ಡಿವಿಜಿಯವರ ಕೆಲವು ಸೂಕ್ತಿಗಳು

* ಸಾಹಿತ್ಯವೆಂದರೆ ಎದೆಯನ್ನು ಅಲುಗಿಸುವಂಥ ಮಾತು.

* ಜೀವನದ ಕೊಳೆ-ಕಲ್ಮಶಗಳನ್ನು ತೊಳೆಯಬಲ್ಲ ತೀರ್ಥವೆಂದರೆ ಕಾವ್ಯತೀರ್ಧ.

* ಅಸಾಧ್ಯವಾದ ವೈರಾಗ್ಯದ ಸೋಗಿಗಿಂತ ಸಾಧ್ಯವಾದ ಭೋಗದ ಸಾಧನೆ ಮೇಲೆಂದು ನಾವೆಲ್ಲ ಸ್ಪಷ್ಟವಾಗಿ ಅಂಗೀಕರಿಸಬೇಕು.

* ಸಂಸ್ಕೃತವು ಮಳೆಯ ಮೋಡ; ಕನ್ನಡವು ಅದನ್ನು ಹನಿಯಾಗಿಸಿ ನೆಲಕ್ಕೆ ಬರಮಾಡಿಕೊಳ್ಳುವ ತಂಗಾಳಿ.

* ಉತ್ತಮ ಜೀವನದಿಂದ ಉತ್ತಮ ಸಾಹಿತ್ಯ.

* ಮಿತತೆಯೇ ಬಲ ; ಬಾಹುಳ್ಯವೇ ದೌರ್ಬಲ್ಯ.

* ಬುದ್ಧಿ ಬ್ರಹ್ಮಗಿರಿ ; ಕಾವ್ಯ ಕಾವೇರಿ.

* ಸರಸ್ವತಿಯು ತಪಸ್ಸಿಲ್ಲದ ನೈವೇದ್ಯಕ್ಕೆ ಒಲಿಯುವಷ್ಟು ಸರಳೆಯಲ್ಲ.

* ಮನುಷ್ಯ ಸ್ವಭಾವ ಹಾಲು. ಜಗತ್ತು ಹುಳಿಮಜ್ಜಿಗೆ.

* ಬ್ರಹ್ಮಪ್ರಾಪ್ತಿಗೆ ಜಗತ್ತು ಸಾಧನ.

* ಸಂತೋಷವು ಭಗವಧ್ಬಕ್ತಿಯ ಒಂದು ಲಕ್ಷಣ.

* ಧರ್ಮದ ಒಂದು ಮುಖ್ಯರೂಪ ದೇಶಸೇವೆ.

* ಪ್ರಜಾರಾಜ್ಯಕ್ಕಿರುವ ಮೊದಲನೆಯ ಶತ್ರು ಪ್ರಜೆಯ ಅಶಿಕ್ಷೆ.

* ಸಂಕಟದಿಂದಲೇ ಮಂಗಳಸ್ಮರಣೆ.

* ಯಮನಿಗೆ ಊಟವಿಡುವವನು ಕಾಮ. ಕಾಮನಿಗೆ ಲೋಕದಲ್ಲಿ ಎಡೆಬಡಿಸಿಕೊಡುವವನು ಯಮ.

* ಪ್ರಣಯವು ಆರಂಭದಲ್ಲಿ ದ್ವೈತ ; ಸರಸಸಲ್ಲಾಪಗಳಲ್ಲಿ ವಿಶಿಷ್ಟಾದ್ವೈತ ; ಪ್ರಣಯ ಶಿಖರದಲ್ಲಿ ಅದ್ವೈತ.

* ಸಂಸಾರ ಸಾಗರವನ್ನು ದಾಟುವುದು ಹೇಗೆ? ನೀರನ್ನು ಸೋಕದೆಯೆ ಈಜಲಾಗುತ್ತದೆಯೇ?

* ಉತ್ಸವ ಗದ್ದಲ ಒಂದು ದಿನದ ಮೇಲ್ನೋಟಕ್ಕೆ ಚಿನ್ನ ; ವಿವೇಕ ವಿಚಕ್ಷಣೆ ಯಾವಾಗಲೂ ಚಿನ್ನ.

* ಜೀವನದ ಯಾವ ಭಾಗದಿಂದಲೂ ಧರ್ಮವನ್ನು ವಿನಾಯಿಸತಕ್ಕದ್ದಲ್ಲ.

* ಸಭ್ಯತೆ ಕಲೆ ; ಸಹವಾಸಾರ್ಹತೆ ಒಂದು ಕಲೆ ; ಮೈತ್ರೀ ಸಂಪಾದನೆ ಒಂದು ಕಲೆ ; ನಲ್ಮೆಯ ನೆರೆಹೊರೆತನ ಕಲೆ ; ರಾಷ್ಟ್ರಕಜೀವನ ಕಲೆ-ಅದು ಜೀವ ಸಂಸ್ಕಾರ ಕಲೆ, ಜೀವನ ಸಂವರ್ಧನ ಕಲೆ.

* ಕಕ್ಷಿಯಿಲ್ಲದ ರಾಜಕೀಯವು ಮಣ್ಣುಂಡೆ ; ಕಕ್ಷಿ ಪ್ರಬಲಿಸಿರುವ ರಾಜಕೀಯವು ಸೊಟ್ಟ ಕಟ್ಟಿಗೆ.

* ಕಾವ್ಯವು ಮನುಷ್ಯಕಾರ್ಯ ಆದರೂ ಅದು ರಹಸ್ಯ. ಏಕೆಂದರೆ ಮನುಷ್ಯನೇ ಒಂದು ರಹಸ್ಯ.
***

`ಡಾ||ಡಿ.ವಿ.ಗುಂಡಪ್ಪ – ಜೀವನ ಮತ್ತು ಸಾಧನೆ’ – ಲೇಖಕ ; ನೀಲತ್ತಹಳ್ಳಿ ಕಸ್ತೂರಿ, ಪ್ರಕಾಶನ ; ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ (1988,1995)

ಹೀಗಿದ್ದರು ಡಿವಿಜಿ!

(“ಜಗದ ಪೊಗಳಿಕೆಗೆ ಬಾಯ್‍ಬಿಡದೆ ಸುಫಲ ಸುಮಭರಿತ ಪಾದಪದಂತೆ ನೈಜಮಾದೊಳ್ಪಿನಿಂ ಬಾಳ್ವವೊಲು’ ಇದು ಡಿವಿಜಿಯವರ ಕವಿತೆ ಮಾತ್ರವಲ್ಲ, ಜೀವನದ ರೀತಿಯೇ.” ಬರಹ, ಬದುಕು ಎರಡರಲ್ಲೂ ಧೀಮಂತಿಕೆ ಮೆರೆದವರು ಡಿ.ವಿ.ಜಿ(ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ). ನೀಲತ್ತಹಳ್ಳಿ ಕಸ್ತೂರಿಯವರ `ಡಾ||ಡಿ.ವಿ.ಗುಂಡಪ್ಪ – ಜೀವನ ಮತ್ತು ಸಾಧನೆ’ ಪುಸ್ತಕದಲ್ಲಿ ಡಿವಿಜಿಯವರ ವ್ಯಕ್ತಿತ್ವವನ್ನು ತೆರೆದಿಡುವ ಈ ಬರಹ ಕಂಡೆ. ಅದನ್ನು ಇಲ್ಲಿ ತಂದಿಟ್ಟು, ತುಳಸಿವನವನ್ನು ಅಲಂಕರಿಸಿಕೊಳ್ಳಬೇಕೆನ್ನಿಸಿತು.)

ಉನ್ನತ ಚಿಂತನೆ, ಸರಳ ಜೀವನ- ಇದಕ್ಕೆ ಡಿವಿಜಿ ಉದಾಹರಣೆ. ಅವರಿಗೆ ಅನೇಕ ಉನ್ನತ ವ್ಯಕ್ತಿಗಳಲ್ಲಿ ಸಲಿಗೆಯ ಸ್ನೇಹ. ಅಧಿಕಾರಸ್ಥರು, ಐಶ್ವರ್ಯವಂತರು, ಪ್ರಭಾವಶಾಲಿಗಳು ಎಲ್ಲರೂ ಚಿರಪರಿಚಿತರೇ. ಆದರೆ ಡಿವಿಜಿ ಈ ಸ್ನೇಹ ಸಲಿಗೆ ಪರಿಚಯಗಳನ್ನು ಕಿಂಚಿತ್ತೂ ತಮ್ಮ ಸ್ವಂತಕ್ಕೆ ಬಳಸಿಕೊಳ್ಳಲಿಲ್ಲ. ಸಮುದ್ರದ ನಂಟು ಉಪ್ಪಿಗೆ ಬಡತನ. ಬಹುಪಾಲು ಅವರು ಬಡತನದಲ್ಲೇ ಬದುಕಿದವರು. ಬರಹವೇ ಬದುಕಿಗೆ ಆಧಾರ. ಬರಹದಿಂದ ಬಲ್ಲಿದನಾಗುವುದು ಕನ್ನಡದಲ್ಲಂತೂ ಕನಸು. ಅದೂ ಅಗ್ಗದ ಜನಪ್ರಿಯ ಕತೆ ಕಾದಂಬರಿಗಳನ್ನಾಗಲಿ, ಪಠ್ಯಪುಸ್ತಕವನ್ನಾಗಲಿ ಬರೆಯದೆ, ಡಿವಿಜಿಯ ಹಾಗೆ ತೂಕವಾದದ್ದನ್ನೇ ಬರೆದರೆ ಸಿರಿವಂತಿಕೆ ಕನಸಲ್ಲೂ ಅಸಾಧ್ಯ. ಅವರ ಹಲವು ಕೃತಿಗಳು ಪಠ್ಯಪುಸ್ತಕಗಳೇನೊ ಆದುದು ಉಂಟು. ಅದರೆ ಶ್ರೀಮಂತಿಕೆ ತರುವಷ್ಟು ಏನೂ ಅಲ್ಲ.ಕೃತಿಗಳಲ್ಲಿ ಹಲಕೆಲವು; ಕಗ್ಗ, ಅಂತಃಪುರಗೀತ, ನಿವೇದನ, ಸಾಹಿತ್ಯಶಕ್ತಿ, ಜೀವನ ಸೌಂದರ್ಯ-ಸಾಹಿತ್ಯ, ಉಮರನ ಒಸಗೆ, ಮುಂತಾದವೇನೊ ಹಲವು ಮುದ್ರಣ ಕಂಡವು. ಓದುಗರನ್ನೇ ನೆಚ್ಚಿದ ಡಿವಿಜಿಗೆ ನಿರಾಶೆ ಕೊಡಲಿಲ್ಲ. ಕಾರಣ ಅವರು ಬಡತನ ಸರಳತೆಗಳಿಗೆ ಒಲಿದಿದ್ದರು.

ಡಿವಿಜಿ ಸಾರ್ವಜನಿಕ ಕಾರ್ಯದಲ್ಲಿ ಸದಾ ಮುಳುಗಿದ್ದರೂ ಸಾಂಸಾರಿಕವಾಗಿ, ಸ್ನೇಹಿತರ ನಡುವೆ ತೀರ ಬಿಡುಬೀಸು. ನಕ್ಕು ನಗಿಸುವುದು, ಊಟೋಪಚಾರಗಳಲ್ಲಿ ಖುಷಿಯಿಂದ ಪಾಲುಗೊಳ್ಳುವುದು, ಹಬ್ಬ ಹುಣ್ಣಿಮೆ ಎಂದರೆ ಉತ್ಸಾಹ. ಮನೆಯಲ್ಲಿ ಎಲ್ಲರೊಂದಿಗೆ ಸಲಿಗೆ, ಸರಸತೆ, ಗೆಳೆಯರ ಕೂಟದಲ್ಲಿ ಡಿವಿಜಿ ವಿಚಾರದ ಮೊನಚು, ಹಾಸ್ಯದ ಹೊಳೆ, ಮಲುಕುಗಳಿಂದ ವಿಜೃಂಭಿಸುವರು. ಅವರ ಮಾತಿನಲ್ಲಿ ಪ್ರಸನ್ನತೆಯೆ ಹೆಚ್ಚು. ಒಮ್ಮೊಮ್ಮೆ ಬಿಗಿ ಕಾಠಿನ್ಯ ಇಲ್ಲದಿಲ್ಲ. ಹಾಸ್ಯ ಒಮ್ಮೊಮ್ಮೆ ಚುಚ್ಚುತ್ತಿದ್ದುದೂ ಉಂಟು. ವಾದ ವಿವಾದ ಸಂವಾದ ಮೂರರಲ್ಲೂ ಖುಷಿ, ಹುರುಪು.

 ವನಸುಮ ಡಿವಿಜಿ

ಒಂಟಿತನ ಡಿವಿಜಿಯ ಬಾಹ್ಯ ಚಟುವಟಿಕೆಗಳಿಗೆ ಅಡ್ಡಿಯಾಗಲಿಲ್ಲ. ತಮ್ಮಲ್ಲಿ ತಾವು ಚಿಂತನಪರರು. ರಾತ್ರಿ ಬಹು ಹೊತ್ತಿನವರೆಗೂ ಗ್ರಂಥಾಭ್ಯಾಸ, ಚಿಂತನೆ. ತೋಚಿದ್ದನ್ನು ಆಗಲೇ ಬರೆದಿಡುವರು. ರಾತ್ರಿ ಯಾವಾಗಲೋ ಎದ್ದು ಬರೆಯುವುದು. ಪುಸ್ತಕಗಳಲ್ಲಿ ಗುರುತುಹಾಕಿರುವುದು, ಟಿಪ್ಪಣೆ ಮಾಡಿರುವುದು ಹೇರಳ.

ಡಿವಿಜಿಗೆ ಬದುಕಿನಲ್ಲಿ ತುಂಬಾ ಆಸ್ಥೆ. ಆಸಕ್ತಿ. ಬದುಕಿನ ಒಳಿತೇ ಅವರ ಜೀವನಾದರ್ಶ. ‘ಕಲೆಗಳಲ್ಲಿ ಪರಮ ಕಲೆ ಜೀವನ ಕಲೆ’. ಇದರಿಂದಾಗಿಯೇ ಅವರ ರಾಜಕೀಯ ಪತ್ರಿಕಾಕಾರ್ಯ, ಸಾಹಿತ್ಯ, ಕಲೆ, ಸೌಂದರ್ಯಚಿಂತನೆ, ಸಂಘಟನೆ, ಸಾರ್ವಜನಿಕ ಕಾರ್ಯ-ಎಲ್ಲವೂ ಬದುಕಿಗೆ ತಳುಕು ಹಾಕಿಕೊಂಡಿದ್ದನ್ನು ಈಗಾಗಲೇ ನೋಡಿದ್ದೇವೆ. ಒಳ್ಳೆಯ ಸಂಗೀತ, ಒಳ್ಳೆಯ ಊಟ, ಗೆಳೆಯರ ಕೂಟ, ಸರಸ ವಿನೋದದ ಮಾತು ಎಲ್ಲ ಅವರಿಗೆ ಇಷ್ಟ. ಅವುಗಳಲ್ಲಿ ಅವರು ತಲ್ಲಿನರಾಗಿ ಪಾಲುಗೊಳ್ಳುವರು. ಸಂಪ್ರದಾಯದಂತೆ ಅವರು ಅದ್ವೈತಿಗಳು. ಆದರೆ ಅದ್ವೈತದ ಮಾಯವಾದವನ್ನಾಗಲಿ, ಜಗತ್ತು ಮಿಥ್ಯೆ ಎಂಬುದನ್ನಾಗಲಿ ಅವರು ಒಪ್ಪಲಿಲ್ಲ. ಆ ವಾದಗಳಿಗೆ ತಾತ್ತ್ವಿಕ ಸಮರ್ಥನೆ ಇದ್ದಿರಬಹುದು. ಆದರೆ ವಾಸ್ತವಿಕವಾಗಿ ಅವನ್ನು ಒಪ್ಪಲು ಸಾಧ್ಯವಿಲ್ಲ. ಸತ್-ಚಿತ್-ಆನಂದ ಸ್ವರೂಪನಾದ ದೇವರ ಸೃಷ್ಟಿಯೂ ಸತ್ಯವೇ, ಆನಂದಮಯವೇ. ಕಣ್ಣೆದುರಿನ ಈ ಸತ್ಯ, ಜ್ಞಾನ, ಆನಂದಗಳನ್ನು ದೂರೀಕರಿಸುವುದು, ಕಾಣದ ಯಾವುದೊ ಒಂದಕ್ಕಾಗಿ ಹಂಬಲಿಸುವುದು ಡಿವಿಜಿಗೆ ಒಪ್ಪದು.

ಜೀವನವನ್ನು ಒಪ್ಪಿಕೊಳ್ಳುವುದು, ಅದರ ಒಳಿತಿಗಾಗಿ ದುಡಿಯುವುದು, ಆ ದುಡಿಮೆಯನ್ನು ಕರ್ತವ್ಯಬುದ್ಧಿಯಿಂದ ಧರ್ಮಸಮ್ಮತವಾದ ರೀತಿಯಲ್ಲಿ, ಸ್ವಾರ್ಥ ಸ್ವರ್ಶವಿಲ್ಲದೆ ಮಾಡುವುದು, ಫಲಾಫಲಗಳ ಬಗ್ಗೆ ನಿರ್ಲಿಪ್ತತೆ, ಬದುಕನ್ನು ಹಸನುಗೊಳಿಸುವ ಸಮತೂಕ ಸಮಚಿತ್ತತೆ, ಸಮನ್ವಯದ ರೀತಿ, ಎದುರಾಳಿಯ ವಿಚಾರಕ್ಕೂ ಮನ್ನಣೆ ಕೊಡಬೇಕಾದ ಔದಾರ್ಯ, ಸಂಪ್ರದಾಯದ ರೀತಿನೀತಿಗಳಿಗೆ ಗೌರವ, ಬದಲಾವಣೆಗೆ ತೆರೆದ ಮನಸ್ಸು, ಒತ್ತಡದ ಕ್ರಾಂತಿಗಿಂತ ಸಹಜವಾಗಿ ಮೂಡುವ ಪರಿವರ್ತನೆಯತ್ತ ಆಸಕ್ತಿ, ವ್ಯಕ್ತಿ ಜೀವನ-ಲೋಕಜೀವನಗಳಲ್ಲಿ ಸಮನ್ವಯ, ಈಶನಿಷ್ಠೆ, ದೇಶನಿಷ್ಠೆ – ಇದು ಅವರ ಜೀವನ ದರ್ಶನ.

ಈ ಪ್ರವೃತ್ತಿ ಮನೋಭಾವದ ಜೊತೆಗೆ ಡಿವಿಜಿಯವರ ಅಂತರಂಗದಲ್ಲಿ ನಿವೃತ್ತಿ ಮಾರ್ಗದಲ್ಲಿ ಒಲವು ಇದ್ದುದು ಸ್ವಾರಸ್ಯಕರ. ಸಂನ್ಯಾಸಿ ಆಗಬೇಕೆಂಬ ಯೋಚನೆಯೂ ಆಗಾಗ ಬಂದಿತ್ತು. ಹೊರಗಿನ ಎಲ್ಲ ಆಸೆ ಮೋಹಗಳನ್ನು, ಸಂಕೋಲೆಗಳನ್ನು ಕಳೆದುಕೊಂಡು, ಹಕ್ಕಿಯಂತೆ ಹಾಯಾಗಿ ಇರಬೇಕೆಂಬ ಅವರ ಹಂಬಲಕ್ಕೆ ‘ಹಕ್ಕಿಯ ಪಯಣ’ ಎಂಬ ಪ್ರಬಂಧ ಸಾಕ್ಷಿ. ಅವರ ಜೀವನ ದರ್ಶನದ ಇನ್ನೊಂದು ಮುಖ. ಇದನ್ನು ಡಿವಿಜಿ ಹಾಸ್ಯವಾಗಿ ‘ತೊಂಡುತನ’ ಎನ್ನುತ್ತಾರೆ. ಯಾವ ಹೊಣೆಗೂ ತಲೆಕೊಡದೆ ಮನ ಬಂದಂತೆ ತಿರುಗುವುದು. ತಮ್ಮಲ್ಲಿ ಇದ್ದ ‘ಅಂಜುಬುರುಕುತನ’ ಈ ತೊಂಡಿಗೆ ಕಡಿವಾಣ ಹಾಕಿತು ಎನ್ನುತ್ತಾರೆ. ಸಂನ್ಯಾಸದ ಅಂಜಿಕೆಯೆ ಅವರನ್ನು ಲೋಕಜೀವನಕ್ಕೆ ಎಳೆತಂದು ಅದರಲ್ಲಿ ತೊಡಗಿಸಿತು. ಆದರೂ ‘ತೊಂಡುತನ’ ಹಂಬಲ ಹೋಗಿರಲಿಲ್ಲ.

ಲೌಕಿಕ ಆಸೆ ಆಮಿಷ ಬೇಡ, ಯಾವ ಹೊಣೆಯೂ ಬೇಡ. ಅಡ್ಡಿ, ಆಚರಣೆ ಬೇಡ. ಹೊತ್ತಿಗೆ ಏನು ಸಿಗುವುದೊ ತಿನ್ನುವುದು, ಜಾಗ ಸಿಕ್ಕರೆ ಅಲ್ಲಿ ಕಾಲು ಚಾಚುವುದು, ಜೋಗಿಯ ಹಾಗೆ ಹಾಯಾಗಿ ತಿರುಗುವುದು, ಮರ ಗಿಡ ನದಿ ಆಕಾಶ ನೋಡಿಕೊಂಡು ಕಾಲ ಹಾಕುವುದು-ಇಂಥದೊಂದು ಹಂಬಲ.

ತನುಗಳುವರಾರುಮಿಲ್ಲದೆ
ಮನುಜಂ ತಾನಾರ್ಗುಮಳುವುದಿರದಿರೆ ಧನ್ಯಂ |
ಅನುಸರಿಸದೆ ತಾನಾರನು-
ಮನುಸರಿಪರ್ ತನಗುಮಿಲ್ಲದಿರೆ ಕಡುಧನ್ಯಂ ||

ಎಂಬ ಹಂಬಲ. ಈ ಹಂಬಲ ಕೈಗೂಡಲಿಲ್ಲ ಡಿವಿಜಿ ನಿವೃತ್ತರಾಗಲಿಲ್ಲ. ಕೊನೆಯವರೆಗೂ ಜೀವನದಲ್ಲಿ ತೊಡಗಿಯೆ ಇದ್ದರು. ಆಂತರ್ಯದಲ್ಲಿ ಮಾತ್ರ ನಿರಾಲಂಬಿತ ನಿರಾಸಕ್ತಿ ಇತ್ತೇನೊ.

‘ಜಗದ ಪೊಗಳಿಕೆಗೆ ಬಾಯ್‍ಬಿಡದೆ ಸುಫಲ ಸುಮಭರಿತ ಪಾದಪದಂತೆ ನೈಜಮಾದೊಳ್ಪಿನಿಂ ಬಾಳ್ವವೊಲು’ ಇದು ಡಿವಿಜಿಯವರ ಕವಿತೆ ಮಾತ್ರವಲ್ಲ, ಜೀವನದ ರೀತಿಯೇ. ಹೆಸರಿನ ಹಂಬಲ ಅವರಿಗೆ ದೂರ. ೧೯೪೪ರಲ್ಲಿ ಹಿರಿಯ ವಿದ್ವಾಂಸ ದ.ಕೃ. ಭರದ್ವಾಜರು ‘ಕನ್ನಡನುಡಿ’ ಪತ್ರಿಕೆಯಲ್ಲಿ ಒಂದು ಲೇಖನ ಬರೆದರು. ಡಿವಿಜಿಯವರ ನಾಡು-ನುಡಿ ಸೇವೆಯ ಬಗೆ ಆದರದ ಪ್ರಶಂಸೆಯ ಲೇಖನ. ಅದಕ್ಕೆ ಡಿವಿಜಿ ವ್ಯಕ್ತಪಡಿಸಿದ ಪ್ರತಿಕ್ರಿಯೆ ವಿಶಿಷ್ಟವಾದದ್ದು. ಮರುಸಂಚಿಕೆಗೇ ಅವರು ಪತ್ರವೊಂದನ್ನು ಬರೆದು, “ಬದುಕಿರುವ ವ್ಯಕ್ತಿಗಳ ಅತಿಪ್ರಶಂಸೆ ಅವರ ಸಮೀಪ ಮಿತ್ರರಿಂದ ಆಗುವುದು ಅನಾವಶ್ಯಕ ಮಾತ್ರವೇ ಅಲ್ಲ; ಹಾನಿಕರ” ಎಂದರು. “ವ್ಯಕ್ತಿಪ್ರಶಂಸೆಯಿಂದ ಕೂಡಿದ ಮಟ್ಟಿಗೂ ದೂರವಿರಬೇಕೆಂಬುದೇ ನನ್ನ ತಾತ್ಪರ್ಯ” ಎಂದರು. ಇಂಥ ಪ್ರಶಂಸೆಗಳಿಂದ ಕನ್ನಡದ ಪುನರುಜ್ಜೀವನಕ್ಕೆ ಸಹಾಯವೇನು ಎಂದು ಆಕ್ಷೇಪಿಸಿದರು. ಇದು ಡಿವಿಜಿಯವರ ದಾರಿ. “ಹೊರಗೆ ಲೋಕಾಸಕ್ತಿ, ಒಳಗದರ ವಿರಕ್ತಿ”.

ಇಳಿಯುವೆನು ಮುಳುಗುವೆನು ವಿಶ್ವಾತ್ಮ ಸಾಗರದಿ |
ಮುಳುಮುಳುಗಿ ಕಳೆಯುವೆನು ಬೇರೆತನದರಿವ ||
ಇಳೆಬಾನ್ಗಳಾಟದಲಿ ಕುಣಿಯುವೆನು ಮೈಮರೆತು |
ಗಳಿಸೀಮನಸ್ಥಿತಿಯ-ಮಂಕುತಿಮ್ಮ.

ಡಿವಿಜಿಯ ಜೀವಿತ ಈ ಮನಸ್ಥಿತಿಯನ್ನು ಗಳಿಸುವ ಪ್ರಯತ್ನ.

ಶ್ರುತಿಮತಿಗಳೆರಡುಮಂ ಸಮನ್ವಯಗೊಳಿಸಿ |
ರತಿವಿರತಿಗಳುಭಯಸಮನ್ವಯವರಿತು ||
ಸ್ವತೆಪರತೆಗಳನೆರಡುಮಂ ಸಮನ್ವಯಗೊಳಿಸಿ|
ಮಿತಗತಿಯೆ ಹಿತಯೋಗ ಮರುಳು ಮುನಿಯ ||

ಡಿವಿಜಿಯವರ ಬದುಕು “ಮಿತಗತಿಯ ಹಿತಯೋಗ”.
***

`ಡಾ||ಡಿ.ವಿ.ಗುಂಡಪ್ಪ – ಜೀವನ ಮತ್ತು ಸಾಧನೆ’ – ಲೇಖಕ ; ನೀಲತ್ತಹಳ್ಳಿ ಕಸ್ತೂರಿ, ಪ್ರಕಾಶನ ; ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ (1988,1995)

ಹುಚ್ಚುಮನಸ್ಸಿನ ಹತ್ತುಮುಖಗಳು

ಈಚಿನ ದಿನಗಳಲ್ಲಿ ಜ್ಞಾನಪೀಠ ಪಡೆದ ಸಾಹಿತಿಗಳನ್ನು ಲೇವಡಿ ಮಾಡಲು ಬಳಸುತ್ತಿರುವ ’ಜ್ಞಾನಪಿತ್ಥ” ಪದ ಮೊದಲ ಬಾರಿ ಬಳಕೆಗೆ ತಂದವರಾರು?

ಬೇರಾರೂ ಅಲ್ಲ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರೇ ಆಗಿರುವ ಡಾ.ಶಿವರಾಮ ಕಾರಂತರು! “ಹುಚ್ಚುಮನಸ್ಸಿನ ಹತ್ತುಮುಖಗಳು” ಎಂಬ ಕಾರಂತರ ಆತ್ಮಕಥೆಯಲ್ಲಿ ಈ ಬಗ್ಗೆ ಪ್ರಸ್ತಾಪವಿದೆ.

ಜ್ಞಾನಪೀಠ ಪ್ರಶಸ್ತಿ ಪಡೆದ ನಂತರ ಅಭಿನಂದನಾ ಸಮಾರಂಭಗಳ ಬಗ್ಗೆ ಬರೆಯುತ್ತಾ ಕಾರಂತರು ಬರೆಯುತ್ತಾರೆ – “ಸುಮಾರು ಮೂರು ತಿಂಗಳು ನಾನು ಬೇರೆ ಯಾವುದನ್ನೂ ಮಾಡದಾದೆ; ಇದೊಂದೇ ಕೆಲಸ ನನಗೆ. ನನ್ನ ಸಾಹಿತ್ಯ ಓದಿದದವರು, ಓದದೆ ಬರಿದೆ ಅಭಿಮಾನ ತಾಳಿದ ಅಸಂಖ್ಯ ಜನರು. ನನ್ನನ್ನು ತಂತಮ್ಮ ಊರುಗಳಿಗೆ ಕರೆಯಿಸಿಕೊಂಡರು; ಪ್ರಶಂಸೆಯ ಸುರಿಮಳೆಯನ್ನೇ ಕರೆದರು. ಅಸಂಖ್ಯ ಮಾಲೆಗಳನ್ನು ಹೊರಿಸಿದರು; ಶಾಲುಗಳನ್ನು ಹೊದೆಸಿದರು; ಅಭಿನಂದನಾ ಪತ್ರಗಳಲ್ಲಿ ಸಂಸ್ಕೃತ ಶಬ್ದಭಂಡಾರವನ್ನೆಲ್ಲ ಸೂರೆ ಮಾಡಿದರು. ಇದು ಮೀತಿ ಮೀರಿದ ಪ್ರಶಂಸೆಯಲ್ಲವೇ – ಎಂಬ ಭಾವನೆ ನನ್ನನ್ನು ಆಗಾಗ ಕಾಡುತ್ತಿತ್ತು. ಹೊಗಳಿಕೆಗೂ ಒಂದು ಮಿತಿ ಬೇಕು – ಎನಿಸುತ್ತಿದೆ. ನಾನು ಪರಿಹಾಸ್ಯಕ್ಕಾಗಿ ಎಷ್ಟೋ ಬಾರಿ ನನ್ನನ್ನು ಸನ್ಮಾನಿಸಿದವರ ಮುಂದೆ ’ಜ್ಞಾನಪೀಠ’ ಪ್ರಶಸ್ತಿ ’ಜ್ಞಾನಪಿತ್ಥ’ವಾಗಬಾರದು ಎಂದದ್ದುಂಟು”.

ಜ್ಞಾನಪೀಠ ಪ್ರಶಸ್ತಿ ಪಡೆದ ಸಂದರ್ಭದ ಇನ್ನೊಂದು ಘಟನೆಯ ಬಗ್ಗೆ ಕಾರಂತರುಬರೆಯುತ್ತಾರೆ –

ಕನ್ನಡಕ್ಕೆ ಮೊದಲಬಾರಿ ಜ್ಞಾನಪೀಠ ತಂದುಕೊಟ್ಟ ಕುವೆಂಪು, ಎರಡನೆಯ ಬಾರಿ ’ನಾಕುತಂತಿ”ಗಾಗಿ ಜ್ಞಾನಪೀಠ ಪಡೆದ ಬೇಂದ್ರೆಯವರು ಪ್ರಶಸ್ತಿಯನ್ನು ಬೇರೆ ಭಾಷೆಯ ಲೇಖಕರೊಡನೆ ಹಂಚಿಕೊಳ್ಳಬೇಕಾಯಿತಂತೆ. ಇದರಿಂದಾಗಿ ಪ್ರಶಸ್ತಿಯ ಜೊತೆಗೆ ಬರುವ ಒಂದು ಲಕ್ಷ ಮೊತ್ತವೂ ಇಬ್ಬರಲ್ಲಿ ಹಂಚಿಹೋಗಿತ್ತು. ಕಾರಂತರು ಪಡೆದಾಗ ಬೇರಾವ ಭಾಷೆಗೂ ಪ್ರಶಸ್ತಿ ಹೋಗದೆ ಪೂರ್ತಿ ಹಣ ಕಾರಂತರಿಗೆ ದೊರಕಿದ್ದು ಜನರಲ್ಲಿ ತಪ್ಪುಗ್ರಹಿಕೆಗೆ ಕಾರಣವಾಯಿತು. ಕನ್ನಡ ಪತ್ರಿಕೆಗಳಲ್ಲಿ ’ಹಿಂದಿನವರಿಗೆ ಕೊಟ್ಟದ್ದು ಅರ್ಧ ಪ್ರಶಸ್ತಿ, ಕಾರಂತರಿಗೆ ಕೊಟ್ಟದ್ದು ಇಡೀ” ಎಂದು ಪ್ರಕಟವಾಗಿತ್ತಂತೆ!

***