ಕೆಲಕಾಲದ ಹಿಂದೆ ನಿಧನರಾದ ಕನ್ನಡದ ಹೆಮ್ಮೆಯ ಕಲಾವಿದೆ ಪಂಡರಿಬಾಯಿ ತಮ್ಮ ಕೊನೆಗಾಲದಲ್ಲಿ ಅನಾರೋಗ್ಯ ಹೊಂದಿ, ಸಂಕಷ್ಟಕ್ಕೆ ಗುರಿಯಾಗಿ ಕೊನೆಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತ ಅವರ ನೆರೆವಿಗೆ ಧಾವಿಸಿದ್ದು, ಚಿಕಿತ್ಸೆಗೆ ನೆರವಾಗಿದ್ದು ಎಲ್ಲರಿಗೂ ತಿಳಿದ ಸಂಗತಿಯೇ ಅಗಿದೆ. ಜಯಲಲಿತ ತಾವೂ ಕೂಡ ಮಾಜಿ ಕಲಾವಿದೆಯಾಗಿದ್ದು, ಮತ್ತೊಬ್ಬ ಕಲಾವಿದೆಯ ಕಂಬನಿ ಒರೆಸಲು ಮುಂದಾಗಿದ್ದು, ಜಯಲಲಿತಳನ್ನು ಸೈದ್ಧಾಂತಿಕವಾಗಿ, ರಾಜಕೀಯವಾಗಿ ಒಪ್ಪಿಕೊಳ್ಳದವರಿಗೂ ಆಕೆಯ ಮೇಲೆ ಅಭಿಮಾನ, ಗೌರವ ಮೂಡಿಸಿದವು. ನಮ್ಮ ಸರಕಾರ ಮಾತ್ರ ಪಂಡರಿಬಾಯಿ ತಾವು ಬದುಕಿದ್ದಾಗ, ಮುಖ್ಯಮಂತ್ರಿಯವರನ್ನೇ ಖುದ್ದಾಗಿ ಕೇಳಿಕೊಂಡಿದ್ದ ನಿವೇಶನವನ್ನೂ ಅವರಿಗೆ ಕೊಡದೆ ಸತಾಯಿಸಿ, ಕಲಾವಿದರ ಬಗೆಗೆ ತನಗಿರುವ ದಿವ್ಯ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದುಕೊಂಡಿತು.
ಅದಿರಲಿ, ಆದರೆ ಈಗ ನನ್ನ ಮುಂದಿರುವ ವಿಚಾರ ಅದಲ್ಲ- ನಮ್ಮ ಕಲಾವಿದರೇಕೆ ತಮ್ಮ ಕೊನೆಗಾಲದಲ್ಲಿ ಅಷ್ಟು ಅಸಹಾಯಕರಾಗಿ ಹೋಗುತ್ತಾರೆ? ಮೈಯಲ್ಲಿ ಶಕ್ತಿ, ಉತ್ಸಾಹ ತುಂಬಿದ್ದಾಗ ಲೀಲಾಜಾಲವಾಗಿ ನಟಿಸಿ, ಹಣದ ಹೊಳೆಯನ್ನೇ ಹರಿಸಿಕೊಳ್ಳುವ ನಟ, ನಟಿಯರು ತಮ್ಮ ಕೊನೆಗಾಲದಲ್ಲಿ ಅವಶ್ಯಕ ಚಿಕಿತ್ಸೆಯೂ ದೊರೆಯದೆ ಸಂಕಟ ಅನುಭವಿಸಿರುವ ನೂರಾರು ಉದಾಹರಣೆಗಳು ನಮ್ಮ ಮುಂದಿವೆ, ಅಥವಾ ಅವರ ನಿಸ್ಸಹಾಯಕ ಸ್ಥಿತಿಯಲ್ಲಿ ಮಾತ್ರ ನಿಜಸಂಗತಿ ಜನರಿಗೆ ತಿಳಿಯುವುದೋ ಏನೋ. ದೊಡ್ಡ ದೊಡ್ಡ ನಟ, ನಿರ್ದೇಶಕರ ಪರಿವಾರದವರಿಗೆ ಅದುವರೆಗೆ ಹೊರ ಪ್ರಪಂಚದ ಬಗ್ಗೆ ಕಿಂಚಿತ್ತೂ ತಿಳುವಳಿಕೆ ಇಲ್ಲದೆ ಮನೆಯ ಆವರಣದಲ್ಲಿಯೇ ಇದ್ದು, ಇದ್ದಕ್ಕಿದ್ದಂತೆ ಯಜಮಾನ ದುಡಿಯದಂತಹ ಸ್ಥಿತಿ ತಲುಪಿದಾಗ ಕಂಗಾಲಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿಬಿಡುತ್ತದೆ. ಕನ್ನಡನಾಡು, ನುಡಿಗೇ ಕಲಶಪ್ರಾಯವಾಗಿರುವ ನಮ್ಮೆಲ್ಲರ ಪ್ರೀತಿಯ ಕಲಾವಿದರ ಬದುಕಿನ ಮುಸ್ಸಂಜೆ ಇಷ್ಟೊಂದು ಯಾತನೆಯಿಂದ ತುಂಬಿರುವುದೇಕೆ?
ತೆರೆಯ ಮೇಲೆ ನ್ಯಾಯವಾದಿಗಳಾಗಿ, ಕಾನೂನು ರಕ್ಷಕರಾಗಿ, ವೈದ್ಯರಾಗಿ, ಧೀಮಂತ ಪತ್ರಕರ್ತರಾಗಿ ಪರೋಕ್ಷವಾಗಿ ಸಾವಿರಾರು ಯುವಕ, ಯುವತಿಯರ ಜೀವನದ ಮೇಲೆ ತಮ್ಮ ಪ್ರಭಾವವನ್ನು ಅಚ್ಚಳಿಯದಂತೆ ಬೀರುವ ನಮ್ಮ ನಟ, ನಟಿಯರು ತಮ್ಮ ಖಾಸಗಿ ಜೀವನದ ಲೆಕ್ಕಾಚಾರದಲ್ಲೇಕೆ ಅಷ್ಟು ಹೀನಾಯವಾಗಿ ಸೋತು ಹೋಗುತ್ತಾರೆ? ತಾವು ಬೆವರು ಹರಿಸಿ ಸಂಪಾದಿಸಿದ ದುಡಿಮೆಯನ್ನೆಲ್ಲಾ ಯಾರು ಯಾರನ್ನೋ ನಂಬಿ ಕಳೆದುಕೊಳ್ಳುವವರು ಕೆಲವರಾದರೆ, ಮುಂದೆ ಬರಬಹುದಾದ ಕರಾಳ ದಿನಗಳ ಅರಿವಿಲ್ಲದೆ ಅತಿ ಐಷಾರಾಮದ ಬದುಕು ನಡೆಸಿ ರಾಶಿ ರಾಶಿ ರೊಕ್ಕವನ್ನು ಪೋಲು ಮಾಡಿಕೊಳ್ಳುವವರು ಮತ್ತೆ ಹಲವರು. ದೊರೆತ ಅವಕಾಶವನ್ನು ಸಾರ್ಥಕವಾಗಿ ಬಳಸಿಕೊಂಡು, ಬದುಕನ್ನು ಹಸನಾಗಿಸಿಕೊಂಡಿರುವ ಜಾಣಮರಿ ಕಲೆಗಾರರೂ ಇಲ್ಲದಿಲ್ಲ. ಅದರೆ ಅವರಿವರನ್ನು ನಂಬಿ ಕೆಟ್ಟಿರುವವರೇ ಅಧಿಕ.
ಯಾಕೆ ಹೀಗೆ? ತಮ್ಮ ಹಣವನ್ನು ತಾವು ಹೇಗೆ ನಿಭಾಯಿಸಿಕೊಳ್ಳಬೇಕೆನ್ನುವ ಅತಿ ಸಾಮಾನ್ಯ ತಿಳಿವಳಿಕೆಯೂ ಇವರಿಗೇಕೆ ಇರುವುದಿಲ್ಲ? ಅತ್ಯಲ್ಪ ಸಂಬಳ ಪಡೆಯುವ ಸಾಮಾನ್ಯ ಸಂಸಾರವಂದಿಗರು ಕೂಡ, ತಮ್ಮ ಇತಿ,ಮಿತಿಗಳನ್ನು ಅರಿತುಕೊಂಡು ವ್ಯವಸ್ಥಿತವಾಗಿ ಬದುಕುತ್ತಾರೆ. ತಮ್ಮ ತಮ್ಮ ಕುಟುಂಬ ನಿರ್ವಹಣೆ, ಮಕ್ಕಳ ವಿಧ್ಯಾಭ್ಯಾಸ, ರೋಗ, ರುಜಿನ ಮದುವೆ, ಮುಂಜಿ ಮುಂತಾದ ನೂರಾರು ಖರ್ಚು ವೆಚ್ಚಗಳನ್ನು ನಿಭಾಯಿಸಿಕೊಂಡು ಕಷ್ಟಕಾಲಕ್ಕೆ ಆಗಲಿ ಎಂದು ದುಡಿಮೆಯ ಸ್ವಲ್ಪ ಭಾಗವನ್ನು ಕೂಡಿಡುತ್ತಾ ಗೌರವಯುತ ಬದುಕು ನಡೆಸುವ ಅಸಂಖ್ಯಾತ ಸಂಸಾರಗಳಿವೆ. ಇಂತಹ ಒಂದು ಕನಿಷ್ಟ ನೆಮ್ಮದಿಯೂ ಇಲ್ಲದೆ, ನಮ್ಮ ಕಲಾವಿದರು ಕಡೆಗಾಲದಲ್ಲಿ ಕಂಬನಿಗರೆಯುವುದು ನಿಜವಾಗಿ ನಮ್ಮ ಚಿತ್ರರಂಗದ ದುರಂತವೇ ಅಗಿದೆ.
ನಾನು ಯಾವ ಕಲಾವಿದರ ಬದುಕನ್ನು ಹತ್ತಿರದಿಂದ ಕಂಡಿಲ್ಲವಾದರೂ, “ಹಾಯ್ ಬೆಂಗಳೂರು ಪತ್ರಿಕೆ”ಯಲ್ಲಿ ವರುಷಗಳ ಹಿಂದೆ ಕಲ್ಪನ, ಮಂಜುಳ, ಆರತಿ ಮುಂತಾದ ನಟಿಯರ ಬಗ್ಗೆ ಪ್ರಕಟವಾಗುತ್ತಿದ್ದ ಲೇಖನಮಾಲೆ ನನಗೆ ಕಲಾವಿದರ ಬದುಕಿನ ನಶ್ವರತೆ, ಆತಂಕ, ತಲ್ಲಣಗಳನ್ನು ಪರಿಚಯಿಸಿತು. ಅಭಿರುಚಿಗೊಪ್ಪದ ಜೀವನ ಸಂಗಾತಿಯ ಆಯ್ಕೆ, ನಂಬಿಕೆ ದ್ರೋಹ, ಅತಿ ಆತ್ಮವಿಶ್ವಾಸ, ಹಟಮಾರಿತನ, ದುಂದುಗಾರಿಕೆ, ಜೂಜು ಮೋಜು, ವಾಸ್ತವ ಬದುಕಿನ ನಿರಾಕರಣ…. ಇವೆಲ್ಲಾ ನಮ್ಮ ತಾರೆಗಳನ್ನು ನಿರಂತರವಾಗಿ ಕಾಡುವ ಗ್ರಹಣಗಳು. ಈ ತಾರೆಗಳು ತಾವೇ ಸೃಷ್ಟಿಸಿಕೊಂಡಿರುವ ಭ್ರಾಮಕ ಜಗತ್ತಿನಿಂದ ಹೊರಬಂದು, ಎಲ್ಲಾ ಪೂರ್ವಾಗ್ರಹಗಳಿಂದ ಮುಕ್ತರಾಗಿ, ವಸ್ತುನಿಷ್ಟವಾದ ಸುಂದರ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕಾಗಿದೆ.
ನಟ, ನಟಿಯರ ಗಳಿಕೆ, ವೃತ್ತಿ ಜೀವನ ಬೇರೆಲ್ಲರಿಗಿಂತ ತೀರಾ ಅನಿಶ್ಚಿತ. ಹಾಗಾಗಿ ಕೈನಡೆಯುತ್ತಿರುವಾಗ ಆದಷ್ಟೂ ಹಣ ಉಳಿಸಿಕೊಳ್ಳಬೇಕು. ಹೀಗಾದಾಗ ತೀರಾ ವಯಸ್ಸಾಗಿ, ಆರೋಗ್ಯವೂ ಕೈಕೊಟ್ಟಾಗ ನೆರವಿಗಾಗಿ ಸರಕಾರದ ಮುಖ ನೋಡುವುದು ತಪ್ಪುತ್ತದೆ. ನಾಡು ನುಡಿಯನ್ನು ಉಳಿಸಿ, ಬೆಳೆಸಿರುವ ಸಾಹಿತಿ,ಕಲಾವಿದರ ಸಂಕಟ ಕಾಲದಲ್ಲಿ ಅವರನ್ನು ಸಲಹಬೇಕಾಗಿದ್ದು ಸರಕಾರಗಳ ಕರ್ತವ್ಯವೇ ಆದರೂ, ನೂರಾರು ಕೆಂಪು ಪಟ್ಟಿಗಳನ್ನು ದಾಟಿಕೊಂಡು ಸಹಾಯ ಹರಿದು ಬರುವುದರೊಳಗಾಗಿ ಕಾಲ ಮಿಂಚಿ ಹೋಗಿರುತ್ತದೆ.
ಕಲಾವಿದರ ಸಂಘಗಳು ಈ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದೆ. ಪ್ರತಿ ತಿಂಗಳು ಕಡ್ಡಾಯವಾಗಿ ಕಲಾವಿದರಿಂದ ವಂತಿಗೆಯನ್ನು ಪಡೆದು, ಅ ಹಣವನ್ನು ಅವರ ಆಪತ್ಕಾಲದಲ್ಲಿ ಬಡ್ಡಿ ಸಮೇತವಾಗಿ ಹಿಂತಿರುಗಿಸುವ ಯೋಜನೆಗಳನ್ನು ಹಾಕಿಕೊಳ್ಳುವ ಮೂಲಕ, ಕಲಾವಿದರ ಬದುಕಿನಲ್ಲಿ ಹಠಾತ್ತಾಗಿ ಎರಗುವ ವಿಪತ್ತುಗಳಿಂದ ಅವರನ್ನು ಪಾರುಮಾಡಬಹುದು. ಒಟ್ಟಿನಲ್ಲಿ ಹೇಗಾದರೂ ಸರಿ, ತಮ್ಮ ಇಡೀ ಬದುಕನ್ನು ಇತರರ ಮನರಂಜನೆಗಾಗಿಯೇ ಸವೆಸುವ ಕಲಾ ತೋಟದ ಈ ಅಮೂಲ್ಯ ಕುಸುಮಗಳು ತಮ್ಮ ಬಾಳ ಇಳಿ ಸಂಜೆಯಲ್ಲಿ ನೋವಿನಿಂದ ಕಣ್ಣೀರಿಡದಂತೆ, ವೇದನೆಯಿಂದ ಬಿಸುಸುಯ್ಯದಂತೆ ಕಾಪಾಡುವ ಹೊಣೆ ಹೃದಯವಂತ ನಾಗರೀಕ ಸಮಾಜದ ಹೆಗಲ ಮೇಲಿದೆ. ಇದು ಮೊದಲ ಆದ್ಯತೆಯೂ ಆಗಬೇಕು.
(ಫೆಬ್ರುವರಿ.೨೦೦೩)
****
‘ಬ್ಲಾಗ್‌ಗಳ ತೋಟದ ಮುಸ್ಸಂಜೆಗಳು…’?
ನಿಮ್ಮ ಲೇಖನಗಳು ‘ಅದುವೆಕನ್ನಡ’ದಲ್ಲಿ ಬಂದು, ಕೆಲದಿನಗಳಾದ ಮೇಲೆ ‘ವಿಜಯಕರ್ನಾಟಕ’ದಲ್ಲಿ ಬಂದು, ಕೆಲ ವರ್ಷಗಳಾದ ಮೇಲೆ ಬ್ಲಾಗ್‌ನಲ್ಲಿ ಬರುತ್ತಿರುವುದನ್ನು ನೋಡಿ ಇ-ಕಾಮೆಂಟು 🙂
ಲೇಖನ ಹಳೆಯದಾದರೇನು? ಭಾವ ನವ-ನವೀನ! ಮುಂಜಾನೆ, ಮುಸ್ಸಂಜೆಗಳು ಹುಲುಮಾನವರಿಗೆ ಮಾತ್ರ. ಅಕ್ಷರ ಅಜರಾಮರ. ಸಾಹಿತ್ಯ ಶಾರದೆಗೆಂದೂ ಚಿರಯೌವನ! 🙂
ಹೌದು, ಜೋಶಿಯವರೇ, “ಬರಹದ” ವಿವಿಧ ರೂಪಾಂತರಗಳಲ್ಲಿರುವ ನನ್ನ ಲೇಖನಗಳನ್ನು ನವೀಕರಿಸಿ, ಇಲ್ಲಿ ಸೇರಿಸುತ್ತಿದ್ದೇನೆ. ನನ್ನ ಈ ಉದ್ದೇಶದಿಂದ ಅದುವೆ ಕನ್ನಡಕ್ಕಾಗಲೀ, ವಿಜಯ ಕರ್ನಾಟಕಕ್ಕಾಗಲೀ, ಓದುಗರಿಗಾಗಲೀ ಅಪಚಾರವಾಗಿಲ್ಲವೆಂದು ಭಾವಿಸಿದ್ದೇನೆ. ಸಾಧ್ಯವಾದಷ್ಟೂ ಕನ್ನಡದ ಮಾಹಿತಿಗಳು ಗೂಗಲ್ ಹುಡುಕಾಟಕ್ಕೆ ಸಿಗಬೇಕೆಂಬುದು ನನ್ನ ಇನ್ನೊಂದು ಆಶಯ.
ಚಿಂತನಾರ್ಹ ಲೇಖನ. ಕಲಾವಿದರ ಸಂಘಗಳು ಸಾಕಷ್ಟಿದ್ದರೂ, ಕಲಾವಿದರು ಕೊನೆಗಾಲ್ಲಷ್ಟೇ ಏಕೆ, ನಡುವಯಸ್ಸಿನಲ್ಲಿಯೂ ಸಂಸಾರ ತಾಪತ್ರಯಗಳಿಂದ ಬಳಲಿಹೋಗುವುದು ಕಾಣುತ್ತಲೇ ಇದ್ದೇವೆ.
ನನಗನ್ನಿಸುವ ಹಾಗೆ, ಅತಿ ಆತ್ಮವಿಶ್ವಾಸ, ಹಟಮಾರಿತನ, ದುಂದುಗಾರಿಕೆ, ಜೂಜು ಮೋಜು, ಇತ್ಯಾದಿಗಳೆಲ್ಲಾ ಕಲಾವಿದರಿಗೆ ಮಾತ್ರವಲ್ಲಾ, ಸಾಮಾನ್ಯ ಜನತೆಗೂ ಅನ್ವಯಿಸುತ್ತದೆ. ಸಾಮಾನ್ಯ ಜನತೆಯೂ ತಮ್ಮ ಮುಸ್ಸಂಜೆಯ ಸಮಯದಲ್ಲಿ ಬಹಳವಾಗಿ ತ್ರಾಸಪಡುವುದನ್ನು ನೋಡುತ್ತೇವೆ. ಆದರೆ ಕಲಾವಿದರು ಪ್ರಿಚಯವಿರುವಷ್ಟು ಸಾಮಾನ್ಯ ಜನತೆ ಇತರರಿಗೆ ಗೊತ್ತಿರುವುದಿಲ್ಲ. ಪತ್ರಿಕೆಗಳು, ಎಲೆಕ್ಟ್ರಾನಿಕ್ ಮಾಧ್ಯಮಗಳು ಸಾಮಾನ್ಯರ ಕಷ್ಟಗಳನ್ನು ‘ಸುದ್ದಿ’ ಎಂಬಂತೆ ಪ್ರಕಟಿಸುವುದೂ ಇಲ್ಲ. ‘ದಿನಾ ಸಾಯೋರಿಗೆ ಅಳೋರ್ಯಾರು’ ಎಂಬಂತಹ ಧೋರಣೆ.
ಈ ಸಮಸ್ಯೆಗೆ ಮುಖ್ಯವಾಗಿ ಎಲ್ಲರಿಗೂ ಬೇಕಾಗಿರುವ ಮದ್ದು: ಮುಂದಾಲೋಚನೆ.
ತ್ರಿ: ‘ಅಪರೋಕ್ಷ’ ಪದವು ನನ್ನ ಪದಸಂಗ್ರಹಕ್ಕೆ ಇಂದೇ ಸೇರಿದ್ದು. ಇದರ ಅರ್ಥ ‘ಪ್ರತ್ಯಕ್ಷ’ ಎಂದೇ?
“ಅಪರೋಕ್ಷವಾಗಿ ಸಾವಿರಾರು ಯುವಕ, ಯುವತಿಯರ ಜೀವನದ ಮೇಲೆ ತಮ್ಮ ಪ್ರಭಾವವನ್ನು ಅಚ್ಚಳಿಯದಂತೆ ಬೀರುವ ನಮ್ಮ ನಟ, ನಟಿಯರು “
ಈ ವಾಕ್ಯದಲ್ಲಿ, ಅಪರೋಕ್ಷವಾಗಿ ಅನ್ನುವ ಬದಲು, ಪರೋಕ್ಷವಾಗಿ ಎಂದಿದ್ದರೆ ಮತ್ತಷ್ಟು ಅರ್ಥಪೂರ್ಣವಾಗಿರುತ್ತಿತ್ತು. ಅಲ್ಲವೇ?
ಮನ., ಹೌದು, ಅಪರೋಕ್ಷ ಪದಕ್ಕೆ ಪ್ರತ್ಯಕ್ಷವಾದದ್ದು ಎಂದು ಅರ್ಥ. ತಿದ್ದುಪಡಿ ಸೂಚಿಸಿದ್ದಕ್ಕೆ ಧನ್ಯವಾದಗಳು. ಮುಂದಾಗುವುದನ್ನು ಇಂದೇ ತಿಳಿಯುವ ಶಕ್ತಿ ಇರುವವರನ್ನು “ಅಪರೋಕ್ಷ ಜ್ಞಾನಿಗಳು” ಎನ್ನುತ್ತಾರೆ.