಿ…’ಸೃಷ್ಟಿಯೆಡೆಗೆ ಕೈ ಚಾಚಿ ಕರೆದ `ಇವನನ್ನು ನಂಬಬಹುದೇ…?’ ಎಂದು ತನ್ನ ಬಟ್ಟಲು ಕಂಗಳಲ್ಲಿ ಪ್ರಶ್ನೆ ತುಳುಕಿಸುತ್ತಾ ಸುದೀಪನನ್ನೇ ನಿರುಕಿಸಿದಳು ಸೃಷ್ಟಿ
ಸುನಯನಳಿಗೂ ನನ್ನ ಬಗ್ಗೆ ಇದೇ ಸಂದೇಹ ಇತ್ತಾ? ಒಂದುಕ್ಷಣ ಅವನ ಮನದಲ್ಲಿ ಸಂದೇಹ ಕಾಡಿತು `ಪುಟ್ಟೀ…ಅಂಕಲ್ ತುಂಬಾ ಒಳ್ಳೆಯವರಮ್ಮಾ…ಹೋಗು ..’
ಮಗಳನ್ನು ಪುಸಲಾಯಿಸುತ್ತಿದ್ದಳು ಯಾಮಿನಿ.`ಹೋಗು ಪುಟ್ಟಮ್ಮಾ..’ಯಾಮಿನಿಯ ತಂದೆಯೂ ದನಿಗೂಡಿಸಿದರು ಸೃಷ್ಟಿಯ ಮನದಲ್ಲಿನ್ನೂ ಸುದೀಪನ ಬಗ್ಗೆ ನಂಬಿಕೆ ಬಂದತಿಲ್ಲಾ…
ಅವನನ್ನೇ ನೆಟ್ಟದೃಷ್ಟಿಯಿಂದ ನೋಡುತ್ತಿದ್ದಳು.
ಯಾಮಿನಿಯ ತಂದೆ ಅಂದಿನ ಪೇಪರ್ ಕೈಗೆತ್ತಿಕೊಳ್ಳುತ್ತಾ `ಇಲ್ಲೇ ಊಟ ಮಾಡಿಕೊಂಡು ಹೋಗೀ…ಇಷ್ಟೊತ್ತಾಗಿದೆ ಇನ್ನು ರೂಮಿಗೆ ಹೋಗಿ ಏನು ಮಾಡ್ಕೋತೀರಾ…’ಅಂದರು
`ಪುಟ್ಟಿ ನೀನು ಅಂಕಲ್ ಹತ್ರ ಹೋಗ್ತೀಯಾ.. ಜಾಣೆ… ಬಂಗಾರಿ… ಅಮ್ಮ ಅಡುಗೆ ಮಾಡುತ್ತೆ..’ಯಾಮಿನಿಯ ಮಾತಿಗೆ ಸೃಷ್ಟಿ ಬರಿದೇ ತಲೆ ಆಡಿಸಿ ನಕಾರ ಸೂಚಿಸಿದಳು
`ಅಂಕಲ್ ನಿನ್ನ ಹೊರಗಡೆ ಕರ್ಕೊಂಡು ಹೋಗ್ತಾರೆ’ ಮೆಲ್ಲಗೆ ಬಾಣ ಬಿಟ್ಟಳು ಯಾಮಿನೀ.`ನಿಂಗೆ ಬಣ್ಣಬಣ್ಣದ ಹೂವು,ಕಾರು,ಅಂಗಡಿ ಎಲ್ಲಾ ತೋರುಸ್ತಾರೆ…’
ಈ ಬಾರಿ ಸೃಷ್ಟಿ ಹೊರಗಿನ ಬಣ್ಣದ ಜಗತ್ತಿನ ಆಕರ್ಷಣೆಯಿಂದ ತಪ್ಪಿಸಿಕೊಳ್ಳಲಾರದೇ ಹೋದಳು! ನಸು ನಗುತ್ತಾ ಸುದೀಪನ ಚಾಚಿದ ತೋಳುಗಳೊಳಗೆ ಬಂದುಬಿಟ್ಟಳು.

`ಇದೇನೋ ಮಗು… ಆದರೆ ದೊಡ್ಡವರಿಗೂ ಹೊರಗಿನ ಬಣ್ಣದ ಜಗತ್ತಿನ ಆಕರ್ಷಣೆಯಿಂದ ತಪ್ಸಿಸಿ ಕೊಳ್ಳುವುದು ಕಷ್ಟವೇನೋ…’ಸೃಷ್ಟಿಯನ್ನು ತೋಳಲ್ಲಿ
ತುಂಬಿಕೊಂಡು ಯೋಚಿಸಿದ ಸುದೀಪ. ಫಾರಿನ್ ಹುಡುಗ ನಾನು ತೋರಿಸಲಾಗದ ಹೊರಗಿನ ಬಣ್ಣದ ಜಗತ್ತನ್ನು ತೋರಿಸುವನೆಂದು ಅವನನ್ನು ಒಪ್ಪಿ ನಡೆದಳೇ ಸುನಯನಾ?
ಈಗ ಯಾಮಿನೀ`ನಿಂಗೆ ಬಣ್ಣಬಣ್ಣದ ಹೂವು,ಕಾರು,ಅಂಗಡಿ ಎಲ್ಲಾ ತೋರುಸ್ತಾರೆ’ ಎಂದು ಸೃಷ್ಟಿಗೆ ಹೇಳಿದ ರೀತಿಯಲ್ಲೇ ಸುನಯನಳ ಅಪ್ಪ
ನನ್ನ ಸುನೀ ಗೂ ಪುಸಲಾಯಿಸಿ ಮದುವೆಗೆ ಒಪ್ಪಿಸಿ ಬಿಟ್ಟರೇ?

ಯಾಮಿನಿಯ ದನಿಗೆ ಎಚ್ಚೆತ್ತ ಸುದೀಪ.

`ತುಂಬಾ ದೂರ ಕರ್ಕೊಂಡು ಹೋಗ್ ಬೇಡೀ…ಅವಳ ಊಟದ ಟೈಂ ಆಯಿತು… ಹತ್ತೇ ಹತ್ತು ನಿಮಿಷ ಅಡುಗೆ ಆಗಿ ಬಿಡುತ್ತೆ ಬೇಗ ಬಂದ್ಬಿಡಿ..’ ಅನ್ನುತ್ತಾ ಅಡುಗೆ ಮನೆಗೆ ನಡೆದಳು. ಯಾಮಿನಿ. ಯಾಮಿನಿಯ ಪುಟ್ಟ ಅಂಗಳದ ಹತ್ತೆಂಟು ಕುಂಡಗಳಲ್ಲಿ ಬಣ್ಣಬಣ್ಣದ ಹೂಗಳು ಅರಳಿದ್ದವು `ನೋಡು ಪುಟ್ಟೀ…ಕೆಂಪುಹೂ.. ಹಳದಿ ಹೂ..
ಇಲ್ ನೋಡೂ..ಎಷ್ಟ್ ಚೆನ್ನಾಗಿದೆ’ ಹೂಗಳನ್ನು ನೋಡಿ ಕಣ್ಣು ಅರಳಿಸಿ ನಕ್ಕಳು ಸೃಷ್ಟಿ.

“ಪ್ಯಾರೀ ಹೇ ಪೂಲೋಂಕಿ ಪಂಖುರಿಯಾ…
ಪರ್ ತೇರೀ ಫಲಕೋಂಸಿ ಪ್ಯಾರೀ ಕಹಾ…
ಸುನಯ್ ನಾ…”

ಯೇಸು ದಾಸ್ ಸುದೀಪನ ಕಿವಿಯಲ್ಲಿ ಗುಣುಗುಣಿಸಿದ…

ಯಾಮಿನಿ, ಯಾಮಿನಿ..ಹೇಳೆ ಯಾರು ನೀ? – 2

 ಕತೆಗಾರರು:- sritri, ಶ್ರೀನಿಧಿ.ಡಿ.ಎಸ್ , ಸುನಾಥ, ಮನಸ್ವಿನಿಜಗಲಿ ಭಾಗವತ, ಸುಶ್ರುತ ದೊಡ್ಡೇರಿ, shiv, ಜ್ಯೋತಿ, ಮಾಲಾ, ಶ್ರೀ, poornima

 ———————————————————————–

ಸಂಜೆ ಮನೆಗೆ ವಾಪಸಾಗುವಾಗ ಏನೋ ಯೋಚಿಸುತ್ತಾ ನಡೆಯುತ್ತಿದ್ದವನು ಎದುರಿಗಿದ್ದ ಗುಂಡಿ ನೋಡದೆ ಇನ್ನೇನು ಆಯ ತಪ್ಪಿ ಉರುಳುತ್ತಿದ್ದ.ಎದುರು ಅಂಗಡಿಯ ಶೆಟ್ಟಿ
ಹೋ…ಹುಷಾರು ಮಾರಾಯ…ಏನು ಅಷ್ಟೊಂದು ಯೋಚನೆ…?ಅಂತ ಕೂಗಿದಾಗ ವಾಸ್ತವಕ್ಕೆ ಬಂದು ಬರಿದೇ ನಕ್ಕು ತಲೆ ಆಡಿಸಿದ ಸುದೀಪ.
ಬೆಂಗಳೂರಿನ ರಸ್ತೆಯಲ್ಲಿ ಗುಂಡಿಗಳಲ್ಲದೇ ಹೂವ ಇರುತ್ತಾ ಗುರೂ…’ಎಂದು ಅಂಗಡಿ ಕಟ್ಟೆ ಮೇಲೆ ಕೂತು ಸಿಗರೇಟು ಸುಡುತ್ತಿದ್ದ ಪಡ್ಡೆಯೊಬ್ಬ ನಗುತ್ತಾ ಕೇಳಿದಾಗ –
ಜೀವನಕ್ಕೂ,ಬೆಂಗಳೂರಿನ ರಸ್ತೆಗಳಿಗೂ ಎಷ್ಟೊಂದು ಸಾಮ್ಯತೆ ಇದೆ ಅಲ್ಲಾ ಅಂತ ಅನ್ನಿಸಿ ಒಂಚೂರು ನಗು ಬಂತು

ಶೆಟ್ಟಿ ತನ್ನ ಲಡಕಾಸಿ ರೇಡಿಯೋ ಟ್ಯೂನ್ ಮಾಡುತ್ತಿದ್ದವನು ಕೊನೆಗೊಂದು ಸ್ಟೇಶನ್ನಿಗೆ ರೇಡಿಯೋ ಸ್ಥಾಪನೆ ಮಾಡಿ ಕೆಲಸದ ಹುಡುಗರಿಗೆ ಜೋರು ದನಿಯಲ್ಲಿ ಬೈಯಲಾರಂಭಿಸಿದ.
ಮೆಟ್ಟಿಲು ಹತ್ತುತ್ತಿದ್ದ ಸುದೀಪನಿಗೆ ಶೆಟ್ಟಿಯ ರೇಡಿಯೋದಲ್ಲಿನ ಯೇಸುದಾಸನ ಧ್ವನಿ ಅಲೆ ಅಲೆಯಾಗಿ ತೇಲಿ ಬಂತು `ಸುನಯ್ ನಾ…ಸುನಯ್ ನಾ…’

ಸುನಯನಳ ನೆನಪು ಜಗ್ಗಿ ಕಾಡಿತು.

ಮನೆಗೆ ಬಂದು ಒಂದು ಕಪ್ಪು ಕಾಫಿ ಮಾಡಿಕೊಂಡು ಟಿ.ವಿ ಹಾಕಿಕೊಂಡು ಕೂತ.ಭಾರತ ತಂಡ ವಿಶ್ವ ಕಪ್ ಸೋತಿದ್ದು ಯಾಕೆ ಎಂಬ ಚರ್ಚೆ`ಸೋತಾಯಿತು…ಈಗ ಚರ್ಚೆ ಮಾಡಿದರೆ ಕಪ್ಪು ಬಂದು ಕೈಯಲ್ಲಿ ಕೂತು ಕೊಳ್ಳುತ್ತಾ…’ಅಂತ ಗೊಣಗಿಕೊಳ್ಳುತ್ತಾ ಚಾನಲ್ ಬದಲಿಸಿದ. ಯಾವುದೋ ಕೆಟ್ಟ ಸಿನಿಮಾ ಹಾಡು ಇವರುಗಳಿಗೆ ಅಭಿರುಚಿಯೇ ಇಲ್ಲವೇ ಅಂತ ಪ್ರಶ್ನಿಸಿಕೊಳ್ಳುತ್ತಾ ಚಾನಲ್ ಗಳ ಬದಲಿಸುತ್ತಿರುವಾಗ ಅನುರಾಧ ಪಟೇಲ್ ಕಂಡಳು.
ಹದಿನೈದು ವರ್ಷಗಳ ಹಿಂದಿನ ಜಾಹಿರಾತು! ಸೀತಾಬಾಯಿಯ ಮೆಚ್ಚಿನದ್ದು ಚಿತ್ರಮಂಜರಿಯ ನಡುವೆ ಅನುರಾಧಳನ್ನು ಕಂಡಾಗಲೆಲ್ಲಾ `ಎಷ್ಟು ಚೆನ್ನಾಗಿ ರೇಶ್ಮೆ ಸೀರೆ ಉಟ್ಟು ಕಾಡಿಗೆ ಹಚ್ಕೋತಾ ಇದಾಳೆ ನೋಡೋ…’ ಅಂತ ಪ್ರತಿಸಾರಿ
ಶೃಂಗಾರ್ ಕಾಡಿಗೆಯ ಆ ಜಾಹಿರಾತು ಬಂದಾಗ ಅಮ್ಮ ಮೆಚ್ಚಿಕೊಂಡು ಹೇಳುತ್ತಿದ್ದರಲ್ಲಾ ಅಂತ ನೆನಪಿಸಿಕೊಂಡ ಚಿಕ್ಕಂದಿನಲ್ಲಿ ನಮ್ಮನೆಯ ಕಪ್ಪು -ಬಿಳುಪು ಟಿ.ವಿಯಲ್ಲಿ ಕಂಡಷ್ಟು ಚೆನ್ನಾಗಿ ಈ ಕಲರ್ ಟಿವಿಯಲ್ಲಿ ಅನುರಾಧ ಕಾಣುತ್ತಿಲ್ಲ ಅನ್ನಿಸಿತು `ನೀನ್ಯಾರದಾದ್ರೂ ಮನೆಯ ಕಲರ್ ಟಿವಿಯಲ್ಲಿ ಇದ್ನ ನೋಡಿದರೆ ಅವಳ ಸೀರೆ ಬಣ್ಣ ಯಾವುದೂ ಅಂತ ತಿಳಿದು ಹೇಳೋ ಅಂತ ಅಮ್ಮ ಅವನ ಹತ್ರ ಕೇಳುತ್ತಿದ್ದದ್ದು ನೆನಪಿಗೆ ಬಂತು. ವಾಲ್ಯೂಮ್ ಜೋರು ಮಾಡಿದ ಅನುರಾಧ ಪಟೇಲ್ ತನ್ಮಯಳಾಗಿ ಹಾಡಿಕೊಳ್ಳುತ್ತಾ ಕಾಡಿಗೆ ಬಳಿದುಕೊಳ್ಳುತ್ತಿದ್ದಳು `ನಯನ ಸುನಯನ ತಾವರೆ ಎಸಳು… ಶೃಂಗಾರ್ ಕಾಡಿಗೆಯಿಂದ ತೀಡಿ ತೀಡಿ…’

ಮತ್ತೆ ಸುನಯನಳ ನೆನಪು….
ತಾವರೆ ಎಸಳಿನಂತಾ ಕಣ್ಣು ಹೊಂದಿದ್ದ,ಕಾಡಿಗೆ ಹಚ್ಚಿಕೊಳ್ಳುತ್ತಿದ್ದ,ಸೀರೆ ಉಡುತ್ತಿದ್ದ ಸುನಯನ ಕೂಡಾ ಅಮ್ಮನಿಗೆ ಇಷ್ಟ ಆಗುತ್ತಿದ್ದಳಾ?
ಸುನಯನಳನ್ನು ಸೊಸೆ ಮಾಡಿ ಕೊಳ್ಳಲು ಅಮ್ಮ ಒಪ್ಪಿಕೊಳ್ಳುತ್ತಿದ್ದರಾ?ಅಥವಾ ಕನ್ನಿಕಾಳಲ್ಲದೇ ಇನ್ಯಾರೂ ನನ್ನ ಸೊಸೆ ಆಗಲು ಸಾಧ್ಯವಿಲ್ಲಾ ಅಂತ ಹಟ ಹಿಡಿಯುತ್ತಿದ್ದರಾ? ತಲೆ ಕೊಡವಿಕೊಂಡ.

ಅಮ್ಮ ಒಪ್ಪಿಕೊಳ್ಳುತ್ತಿದ್ದರೋ ಇಲ್ಲವೋ ಸುನಯನ ನನ್ನವಳಾಗುವುದು ವಿಧಿ ಒಪ್ಪಿಕೊಳ್ಳಲಿಲ್ಲವಲ್ಲಾ… ನಿಟ್ಟುಸಿರು ಬಿಟ್ಟ.

ಸುದೀಪನನ್ನು ಕಾಡಲು ತಮಾಶಿಗೆಂದು`ಐಯ್ಯಾಮ್ ಎಂಗೇಜ್ಡ್ ‘ಅಂತ ಯಾವ ಘಳಿಗೆಯಲ್ಲಿ ಸುನಯನ ಹೇಳಿದ್ದಳೋ ಅಸ್ತು ದೇವತೆಗಳು `ಅಸ್ತು ಅಸ್ತು’ ಅಂದು ಬಿಟ್ಟಿದ್ದರು.

ಸುನಯನಳ ಜತೆ ನೀಲಿಕೇರಿಯ ದಿಬ್ಬದ ಮೇಲೆ ಸೂರ್ಯಾಸ್ತ ನೋಡುತ್ತ, ಅದೂ ಇದೂ ಹರಟುತ್ತ ಕುಳಿತಿದ್ದ ಘಳಿಗೆ ನೆನಪಾಯಿತು…
ಇದ್ದಕ್ಕಿದ್ದಂತೆ ಅವಳೇನೋ ಹೇಳಬೇಕು ಅಂದುಕೊಳ್ಳುತ್ತಿದ್ದಾಳೆ ಅನಿಸಿತು ಸುದೀಪನಿಗೆ. ಕೇಳಿಯೇ ಬಿಟ್ಟ, ‘ಏನಾದ್ರೂ ಹೇಳೋದಿತ್ತಾ?’ ‘ಇಲ್ವಲ್ಲಾ’ ಅಂತ ಜಲಪಾತದಂತೆ ನಕ್ಕಳು ಸುನಯನ. ಮತ್ತೆ ತನಗೆ ಯಾಕೆ ಹಾಗನಿಸಿತೋ ಅರ್ಥವಾಗಲಿಲ್ಲ.
ದಿಬ್ಬದಿಂದ ಕೆಳಗೆ ಬರುವ ವೇಳೆಗೆ ಅದೇನೋ ವಿವರಿಸಲಾಗದ ಬಾಂಧವ್ಯ ಇಬ್ಬರಲ್ಲೂ ಬೆಳೆದಿದೆಯೆಂದು ಆತನಿಗನಿಸಿತು. ಇನ್ನೊಮ್ಮೆ ಆಕೆಗೆ ‘ಐ ಲವ್ ಯು’ ಅನ್ನುವುದರಲ್ಲಿ ಅರ್ಥವಿಲ್ಲವೆನಿಸಿತು. ಸುದೀಪನ ಮನಸಲ್ಲಿ ಆಗಲೇ ಕನಸುಗಳು ದಿಬ್ಬಣ ಹೊರಟಿದ್ದವು…
**********
ಮರುದಿನವೇ ಎಲ್ಲಾ ಲೆಕ್ಕಾಚಾರ ತಲೆ ಕೆಳಗಾಗಿತ್ತು. ರಮೇಶ ವಾಪಸ್ ಬಂದಿದ್ದ. ಅವನ ಜತೆ ಸುತ್ತಾಡಿ ಸಂಜೆ ವಾಪಸ್ ಬರುವಾಗ ಸುನಯನಳಿಗೆ ಮದುವೆ ನಿಶ್ಚಯವಾಗಿದೆ, ಹುಡುಗ ಫಾರಿನ್ ನಲ್ಲಿ ಇರುವ ಕಾರಣ ಬೇಗನೆ ಮದುವೆ ಮುಗಿಸಬೇಕು ಅಂತ ಎಲ್ಲರೂ ನಿರ್ಧರಿಸಿ, ಮದುವೆಗೆ ದಿನ ನಿಶ್ಚಯಿಸಿ ಆಗಿತ್ತು.
ಇನ್ನು ಆ ಊರಿನಲ್ಲಿರುವುದು ಬೇಡವೆನಿಸಿ, ಬೆಂಗಳೂರಿಗೆ ವಾಪಸ್ಸಾದ. ಆದರೂ ಯಾಕೋ ಮನಶಾಂತಿಯಿಲ್ಲವೆನಿಸಿ ಮತ್ತಷ್ಟು ದಿನ ರಜಾ ತೆಗೆದುಕೊಂಡು ಊರಿಗೆ ಹೋಗಿ, ಅಮ್ಮನ ಜತೆ ಇದ್ದು, ಸ್ವಲ್ಪ ಮಟ್ಟಿಗೆ ಮನಸು ತಹಬಂದಿಗೆ ಬಂದ ಮೇಲೆ ವಾಪಸ್ ಬೆಂಗಳೂರಿಗೆ ಬಂದು ಬಿಟ್ಟಿದ್ದ ಸುದೀಪ.
***********
ಯಾಮಿನಿಯ ಜತೆ ಹೊಸ ಪ್ರಾಜೆಕ್ಟ್ ಬಗ್ಗೆ ಡಿಸ್ ಕಷನ್ ಮಾಡಬೇಕಿತ್ತು. ಅವಳ ಚೇಂಬರ್ ಗೆ ಫೈಲ್ ತೆಗೆದುಕೊಂಡು ಹೋದ ಸುದೀಪ.
ಅವನು ಒಳಗೆ ಪ್ರವೇಶಿಸುವುದಕ್ಕೂ ಅವಳ ಫೋನ್ ರಿಂಗ್ ಆಗುವುದಕ್ಕೂ ತಾಳೆಯಾಯಿತು.
‘ಎಕ್ಸ್ಕ್ಯೂಸ್ ಮಿ, ಒಂದೇ ನಿಮಿಷ’ ಅನ್ನುತ್ತ ಫೋನ್ ರಿಸೀವ್ ಮಾಡಿದಳು.
ಫೈಲ್ ಟೇಬಲ್ ಮೇಲಿಟ್ಟ ಸುದೀಪ ನೀರು ಜಗ್ ನಿಂದ ಬಗ್ಗಿಸಿ ಕುಡಿಯಹೊರಟ.
ಫೋನ್ ನಲ್ಲಿ ಆಕೆ ಹೇಳುತ್ತಿದ್ದಳು… ‘ಇಲ್ಲ, ಇವತ್ತು ಬ್ಯುಸಿ, ಸಿಗಕ್ಕಾಗಲ್ಲ ಕಣೋ…’
‘ಹಾಗೇನೇ ಅಂದ್ಕೋ. ಸತ್ಯ ಇದ್ರೂ ಇರಬಹುದು’
ಮಾತಾಡುತ್ತ ಕಿಟಿಕಿ ಕಡೆ ನಡೆದಳು… ಬೇಡ-ಬೇಡವೆಂದರೂ ಆಕೆಯ ಮಾತುಗಳು ಸುದೀಪ್ ನ ಕಿವಿಯ ಮೇಲೆ ಬೀಳುತ್ತಿದ್ದವು…
‘ಎರಡು ಕೈ ಸೇರಿದರೆ ಮಾತ್ರ ಚಪ್ಪಾಳೆ ಅಲ್ವಾ?’
‘………………..’
‘ಟ್ರೈನ್ ನಲ್ಲಿ ಹೋಗ್ತಾ ನೂರಾರು ಸ್ಟೇಷನ್ಸ್ ಸಿಗ್ತಾವೆ, ಪ್ರತಿ ಸ್ಟೇಷನ್ ನಲ್ಲೂ ಇಳಿಯಕ್ಕಾಗತ್ತಾ? ಎಷ್ಟೊಂದು ಸಲ ಯಾವುದೋ ಒಂದು ಸ್ಟೇಷನ್ ಚಂದ ಕಂಡ್ರೆ ಅಲ್ಲಿಳೀತೀವಿ, ತಿಂಡಿ ತಿಂದ್ಬಿಟ್ಟು ಮತ್ತೆ ಟ್ರೈನ್ ಹತ್ಕೋತೀವಿ ಅಲ್ವಾ?’
ಸುದೀಪ ಕೇಳುತ್ತಾ ಕುಳಿತಿದ್ದ, ಅವಳ ಎಲ್ಲಾ ಮಾತು ತನಗೆ ಅರ್ಥವಾಗುತ್ತಿವೆಯೆನಿಸಿತು.
‘………………..’
‘ಹುಚ್ಚ ಕಣೋ ನೀನು, ದೇವದಾಸನ ಕಾಲ ಎಂದೋ ಮುಗೀತು’
‘………………..’
‘ಇಲ್ಲ ಕಣೋ, ಬದುಕಿಗೆ ಫುಲ್ ಸ್ಟಾಪ್ ಒಂದೇ ಇರತ್ತೆ, ನಡುವಲ್ಲಿ ಬರುವವೆಲ್ಲಾ ಕೋಮಾಗಳೇ.. ಫುಲ್ ಸ್ಟಾಪ್ ಬರೋತನ್ಕ ಬದುಕಿನ ಗಾಡಿ ಸಾಗ್ತಿರತ್ತೆ, ಸಾಗ್ತಿರಬೇಕು…’
‘………………..’
‘ನೋಡು, ನಾನು ಹೇಳಬೇಕಾದ್ದು ಹೇಳಿದ್ದೀನಿ, ಆಗದೇ ಇರೋದು ಮನ್ಸಲ್ಲಿಟ್ಕೊಂಡು ಈ ಥರ ತಲೆ ತಿನ್ನೋದಾದ್ರೆ ಇವಾಗ್ಲೇ ನಿಂಗೆ ಗುಡ್ ಬೈ…’
‘………………..’
‘ಇಲ್ಲ. ಯಾವತ್ತೂ ಇಲ್ಲ’
‘………………..’
‘ಸುಮ್ಮನೇ ಅದೇ ಮತ್ತೆ ನೆನಪಿಸ್ಕೊಂಡು ಕೊರಗ್ಬೇಡ, ವಿ ಆರ್ ನಾಟ್ ಮೇಡ್ ಫಾರ್ ಈಚ್ ಅದರ್, ನಿನ್ನ ಸ್ಟೇಶನ್ ಬೇರೆ ಇದೆ, ಗುಡ್ ಬೈ’
ಫೋನ್ ಕಟ್ ಮಾಡಿ ಬಂದಳು, ಸುದೀಪ್ ಎದುರಿಗೆ ಕುಳಿತುಕೊಂಡಳು. ಸುಮ್ಮನಿದ್ದಳು.
ಸುದೀಪ್ ಗಂಟಲಲ್ಲಿ ಪ್ರಶ್ನೆಯೊಂದು ಸಿಕ್ಕಿ ಹಾಕಿಕೊಂಡಿತ್ತು… ಎರಡು ಕ್ಷಣ ತೂಕ ಮಾಡಿದ, ಮೂರನೇ ಕ್ಷಣಕ್ಕೆ ಕೇಳಿಯೇ ಬಿಟ್ಟ..
‘ಯಾವುದೋ ಸ್ಟೇಶನ್ ನಮ್ದು ಅನ್ಕೊಂಡು ಇಳಿದು ಬಿಟ್ಟಿರ್ತೀವಲ್ಲ, ನಮ್ದಲ್ಲ ಅಂತ ಗೊತ್ತಾದ್ಮೇಲೆ ಏನ್ಮಾಡೋದು?’
‘ಇನ್ನೊಂದು ಗಾಡಿ ಬಂದೇ ಬರತ್ತೆ, ಹತ್ಕೊಂಡು ಹೋಗೋದು’ ಅನ್ನುತ್ತ ನಕ್ಕಳು ಯಾಮಿನಿ.
ಆ ನಗೆಯ ಹಿಂದಿನ ಭಾವವನ್ನು ಅಳೆಯಲಾಗಲಿಲ್ಲ ಸುದೀಪ್ ಗೆ.
‘ಹೊಸ ಪ್ರಾಜೆಕ್ಟ್ ಡಿಸ್ ಕಷನ್ ಮಾಡಿ ಫೈನಲೈಸ್ ಮಾಡೋಣ ಅಂತ ಬಂದೆ, ಏನ್ಮಾಡೋಣ?’ ಅಂತ ಕೇಳಿದ.
‘ಏನ್ಮಾಡೋಣ ಅಂತ ಕೇಳ್ತಿದೀರಾ? ಥ್ಯಾಂಕ್ಸ್, ಅರ್ಥ ಮಾಡ್ಕೊಂಡಿದ್ದಕ್ಕೆ… ಮಧ್ಯಾಹ್ನ ನಂತ್ರ ಇಟ್ಕೊಳ್ಳೋಣ್ವಾ?’
‘ಸರಿ, ಹಾಗೇ ಮಾಡೋಣ’ ಅನ್ನುತ್ತ ಎದ್ದು ಬಂದ ಸುದೀಪ.
*************
ಸುದೀಪನ ಏನೇನೋ ಫಿಲಾಸಾಫಿಕಲ್ ಪ್ರಶ್ನೆಗಳಿಗೆ, ಯಾಮಿನಿಯ ಪ್ರಾಕ್ಟಿಕಲ್ ಉತ್ತರಗಳು ತಯಾರಿರುತ್ತಿದ್ದವು. ಕಾಲು ನೆಲದ ಮೇಲೆ ಇಟ್ಟುಕೊಂಡು ಪುಟ್ಟ ಪುಟ್ಟ ಸಂತಸಗಳನ್ನು ಅನುಭವಿಸುತ್ತಾ ದೊಡ್ಡ ದೊಡ್ಡ ಗುರಿಗಳ ಜತೆ ನಡೆಯುವ ಯಾಮಿನಿಯ ಬಗ್ಗೆ ಅದೇನೋ ಅಭಿಮಾನ ಬೆಳೆದುಕೊಂಡಿತು ಸುದೀಪ್ ಗೆ. ತನಗಿಂತ ದೊಡ್ಡವಳಾದ ಅವಳು ಫ್ರೆಂಡ್, ಗೈಡ್, ಫಿಲಾಸಫರ್- ಎಲ್ಲವೂ ಆದಳು.
ಅದೊಂದು ದಿನ ಸುದೀಪನನ್ನು ತನ್ನ ಮನೆಗೆ ಆಮಂತ್ರಿಸಿದಳು ಯಾಮಿನಿ. ಸಂಜೆ ಅವಳ ಮನೆಗೆ ಅವಳ ಜತೆಗೇ ಹೋದ.
ಬಾಗಿಲು ಬೆಲ್ ಮಾಡಿದಾಗ ಆಯಾ ಬಾಗಿಲು ತೆಗೆದಳು. ಒಳಗೆ ಕಾಲಿಡುತ್ತಿದ್ದಂತೆಯೇ ೩-೪ ವರ್ಷದ ಮಗುವೊಂದು ಬಂದು ’ಅಮ್ಮಾ ಯಾರಮ್ಮಾ ಈ ಅಂಕಲ್’ ಅನ್ನುತ್ತ ಬಂದಿತು.
’ಇವ್ರು ಸುದೀಪ ಅಂಕಲ್ ಪುಟ್ಟಾ’ ಅನ್ನುತ್ತ ಮಗುವಿನ ಕೈಹಿಡಿದುಕೊಂಡ ಯಾಮಿನಿ, ’ ಇವ್ಳು ನನ್ನ ಮಗಳು- ಸೃಷ್ಟಿ’ ಅಂದಳು.
ಸುದೀಪನಿಗೆ ಇದು ಅನಿರೀಕ್ಷಿತ. ’ಅಂದ್ರೆ ನಿಮಗೆ ಮದುವೆ ಆಗಿದೆಯಾ?’ ಅಂತ ಕೇಳಿದ.
’ಇಲ್ವಲ್ಲಾ..!!’ ಅನ್ನುತ್ತ ನಕ್ಕಳು ಯಾಮಿನಿ…

                      ***

ನೀಲಿ ಕೇರಿಯ ನೀಲಿ ಕಂಗಳ ನೀರೆ – 1

 ಕತೆಗಾರರು:- sritri, ಶ್ರೀನಿಧಿ.ಡಿ.ಎಸ್ , ಸುನಾಥ, ಮನಸ್ವಿನಿಜಗಲಿ ಭಾಗವತ, ಸುಶ್ರುತ ದೊಡ್ಡೇರಿ, shiv, ಜ್ಯೋತಿ,

——————————————————————————————————————————————————————-

     ’ಈ ಬೆಂಗಳೂರಿನ ಹೊಗೆ, ಧೂಳು ಕುಡಿದು ಸಾಕಾಗಿದೆ ಕಣ್ರೊ. ಒಂದು ಹದಿನೈದು ದಿನಗಳಾದರೂ ಊರಿನಲ್ಲಿ ನೆಮ್ಮದಿಯಾಗಿದ್ದು ಬರುತ್ತೀನಿ’- ಎಂದು ಗೆಳೆಯರಿಗೆಲ್ಲಾ ಹೇಳಿ ಬಂದಿದ್ದ ಸುದೀಪನಿಗೆ ಎರಡನೆಯ ದಿನಕ್ಕೇ ಬೆಂಗಳೂರು ನೆನಪಾಗತೊಡಗಿತ್ತು.  ’ಈ ಬೆಂಗಳೂರಿನ ಗುಣವೇ ಹಾಗೆ. ಒಮ್ಮೆ ಈ ಮಾಯಾನಗರಿ ಹೊಕ್ಕವರಾರು ಹೊರಗೆ ಹೋಗಲು ಬಯಸುವುದಿಲ್ಲ. ಈ ಊರನ್ನು ಮೇಲೆ ದೂರುತ್ತಲೇ ಒಳಗೇ ಪ್ರೀತಿಸತೊಡಗುತ್ತಾರೆ’-  ಬೆಂಗಳೂರಿನ ಮಲ್ಲೇಶ್ವರದಲ್ಲಿ ಹುಟ್ಟಿ ಬೆಳೆದು, ಅದನ್ನೇ ಜಗತ್ತೆಂದು ಭಾವಿಸಿಕೊಂಡಿರುವ ಗೆಳೆಯ ಕಿಟ್ಟಿ ಹೇಳುತ್ತಿದ್ದ ಮಾತು ನಿಜವೆನ್ನಿಸಿತು.  

 ಅಲ್ಲಿದ್ದಾಗ ಪೇಪರ್ ಓದಲೂ ಪುರುಸೊತ್ತಾಗದಂತಹ ವೇಗದ ಬದುಕು. ಇಲ್ಲಿ ಗಡಿಯಾರದ ಮುಳ್ಳು ಕಾಲು ಮುರಿದುಕೊಂಡಂತೆ ಕುಂಟುತ್ತಾ ಸಾಗುತ್ತಿದೆ. ಹೊರಗಾದರೂ ಸುತ್ತಾಡಿಬಂದರೆ ಮನಸ್ಸಿಗೆ ಕವಿದಿದ್ದ ದುಗುಡ ದೂರಾಗಬಹುದೆಂದುಕೊಂಡು-

 ’ಅಮ್ಮಾ… ನಾನು ಹಾಗೇ ತೋಟಕ್ಕೆ ಹೋಗಿ ಸುತ್ತಾಡಿಕೊಂಡು ಬರ್ತೀನಿ. ಊಟಕ್ಕೆ ಕಾಯಬೇಡಿ’ ಎಂದು ಒಳಗೆಲ್ಲೋ ಇದ್ದ ತಾಯಿಗೆ ಕೇಳುವಂತೆ ಜೋರಾಗಿ ಕೂಗಿ ಹೇಳಿ ಚಪ್ಪಲಿ ಮೆಟ್ಟಿ ಹೊರನಡೆದ. 

 ಸುಡು ಬಿಸಿಲಿನಲ್ಲಿ ನಡೆದು ಬಂದ ಅವನಿಗೆ ಒತ್ತಾಗಿ ಹರಡಿದ್ದ ಮಾವಿನ ಮರದ ನೆರಳು ಹಿತ ತಂದಿತು. ಅಲ್ಲೇ ಇದ್ದ ಕಲ್ಲು ಬಂಡೆಯೊಂದರ ಮೇಲೆ ಕುಳಿತ.

ಯಾಕೆ ಈ ಬಾರಿ ತನಗೆ ಊರು ಬೇಸರವಾಗುತ್ತಿದೆ? ಈ ತಳಮಳಗಳಿಗೆಲ್ಲಾ ಸುನಯನ ಕಾರಣಳೇ?  ಸುನಿ, ನೈನಾ, ನಯನ, ನಯ್ನಿ ಎಂದೆಲ್ಲಾ ಕರೆಯಲ್ಪಡುವ ’ಸುನಯನ’ ಎಂಬ ಚೆಲುವೆಯ ನೆನಪಾದೊಡನೆ ಅವನೆದೆಯಲ್ಲಿ ಮೋಹದೊಂದು ಮೋಹನ ರಾಗ ಮೆಲುವಾಗಿ ಮಿಡಿಯತೊಡಗಿತು.

ಮರುಕ್ಷಣವೇ ಸುದೀಪ ವಿಷಾದದಾಳದಲ್ಲಿ ಹೂತು ಹೋದ.  ಇನ್ನೆಲ್ಲಿಯ ಸುನಯನ? ಅಷ್ಟಕ್ಕೂ ಅವಳು ತನಗೇನಾಗಬೇಕು?

ಅವಳನ್ನು ಮರೆಯಲೆಂದೇ ಇದ್ದ ಕೆಲಸಗಳನ್ನೆಲ್ಲಾ ಬಿಟ್ಟು ವಿಶ್ರಾಂತಿಯ ನೆಪದಲ್ಲಿ ತಾನು ಇಲ್ಲಿಗೆ ಬಂದಿದ್ದಲ್ಲವೇ?  ಇಲ್ಲಿಯೂ ಬೆನ್ನತ್ತಿ ಬಂದಿರುವ ಅವಳ ನೆನಪು!   ಏನೇನೋ ಯೋಚನೆಗಳು,ಯಾವುದೋ ನೆನಪುಗಳ ಅಲೆಯಲ್ಲಿ ತೇಲುತ್ತಾ ಅದೆಷ್ಟೋ ಹೊತ್ತು ಮಂಕನಂತೆ ಕುಳಿತೇ ಇದ್ದ.  ಮಧ್ಯಾಹ್ನ  ಸಂಜೆಯಾಗಿದ್ದೂ ಅವನಿಗೆ ಅರಿವಾಗಿರಲಿಲ್ಲ.  ಇನ್ನೂ ಎಷ್ಟು ಹೊತ್ತು ಹಾಗೆಯೇ ಕುಳಿತಿರುತ್ತಿದ್ದನೋ. ಆದರೆ ಅಷ್ಟರಲ್ಲಿ-

  “ಸುದೀಪಾ.. ಸುದೀಪಾ.. ಎಲ್ಲಿದೀಯೋ? ಎಲ್ಲಾ ಕಡೆ ಹುಡುಕಿ ಸಾಕಾಯ್ತು. ಬೇಗ ಬಾರೊ” –  ಗಾಬರಿ ತುಂಬಿದ್ದ ದನಿಯೊಂದು ಕೇಳಿಸಿ ಬೆಚ್ಚಿ ತಿರುಗಿ ನೋಡಿದ. 

     ಅಲ್ಲಿ ಅವಳು ನಿಂತಿದ್ದಳು, ಕನ್ನಿಕಾ. ಪಕ್ಕದ ಮನೆ ನಾರ್ಣಣ್ಣನ ಮಗಳು. “ಥೋ ಮಾರಾಯಾ , ನಿನ್ನ ಎಲ್ಲಿ ಅಂತ ಹುಡ್ಕೋದು, ಪಾಪ ನಿಮ್ಮಮ್ಮ ಗಾಭರಿ ಮಾಡ್ಕೊಂಡಿದ್ರು. ತಡೀರಿ ನಾನು ಹುಡ್ಕಿ ಕರ್ಕೊಂಡ್ ಬರ್ತೀನಿ ಅಂದೆ, ಬೆಳಗ್ಗೆ ನಂತ್ರ ಏನೂ ತಿಂದೂ ಇಲ್ವಂತೆ ನೀನು, ಬೇಗ್ ಬಾ” ಸುದೀಪ ಮೆಲ್ಲನೆ ಕುಳಿತಲ್ಲಿಂದೆದ್ದು ಅವಳ ಕಡೆ ಹೊರಟ.

     “ಬಂದೆ ತಡ್ಕಳೇ ಕುನ್ನಿಕಾ, ನಮ್ ಅಮ್ಮಂಗಿಂತಾ ನಿಂಗೇ ಹೆದ್ರಿಕೆ” ಅಂದು ಮುಗಿಸುವಷ್ಟರಲ್ಲಿ ಅರ್ಧ ತಿಂದ ಮಾವಿನಕಾಯಿ ಫಡ್ ಅಂತ ಅವನ ಎದೆಗೆ ಹೊಡೆಯಿತು. “ಕುನ್ನಿಕಾ” ಅಂದಿದ್ದಕ್ಕೆ ಶಿಕ್ಷೆ ಇದು ಅಂತಂದು ಓಡಿದಳು ಕನ್ನಿಕಾ ಅಲ್ಲಿಂದ .ಸುದೀಪನಿಗೆ ಅವಳನ್ನ ಹಾಗೆ ಛೇಡಿಸಿಯೇ ಅಭ್ಯಾಸ , ಅವನಿಗಿಂತ ನಾಲ್ಕೈದು ವರ್ಷ ಸಣ್ಣವಳು ಅವಳು.   ಮನೆಗೆ ಬರುವಷ್ಟರಲ್ಲಿ ಅಮ್ಮನ ಮುಖ ಕೆಂಪು. 

     ಸುದೀಪನನ್ನು ಅಂಗೈಯಲ್ಲಿಟ್ಟುಕೊಂಡು ಬೆಳೆಸಿದ್ದರು ಸೀತಾಬಾಯಿ. ಸುದೀಪನ ತಂದೆ ತೀರಿದಾಗ ಅವನಿಗೆ ಹತ್ತು ವರ್ಷ.ಆತ ಬೆಳೆದು,ಶಿಕ್ಷಣ ಪೂರೈಸಿ, ಉದ್ಯೋಗಕ್ಕಾಗಿ ಬೆಂಗಳೂರು ಸೇರುವವರೆಗೆ ಸೀತಾಬಾಯಿ ಇನ್ನಿಲ್ಲದ ಕಷ್ಟಪಟ್ಟಿದ್ದರು. ಈ ಅವಧಿಯಲ್ಲಿ ಸೀತಾಬಾಯಿಗೆ ನೆರವಾಗಿ ನಿಂತವರು ಪಕ್ಕದ ಮನೆ ನಾರ್ಣಪ್ಪ ಹಾಗು ಅವರ ಹೆಂಡತಿ ಲಕ್ಷ್ಮಿ. ಮಗಳು ಕನ್ನಿಕೆಯಂತೂ ಸೀತಾಬಾಯಿಯವರ ಮನೆಯಲ್ಲಿಯೆ ಇರುತ್ತಿದ್ದಳು.ಅವಳಿಗೂ ಸುದೀಪನಿಗೂ ಬಾಲ್ಯದಿಂದಲೂ ಒಡನಾಟ. ಕನ್ನಿಕೆಯನ್ನು ಸೊಸೆಯಾಗಿ ಮನೆ ತುಂಬಿಸಿಕೊಳ್ಳುವ ಕನಸು ಸೀತಾಬಾಯಿಯದು. ಆದರೆ ಸುದೀಪನಿಗೆ ಕನ್ನಿಕೆಯ ಮೇಲೆ ಇದ್ದದ್ದು ತಂಗಿಯ ಮೇಲಿನ ಪ್ರೀತಿ.  

     ಕನ್ನಿಕೆ ಚೆಲುವೆ,ಜಾಣೆ. ಅವಳಲ್ಲಿ ಸುದೀಪನೊಂದಿಗಿನ ಬಾಲ್ಯದ ಸ್ನೇಹ,ಈಗ ಒಲವಾಗಿ ಅರಳಿತ್ತು. ಸುದೀಪನಲ್ಲಿ ತನ್ನ ಜೀವನವನ್ನೇ ಕಂಡಿದ್ದಳು,ಅವನಿಗಾಗಿ ಕನಸನ್ನ ಹೆಣೆದಿದ್ದಳು.ದೂರದ ಬೆಂಗಳೂರಿನಿಂದ ಆತ ಬರುವ ಸುದ್ದಿ ಸಿಕ್ಕರಾಯಿತು, ಸುಗ್ಗಿಯ ಹಿಗ್ಗು ಕನ್ನಿಕೆಗೆ.ಸೀತಾದೇವಿ ಸೊಸೆಯೆಂದು ಕರೆದಾಗ ನಾಚಿ ನೀರಾಗುತ್ತಿದ್ದಳು.ಎಂದೂ ಸಂಭ್ರಮ,ಸಂತೋಷದಲ್ಲಿರುವ ಸುದೀಪನ ಮುಖ ಈ ಬಾರಿ ಬಾಡಿ ಹೋಗಿರುವುದ ಕಂಡು ದಿಗಿಲಾಗಿದ್ದಳು .ಏನಾಯಿತು ಎಂದು ಅವನನ್ನ ಕೇಳುವ ಧೈರ್ಯ ಅವಳಲ್ಲಿರಲಿಲ್ಲ.

ಏಲ್ಲಿ ಹೋಗಿದ್ಯೊ? ಹುಡ್ಕಿ ಹುಡ್ಕಿ ಸಾಕಾಯ್ತು’ ಅಂತ ಸೀತಾಬಾಯಿ ಸಿಡಿಮಿಡಿಗುಟ್ಟಿದರು. ಸುದೀಪ ಉತ್ತರಿಸದೆ ಒಳಮನೆ ಹೊಕ್ಕ.ಮಗ ಅನ್ಯಮನಸ್ಕನಾಗಿದ್ದು ಸೀತಾಬಾಯಿಗೆ ದಿಗಿಲು ಹುಟ್ಟಿಸಿತ್ತು.

                                                               ******************************
     ನೀಲಿಕೇರಿ ಹೊನ್ನಾವರದಿಂದ ೨೫ ಕಿ.ಮಿ. ರಾತ್ರಿ ೮ ಗಂಟೆಗೆ ಕೊನೆಯ ಟೆಂಪೋ. ಸ್ನೇಹಿತನ ಮನೆಗೆ ಹೊರಟಿದ್ದ ಸುದೀಪ ಸರಿಯಾದ ಸಮಯಕ್ಕೆ ಹೊರಡದೆ ಕೊನೆಯ ಟೆಂಪೋದಲ್ಲಿ ಸಿಕ್ಕಿಹಾಕಿಕೊಂಡಿದ್ದ. ಅವನ ದುರದೃಷ್ಟಕ್ಕೆ ಅವತ್ತು ಜಡಿಮಳೆ.

     ನೀಲಿಕೇರಿಯಲ್ಲಿ ಸುದೀಪ ಇಳಿದಾಗ ರಾತ್ರಿ ೯ ಗಂಟೆ. ಅದೇ ಮೊದಲ ಬಾರಿ ಉತ್ತರಕನ್ನಡಕ್ಕೆ ಬಂದಿದ್ದ ಸುದೀಪನಿಗೆ ದಿಕ್ಕುತೋಚದಾಗಿತ್ತು. ಗೆಳೆಯನಿಗೆ ಬರುತ್ತೇನೆಂದು ಹೇಳದೆ ಹೊರಟಿದ್ದ. ಹೊರಗೆ ಕಾರ್ಗತ್ತಲು, ಅದಕ್ಕೆ ಸಾಥಿಯಾದ ಜಡಿಮಳೆ….ಈಗೆಲ್ಲಿ ಹೋಗುವುದು?…

“ಎಲ್ಲಿ ಹೋಗವ್ವು?” ಹಿಂದುಗಡೆಯಿಂದ ಹುಡುಗಿಯ ಧ್ವನಿ.
“ಗಣಪ ಭಟ್ಟರ ಮನೆಗೆ ಹೋಗ್ಬೇಕಾಗಿತ್ತು. ಆದ್ರೆ ನಾನು ಇದೇ ಮೊದ್ಲ ಬಾರಿ ಬರ್ತಾ ಇರೋದು. ದಾರಿ ಗೊತ್ತಿಲ್ಲ. ಮಂಗ್ಳೂರಿಂದ ಬಂದಿದೀನಿ”
“ಓಹ್. ಮತ್ತೆ ಈಗ ಏನು ಮಾಡ್ತೀರಾ? ನೀವು ಬರೋದು ಅವ್ರಿಗೆ ಗೊತ್ತ? ಅವ್ರು ಬರ್ತಾರಾ?”
“ಇಲ್ಲ. ಹೇಳಿಲ್ಲ. ಫೋನು ಹೋಗ್ತಿಲ್ಲ”.
“ಹಾಗಾದ್ರೆ, ನಮ್ಮನೆಲಿ ಉಳ್ಕೊಳ್ಳಿ. ಬನ್ನಿ”
“ನಿಮ್ಮನೇಲಿ…….” ಸುದೀಪ ಉಗುಳು ನುಂಗಿದ.
“ಆಡ್ಡಿಲ್ಲ. ದಾಕ್ಷಿಣ್ಯ ಮಾಡ್ಬೇಡಿ ಬೆಳಿಗ್ಗೆ ಅವ್ರ ಮನೆಗೆ ಕರ್ಕೊಂಡು ಹೋಗ್ತೆನೆ”

     ಸುದೀಪನಿಗೆ ಇದ್ದದ್ದು ಎರಡೇ ಆಯ್ಕೆ. ಮಳೆಯಲ್ಲಿ ನೆನೆದು ಥರಗುಡುವುದು, ಇಲ್ಲಾ ಅಪರಿಚಿತರ ಮನೆಯಲ್ಲುಳಿಯುವುದು.
“ಆಯ್ತು.” ಅರೆಮನಸ್ಸಿನ ಉತ್ತರ.ಮುಳುಗುತ್ತಿದ್ದವನಿಗೆ ಹುಲ್ಲುಕಡ್ಡಿ ಸಿಕ್ಕಂತಾಗಿತ್ತು.
ಕತ್ತಲಲ್ಲಿ ಆಕೆ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಕೊಡೆ ಬಿಡಿಸಿದವಳೆ “ಬನ್ನಿ” ಅಂತ ಕರೆದಳು. ಕೊಡೆ ತಾರದೆ ತೋಯ್ದು ತೊಪ್ಪೆಯಾಗಿದ್ದ ಸುದೀಪ, ಮೊದಲು ಹಿಂದೇಟು ಹಾಕಿದರೂ, ವಿಧಿ ಇಲ್ಲದೆ ಒಪ್ಪಿಕೊಂಡ. ಸುದೀಪನಲ್ಲಿ ಏನೋ ವಿಚಿತ್ರ ಅನುಭವ..ಕಾರ್ಗತ್ತಲು. ಜೊತೆಯಲ್ಲೊಬ್ಬಳು ಅಪರಿಚಿತ ಹುಡುಗಿ..ಅದೂ ಒಂದೇ ಕೊಡೆಯಡಿಯಲ್ಲಿ…
ಏನು ಮಾತನಾಡುವುದು ಗೊತ್ತಾಗಲಿಲ್ಲ…ಅನುಮಾನ, ಕಾತರ, ಕುತೂಹಲ, ಪುಳಕ..ಎಲ್ಲ ಏಕಕಾಲದಲ್ಲಿ…
ದಾರಿಯುದ್ದಕ್ಕೂ ಅವರು ಮೂವರೇ. ಸುದೀಪ, ಆಕೆ… ಮತ್ತು ಮೌನ… ಸುಮಾರು ೫ ನಿಮಿಷ ನಡೆದಿರಬಹುದು ಆ ಮೌನ ಅಸಹನೀಯವೆನ್ನಿಸತೋಡಗಿತು… ಸಣ್ಣಗೆ ಕೆಮ್ಮಿದ.,,

“ಯಾಕೆ ಈ ಹೊತ್ತಲ್ಲಿ ಬಂದ್ರಿ?” ಆಕೆ ಆರಂಭಿಸಿದಳು.
“ಸ್ವಲ್ಪ ಕೆಲ್ಸ ಇತ್ತು ಮುಗ್ಸಿ ಹೊರಡೋವಾಗ ತಡ ಆಯ್ತು”
“ಗಣಪ ಭಟ್ಟರು ನಿಮಗೆ ಏನಾಗ್ಬೇಕು?”
“ಅವ್ರ ಮಗ ನನ್ನ ಇಂಜಿನಿಯರಿಂಗ ಸಹಪಾಠಿ”
“ಓಹ್. ಹಾಗಾದ್ರೆ ನೀವು ಮೈಸೂರಲ್ಲಿ ಓದಿದ್ದಾ?”
“ಹೌದು. ನಿಮಗೆ ಅವ್ರ ಮಗ ಗೊತ್ತಾ?”
“ಒಂದೆ ಊರಲ್ವಾ? ಊರಲ್ಲಿ ಎಲ್ಲರ ವಿಷ್ಯ ಎಲ್ಲರಿಗೂ ಗೊತ್ತಿರತ್ತೆ”.
“ಅದೂ ಹೌದು”
“ನಿಮ್ಮ ಹೆಸ್ರು?”
“ಸುದೀಪ. ನಿಮ್ದು?”
“ಸುನಯನ”…
“ಸುನಯನ.. ಹೆಸರು ತುಂಬಾ ಚೆನ್ನಾಗಿದೆ..”
“ಥ್ಯಾಂಕ್ಸ್”

     ಬಸ್ಸಿಳಿದಾಗಕ್ಷಣ ಉಧ್ಭವಿಸಿದ್ದ ಕಗ್ಗತ್ತಲೆಯಲ್ಲಿ ಮೊದಲು ಕಂಡ ಬೆಳಕೆಂದರೆ ಅದು ಅವಳ ಕಣ್ಣಿನದ್ದು. ‘ಸುನಯನ.. ಹೌದೌದು..!’ -ಮನಸಿನಲ್ಲೇ ಅಂದುಕೊಂಡ ಸುದೀಪ. ಕೊಡೆಯಡಿ ತಲೆ ತಗ್ಗಿಸಿಕೊಂಡು ನಡೆಯುತ್ತಿದ್ದ ಸುದೀಪನಿಗೆ ಹರಿವ ಮಳೆನೀರಲೆಗಳ ನಡುವೆ ಹೆಜ್ಜೆಯಿಡುತ್ತಿದ್ದ ಅವಳ ಪಾದ ಈಜುವ ಬಿಳಿಮೀನಿನಂತೆ ಕಾಣುತ್ತಿತ್ತು. ಅವಳ ಕಣ್ಣನ್ನು ಮತ್ತೊಮ್ಮೆ ನೋಡಬೇಕೆಂಬ ಬಯಕೆಯಾಯಿತು. ಆದರೆ ಹಾಗೆ ಫಕ್ಕನೆ ತಲೆ ಎತ್ತಿ ಪಕ್ಕಕ್ಕೆ ನೋಡಲು ಮುಜುಗರವಾಯಿತು. ಆದರೂ ಧೈರ್ಯ ಮಾಡಿ ಆಕಡೆ ಏನನ್ನೋ ನೋಡುವವನಂತೆ ಕತ್ತು ಪಕ್ಕಕ್ಕೆ ತಿರುಗಿಸಿ ಅವಳ ಮುಖವನ್ನೊಮ್ಮೆ ನೋಡಿದ. ಅದೆಷ್ಟೇ ಚಾಣಾಕ್ಷತೆಯಿಂದ ನೋಡಿದ್ದರೂ ಅವಳಿಗೆ ಇವನ ಕುತೂಹಲ ಅರ್ಥವಾಗಿಹೋಯಿತು. ಹೂಬಿರಿದಂತೆ ನಕ್ಕಳು. ಸೇವಂತಿಗೆಯ ಎಸಳುಗಳಂತಹ ಜೋಡಣೆಯ ಪುಟ್ಟಪುಟ್ಟ ಬಿಳಿ ಹಲ್ಲುಗಳ ಬೆಳಕು ಅವರ ಮನೆವರಿಗಿನ ದಾರಿಗೆ ಬೆಳಕಾಯಿತು.

“ಹುಷಾರಿ” ದಣಪೆ ತೆಗೆದು ಅವನು ದಾಟುವಾಗ ಉಲಿದಳು ಸುನಯನ. ಲಾಟೀನು ಹಿಡಿದ ಬಿಳಿಪಂಚೆಯ ವ್ಯಕ್ತಿಯೊಂದು ಮನೆಯ ಮುಂಬಾಗಿಲಿನಲ್ಲಿ ಕಾಣಿಸಿಕೊಂಡಿತು. ಅದು ಇವಳ ತಂದೆಯಿರಬೇಕೆಂದು ಭಾವಿಸಿದ ಸುದೀಪ..  
     ಆ ಬಿಳಿಪಂಚೆ ವ್ಯಕ್ತಿ ಆ ಲಾಟೀನು ಸುದೀಪನ ಮುಖದ ಮುಂದೆ ಹಿಡಿದು ‘ಯಾವ ಊರಿನವ್ರು?’ ಅಂತಾ ಕೇಳೋವಷ್ಟರಲ್ಲೇ, ಸುನಯನ ‘ಇಲ್ಲಾ ಅಪ್ಪಾ, ಇವ್ರು ಬೆಂಗಳೂರಿನವರು, ಗಣಪ ಭಟ್ಟರ ಮನೆಗೆ ಹೋಗುತ್ತಿದ್ದರಂತೆ, ಮಳೆಯಲ್ಲಿ ಸಿಕ್ಕಿಹಾಕಿಕೊಂಡಿದ್ದರು, ಕರಕೊಂಡು ಬಂದೆ’ ಅಂದಳು.

ಆಗ ಆ ವ್ಯಕ್ತಿ ‘ಗಣಪ ಭಟ್ಟರ ಮನೆಗೆ?’ ಎಂದು ಒಂದು ವಿಚಿತ್ರ ನೋಟ ಬೀರಿತ್ತು. ಒಳಗೆ ಹೋದ ಸುನಯನ, ತಲೆ ಒರಸಿಕೊಳ್ಳಲು ಟವೆಲ್ ಒಂದು ತಂದು ಸುದೀಪನ ಕೈಗಿತ್ತಳು. ಸುದೀಪಾ ತಲೆ ಒರಸಿಕೊಂಡು ಆ ಪಂಚೆಯ ವ್ಯಕ್ತಿ ಜೊತೆ ಮಾತಿಗೆ ಕುಳಿತ. ಯಾಕೋ ಎನು ಕೇಳಿದರೂ ಆ ವ್ಯಕ್ತಿ ಜಾಸ್ತಿ ಬಾಯಿ ಬಿಡ್ತಾ ಇಲ್ಲ ಅನಿಸ್ತು ಸುದೀಪನಿಗೆ. ಸ್ಪಲ್ಪೇ ಸಮಯದಲ್ಲಿ ಸುನಯನ ‘ಬನ್ನಿ ಊಟಕ್ಕೆ’ ಅಂತಾ ಕರೆದಾಗ, ಸುದೀಪನಿಗೆ ಆಶ್ಚರ್ಯ.’ಎಲಾ, ಇಷ್ಟು ಬೇಗ ಅಡುಗೆ ಹೇಗೆ ಮಾಡಿದಳು?’ ಅಂತಾ ಮನಸಿನಲ್ಲಿದ್ದ ಲೆಕ್ಕಾಚಾರ ಹೊಟ್ಟೆ ತಾಳದ ಮುಂದೆ ಮೂಲೆಗುಂಪಾಗಿ ಊಟದ ತಟ್ಟೆ ಮುಂದೆ ಕುಳಿತ.

ಹೊಟ್ಟೆ ಹಸಿದಿದ್ದ ಸುದೀಪ ಜಾಸ್ತಿ ಮಾತಾಡದೆ, ಊಟ ಮಾಡೆದ್ದ. ‘ಆಯಾಸವಾಗಿದೆ ನೀವು ಮಲಗಿ’ ಸುನಯನ ಅಂದಾಗ, ಸುದೀಪನಿಗೆ ಅಗಲೇ ನಿದ್ದೆಯ ಮಂಪರು.ಅದ್ಯಾವಾಗಲೋ ಸುದೀಪ ನಿದ್ದೆಗೆ ಜಾರಿದ್ದ.

     ಸುದೀಪ ಎದ್ದಾಗ ಸೂರ್ಯ ಮಾರು ಮೇಲೇರಿದ್ದ. ಸುನಯನಾಳ ಸೂಚನೆಯ ಮೇರೆಗೆ ಸ್ನಾನಾದಿಗಳನ್ನು ಮುಗಿಸಿ ನಾಷ್ಟಾ ಮಾಡಲು ಬಂದ ಸುದೀಪ. ಸುನಯನಳ ತಂದೆ ದೇವರ ಮನೆಯಲ್ಲಿ ಪೂಜೆಗೆ ಕುಳಿತು ಬಿಟ್ಟಿದ್ದರು. ಸುದೀಪನೊಬ್ಬನೆ ಉತ್ತರ ಕನ್ನಡದ ವಿಶಿಷ್ಟ ಭಕ್ಷವಾದ ಹಲಸಿನ ಎಲೆಯ ಮೇಲೆ ಬೇಯಿಸಿದ ಇಡ್ಲಿ ತಿನ್ನಲು ಸುರು ಮಾಡಿದ. ಉತ್ತರ ಕನ್ನಡದ ಜನ ಅತಿಥಿಸತ್ಕಾರದಲ್ಲಿ ಮೇಲುಗೈ. ಸುನಯನಾ ಹಾಗು ಅವಳ ತಾಯಿಯ ಎದುರು ಸುದೀಪನಿಗೆ ತಾನು ಅಪರಿಚಿತ ಎನ್ನುವ ಭಾವನೆ ಬರಲೆ ಇಲ್ಲ.ಇಡ್ಲಿ ಹಾಗು ಕಷಾಯ ಮುಗಿಸಿದ ಬಳಿಕ ಸುದೀಪನನ್ನು ಸುನಯನಾ ಅವನ ಗೆಳೆಯನ ಮನೆಗೆ ಕರೆದೊಯ್ದಳು. ಆದರೆ ಅಲ್ಲಿ ಸುದೀಪನಿಗೆ ನಿರಾಶೆ ಕಾದಿತ್ತು. ರಮೇಶನ ತಂದೆ ಗಣಪ ಭಟ್ಟರು, “ರಮೇಶ ಮುಂಬಯಿಗೆ ಹೋಗಿ ಒಂದ್ವಾರ ಆಯ್ತಲ್ಲ. ಇವತ್ ಸಂಜೀಗ್ ಬರ್ತೀನಂತ ಹೇಳಿದ್ದಾನಪ್ಪ! ನೀವ್ ಎಂತಾ ಮಾಡ್ತೀರಿ?” ಎಂದು ಕೇಳಿದರು. ಸುದೀಪನ ಈ ಸಮಸ್ಯೆಗೂ ಸುನಯನಾಳೆ ಪರಿಹಾರ ತೋರಿಸಬೇಕಾಯಿತು. “ರಮೇಶಣ್ಣ ಬರೂವರ್ಗೂ ನೀವ್ ನಮ್ಮೂರು ನೋಡೀರಂತೆ, ಬನ್ನಿ” ಏಂದು ಹೇಳಿ ಸುದೀಪನಿಗೆ ನೀಲೀಕೇರಿ ತೋರಿಸಲು ಕರೆದೊಯ್ದಳು.
     ಮುಂಗಾರು ಮಳೆಯ ಕೊನೆಯ ದಿನಗಳು ಅವು. ನೀಲೀಕೇರಿಯ ಸುತ್ತಲೂ ಇರುವ ಪರ್ವತರಾಶಿ ಹಸುರುಡುಗೆ ಉಟ್ಟಂತೆ ಶೋಭಿಸುತ್ತಿದೆ. ಸುದೀಪ ಎಂದೂ ನೋಡಿರದ ಬಣ್ಣ ಬಣ್ಣದ ಹೂವುಗಳು, ಹತ್ತು ಹೆಜ್ಜೆಗೊಂದರಂತಿಕ್ಕ ಚಿಕ್ಕ ಚಿಕ್ಕ ಜಲಪಾತಗಳು. ಈ ಮನೋಹರ ಪ್ರಕೃತಿಯ ನಡುವೆ ಸುನಯನಾ ವನದೇವತೆಯಂತೆ ಕಂಗೊಳಿಸುತ್ತಿದ್ದಾಳೆ. ಬೆಂಗಳೂರಿನಲ್ಲಿ ಕಾಂಕ್ರೀಟ್ ಕಾಡುಗಳು ಹಾಗು ಬಣ್ಣದ ಬೀಸಣಿಗೆಗಳನ್ನು ಮಾತ್ರ ನೋಡಿದ ಸುದೀಪನಿಗೆ ತಾನು ಗಂಧರ್ವಲೋಕದಲ್ಲಿ ಬಂದಿರುವೆನೇ ಎನ್ನುವ ಭ್ರಮೆಯಾಯಿತು.
ರಮೇಶ ಆ ದಿನ ಬರಲೇ ಇಲ್ಲ. ಸುದೀಪನಿಗೆ ಅನಿವಾರ್ಯವಾಗಿ ಮತ್ತೊಂದು ದಿನ ಅಲ್ಲಿ ತಂಗಬೇಕಾಗಿದ್ದು ಒಳಗೊಳಗೆ ಖುಶಿಯನ್ನೆ ಕೊಟ್ಟಿತು. ಮರುದಿನ ಸುನಯನಾ ಸುದೀಪನಿಗೆ ಹೊನ್ನಾವರದಿಂದ ಸ್ವಲ್ಪ ದೂರದಲ್ಲಿ ನಿರ್ಜನವಾದ ಕಾಡಿನಲ್ಲಿರುವ ಕಾನಕಾನೇಶ್ವರಿ ದೇವಸ್ಥಾನಕ್ಕೆ ಕರೆದೊಯ್ದಳು.
ಕಾಡಿನಲ್ಲಿ ಹೋಗುತ್ತಿರುವಾಗ ನಿಷ್ಕಳಂಕವಾದ ಹಾಗು ನಿಸ್ಸಂಕೋಚವಾದ ಸುನಯನಾಳ ಮಾತುಗಳಿಗೆ ಸುದೀಪ ಮಾರು ಹೋದ. ದೇವಿಗೆ ಹಣ್ಣು ನೈವೇದ್ಯ ಮಾಡಿ ತಾವೂ ಆ ಪ್ರಸಾದವನ್ನೆ ತಿಂದರು.
     ಏಕಾಏಕಿ ಮಳೆ ಪ್ರಾರಂಭವಾಯಿತು. ಸುನಯನಾಳ ಕೊಡೆಯೇ ಮತ್ತೆ ಇಬ್ಬರಿಗೂ ಆಸರೆ. ಬೀಸುಗಾಳಿಗೆ ಮಳೆ ಮುಖಕ್ಕೆ ರಾಚುತ್ತಿದೆ. ಒಮ್ಮೆಲೆ ಮಿಂಚಿದ ಮಿಂಚು ಸುನಯನಾಳ ಕಣ್ಣಲ್ಲಿ ಪ್ರತಿಫಲಿಸಿತು. ಸುದೀಪನ ಮನಸ್ಸಿನಲ್ಲಿ ಪ್ರೇಮದ ಕೋಲ್ಮಿಂಚು ಮಿಂಚಿತು. ತಟ್ಟನೆ ಅವಳ ಕೈಹಿಡಿದ ಸುದೀಪ, “ಸುನಯನಾ, ಐ ಲವ್ ಯೂ!” ಎಂದ.

     ಮತ್ತೊಂದು ಮಿಂಚಿನ ಜೊತೆಗೇ ಇವನತ್ತ ತಿರುಗಿದವಳ ಕಣ್ಣಲ್ಲಿಯೂ ಒಂದು ಮಿಂಚು. “ಹಾಗಂದ್ರೇನು?” ಬೆಳದಿಂಗಳಂಥ ನಗೆಯೊಂದಿಗೆ ಕತ್ತು ಓರೆಯಾಗಿಸಿ ಯಾವುದೋ ಮರದಲ್ಲಿ ಹಕ್ಕಿಯೊಂದು ಮಧ್ಯಮದಲ್ಲಿ ರಾಗವೆಳೆದಂತೆ ಕೇಳಿತ್ತು ಸುದೀಪನಿಗೆ. ಆದರೆ ಉತ್ತರಿಸದಾದ. ಹೌದು, ಹಾಗಂದರೇನು? “ನಾನು ನಿನ್ನನ್ನು ಪ್ರೀತಿಸುತ್ತೇನೆ” ಅಂದರೆ ಅದಕ್ಕೆ ಇದೇ ಅರ್ಥ ಬರೋದೇ ಇಲ್ಲ. ನನಗೆ ನಿನ್ನಲ್ಲಿ ಅನುರಕ್ತಿಯಿದೆ ಅಂದರೆ ಅದೂ ಇವಳಿಗೆ ಅರ್ಥವಾಗದಿದ್ದರೆ? ಅಲ್ಲದೆ, ಇವಳು ಕೇಳುವ ರೀತಿ ನೋಡಿದ್ರೆ ಇವಳಿಗೆ ಅದೇನು ನಿಜವಾಗಲೂ ಅರ್ಥವಾಗಿಲ್ಲವೋ ಅಥವಾ ತನ್ನನ್ನು ಛೇಡಿಸುತ್ತಿದ್ದಾಳೋ, ಒಂದೂ ತಿಳಿಯುತ್ತಿಲ್ಲ… ಸುದೀಪನ ಯೋಚನೆಗಳ ಜೊತೆಗೇ ಅವರು ಕಾಡಿನ ನಡುವೆ ಸಾಗಿ ಬಂದಿದ್ದರು. ಕೊಚ್ಚಿಕೊಳ್ಳಲು ತರಗೆಲೆಗಳು ಉಳಿದಿಲ್ಲವಾಗಿ ನೆಲದ ಮೇಲ್ಮಣ್ಣನ್ನೇ ತನ್ನೊಂದಿಗೆ ಸೆಳೆದೊಯ್ಯುತ್ತಿದ್ದ ಮಳೆನೀರಿನ ಹರಿವನ್ನೇ ನೋಡುತ್ತಾ, ಬೇರುಗಳನ್ನು ಎಡವದಂತೆ ಹೆಜ್ಜೆ ಹಾಕುತ್ತಾ ಸಾಗುತ್ತಿದ್ದ ಸುನಯನ ಈಗ ಅವನ ಕೈ ಹಿಡಿದು, “ಸಾರಿ ಸುದೀಪ್, ಅಯಾಮ್ ಎಂಗೇಜ್ಡ್” ಅಂದಳು. ಮಿಂಚು ಮರೆಯಾಗಿತ್ತು, ಸಿಡಿಲು ಎರಗಿತ್ತು, ಸುದೀಪನಿಗೆ. ಎಷ್ಟು ಹೊತ್ತು ಮೌನ ಅವರ ನಡುವೆ ಕಾವಲು ಕುಳಿತಿತ್ತೋ ಅವನ ಅರಿವಿಗೆ ಬರಲಿಲ್ಲ. “ಅಯಾಮ್ ಎಂಗೇಜ್ಡ್ ಟು ಯೂ” ಅಂದು ಬಿಟ್ಟಳೇ ಅವಳು? ಅಂದರೆ ಇಷ್ಟು ಹೊತ್ತು ತನ್ನನ್ನು ಛೇಡಿಸಲೇ ಹಾಗೆ ಆಟ ಆಡಿಸಿದಳೇ? ಮೋಟು ಜಡೆಯನ್ನು ಎಳೆಯಲು ಹೋದರೆ ಸುದೀಪನ ಕೈತಪ್ಪಿಸಿ, ಕೊಡೆಯನ್ನು ಗಾಳಿಗೆ ತೂರಿ, ಮಳೆಯಲ್ಲಿ ಮರಗಳನ್ನೂ ದಾಟಿ ಓಡಿಹೋದ ಸುನಯನ ಇವನ ನಯನಗಳ ಪರಿಧಿಯನ್ನು ಮೀರಿದ್ದಳು.

ಮನೆಯ ಮುಂದಿನ ತೋಟದಲ್ಲಿ ಓಡಿ ಬರುತ್ತಿದ್ದ ಸುನಯನ ಅಲ್ಲೆ ನಿಂತು, ಸುದೀಪನಿಗೆ ಕಾಯತೊಡಗಿದಳು.

ಏನ್ರಿ ಇಲ್ಲೆ ನಿಂತಿದ್ದೀರಾ? ಊರಿಗೆ ಹೊಸಬ,ಹಾಗೆ ಮಧ್ಯದಲ್ಲಿ ಕೈಕೊಟ್ಟು ಓಡಿ ಹೋಗ್ಬಿಟ್ರಿ

ಸುನಯನ ಸುಮ್ಮನೆ ನಕ್ಕಳು..ಬನ್ನಿ ಮನೆಗೆ ಹೋಗೋಣ..ಮಳೆ ಬೇರೆ ಜೊರಾಗೊ ಹಾಗೆ ಕಾಣ್ತಾ ಇದೆ.

ಇರಲಿ ಬಿಡ್ರಿ..ಇಲ್ಲೆ ಚೆನ್ನಾಗಿದೆ..ಇಲ್ಲಿಯ ಮಳೆ, ಹಸಿರು, ಊಟ, ಆಮೇಲೆ ನೀವು ಎಲ್ಲಾ ಬಹಳ ಚೆನ್ನಾಗಿದೆ. ಅಂದ ಹಾಗೆ ನನ್ನ ಪ್ರಶ್ನೆಗೆ ಉತ್ತರ ಸರಿಯಾಗಿ ಹೇಳೆ ಇಲ್ಲ ನೀವು

ಓಹ್, ಭಾರಿ ಜೋರಿ ನೀವು ಎಂದು ಮನೆ ಕಡೆಗೆ ಓಡಿದ ಸುನಯನಳನ್ನೆ ನೋಡುತ್ತ ನಿಂತ ಸುದೀಪ ತನ್ನಷ್ಟಕ್ಕೇ ನಗುತ್ತಾ,ಅವಳ ಹೆಜ್ಜೆ ಹಿಂಬಾಲಿಸಿದ

ಸುನಯಳ ಮನೆಯಲ್ಲಿ –

ಸುನಯನ, ಸುನಯನ …
ಅದು ಮನೆಲಿಲ್ಲೆ..ರಮೇಶನ ಫ್ರೆಂಡ್ನ ಕರ್ಕಂಡು, ಊರು ತೋರ್ಸುಲೆ ಹೋಜು.

ಮಳೆ ಬರ್ತಾ ಇದ್ದು..ಅದನ್ನೆಂತಕೆ ಕಳ್ಸಿದ್ಯೆ..ಆ ಮಾಣಿ ಹೇಂಗಿದ್ನೋ ಎಂತನೊ!

ಸಿರ್ಸಿ ಸೀತಾರಾಮ್ ಹೆಗಡೆ ಮಾಣಿ ಈ ವಾರ ಬರ್ತ್ನಡ..ಸುನು ಜಾತಕ ಕೊಟ್ಟಿದಿದ್ದೆ. ಮ್ಯಾಚ್ ಆಗ್ತು, ಕೂಸು ಹಿಡಿಸಿದ್ದು ಅವಕ್ಕೆ.
ಮುಂದಿನವಾರ ನೋಡುಲೆ ಬರ್ತ್ವಡ .  ಅದು ಹೀಂಗೆಲ್ಲಾ ಓಡಾದದು ನಂಗೆ ಸರಿ ಕಾಣ್ಸ್ತಿಲ್ಲೆ…ಹುಷಾರು…ಅದ್ಕೂ ಹೇಳ್ಬಿಡು…ಎಂದು ಸುನಯನಳ ಅಪ್ಪ, ಅವಳಮ್ಮನ್ನನ್ನ ಗದರಿಸಿದರು.

*******************************