ಕವನ – ಬಾಳಗೀತ
ಕವಿ – ವಿ.ಕೃ.ಗೋಕಾಕ (ವಿನಾಯಕ)
ಡಾ. ರಾಜ್ಕುಮಾರ್ ದನಿಯಲ್ಲಿ ಹಾಡು ಕೇಳಿ
ಇಲ್ಲೆ ಇರು, ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು :
ನೇಹಕೆಂದು ನಲುಮೆಗೊಂದು ಗುರುತನಿರಿಸಿ ಬರುವೆನು.
ಹೋದಮೇಲೆ ಸುತ್ತಬೇಕು ಏಳು ಕೋಟೆ ದ್ವಾರವು !
ಹಾದಿಯಲ್ಲಿ ತೀರದಂಥ ದುಃಖವಿಹುದಪಾರವು !
ಸಾಧಿಸುತ್ತ ಜಯಿಸುವುದೇ ಬಾಳುವುದರ ಸಾರವು !
ಇಲ್ಲಿ ಕೊನರದಂಥ ನೋವು, ಫಲಿಸದಂಥ ಯಾತನೆ :
ಇಲ್ಲಿ ನಿತ್ಯ ಕೊಳೆಯುತಿಹುದು ನನ್ನ ಜೀವ ಚೇತನೆ !
ಇನ್ನು ಮೊಳಗಿಸಿದರೆ ಮೊಳಗಿಸುವೆನು ಅದರ ಮಾತನೆ !
ನವಗ್ರಹಗಳ ನಾಡದಾಟಿ ಮಿಗಿಲಗಡಿಯ ಮೀರಿಯೂ
ದಿಕ್ಕುತಪ್ಪುತಲೆವ ತಾರೆಗಳಿಗೆ ದಾರಿ ತೋರಿಯೂ
ಕತ್ತಲಿದ್ದ ತಾಣದಲ್ಲಿ ಎದೆಯ ಬೆಳಕ ಬೀರಿಯೂ !
ಗಾನದುನ್ಮಾದವೇರಿ ನಡೆದ ರಾಜಭೃಂಗವು,
ದೇವ ಕನ್ನಿಕೆಯರು ನುಡಿಸುವಂಥ ಮೃದುಮೃದಂಗವು,-
ಇದಕು ಹಿರಿದು ಎದೆಯಲಿರುವ ಭಾವನಾ ತರಂಗವು !
ಕೋಟಿ ವರುಷದಾಚೆ ಜನಿಸಿದಂಥ ಜೀವದಾಸೆಯು
ತೀರಬಹುದು, ಹಿಂಗಬಹುದು ಅಂದಿನಾ ಪಿಪಾಸೆಯು !
ಇಂದೆ ರುಚಿರವಾಗಬಹುದು ನನ್ನ ದೈವರೇಷೆಯು !
* * * * * * * * * *