ರಚನೆ – ಪುರಂದರದಾಸರು
ಗಾಯಕ – ಭೀಮಸೇನ ಜೋಷಿ

ಹಾಡು ಕೇಳಿ

ಕರುಣಿಸೋ ರಂಗಾ ಕರುಣಿಸೋ
ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ ||ಪಲ್ಲವಿ||

ರುಕುಮಾಂಗದನಂತೆ ವ್ರತವ ನಾನರಿಯೆನೊ
ಶುಕ ಮುನಿಯಂತೆ ಸ್ತುತಿಸಲು ಅರಿಯೆ
ಬಕವೈರಿ*ಯಂತೆ ಧ್ಯಾನವ ಮಾಡಲರಿಯೆ
ದೇವಕಿಯಂತೆ ಮುದ್ದಿಸಲರಿಯೆನೊ ||೧||

ಗರುಡನಂದದಿ ಪೊತ್ತು ತಿರುಗಲು ಅರಿಯೆ
ಕರೆಯಲು ಅರಿಯೆ ಕರಿರಾಜನಂತೆ
ವರ ಕಪಿಯಂತೆ ದಾಸ್ಯವ ಮಾಡಲರಿಯೆ
ಸಿರಿಯಂತೆ ನೆರೆದು ಮೋಹಿಸಲರಿಯೆನೊ ||೨||

ಬಲಿಯಂತೆ ದಾನವ ಕೊಡಲು ಅರಿಯೆನೊ
ಭಕ್ತಿ ಛಲವನರಿಯೆ ಪ್ರಹ್ಲಾದನಂತೆ
ಒಲಿಸಲು ಅರಿಯೆ ಅರ್ಜುನನಂತೆ ಸಖನಾಗಿ
ಸಲಹೋ ದೇವರ ದೇವ ಪುರಂದರವಿಠಲ ||೩|

___________________________

*ಬಕವೈರಿ ಯಾರು?

8 thoughts on “ಕರುಣಿಸೋ ರಂಗಾ…ಕರುಣಿಸೋ”

  1. ಹಂಸಾನಂದಿಯವರೆ, ನಿಜ. ಭೀಮನೂ ಕೃಷ್ಣ ಭಕ್ತನಾದ್ದರಿಂದ ಆಗೀಗ ಧ್ಯಾನ ಮಾಡಿರಬಹುದಾದರೂ, ದಾನದಲ್ಲಿ ಬಲಿ, ರುಕ್ಮಾಂಗದ ವ್ರತಕ್ಕೆ, ಭಕ್ತಿಯಲ್ಲಿ ಪ್ರಹ್ಲಾದನಂತೆ , ಭೀಮ ಧ್ಯಾನಕ್ಕೆ ಪ್ರಖ್ಯಾತನಲ್ಲ. ಈ ಗೊಂದಲದಿಂದಾಗಿಯೋ ಏನೋ, ಕೆಲವರು ಹಾಡುವಾಗ- “ಬಕವೈರಿಯಂತೆ ಧ್ಯಾನವ ಮಾಡಲರಿಯೆ” ಸಾಲನ್ನು “ಬಕನಂತೆ ಧ್ಯಾನ ಮಾಡಲರಿಯೆ” ಎಂದು ಹಾಡುವುದನ್ನು ಕೇಳಿದ್ದೇನೆ. “ಬಕಧ್ಯಾನ” ಎಂಬ ನುಡಿಗಟ್ಟು ಇದೆಯಾದರೂ, ಅದು ಹೊಗಳಿಕೆಗಿಂತಲೂ ಲೇವಡಿಯ ಅರ್ಥದಲ್ಲಿ ( ಮೊಸಳೆ ಕಣ್ಣೀರಿನಂತೆ ) ಬಳಕೆಯಾಗುವುದರಿಂದ ಅದೂ ಕೂಡ ಸರಿಯಲ್ಲವೆಂದು ನನಗನಿಸಿದೆ.

  2. ನನ್ನ ಅಭಿಪ್ರಾಯವೂ ಸಹ ಹಂಸಾನಂದಿಯವರ ಅಭಿಪ್ರಾಯದಂತೆಯೇ ಇದೆ.
    ಭೀಮಸೇನನು ತನ್ನ ಪೂರ್ವಜನ್ಮಗಳಲ್ಲಿ ಮಾರುತಿ, ಪ್ರಹ್ಲಾದ ಹಾಗೂ ಮಧ್ವಾರ್ಯರಾಗಿರಲಿಲ್ಲವೆ?
    ಹಾಗಿದ್ದರೆ, ಬಕವೈರಿ ಧ್ಯಾನವು ಸರಿಹೊಗುತ್ತದೇ.

  3. ಮತ್ತಿಷ್ಟು ಮಾಹಿತಿ.
    ಅರ್ಜುನನು ಕೃಷ್ಣನ ಪ್ರಕಟ ಭಕ್ತನಾಗಿದ್ದ. ಆದರೆ, ಭೀಮಸೇನನು ಗುಪ್ತಭಕ್ತ. ಭೀಮಸೇನನಿಗೆ ಪರಮಜ್ಞಾನಿಯೆಂದು ಕರೆದಿದ್ದಾರೆ. ಧರ್ಮರಾಜನು ಮೈಮರೆತಾಗ, ಭೀಮನು ಅವನಿಗೆ ಎಚ್ಚರಿಸಿದ್ದುಂಟು.
    ಆದುದರಿಂದ ಬಕವೈರಿ ಧ್ಯಾನವೆಂದರೆ, ಭೀಮನ ಗುಪ್ತಧ್ಯಾನ ಎಂದೇ ಅರ್ಥವಾಗುವದಲ್ಲವೆ?

  4. ಸುನಾಥ ಕಾಕಾ, ಬಕಾಸುರನನ್ನು ಕೊಂದ ಭೀಮ, ಈ ಹಾಡಿನಲ್ಲಿ ಬರುವ ಬಕವೈರಿ ಹೌದೇ? ಅಲ್ಲವೇ? ಎಂಬ ನನ್ನ ಅನುಮಾನ ಪರಿಹರಿಸಿದ್ದಕ್ಕೆ ಧನ್ಯವಾದಗಳು.

    ಆದರೆ ಭೀಮ, ಪ್ರಹ್ಲಾದನ ಅವತಾರವಲ್ಲ ಅಲ್ಲವೇ? ಪ್ರಹ್ಲಾದನ ಅವತಾರವೆಂಬ ಪ್ರತೀತಿ ಇರುವುದು ಮಂತ್ರಾಲಯ ರಾಘವೇಂದ್ರ ಸ್ವಾಮಿಗಳಿಗೆ.

  5. ಹೌದು. ಶಂಕು ಕರ್ಣನೆಂಬ ಗಂಧರ್ವ, ಕೃತಯುಗದಲ್ಲಿ ಪ್ರಹ್ಲಾದನಾಗಿ, ನಂತರ ದ್ವಾಪರದಲ್ಲಿ ಬಾಹ್ಲೀಕನಾಗಿ, ಕಲಿಯುಗದಲ್ಲಿ ಎರಡು ಬಾರಿ (ವ್ಯಾಸರಾಜರಾಗಿ ಮತ್ತು ರಾಘವೇಂದ್ರರಾಗಿ) ನಮ್ಮನ್ನು ಅನುಗ್ರಹಿಸಿದ್ದಾರೆ.

    ಶ್ರೀನಿ

  6. ವಾವ್.. ಎಷ್ಟೊಂದು ವಿಷಯ ತಿಳೀತು ಕಮೆಂಟ್ಗಳಲ್ಲಿ!! ಎಲ್ಲರಿಗೂ ಧನ್ಯವಾದಗಳು 🙂

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.