ಪುಟ್ಟಿಯ ಪುಟ್ಟ ಕಂಗಳಲ್ಲಿ…. 2

ಇದ್ದಕ್ಕಿದ್ದಂತೆ ಪುಟ್ಟಿಗೆ ಧಡಕ್ಕನೆ ಎಚ್ಚರವಾಯಿತು. ನಡುಮನೆಯಲ್ಲಿ ಉರಿಯುತ್ತಿದ್ದ ದೀಪದ ಬೆಳಕು ಪುಟ್ಟಿಯ ಕೋಣೆಗೂ ಬಿದ್ದಿತ್ತು. ಹೊರಗೆ ಏನೋ ಗದ್ದಲ. ಪರಿಚಿತ, ಅಪರಿಚಿತ ಧ್ವನಿಗಳು. ಬಂದಿರುವವರು ಯಾರು? ಪಕ್ಕದ ಮನೆಯ ಮೂರ್ತಿ ಮೇಷ್ಟ್ರು? ಅಂಗಡಿಯ ಆಳು ಕೆಂಚಪ್ಪ? ಬ್ಯಾಂಕಿನ ಅಂಕಲ್? ಪುಟ್ಟಿ ತಮ್ಮ ಮನೆಗೆ ಬಂದು ಹೋಗಿ ಮಾಡುವ ಹಲವರ ಧ್ವನಿಗಳನ್ನು ನೆನಪು ಮಾಡಿಕೊಂಡಳು. ಅವರಾರೂ ಅಲ್ಲವೆನಿಸಿತು. ಅವರೆಂದೂ ಈ ಹೊತ್ತಿಗೆ ಬಂದ ನೆನಪಾಗಲಿಲ್ಲ ಪುಟ್ಟಿಗೆ. ಮತ್ತೆ ಯಾರಿರಬಹುದು? ಅಮ್ಮ-ಅಪ್ಪ ಎಲ್ಲಿ? ಯಾಕೆ ಇಷ್ಟು ಹೊತ್ತಾದರೂ ಮಲಗಿಲ್ಲ? ಇಡೀ ಕೋಣೆಯಲ್ಲಿ ತಾನೊಬ್ಬಳೇ ಇರುವುದು ಅರಿವಾಗಿ ಪುಟ್ಟಿಗೆ ತುಂಬಾ ಭಯವಾಯಿತು. ಯಾರೋ ಗದರುವ, ಯಾರೋ ಅಳುವ ಸದ್ದುಗಳು. ಇದುವರೆಗೂ ಮೆಲುದನಿಯಲ್ಲಿದ್ದ ಮಾತುಕತೆ ಈಗ ಜೋರಾಗಿಯೇ ಕೇಳಿಸುತ್ತಿತ್ತು.

“ನಿನ್ನ ಯೋಗ್ಯತೆಗೆ ತಕ್ಕ ಹೆಣ್ಣು ಈ ಊರಲ್ಲೆಲ್ಲೂ ಸಿಗಲಿಲ್ಲವೇನೋ? ನಮ್ಮನೆ ಹೆಣ್ಣೇ ಬೇಕಾಗಿತ್ತಾ ನಿನಗೆ? ರಜನಿ ನಿನ್ನನ್ನು ಮದುವೆಯಾಗ್ತಾಳೆ ಅಂತ ಏನಾದರೂ ಅಂದುಕೊಂಡಿದ್ರೆ ಆ ಆಸೆ ಬಿಟ್ಟುಬಿಡು.” ಪುಟ್ಟಿಗೆ ಈಗ ಧ್ವನಿಯ ಗುರುತು ಹತ್ತಿತು. ಅದು ರಾಮು ಚಿಕ್ಕಪ್ಪನ ಧ್ವನಿಯೇ. ರಾಮು ಚಿಕ್ಕಪ್ಪನಿಗೆ ಕೋಪ ಹೆಚ್ಚು. ಮನೆಯಲ್ಲಿ ಯಾರೂ ಅವರನ್ನು ಕೆಣಕಲು ಹೋಗುತ್ತಿರಲಿಲ್ಲ. ಚಿಕ್ಕಪ್ಪನಿಗೆ ಈ ಹೊತ್ತಿನಲ್ಲಿ ಇಷ್ಟೊಂದು ಕೋಪ ಬರಲು ಕಾರಣವೇನೋ?

“ಸಾರ್, ರಜನಿಯನ್ನು ನಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸ್ತೀನಿ. ನಿಮ್ಮ ಆಸ್ತಿ ಆಸೆ ಖಂಡಿತ ನನಗಿಲ್ಲ. ಯಾವ ದೇವರ ಮೇಲಾದರೂ ಪ್ರಮಾಣ ಮಾಡಿ ಹೇಳ್ತೀನಿ. ರಜನಿಯನ್ನು ನನ್ನಿಂದ ದೂರ ಮಾಡಬೇಡಿ ಸಾರ್” ಇದು ಯಾರದೋ ಅಂಗಲಾಚುವಂತಿರುವ ಸ್ವರ. ಈ ಧ್ವನಿಯ ಪರಿಚಯವೂ ಪುಟ್ಟಿಗಾಗಲಿಲ್ಲ. ಪುಟ್ಟಿ ಯೋಚಿಸತೊಡಗಿದಳು. ಎಲ್ಲೂ ಆ ದನಿಯನ್ನು ಕೇಳಿದ್ದು ನೆನಪಾಗಲಿಲ್ಲ.

“ನಮಗೆ ನಿಮ್ಮ ಆಸ್ತಿ-ಪಾಸ್ತಿ ಒಂದೂ ಬೇಕಾಗಿಲ್ಲ. ನನ್ನನ್ನು ಪ್ರೀತಿಸಿದವನ ಜೊತೆಗೆ ಬಾಳಲು ಬಿಟ್ಟುಬಿಡಿ. ನಮ್ಮನ್ನು ಬೇರೆ ಮಾಡಬೇಡಿ. ದಮ್ಮಯ್ಯಾ…” ಅಳುವಿನ ಜೊತೆಗೆ ತೇಲಿ ಬಂದ ಮಾತುಗಳು. ಪುಟ್ಟಿಗೆ ಈಗ ಮಾತ್ರ ಸ್ಪಷ್ಟವಾಗಿ ಗೊತ್ತಾಯಿತು. ಅದು ರಜನಿ ಅಕ್ಕನ ನಯವಾದ ಧ್ವನಿ!

“ಬಾಯ್ಮುಚ್ಚೇ ಕತ್ತೆ! ಏನೋ ಓದಿ ಉದ್ಧಾರ ಮಾಡ್ತಾಳೆ ಅಂತ ನಿನ್ನ ಕಾಲೇಜಿಗೆ ಕಳಿಸಿದ್ದಕ್ಕೆ ನಮಗೆ ಒಳ್ಳೇ ಹೆಸರೇ ತಂದೆ ನೀನು. ಯಾವನನ್ನೋ ಕಟ್ಟಿಕೊಂಡು ಜಾತಿ ಕೆಡಲು ಹೊರಟಿದ್ದೀಯಲ್ಲಾ. ನಿನ್ನ ಹೆತ್ತಿದ್ದಕ್ಕೂ ಸಾರ್ಥಕವಾಯಿತು ನೋಡು” ದೊಡ್ಡಮ್ಮನ ಧ್ವನಿ ಬೈಯುವಂತಿತ್ತೋ, ಅಳುವಂತಿತ್ತೋ ಪುಟ್ಟಿಗೆ ತಿಳಿಯಲಿಲ್ಲ.

ಪುಟ್ಟಿಗೆ ರಜನಿ ಅಕ್ಕನೆಂದರೆ ಅಚ್ಚುಮೆಚ್ಚು. ರಜನಿ ಅಕ್ಕ ನೋಡಲು ತುಂಬಾ ಚಂದ. ಪುಟ್ಟಿಯನ್ನು ಕಂಡರೆ ರಜನಿಗೂ ಇಷ್ಟ. ಮನೆಯ ಇತರ ಹಿರಿಯರಂತೆ “ನಿಂಗೇನು ಗೊತ್ತಾಗಲ್ಲ ಸುಮ್ಮನಿರು. ನೀನಿನ್ನೂ ಚಿಕ್ಕವಳು” ಎಂದು ರಜನಿ ಪುಟ್ಟಿಯನ್ನು ಯಾವುದೇ ವಿಷಯಕ್ಕೂ ಗದರುತ್ತಿರಲಿಲ್ಲ. ಪುಟ್ಟಿ ಹೋಮ್‍ವರ್ಕ್ ಮಾಡಲೂ ರಜನಿ ಅಕ್ಕನೇ ಸಹಾಯ ಮಾಡುತ್ತಿದ್ದಳು. ರಜನಿ ಅಕ್ಕ ಕಾಲೇಜು ಓದುತ್ತಿದ್ದವಳು ಕೆಲವು ದಿನಗಳಿಂದ ಓದು ನಿಲ್ಲಿಸಿ ಮನೆಯಲ್ಲಿಯೇ ಇದ್ದಳು. ಪುಟ್ಟಿಗೆ ಕಾರಣ ಗೊತ್ತಿರಲಿಲ್ಲ.

ಅವಳ ನಡೆ-ನುಡಿ ಹೂವಿನಂತೆ ಸೊಗಸು. ರಜನಿ ತನ್ನ ಸೌಂದರ್ಯವನ್ನು ವಿವಿಧ ಬಗೆಯ ಅಲಂಕಾರದಿಂದ ಇಮ್ಮಡಿಗೊಳಿಸುತ್ತಿದ್ದುದನ್ನು ಪುಟ್ಟಿ ಬೆರಗಾಗಿ ನೋಡುತ್ತಿದ್ದಳು. ರಜನಿಯ ಚೆಲುವಾದ ಮೈಗೆ ಒಪ್ಪದ ಉಡುಪೇ ಇಲ್ಲ ಎಂದು ದೊಡ್ಡಮ್ಮ ಆಗಾಗ ಹೆಮ್ಮೆಯಿಂದ ಹೇಳುತ್ತಿದ್ದುದು ಪುಟ್ಟಿಗೂ ಹೌದು ಅನ್ನಿಸಿತ್ತು. ರಜನಿ ಅಕ್ಕ ಓದಿನಲ್ಲೂ ಜಾಣೆ. ತಾನು ಬೆಳೆದ ಮೇಲೆ ರಜನಿ ಅಕ್ಕನಂತೆ ಆಗುತ್ತೇನೆ ಎಂದು ಕನಸು ಕಾಣುತ್ತಿದ್ದಳು ಪುಟ್ಟಿ. ತಾನು ಅಷ್ಟೆಲ್ಲಾ ಮೆಚ್ಚಿಕೊಳ್ಳುವ ರಜನಿ ಅಕ್ಕ ಇಂದು ಅಳುತ್ತಿರುವುದನ್ನು ಕೇಳಿ ಪುಟ್ಟಿಗೆ ಪೆಚ್ಚೆನಿಸಿತು. ತನ್ನ ಪ್ರೀತಿಯ ಅಕ್ಕನನ್ನು ಅಳುವಂತೆ ಮಾಡುತ್ತಿರುವವರು ಯಾರಾದರೂ ಇರಲಿ, ಅವರನ್ನು ಸುಮ್ಮನೆ ಬಿಡಬಾರದೆನ್ನಿಸಿ ಪುಟ್ಟಿ ಅವುಡುಗಚ್ಚಿದಳು.

ಪುಟ್ಟಿಗೆ ಇನ್ನು ಮಲಗುವುದು ಸಾಧ್ಯವಾಗಲಿಲ್ಲ. ಹಾಸಿಗೆಯಲ್ಲಿ ಎದ್ದು ಕೂತಳು. ನಡುಮನೆಯಿಂದ ಮಾತಿನ ಜೊತೆಗೆ ಮಂದ ಬೆಳಕು ಕೋಣೆಯೊಳಗೆ ತೂರಿಬರುತ್ತಿತ್ತು. ನಸುಗತ್ತಲೆಯಲ್ಲೇ ಮೆಲ್ಲಗೆ ಅತ್ತ ನಡೆದು ಕೋಣೆಯ ಬಾಗಿಲನ್ನು ಸ್ವಲ್ಪ ಸರಿಸಿ ಹೊರಗೆ ದೃಷ್ಟಿ ಹರಿಸಿದಳು. ಅವರವರ ಸಮಸ್ಯೆಯಲ್ಲೇ ಮುಳುಗಿದ್ದ ಹಿರಿಯರಿಗೆ, ಪುಟ್ಟಿ ಬಾಗಿಲ ಬದಿಗೆ ಬಂದು ನಿಂತಿದ್ದು ಕಾಣುವಂತಿರಲಿಲ್ಲ.

ದೊಡ್ಡದಾಗಿದ್ದ ನಡುಮನೆಯಲ್ಲಿ ಮನೆಯ ಜನರೆಲ್ಲಾ ಸೇರಿದಂತಿತ್ತು. ರಾಮು ಚಿಕ್ಕಪ್ಪನ ಓರಗೆಯೆನಿಸಬಹುದಾದ ಯುವಕನೊಬ್ಬನನ್ನು ಕಂಡು ಪುಟ್ಟಿಗೆ ಆಶ್ಚರ್ಯವಾಯಿತು. ಆತನನ್ನು ಈ ಮೊದಲು ಎಲ್ಲೋ ಕಂಡಂತೆ ಅನಿಸಿತು ಪುಟ್ಟಿಗೆ. ಎಲ್ಲಿ ಎಂದು ನೆನಪಿಸಿಕೊಳ್ಳುವಂತೆ ಕಣ್ಮುಚ್ಚಿ ಯೋಚಿಸಿದಳು. ಫಕ್ಕನೆ ನೆನಪಾಯಿತು. ಆದಿನ ರಜನಿ ಅಕ್ಕನನ್ನು ಅರಸಿ ಓಡಿ ಬಂದ ಪುಟ್ಟಿಗೆ, ಅಕ್ಕ ತೆರೆದ ಪುಸ್ತಕವೊಂದರ ಎದುರಿಗೆ ಮೈಮರೆತು ಕೂತಿದ್ದು ಕಾಣಿಸಿತ್ತು. ಸದ್ದಾಗದಂತೆ ಅಕ್ಕನ ಹಿಂದೆ ಬಂದು ನಿಂತವಳಿಗೆ ಕಂಡಿದ್ದು ಈತನದೇ ಫೋಟೊ. ಪುಟ್ಟಿಯನ್ನು ಕಂಡೊಡನೆ ಪುಸ್ತಕದಲ್ಲಿ ಫೋಟೊ ಅಡಗಿಸಿದ್ದಳು ರಜನಿ. ಆದರೆ ಪುಟ್ಟಿಯ ಚುರುಕು ಕಣ್ಣುಗಳಲ್ಲಿ ಆ ಚಿತ್ರ ಸೆರೆಯಾಗಿತ್ತು. ಅಕ್ಕನನ್ನು ಕಾಡಿದ್ದಕ್ಕೆ, ಅವನ ಹೆಸರು ಹೇಮಂತನೆಂದು ಬಾಯಿಬಿಟ್ಟಿದ್ದಳು; ಮತ್ತೇನೂ ಹೇಳಿರಲಿಲ್ಲ ರಜನಿ. ಹೇಳಿದ್ದರೂ ಅರ್ಥವಾಗುವ ವಯಸ್ಸಲ್ಲ ಪುಟ್ಟಿಯದು.

ಅಂದು ಕಂಡ ಅದೇ ಮುಖ ಇವನದು. ರಾಮು ಚಿಕ್ಕಪ್ಪನಿಗಿಂತ ನೋಡಲು ಚಂದವಿದ್ದಾನೆ. ಗುಂಗುರು ಕೂದಲಿನ ಆತನ ಮುಖ ಪುಟ್ಟಿಗೆ, ಯಾವುದೋ ಸಿನಿಮಾ ಹೀರೋನಂತೆ ಕಂಡಿತು. ಹೀರೊ ಹೆಸರು ನೆನಪಾಗಲಿಲ್ಲ. ರಜನಿ ಅಕ್ಕನನ್ನೇ ಕೇಳಬೇಕು ಎಂದುಕೊಂಡಳು. ದೊಡ್ಡಪ್ಪನ ಎದುರಿಗಿದ್ದ ಇನ್ನೊಂದು ಸೋಫಾದಲ್ಲಿ ದೊಡ್ಡಪ್ಪನಷ್ಟೇ ವಯಸ್ಸಾದ ಹಿರಿಯರೊಬ್ಬರು ಕುಳಿತಿದ್ದರು. ಅವರ ಮುಖದಲ್ಲಿ ಬೇಸರ ಎದ್ದು ಕಾಣುತ್ತಿತ್ತು. ಅಮ್ಮ ರಾತ್ರಿ ಊಟ ಮಾಡಿಸುತ್ತಿದ್ದಾಗ ಯಾರೋ ಬರುತ್ತಾರೆಂದು ಹೇಳಿದ್ದು ಇವರನ್ನೇ ಇರಬೇಕು ಅಂದುಕೊಂಡಳು ಪುಟ್ಟಿ.

ದೊಡ್ಡಪ್ಪನೂ ಇನ್ನೊಂದು ಸೋಫಾದಲ್ಲಿ ತಲೆ ಮೇಲೆ ಕೈ ಹೊತ್ತು ಕೂತಿದ್ದರು. ರಾಮು ಮತ್ತು ಸೋಮು ಚಿಕ್ಕಪ್ಪ ಇಬ್ಬರೂ ಕೈ ಕಟ್ಟಿಕೊಂಡು ಗೋಡೆಗೆ ಒರಗಿ ನಿಂತಿದ್ದರು. ಅವರ ಮುಖದಲ್ಲಿ ರೋಷ ಹೊಗೆಯಾಡುತ್ತಿರುವಂತೆ ಕಾಣುತ್ತಿತ್ತು. ದೊಡ್ಡಮ್ಮನ ಕಣ್ಣು ಅತ್ತು ಅತ್ತು ಊದಿದಂತಿತ್ತು. ಅಮ್ಮ ದೊಡ್ಡಮ್ಮನನ್ನು ಸಂತೈಸುವಂತೆ ಅವರ ಕೈಹಿಡಿದುಕೊಂಡು ಕುಳಿತಿದ್ದಳು. ಅಪ್ಪ ಅತ್ತಿಂದಿತ್ತ ಶಥಪಥ ಹಾಕುತ್ತಿದ್ದರು. ಚಿಕ್ಕಮ್ಮಂದಿರು ಎಲ್ಲವನ್ನೂ ದಿಟ್ಟಿಸುತ್ತಾ ಮೂಕಪ್ರೇಕ್ಷಕರಾಗಿದ್ದರು. ರಜನಿ ಅಕ್ಕ ಎಲ್ಲೆಂದು ಅರಸಿದಳು ಪುಟ್ಟಿ. ಸ್ವಲ್ಪ ತಲೆ ಹೊರಗೆ ಹಾಕಿ ನೋಡಿದಾಗ ಮೂಲೆಯಲ್ಲಿ ಮಂಡಿಯ ನಡುವೆ ತಲೆ ಇಟ್ಟು ಅಳುತ್ತಾ ಕೂತಿದ್ದ ರಜನಿ ಕಾಣಿಸಿದಳು. ಒಂದು ನಿದ್ರೆ ಮುಗಿಸಿ ಎದ್ದಿದ್ದ ಪುಟ್ಟಿಗೆ ಘಂಟೆ ಎಷ್ಟಾಗಿದೆಯೋ ತಿಳಿಯಲಿಲ್ಲ. ಯಾಕೆ ಎಲ್ಲರೂ ನಿದ್ದೆ ಮಾಡದೆ ಎದ್ದು ಕುಳಿತಿದ್ದಾರೆ? ಪುಟ್ಟಿಯ ಮನಸ್ಸಿನಲ್ಲಿ ಪ್ರಶ್ನೆ ಎದ್ದಿತು.

ಪುಟ್ಟಿಯ ಪುಟ್ಟ ಕಂಗಳಲ್ಲಿ…. 3

ಹೇಮಂತನ ತಂದೆಯಂತಿದ್ದ ಹಿರಿಯರು ಮಾತುಕತೆಗೆ ವಿರಾಮ ಹಾಕುವವರಂತೆ ನುಡಿದರು, “ನೋಡಿ ಸ್ವಾಮಿ, ನಾವು ನಿಮಗಿಂತ ಬಡವರಿರಬಹುದು. ಹಾಗೆಂದು ನಾವೇನು ಗತಿಗೆಟ್ಟವರಲ್ಲ. ಏನೋ ಹುಡುಗ-ಹುಡುಗಿ ಇಷ್ಟಪಟ್ಟಿದ್ದಾರೆ ಅನ್ನೋ ಕಾರಣಕ್ಕೆ ನಾವು ಮಾತಾಡೋದಿಕ್ಕೆ ಬಂದಿದೀವಿ. ನಿಮ್ಮನೆ ಹೆಣ್ಣನ್ನು ನಮ್ಮನೆ ಬೆಳಗಲು ಕಳಿಸಿಕೊಡಿ ಎಂದು ಕೇಳೋದಿಕ್ಕೆ ಬಂದಿದೀವಿ. ನೀವೂ ಅಷ್ಟೆ, ಎಳೆಯರ ಪ್ರೀತಿಗೆ ಬೆಲೆಕೊಟ್ಟು ಮದುವೆಗೆ ಒಪ್ಪಿಕೊಳ್ಳಿ. ನಿಮ್ಮ ಮಗು ನಮ್ಮನೆಯಲ್ಲಿ ಸುಖವಾಗಿರುತ್ತದೆ; ನನ್ನನ್ನು ನಂಬಿ” ನಯ-ವಿನಯ ತುಂಬಿದ್ದ ಅವರ ದನಿಯಲ್ಲಿ ದಣಿವಿತ್ತು.

ಪುಟ್ಟಿಗೆ ಈಗ ವಿಷಯ ಅಲ್ಪ ಸ್ವಲ್ಪವಾಗಿ ಅರಿವಿಗೆ ಬಂದಿತು. ರಜನಿ ಅಕ್ಕನ ಮದುವೆ ಮಾತು ನಡೆಯುತ್ತಿದೆ! ಕಳೆದ ಬೇಸಿಗೆ ರಜೆಯಲ್ಲಿ ನಡೆದ ಸೋಮು ಚಿಕ್ಕಪ್ಪನ ಮದುವೆಯ ಸವಿ ಇನ್ನೂ ಪುಟ್ಟಿಯ ಮನಸ್ಸಿನಿಂದ ಮರೆಯಾಗಿರಲಿಲ್ಲ. ಹೊಸ ಬಟ್ಟೆ, ಸಿಹಿ ತಿಂಡಿಗಳು, ಮನೆ ತುಂಬಾ ಬಂದಿಳಿಯುವ ನೆಂಟರಿಷ್ಟರು… ಎಲ್ಲಾ ನೆನಪಾಗಿ ಪುಟ್ಟಿಗೆ ಸಡಗರವೆನಿಸಿತು.

ಅಷ್ಟರಲ್ಲಿ ದೊಡ್ಡಪ್ಪ ಸಿಟ್ಟಿನಿಂದ ನುಡಿದರು. ಹಿರಿಯರ ಮಾತಿನಿಂದ ಅವರು ಕೆರಳಿದ್ದರು. “ಶಿವರಾಮಯ್ಯನೋರೆ, ನಿಮಗೆ ತಲೆ ಕೆಟ್ಟಿದೆಯೇನ್ರಿ? ನಾವೇ ನಮ್ಮ ಕೈಯಾರೆ ನಮ್ಮ ಮಗಳ ಬಾಳು ಹಾಳು ಮಾಡೋಕಾಗತ್ತಾ? ನಿಮ್ಮನೆಗೆ ಹೆಣ್ಣು ಕೊಡುವಷ್ಟು ಗತಿಗೆಟ್ಟಿಲ್ಲ ನಾವು. ನಿಮ್ಮ ಯೋಗ್ಯತೆ ತಿಳಿದು ವ್ಯವಹಾರ ಮಾಡಿ. ನಮ್ಮಿಬ್ಬರ ಜಾತಿ, ಅಂತಸ್ತು ಯಾವುದರಲ್ಲೂ ಹೊಂದಾಣಿಕೆ ಇಲ್ಲ. ಮದುವೆ ಮಾಡಿಕೊಡಬೇಕಂತೆ, ಮದುವೆ! ಹೋಗ್ರಿ… ಹೋಗ್ರಿ… ನಿಮಗೆ ಮಾನ-ಮರ್ಯಾದೆ ಇದ್ದರೆ ಎದ್ಹೋಗ್ರಿ ಇಲ್ಲಿಂದ” ಎಂದು ತಿರಸ್ಕಾರದಿಂದ ನುಡಿದು ಬಾಗಿಲತ್ತ ಕೈ ತೋರಿದರು.

ಆ ಹಿರಿಯರು ಈಗಾಗಲೇ ಸಾಕಷ್ಟು ಮಾತಾಡಿ ಆಯಾಸಗೊಂಡಂತಿದ್ದರು. ಇನ್ನು ಮಾತನಾಡಿ ಪ್ರಯೋಜನವಿಲ್ಲವೆಂಬ ಭಾವನೆ ಮುಖದಲ್ಲಿ ಅಚ್ಚೊತ್ತಿತ್ತು. ನಿರಾಸೆ ಕಣ್ಣುಗಳಲ್ಲಿ ಎದ್ದು ಕಾಣುತ್ತಿತ್ತು. ಈ ಅವಮಾನವನ್ನು ಸಹಿಸಿಕೊಂಡು ಇನ್ನೂ ಅಲ್ಲೇ ನಿಂತಿರಲು ಮನಸ್ಸಾಗಲಿಲ್ಲ. ಮಗನತ್ತ ತಿರುಗಿ ಬೇಸರದಿಂದ ನುಡಿದರು, “ಹೇಮಂತ, ಈಗ ಗೊತ್ತಾಯಿತೇನಪ್ಪಾ ನಿನಗೆ? ದೊಡ್ಡವರ ಸಹವಾಸ ನಮಗಲ್ಲ, ಅದರ ಆಸೆ ಬಿಟ್ಟುಬಿಡು ಎಂದು ಎಷ್ಟು ಬುದ್ಧಿ ಹೇಳಿದರೂ ನಿನ್ನ ತಲೆಗೆ ಹೋಗಲೇ ಇಲ್ಲ. ನನಗೆ ಮೊದಲೇ ಗೊತ್ತಿತ್ತು. ಈ ಜನ ಮದುವೆಗೆ ಒಪ್ಪೋದಿಲ್ಲ ಅಂತ. ಏನೋ ನಿನ್ನ ಮಾತಿಗೆ ಕಟ್ಟುಬಿದ್ದು ಅದನ್ನೂ ನೋಡೇಬಿಡೋಣ ಅಂತ ಬಂದಿದ್ದಾಯಿತು. ನಡಿ ಇನ್ನು. ಇಲ್ಲೇ ಇದ್ದರೆ ನಮ್ಮ ಅಳಿದುಳಿದ ಮರ್ಯಾದೆಯೂ ಬೀದಿಪಾಲಾದೀತು.” ಎಂದು ಎದ್ದು, ಹೆಗಲ ಮೇಲಿದ್ದ ಟವಲನ್ನು ಕೊಡವಿ ಮತ್ತೆ ಭುಜದ ಮೇಲೆ ಹಾಕಿಕೊಂಡರು.

ಹೇಮಂತ ಇನ್ನೂ ಸೋಲೊಪ್ಪಲು ಸಿದ್ಧನಿರಲಿಲ್ಲ. “ಅಪ್ಪಯ್ಯಾ, ನೀವು ಹೋಗಿರಿ. ರಜನಿಯನ್ನು ನಾನು, ನನ್ನನ್ನು ಅವಳು ಮೆಚ್ಚಿಕೊಂಡಿದ್ದೇವೆ. ನಾನು ಇವತ್ತು ಇವರನ್ನು ಒಪ್ಪಿಸಿಕೊಂಡೇ ಬರೋದು. ಇವತ್ತು ಒಂದು ನಿರ್ಧಾರ ಆಗಿಯೇಹೋಗಲಿ.” ಎಂದ ಧೃಡ ನಿಶ್ಚಯ ಮಾಡಿದವನಂತೆ.

ಹೇಮಂತನ ತಂದೆ ಶಿವರಾಮಯ್ಯನವರು ಮತ್ತೂ ಒಂದೆರಡು ಸಲ ಮಗನನ್ನು ತಮ್ಮ ಜೊತೆಗೇ ಬರುವಂತೆ ಕರೆದರು. ಒಪ್ಪದಿದ್ದಾಗ ಅವನನ್ನೊಮ್ಮೆ ಮರುಕದಿಂದ ದಿಟ್ಟಿಸಿ “ಎಲ್ಲಾ ಶಿವನಿಚ್ಛೆ! ಅವನು ಮಾಡಿಸಿದಂತೆ ಆಗಲಿ” ಎಂದು ಅಲ್ಲಿಂದ ಹೊರನಡೆದರು.

ಹೇಮಂತನ ತಂದೆ ಸೋತು ಹೊರನಡೆದಿದ್ದು ನೋಡಿ ರಜನಿ ಅಕ್ಕನ ಮುಖದ ಕಳೆಯೇ ಬತ್ತಿಹೋಯಿತು. ಆದರೂ ಅವಳು, ತನ್ನ ಪ್ರಯತ್ನ ಮುಂದುವರೆಸುವಂತೆ, “ಜಾತಿ ಯಾವುದಾದರೇನಮ್ಮಾ? ಈ ಕಾಲದಲ್ಲಿ ಅದೆಲ್ಲಾ ಯಾರು ನೋಡ್ತಾರೆ? ಹೇಮಂತ್ ತುಂಬಾ ಒಳ್ಳೆಯವನು. ನೀವೆಲ್ಲರೂ ಒಪ್ಪಿದರೂ ಸರಿ, ಒಪ್ಪದಿದ್ದರೂ ಸರಿ. ನಾನು ಹೇಮಂತನನ್ನು ಬಿಟ್ಟು ಬೇರೆ ಯಾರನ್ನೂ ಮದುವೆಯಾಗೋಳಲ್ಲ.” ಈ ಬಾರಿ ರಜನಿ ಅಕ್ಕನ ಸ್ವರದಲ್ಲಿದ್ದ ಅಳು ಮಾಯವಾಗಿ ಅಲ್ಲಿ ಧೃಡತೆ ತಲೆ ಎತ್ತಿತ್ತು.

ಅಕ್ಕನ ಮಾತು ದೊಡ್ಡಪ್ಪನ ಕೋಪದ ಬೆಂಕಿಗೆ ತುಪ್ಪ ಸುರಿದಂತಾಯಿತು. “ನಿನ್ನನ್ನು ತಲೆ ಮೇಲೆ ಹೊತ್ತು, ಮುದ್ದು ಮಾಡಿ ಬೆಳೆಸಿದ್ದಕ್ಕೆ ಸಾರ್ಥಕವಾಯಿತು ನೋಡು. ಒಳ್ಳೆ ಬಹುಮಾನವೇ ಸಿಕ್ಕಿತು ನಿನ್ನಿಂದ. ಮನೆ ಮರ್ಯಾದೆ ಮೂರು ಕಾಸಿಗೆ ಹರಾಜಾಯಿತು.” ದೊಡ್ಡಪ್ಪನ ದನಿಯಲ್ಲಿ ನೋವು ಇಣುಕಿತು.

ರಜನಿ ತಂದೆಯನ್ನೊಮ್ಮೆ ಉಪೇಕ್ಷೆಯಿಂದ ದಿಟ್ಟಿಸಿ, “ಎಲ್ಲಾ ತಂದೆ-ತಾಯಿಗಳು ಮಾಡಿದ್ದನ್ನೇ ನೀವೂ ಮಾಡಿದ್ದೀರಿ. ಅದನ್ನೇನು ದೊಡ್ಡ ವಿಷಯ ಅಂತ ಹೇಳಿಕೊಳ್ಳುತ್ತಿದ್ದೀರಿ?” ಅಂದಳು.

ಈ ಮಾತು ದೊಡ್ಡಪ್ಪನನ್ನು ಕೆರಳಿಸಿತು. “ಏನಂದೆ? ನನ್ನ ಮುಂದೆ ಹೀಗೆಲ್ಲಾ ಮಾತಾಡೋ ಧೈರ್ಯ ನಿನಗೆಲ್ಲಿಂದ ಬಂತು? ಎಲ್ಲಾ ಇವನ ಸಹವಾಸವಿರಬೇಕು” ಎಂದು ಹೇಮಂತನನ್ನು ಅಪರಾಧಿಯಂತೆ ನೋಡಿದರು.

ರಜನಿ ಅಲ್ಲಿಗೂ ಸುಮ್ಮನಾಗದೆ, “ನಾನು ಈಗ ಹೇಮಂತನ ಜೊತೆ ಹೋಗ್ತಾ ಇದ್ದೀನಿ ಅಷ್ಟೆ. ಅದೇನು ಮಾಡಿಕೊಳ್ಳುತ್ತೀರೋ ಮಾಡಿ” ಎಂದು ಅಲ್ಲಿಂದ ಹೊರಡಲು ಅನುವಾದಳು.

ದೊಡ್ಡಮ್ಮ ಇದನ್ನೆಲ್ಲಾ ನೋಡುತ್ತಾ, ಸುರುಬುರು ಮಾಡುತ್ತಾ, ಇಷ್ಟರವರೆಗೂ ಸುಮ್ಮನೇ ಕುಳಿತಿದ್ದವರು, “ಅಯ್ಯೋ…. ನನ್ನ ವಿಧಿಯೇ. ಮಗಳ ಬಾಯಲ್ಲಿ ಇಂತಹ ಮಾತು ಕೇಳುವ ಕರ್ಮ ನನ್ನ ಹಣೆಯಲ್ಲಿ ಬರೆದಿತ್ತು.” ಎಂದು ತಲೆ ಚಚ್ಚಿಕೊಂಡು ಅಳತೊಡಗಿದರು. ನಡುರಾತ್ರಿಯಲ್ಲಿ ದೊಡ್ಡಮ್ಮನ ಅಳು ಪುಟ್ಟಿಯಲ್ಲಿ ಭಯ ಹುಟ್ಟಿಸಿತು. ತನ್ನಿಂದ ದೂರದಲ್ಲಿ, ಕಂಬವೊಂದರ ಬದಿಗೆ ಅಸಹಾಯಕತೆಯಿಂದ ಎಲ್ಲವನ್ನೂ ದಿಟ್ಟಿಸುತ್ತಾ ನೋವುಣ್ಣುತ್ತಿದ್ದ ಅಮ್ಮನ ಬಳಿ ಓಡಿಹೋಗಲೇ ಎಂದೊಮ್ಮೆ ಯೋಚಿಸಿದಳು. ಅಮ್ಮನಿಂದ ಅನತಿದೂರದಲ್ಲೇ ಕುಳಿತಿದ್ದ ಕಠಿಣ ಮುಖಭಾವದ ಅಪ್ಪನನ್ನು ನೋಡಿ ಪುಟ್ಟಿಗೆ ಧೈರ್ಯವಾಗಲಿಲ್ಲ. ನಿಂತಲ್ಲೇ ನಿಂತು ಕಾಲು ನೋವಾದಂತಾಗಿ ಅಲ್ಲೇ ಮಂಡಿಯೂರಿ ಕುಳಿತುಕೊಂಡಳು.

ರಜನಿ ತನ್ನಮ್ಮನ ಅಳುವಿಗೆ ಕರಗಿದರೂ ಅವಳ ನಿರ್ಧಾರದಿಂದೇನೂ ಹಿಂದೆಗೆಯಲಿಲ್ಲ. “ಅಮ್ಮಾ, ನಿನಗೆ ನಾನು ನೋವುಂಟುಮಾಡುತ್ತಿದ್ದೇನೆಂದು ಗೊತ್ತು. ನನ್ನನ್ನು ಕ್ಷಮಿಸಿಬಿಡು. ಅಪ್ಪನ ದಬ್ಬಾಳಿಕೆಯಲ್ಲಿ ಸೋತು ಸುಣ್ಣವಾಗಿರುವ ನಿನ್ನ ಬಗ್ಗೆ ನನಗೆ ಕನಿಕರವಿದೆ. ಅಪ್ಪ ಹುಡುಕಿ ತಂದ ವರನನ್ನು ಮದುವೆಯಾಗಿ ನಿನ್ನಂತೆ ಜೀವಂತ ಶವವಾಗಿ ಬದುಕುವ ಆಸೆ ನನಗಿಲ್ಲ. ಬಡವನಾದರೂ ಸರಿ, ಹೇಮಂತನಂತಹ ಹೃದಯವಂತನನ್ನೇ ಕೈಹಿಡಿಯುತ್ತೇನೆ. ತುಂಬು ಹೃದಯದಿಂದ ನನ್ನನ್ನು ಹರಸಮ್ಮಾ.” ಎಂದಳು ಅಮ್ಮನತ್ತ ಆರ್ತ ನೋಟ ಬೀರಿ. ಮಗಳ ಮಾತಿಗೆ ಅಂಬುಜಮ್ಮನ ಕಣ್ಣೀರಿನ ಕಟ್ಟೆಯೊಡೆಯಿತು.

ಮಗಳ ಬಾಯಿಂದ ಸಿಡಿಲಿನಂತೆ ಬಂದೆರಗಿದ ಮಾತುಗಳನ್ನು ಕೇಳಿ ಸದಾಶಿವಯ್ಯನವರ ರಕ್ತ ಕುದಿಯಿತು. “ಏನಂದೆ? ನಿನಗೆ ಇಷ್ಟು ಧೈರ್ಯ ಬಂದಿತೇ? ಮುದ್ದಿನ ಮಗಳೆಂದು ನಿನಗೆ ನಾನು ಕೊಟ್ಟ ಸಲುಗೆ ಹೆಚ್ಚಾಯಿತು. ನಾನೂ ನೋಡ್ತೀನಿ, ಅವನನ್ನು ಅದು ಹೇಗೆ ಮದುವೆಯಾಗ್ತೀಯ ಅಂತ?” ಎಂದು ಹಲ್ಲು ಕಡಿದರು. ಮಾತಿನ ಜೊತೆಗೆ ಅವರ ಕೈ ರಜನಿಯ ಕೆನ್ನೆಗೆ ಅಪ್ಪಳಿಸಿತು. ಅನಿರೀಕ್ಷಿತವಾಗಿ ಬಿದ್ದ ಏಟಿನ ನೋವು ತಡೆಯಲಾರದೆ “ಅಯ್ಯೋ” ಎಂದು ನರಳಿದಳು, ರಜನಿ. ಅವಳ ನುಣುಪಾದ ಕೆನ್ನೆ ವೇದನೆಯಿಂದ ಕೆಂಪಾಯಿತು.

ಪುಟ್ಟಿಗೆ ರಜನಿ ಅಕ್ಕನನ್ನು ಕಂಡು ಅಳುವೇ ಬಂತು. ದೊಡ್ಡಪ್ಪನಿಗೆ ರಜನಿ ಅಕ್ಕನೆಂದರೆ ಪ್ರಾಣ. ಅವಳು ಬೇಡಿದ್ದಕ್ಕೆ ಇಲ್ಲವೆಂದವರಲ್ಲ. ಈ ದಿನ ರಜನಿ ಅಕ್ಕನ ಮೇಲೆ ಇಷ್ಟೇಕೆ ಕೋಪ? ಅಕ್ಕ ಮಾಡಿದ ತಪ್ಪಾದರೂ ಏನು? ದೊಡ್ಡಪ್ಪನ ಕಣ್ಣು ಸಿಟ್ಟಿನಿಂದ ಕೆಂಪಗಾಗಿದ್ದವು. ತನ್ನನ್ನು ಹೆಗಲ ಮೇಲೆ ಹೊತ್ತು ಸವಾರಿ ಮಾಡುತ್ತಿದ್ದ ದೊಡ್ಡಪ್ಪನ ರೌದ್ರಾವತಾರವನ್ನು ಕಂಡು ಪುಟ್ಟಿ ನಡುಗಿದಳು. ಬಾಯಿಗೆ ಕೈ ಅಡ್ಡ ಹಿಡಿದು ಉಕ್ಕಿ ಬರುತ್ತಿದ್ದ ಅಳು ನುಂಗಿದಳು.

ರಜನಿ ಏಟಿನ ನೋವು ತಡೆಹಿಡಿಯುವಂತೆ ತುಟಿ ಕಚ್ಚಿ, “ನೀವು ನನಗೆ ಎಷ್ಟಾದರೂ ಹೊಡೆಯಿರಿ. ಅದರಿಂದ ನನಗೇನೂ ಬೇಸರವಿಲ್ಲ. ಹೇಮಂತನನ್ನು ಮಾತ್ರ ನನ್ನಿಂದ ದೂರ ಮಾಡಬೇಡಿ. ನೀವು ನನ್ನನ್ನು ಸಾಯಿಸಿದರೂ ಸಂತೋಷ. ನಾನು ಅವನನ್ನು ಬಿಟ್ಟು ಬೇರೆ ಯಾರನ್ನೂ ಮದುವೆಯಾಗಲ್ಲ.” ಎಂದಳು ಕಣ್ಣೀರನ್ನು ಅಂಗೈಯಿಂದ ಒರೆಸಿಕೊಳ್ಳುತ್ತಾ.

ಈ ಬಾರಿ ರಜನಿಯ ಮಾತಿಗೆ ತಡೆ ಹಾಕುವಂತೆ ಅವಳ ಬಾಯಿಯ ಮೇಲೆ ಬಲವಾಗಿ ಹೊಡೆತ ಬಿತ್ತು. ಕೋಪದಿಂದ ಮೈಮೇಲಿನ ವಿವೇಕ ಕಳೆದುಕೊಂಡಿದ್ದ ಸದಾಶಿವಯ್ಯ ರಜನಿಯ ಮುಖ ಮೂತಿ ನೋಡದೆ ಬಾರಿಸಿದರು. ರಜನಿಯ ತುಟಿಯೊಡೆದು ರಕ್ತ ಸುರಿಯಲಾರಂಭಿಸಿತು. ಎಳೆ ಬಾಳೆ ಗಿಡದಂತೆ ಕೋಮಲವಾಗಿ ಬೆಳೆದಿದ್ದ ರಜನಿಯ ದೇಹ ಆಘಾತಕ್ಕೆ ತತ್ತರಿಸಿಹೋಯಿತು.

ಹೇಮಂತನಿಗೆ ರಜನಿಯ ಸ್ಥಿತಿ ನೋಡಿ ದಿಗಿಲಾಯಿತು. ಸದಾಶಿವಯ್ಯ ಮೈಮೇಲೆ ದೆವ್ವ ಹೊಕ್ಕವರಂತೆ ವಿಕಾರವಾಗಿ ಕಾಣುತ್ತಿದ್ದರು. ಸಿಟ್ಟಿಗೆ ಅವರ ಮೈ ನಡುಗುತ್ತಿತ್ತು. ಹೇಮಂತ್ ಕುಳಿತಲ್ಲಿಂದ ಎದ್ದು ಬಂದು, ರಜನಿಯ ಮುಂದೆ ತಡೆಗೋಡೆಯಂತೆ ನಿಂತು, “ರಜನಿ ನನ್ನ ಪ್ರಾಣ. ಅವಳನ್ನು ಹೊಡೆಯಬೇಡಿ” ಎಂದು ಕಿರುಚಿಕೊಂಡ.

ದೊಡ್ಡಪ್ಪ ಅವನನ್ನೊಮ್ಮೆ ದುರುಗುಟ್ಟಿಕೊಂಡು ನೋಡಿದರು. “ಹೋಗೋ ಅತ್ಲಾಗೆ. ನೀ ಯಾರೋ ಅವಳಿಗೆ ಕಾವಲು ಕಾಯಕ್ಕೆ? ಯಾರೋ ನೀನು? ನನಗೆ ಉಕ್ಕಿ ಬರುತ್ತಿರುವ ಸಿಟ್ಟಿನಿಂದ ಏನಾದರೂ ಅನಾಹುತ ಆಗುವ ಮುಂಚೆ ಇಲ್ಲಿಂದ ತೊಲಗಿಹೋಗೋ” ಅಬ್ಬರಿಸಿದರು ಸದಾಶಿವಯ್ಯ.

ಹೇಮಂತ್ ರಜನಿಯನ್ನು ಬಿಟ್ಟು ಒಂದಿಂಚೂ ಅತ್ತ ಸರಿಯಲಿಲ್ಲ. ಅವನ ಮೊಂಡಾಟ ದೊಡ್ಡಪ್ಪನ ಕೋಪವನ್ನು ನೆತ್ತಿಗೇರಿಸಿತು. ತಂದೆಯ ಬೆಂಕಿಯುಗುಳುವ ಕಣ್ಣುಗಳನ್ನು ನೋಡಿ ರಜನಿ ಭಯದಿಂದ ತತ್ತರಿಸಿದಳು. ತಂದೆಯ ಕೋಪ ಅವಳಿಗೆ ತಿಳಿಯದ್ದೇನಲ್ಲ. ಗಟ್ಟಿಯಾಗಿ ಹೇಮಂತನ ಕೈಹಿಡಿದು, “ಹೇಮಂತ್, ಇಲ್ಲಿದ್ದರೆ ನಮ್ಮನ್ನು ಕೊಂದೇ ಬಿಡುತ್ತಾರೆ. ನಡಿ ಇಲ್ಲಿಂದ ಮೊದಲು ಹೊರಟುಹೋಗೋಣ” ಎಂದಳು ಅವಸರಿಸುವಂತೆ.

ಹೇಮಂತ್ ಅವಳ ಮಾತಿಗೆ ಬೆಲೆ ಕೊಡದೆ ಅಲ್ಲೇ ನಿಂತಿದ್ದ. ರಜನಿಯ ಬಂಧು-ಬಳಗವನ್ನು ಒಪ್ಪಿಸಿಯೇ ಸಿದ್ಧವೆಂದು ಬಂದಿದ್ದ ಅವನು ಇನ್ನೂ ತನ್ನ ಪ್ರಯತ್ನದಲ್ಲಿ ಸೋಲೊಪ್ಪಲು ತಯಾರಿರಲಿಲ್ಲ.

ಸೋಮು ಚಿಕ್ಕಪ್ಪ ಹೇಮಂತನ ಎದುರು ನಿಂತು ಹೆದರಿಸುವನಂತೆ ಹೇಳಿದ, “ನೋಡೋ, ಕೊನೆಯ ಬಾರಿಗೆ ಹೇಳ್ತಾ ಇದ್ದೀನಿ. ಪ್ರಾಣದ ಮೇಲೆ ನಿನಗೇನಾದರೂ ಆಸೆ ಇದ್ದರೆ ಇಲ್ಲಿಂದ ಹೊರಟುಹೋಗು. ರಜನಿಯನ್ನು ಮರೆತು ಬೇರೆ ಯಾರನ್ನಾದರೂ ಮದುವೆಯಾಗಿ ಸುಖವಾಗಿರು.”

ಹೇಮಂತ ಹೆದರುವ ಬದಲು ವ್ಯಂಗ್ಯ ನಗೆ ನಕ್ಕ. “ಏನ್ಸಾರ್, ಇದೆಲ್ಲಾ ಹಳೆ ಸಿನಿಮಾಗಳ ಡೈಲಾಗು. ಈ ಕಾಲದಲ್ಲಿ ಇದೆಲ್ಲಾ ನಡೆಯಲ್ಲ. ನನ್ನನ್ನು ನೀವು ಏನೂ ಮಾಡಕ್ಕಾಗಲ್ಲ” ಎಂದ ಸೋಮುವಿನತ್ತ ನೋಡಿ.

ಸದಾಶಿವಯ್ಯನಿಗೆ ಹುಡುಗ ಯಾವುದಕ್ಕೂ ಬಗ್ಗುವವನಲ್ಲವೆನಿಸಿತು. ತಮ್ಮ ಪ್ರಯತ್ನಗಳೆಲ್ಲಾ ವಿಫಲವಾದ ಹತಾಶೆ ವಿವೇಚನೆಯನ್ನು ಮರೆಸಿತ್ತು. ಮೊದಲೇ ಮಾತನಾಡಿಕೊಂಡಿದ್ದ ಯೋಜನೆಯನ್ನು ಕಾರ್ಯರೂಪಕ್ಕಿಳಿಸುವುದು ಅನಿವಾರ್ಯವೆಂಬ ತೀರ್ಮಾನಕ್ಕೆ ಬಂದರು. ಅಲ್ಲೇ ನಿಂತಿದ್ದ ತಮ್ಮಂದಿರತ್ತ ಸನ್ನೆ ಮಾಡಿದರು. ಪುಟ್ಟಿಯ ಅಪ್ಪ ಹೇಮಂತನನ್ನು ಸಮೀಪಿಸಿದರು. ಅವರ ಕೈಯಲ್ಲಿ ವಯರಿನಂತಹದೇನೋ ವಸ್ತು ಹೊಳೆಯುತ್ತಿತ್ತು. ಹೇಮಂತನನ್ನು ರಾಮು-ಸೋಮು ಬಲವಾಗಿ ಎರಡೂ ಕಡೆಯಿಂದ ಹಿಡಿದುಕೊಂಡರು. ಪುಟ್ಟಿ ನೋಡುತ್ತಿದ್ದಂತೆಯೇ ಅವಳ ಅಪ್ಪ ತಮ್ಮ ಕೈಲಿದ್ದ ವೈರನ್ನು ಹೇಮಂತನ ಕತ್ತಿನ ಸುತ್ತ ಬಿಗಿದರು. ಹೇಮಂತ ಬಿಡಿಸಿಕೊಳ್ಳಲು ಕೊಸರಾಡಿದ. ಅವನೂ ಕಟ್ಟುಮಸ್ತಾದ ಆಳೇ. ಆದರೆ ರಾಮು-ಸೋಮುವಿನಂತಹ ಶಕ್ತಿಶಾಲಿಗಳ ಮುಂದೆ ಅವನ ಪ್ರಯತ್ನ ವ್ಯರ್ಥವಾಯಿತು. ಅವನ ಕತ್ತಿನ ಸುತ್ತ ಬಿಗಿತ ಹೆಚ್ಚಾಯಿತು. ಅವನ ಅಸಹಾಯಕ ನೋಟ ರಜನಿಯತ್ತಲೇ ನೆಟ್ಟಿತ್ತು.

ಎಲ್ಲವನ್ನೂ ನೋಡುತ್ತಿದ್ದ ರಜನಿ ಕಂಗಾಲಾದಳು. “ಹೇಮಂತನನ್ನು ಬಿಟ್ಟುಬಿಡಿ. ಕೊಲ್ಲಬೇಡಿ ಅವನನ್ನು….ಯಾರಾದರೂ ಕಾಪಾಡಿ…ಕಾಪಾಡಿ….” ಎಂದು ಬೊಬ್ಬಿರಿದಳು. ಸದಾಶಿವಯ್ಯ ಮಗಳ ಬಾಯಿಂದ ಮುಂದೆ ಶಬ್ದ ಹೊರಡದಂತೆ, ಅವಳ ಬಾಯನ್ನು ಬಲವಾಗಿ ಮುಚ್ಚಿ ಅವಳನ್ನು ಎಳೆದುಕೊಂಡು ಒಳಕೋಣೆಯತ್ತ ನಡೆದರು.

ಪುಟ್ಟಿ ನೋಡನೋಡುತ್ತಿದ್ದಂತೆಯೇ ಹೇಮಂತನ ಕಣ್ಣುಗಳು ಅಗಲವಾಗಿ ತೆರೆದುಕೊಂಡು ಮುಖ ವಿಕಾರಗೊಂಡಿತು. ಅವನ ಕೊಸರಾಟ ಕ್ರಮೇಣ ತಣ್ಣಗಾಗುತ್ತಾ ಬಂದು ಕುತ್ತಿಗೆ ವಾಲಿಕೊಂಡಿತು.

ನಿಂತಲ್ಲಿಯೇ ಭಯದಿಂದ ಮರಗಟ್ಟಿಹೋಗಿದ್ದ ಪುಟ್ಟಿ “ಅಮ್ಮಾ…..” ಎಂದು ಒಮ್ಮೆ ಹೃದಯ ವಿದ್ರಾವಕವಾಗಿ ಕಿರುಚಿ ಕುಸಿದುಬಿದ್ದಳು. ಊರೆಲ್ಲ ಮೈಮರೆತು ನಿದ್ರಿಸಿದ್ದ ಹೊತ್ತಿನಲ್ಲಿ ನಡೆದುಹೋದ ತಣ್ಣನೆಯ ಕೊಲೆಯೊಂದಕ್ಕೆ ಮುಗ್ಧ ಪುಟ್ಟಿ ಸಾಕ್ಷಿಯಾಗಿ ಉಳಿದುಬಿಟ್ಟಳು!

(ಎಂದೋ, ಎಲ್ಲೋ ಕೇಳಿದ ನೈಜ ಘಟನೆಯೊಂದಕ್ಕೆ ಕಲ್ಪನೆಯ ಬಣ್ಣ ಬೆರೆಸಿ ತಯಾರಿಸಿದ ನುಡಿಚಿತ್ರವಿದು)

*****************
(‘ಸಂಗಮ’ ಯುಗಾದಿ/೨೦೦೮)

ಭಯದ ನೆರಳಿನಲ್ಲಿ ಒಂದು ರಾತ್ರಿ

ಮಧ್ಯರಾತ್ರಿಯ ಸಮಯ.ಕವಿತಾಳ ಪರೀಕ್ಷೆಗಳು ಹತ್ತಿರದಲ್ಲಿಯೇ ಇದ್ದುದರಿಂದ ಓದಿಕೊಳ್ಳುತ್ತಿದ್ದಳು. ಮನೆಯ ಜನರೆಲ್ಲ ಗಾಢ ನಿದ್ರೆಯಲ್ಲಿ ಮುಳುಗಿದ್ದರು. ಅವಳಿಗೆ ಬಾಯಾರಿಕೆ ಎನ್ನಿಸಿತು. ನೀರು ಕುಡಿಯಲೆಂದು ನೋಡಿದಾಗ ನೀರಿನ ಬಾಟಲಿ ಖಾಲಿಯಾಗಿದ್ದು ತಿಳಿಯಿತು. ಅದನ್ನು ತುಂಬಿಸಿಕೊಂಡು ಬರಲು ಅಡಿಗೆ ಮನೆಯ ಕಡೆಗೆ ನಡೆದಳು.

ಅವರದ್ದು ಹಳೆಯ ಕಾಲದ ದೊಡ್ಡ ಮನೆ. ಕವಿತಾಳ ರೂಮಿಗೂ ಅಡಿಗೆ ಮನೆಗೂ ನಡುವೆ ದೊಡ್ದದಾದ ಓಣಿ ಇದೆ.  ಅಡಿಗೆ ಮನೆಯನ್ನು ತಲುಪಲು ಅದನ್ನು ಹಾದು ಹೋಗಬೇಕು. 

ಕತ್ತಲೆಯಿದ್ದರೂ, ಚಿರಪರಿಚಿತವಾದ ಜಾಗವಾಗಿದ್ದರಿಂದ ಸಲೀಸಾಗಿ ನಡೆದು ಅಡಿಗೆ ಮನೆಯನ್ನು ತಲುಪಿದಳು. ಅಡಿಗೆ ಮನೆಯ ಬಾಗಿಲು ಮುಚ್ಚಿತ್ತು. ಮೆಲ್ಲಗೆ ತಳ್ಳಿದಳು. ಕೀರಲು ಶಬ್ದದೊಂದಿಗೆ ತೆರೆದುಕೊಂಡಿತು.  ಬಾಗಿಲಿನ ಎಡಭಾಗದಲ್ಲಿದ್ದ ಸ್ವಿಚ್ ಹುಡುಕಲು ಕತ್ತಲೆಯಲ್ಲಿಯೇ ಗೋಡೆಯನ್ನು ತಡವಿ, ಸ್ವಿಚ್ ಒತ್ತಿದಳು.  ಯಾಕೋ ದೀಪ ಬೆಳಗಲಿಲ್ಲ.  ಅಲ್ಲಿದ್ದ ಬಲ್ಬ್ ಸುಟ್ಟು ಹೋಗಿದ್ದು, ಇನ್ನೂ ಬದಲಾಯಿಸಿಲ್ಲವೆಂದು ನೆನಪಾಯಿತು. ನಾಳೆ ಮೊದಲು ಈ ಕೆಲಸ ಮರೆಯದೆ ಮಾಡಿ ಮುಗಿಸಬೇಕು ಅಂದುಕೊಂಡಳು. 

ಅಷ್ಟರಲ್ಲಿ ಅಲ್ಲಿದ್ದ ಕಿಟಕಿಯ ಕಡೆ ಅವಳ ದೃಷ್ಟಿ ಹರಿಯಿತು. ಗಾಜಿನ ಕಿಟಕಿಗಳ ಹಿಂದೆ ಯಾವುದೋ ಆಕೃತಿ ಅಲುಗಾಡಿದಂತಾಯಿತು.  ಕಿಟಕಿ ಪೂರ್ತಿಯಾಗಿ ಮುಚ್ಚಿರಲಿಲ್ಲ. ಅರೆತೆರೆದಿದ್ದ ಕಿಟಕಿಯಿಂದ ಹೊರಗೆ ಇಣುಕಿ ನೋಡಿದಳು. ಅಮಾವಾಸ್ಯೆ ಹತ್ತಿರವಿದ್ದುದರಿಂದ ಹೊರಗೆ ಅಷ್ಟಾಗಿ ಬೆಳಕಿರಲಿಲ್ಲ. ಹಿತ್ತಲಿನಲ್ಲಿದ್ದ ಮಲ್ಲಿಗೆಯ ಗಿಡದ ಕೆಳಗೆ ಯಾವುದೋ ಆಕೃತಿ ಕುಳಿತಿರುವಂತೆ ಭಾಸವಾಗಿ ಬೆಚ್ಚಿ ಬಿದ್ದಳು. ಬಿಳಿಯ ಉಡುಗೆಯನ್ನು ಧರಿಸಿದಂತೆ ಕಾಣುತ್ತಿದ್ದ ಆಕೃತಿಯನ್ನು ಇನ್ನಷ್ಟು ದಿಟ್ಟಿಸಿ ನೋಡಲು ಅವಳಿಗೆ ಭಯವಾಯಿತು.

ಭಯದಲ್ಲಿಯೇ ಬೆಂಕಿಪೆಟ್ಟಿಗೆಯನ್ನು ಹುಡುಕಲು ಪ್ರಯತ್ನಿಸಿದಳು. ನಡುಗುತ್ತಿದ್ದ ಕೈಗಳಿಗೆ ಬೆಂಕಿಪೆಟ್ಟಿಗೆ ಎಟುಕಲಿಲ್ಲ.  ಕತ್ತಲೆಯಲ್ಲಿ ಕಾಲಿಗೆ ಏನೋ ತೊಡರಿತು.  ಕವಿತಾ ಮುಗ್ಗರಿಸಿ ಕೆಳಗೆ ಬಿದ್ದುಬಿಟ್ಟಳು.  ಕವಿತಾಳಿಗೆ ತನ್ನ ಕೈಗೆ ಮೆತ್ತಗಿನ ಯಾವುದೋ ವಸ್ತು ತಗುಲಿದಂತಾಗಿ ಕಿಟಾರನೆ ಕಿರುಚಿದಳು.  ಅಡಿಗೆ ಮನೆಯಲ್ಲಿದ್ದ ಹಾಲನ್ನು ಕದ್ದು ಕುಡಿಯಲು ಬಂದಿದ್ದ ಕಳ್ಳ ಬೆಕ್ಕು ಕವಿತಾಳ ಕೂಗಿಗೆ ಹೆದರಿ,ಅಲ್ಲಿದ್ದ ಕಿಟಕಿಯಿಂದ ಹಾರಿ ಹೊರಗೆ ಓಡಿ ಹೋಯಿತು. ಹೆದರಿಕೆಯಿಂದ ಅರೆಜೀವವಾಗಿದ್ದ ಕವಿತಾ ಅದನ್ನು ಗಮನಿಸಲಿಲ್ಲ.

ಅವಳಿಗೆ ಅಲ್ಲಿಂದ ಹೇಗಾದರೂ ಹೊರಗೆ ಹೋಗಿ ತನ್ನ ಕೋಣೆಯನ್ನು ತಲುಪಿದರೆ ಸಾಕೆನಿಸಿತ್ತು.  ಓಡಲು ಕಾಲುಗಳಿಗೆ ಬಲವೇ ಇರಲಿಲ್ಲ.  ಕತ್ತಲೆಯಲ್ಲಿ ಯಾವ ಕಡೆಗೆ ಹೋಗಬೇಕೆಂದು ನಿರ್ಧರಿಸದಾದಳು. ತನ್ನ ಶಕ್ತಿಯನ್ನೆಲ್ಲಾ ಒಟ್ಟುಗೂಡಿಸಿಕೊಂಡು “ಅಮ್ಮಾ…ಅಮ್ಮಾ…” ಎಂದು ಕೂಗಲು ಯತ್ನಿಸಿದಳು.   ಭಯದಿಂದ ಆ ಕೂಗು ಹೊರಗೇ ಬರಲಿಲ್ಲ.  ಮೊದಲೇ ಬಾಯಾರಿದ್ದ ಅವಳಿಗೆ ನಾಲಿಗೆಯಲ್ಲಿದ್ದ ದ್ರವವೂ ಆರಿಹೋಗಿ ಜೋರಾಗಿ ಕೂಗಲೂ ಶಕ್ತಿ ಇಲ್ಲದಂತಾಗಿತ್ತು.  ತಂದೆ, ತಾಯಿ ಮಹಡಿಯ ಮೇಲಿದ್ದ ಕೋಣೆಯಲ್ಲಿ ಮಲಗಿದ್ದರು.  ಕವಿತಾಳ ಕರೆ ಅವರಿಗೆ ಕೇಳಿಸುವುದು ಸಾಧ್ಯವಿರಲಿಲ್ಲ.  ಕವಿತಾಳ ತಂದೆ ರಾಮನಾಥ ಅವರಿಗಂತೂ ಒಮ್ಮೆ ನಿದ್ದೆ ಹತ್ತಿದರೆ ಮುಗಿಯಿತು.  ಎಂತಹ ಸದ್ದಿಗೂ ಅವರಿಗೆ ಎಚ್ಚರವಾಗುತ್ತಿರಲಿಲ್ಲ.

ಕವಿತಾ ಅಮ್ಮ ಹೇಳುತ್ತಲೇ ಇದ್ದರು – “ಕವಿತಾ, ಈ ದೊಡ್ಡ ಮನೆಯಲ್ಲಿ ನೀನೊಬ್ಬಳೇ ಕೆಳಗೆ ಯಾಕೆ ಮಲಗುತ್ತೀಯಾ? ನೀನೂ ಮಹಡಿ ಮೇಲೆ ಮಲಗಿಕೋ.”

ಕವಿತಾಳಿಗೆ ಮಹಡಿಯ ಮೇಲೆ ಸೆಕೆಗೆ ಉಸಿರು ಕಟ್ಟಿದಂತಾಗುತ್ತಿತ್ತು.  ಹಾಗಾಗಿ ಅವಳು ಅಲ್ಲಿ ಮಲಗಲು ಬಯಸುತ್ತಿರಲಿಲ್ಲ. ಕೆಳಗಿನ ಕೋಣೆ ತುಂಬಾ ತಂಪಾಗಿರುತ್ತಿತ್ತು. ಸುತ್ತಲೂ ಇದ್ದ ಹೂತೋಟದಿಂದ ತಣ್ಣನೆಯ ಗಾಳಿ ಬೀಸುತ್ತಿತ್ತು.  ಅಲ್ಲದೆ ಅಡಿಗೆಯಾಳು ಸೀತಮ್ಮ ಕೂಡ ಕವಿತಾ ಕೋಣೆಯ ಪಕ್ಕದಲ್ಲೇ ಇರುವ ಸಣ್ಣ ಕೋಣೆಯಲ್ಲಿ ಮಲಗುತ್ತಿದ್ದರು.  ಹಾಗಾಗಿ ಕವಿತಾಳಿಗೆ ಭಯವೇನೂ ಇರಲಿಲ್ಲ. ಸೀತಮ್ಮ ಮಗಳ ಮದುವೆಗೆಂದು ಒಂದು ತಿಂಗಳು ರಜ ತೆಗೆದುಕೊಂಡು ಹೋಗಿದ್ದುದರಿಂದ ಇವತ್ತು ಕವಿತಾ ಒಬ್ಬಂಟಿಯಾಗಿದ್ದಳು.

ಕವಿತಾ ಸ್ವಭಾವತ: ಅಂಜುಬುರುಕಿಯಲ್ಲ. ಸೀತಮ್ಮ ಇಲ್ಲದಿದ್ದರೂ, ಪರೀಕ್ಷೆಗೆ ಬಹಳ ಓದುವುದಿದ್ದರಿಂದ ಧೈರ್ಯವಾಗಿ ಒಬ್ಬಳೇ ಕೆಳಗೆ ಮಲಗಲು ಸಿದ್ಧಳಾಗಿದ್ದಳು.

ಆದರೆ ಈಗ ಕವಿತಾಳಿಗೆ ತುಂಬಾ ಭಯವಾಗುತ್ತಿತ್ತು. ಅವಳ ಹೃದಯ ಡವಡವ ಎಂದು ಹೊಡೆದುಕೊಳ್ಳುತ್ತಿತ್ತು. ಕಾಲುಗಳಲ್ಲಿದ್ದ ಶಕ್ತಿಯೇ ಸೋರಿಹೋದಂತಾಗಿತ್ತು. ಕತ್ತಲೆಯಲ್ಲಿಯೇ ತೆವಳುತ್ತಾ ಎತ್ತ ಹೋಗಲೂ ತೋರದೆ, ಹೊರಗಿನ ಬೆಳಕು ಕಾಣಿಸುತ್ತಿದ್ದ ಕಿಟಕಿಯ ಸನಿಹ ಬಂದಳು.  ಹೆದರುತ್ತಲೇ ಹೊರಗೆ ಕಣ್ಣು ಹಾಯಿಸಿದಳು. ಮಲ್ಲಿಗೆಯ ಗಿಡದ ಕೆಳಗೆ ಇದ್ದ ಆಕೃತಿ ಈಗ ಅಲ್ಲಿರಲಿಲ್ಲ. ಕವಿತಾಳಿಗೆ ತಾನು ಈ ಮೊದಲು ಅಲ್ಲಿ ಕಂಡ ಆಕೃತಿ ತನ್ನ ಭ್ರಮೆಯೇನೋ ಅಂದುಕೊಂಡಳು.  “ದೆವ್ವಾನೂ ಇಲ್ಲ, ಭೂತನೂ ಇಲ್ಲ. ಅವೆಲ್ಲ ಈಗೆಲ್ಲಿರುತ್ತವೆ? ನಾನು ಸುಮ್ಮನೆ ಹೆದರಿದೆ ಅಷ್ಟೆ” ಎಂದು ಧೈರ್ಯ ತಂದುಕೊಳ್ಳಲು ನೋಡಿದಳು.

ಕವಿತಾ ಹಾಗೆಂದುಕೊಂಡು ಧೈರ್ಯ ತಂದುಕೊಳ್ಳಲು ಯತ್ನಿಸಿರುವಂತೆಯೇ ಕಿಟಕಿಯ ಬಲಭಾಗದಲ್ಲಿ ಯಾರೋ ನಡೆದಾಡುತ್ತಿರುವ ಸಪ್ಪಳ ಕೇಳಿಸಿತು. ಅದರ ಜೊತೆಗೆ ಗೆಜ್ಜೆಯ ದನಿ!  ಕವಿತಾಳಿಗೆ ಈಗಂತೂ ಆ ಸದ್ದು ತನ್ನ ಭ್ರಮೆಯಲ್ಲ ಎಂದು ಚೆನ್ನಾಗಿ ಗೊತ್ತಾಯಿತು. ಆದರೂ ಅದನ್ನು ದೆವ್ವವೆಂದೋ, ಮೋಹಿನಿಯೆಂದೋ ನಂಬಲು ಅವಳು ಸಿದ್ಧಳಿರಲಿಲ್ಲ. ಅದೇನೆಂದು ಪರೀಕ್ಷೆ ಮಾಡಿ ನೋಡಲೇಬೇಕೆಂದು ಗೆಜ್ಜೆ ಸದ್ದು ಎಲ್ಲಿಂದ ಬರುತ್ತಿದೆಯೆಂದು ಪರೀಕ್ಷಿಸುವಂತೆ ಕಿಟಕಿಗೆ ಕಿವಿಗೊಟ್ಟು ನಿಂತಳು.

ಕಿಟಕಿಗೆ ಆತುಕೊಂಡು ನಿಂತಿದ್ದ ಕವಿತಾಳಿಗೆ ಯಾರೋ ತಾನಿದ್ದ ಕಿಟಕಿಯ ಕಡೆಗೆ ನಡೆದು ಬರುತ್ತಿರುವ ಸದ್ದು ಸ್ಪಷ್ಟವಾಗಿ ಕೇಳಿಸಿತು. ಕಳ್ಳರಿರಬಹುದೇ ಎಂಬ ಅನುಮಾನವೂ ತಲೆ ಎತ್ತಿತು. ಕಳ್ಳರಾದರೆ ಈ ಗೆಜ್ಜೆ ಸದ್ದು, ಬಿಳಿಯ ಸೀರೆ ಎಲ್ಲಾ ಅವರಿಗೆ ಯಾಕೆ? ಕವಿತಾ ತಂದೆ ಹಣ,ಒಡವೆಗಳನ್ನೆಲ್ಲ ಬ್ಯಾಂಕಿನ ಲಾಕರಿನಲ್ಲಿ ಇರಿಸುತ್ತಿದ್ದುದರಿಂದ ಕಳ್ಳರಿಗೆ ತಮ್ಮ ಮನೆಯಲ್ಲೇನೂ ಸಿಕ್ಕದು ಎಂದು ಕವಿತಾಳಿಗೆ ತಿಳಿದಿತ್ತು.  ಕವಿತಾಳ ಎದೆ ಬಡಿತ ಅವಳ ಕಿವಿಗೆ ಕೇಳುವಷ್ಟು ಜೋರಾಗಿತ್ತು. ಹೆದರಿಕೆಯನ್ನು ಹತ್ತಿಕ್ಕುತ್ತಾ, “ಇವತ್ತು ಈ ಗೆಜ್ಜೆ ಸದ್ದಿನ ಮೂಲವನ್ನು ಪತ್ತೆ ಹಚ್ಚಿಯೇ ಬಿಡುತ್ತೇನೆ” ಎಂದು ಮೊಂಡು ಧೈರ್ಯದಿಂದ ಅಲ್ಲೇ ನಿಂತಳು.

ತನ್ನತ್ತ ಬರುತ್ತಿದ್ದ ಹೆಜ್ಜೆಯ ಸದ್ದಿನತ್ತ ತನ್ನೆಲ್ಲಾ ಗಮನವನ್ನು ಕೇಂದ್ರೀಕರಿಸಿದ್ದ ಅವಳಿಗೆ ಆ ಆಕೃತಿ ತನ್ನ ಕಿಟಕಿಯ ಎದುರಿಗೆ ಬಂದು ನಿಂತಿದ್ದು ತಿಳಿಯಲಿಲ್ಲ. ಒಮ್ಮೆಲೇ ಆ ಬಿಳಿಸೀರೆಯುಟ್ಟಂತೆ ಕಾಣುತ್ತಿದ್ದ ಆಕೃತಿಯು ಕವಿತಾ ನಿಂತಿದ್ದ ಕಿಟಕಿಯ ಬಳಿಯೇ ಬಂದಿತ್ತು. ಅದು ಗಾಜಿನ ಕಿಟಕಿಯಾದ್ದರಿಂದ, ಕಿಟಕಿಯಾಚೆ ಇರುವ ಆಕಾರ ಕವಿತಾಳಿಗೆ ಈಗ ಚೆನ್ನಾಗಿ ಕಾಣುತ್ತಿತ್ತು.  ಈಗಂತೂ ಜೀವವೇ ಬಾಯಿಗೆ ಬಂದಂತಾಯಿತು ಅವಳಿಗೆ.

ಉಸಿರಾಡಿದರೆ ಎಲ್ಲಿ ಅದು ಆಕೃತಿಗೆ ಕೇಳಿಸೀತೋ ಎಂದು ಹೆದರಿ ಉಸಿರು ಬಿಗಿ ಹಿಡಿದು ನಿಂತುಕೊಂಡಳು ಕವಿತಾ.  ಅವಳ ಹಣೆಯ ಮೇಲೆ ಬೆವರ ಹನಿ ಸಾಲುಗಟ್ಟಿತ್ತು. ಅವಳಲ್ಲಿದ್ದ ಧೈರ್ಯವೆಲ್ಲಾ ಯಾವಾಗಲೋ ಮಂಗಮಾಯವಾಗಿ ಹೋಗಿತ್ತು.  ಮೈಯಿಡೀ ಬೆವರಿನಿಂದ ತೊಯ್ದುತೊಪ್ಪೆಯಾಗಿ ಹೋಗಿತ್ತು. ನಾಲಿಗೆಯಂತೂ ರಟ್ಟಿನ ಚೂರಿನಂತೆ ಒಣಗಿ ಹೋಗಿತ್ತು.  ಯಾರಾದರೂ ಕುಡಿಯಲು ನೀರು ಕೊಡಬಾರದೇ? ಎಂದು ಅವಳ ಮನಸ್ಸು ಹಂಬಲಿಸುತ್ತಿತ್ತು.

“ಯಾರು ನೀನು?” ಎಂದು ಜೋರಾಗಿ ಕಿರುಚಿ ಕೇಳಬೇಕೆನಿಸರೂ, ಗಂಟಲಿನಿಂದ ಸಣ್ಣನೆಯ ಸ್ವರವೂ ಹೊರಡಲಿಲ್ಲ. ಕಣ್ಣುಗಳು ಭಯದಿಂದ ಆಕೃತಿಯನ್ನೇ ದಿಟ್ಟಿಸುತ್ತಿದ್ದವು. ಕವಿತಾಳ ಮುಖ ಹತ್ತಿಯಂತೆ ಬಿಳುಚಿ ಹೋಗಿತ್ತು.

ಬಿಳಿ ಸೀರೆಯುಟ್ಟಿದ್ದ ಆಕೃತಿ ಈಗ ಸುಮ್ಮನಿರಲಿಲ್ಲ. ಅರೆ ತೆರೆದಿದ್ದ ಕಿಟಕಿಯ ಒಳಗೆ ಕೈಹಾಕಿ ಕಿಟಕಿ ಬಾಗಿಲನ್ನು ಮತ್ತಷ್ಟು ಅಗಲವಾಗಿ ತೆರೆಯಿತು. ತನ್ನೆರಡು ಕೈಗಳನ್ನು ಕಿಟಕಿಯ ಒಳಗೆ ಚಾಚಿತು. ಆ ಉದ್ದವಾದ ಕೈಗಳು ಕಿಟಕಿಗೆ ಒತ್ತಿಕೊಂಡು ಗರಬಡಿದವಳಂತೆ ನಿಂತಿದ್ದ ಕವಿತಾಳ ಕುತ್ತಿಗೆಯನ್ನು ಸಮೀಪಿಸಿತು. ಕವಿತಾ ನೋಡನೋಡುತ್ತಿದ್ದಂತೆ ಆ ಕೈಗಳು ಅವಳ ಕುತ್ತಿಗೆಯನ್ನು ಬಲವಾಗಿ ಒತ್ತಿ ಹಿಡಿದವು.

“ಬಿಡು ಬಿಡು, ನನ್ನನ್ನು ಕೊಲ್ಲಬೇಡ” ಎಂದು ಕವಿತಾ ಕಿರುಚಿದಳು.  ಆದರೆ ಹಿಡಿತ ಕಡಿಮೆಯಾಗಲಿಲ್ಲ. ಕೊಸರಿಕೊಂಡು ಓಡಿ ಹೋಗಲು ಪ್ರಯತ್ನಪಟ್ಟಳು. ನಿತ್ರಾಣಳಾಗಿದ್ದ ಅವಳಿಗೆ ಅದು ಸಾಧ್ಯವಾಗಲಿಲ್ಲ.  ಕತ್ತಿನ ಮೇಲಿನ ಹಿಡಿತ ಬಿಗಿಯಾಗುತ್ತಿದ್ದಂತೆ ಕವಿತಾ ತನ್ನ ಕತೆ ಮುಗಿದೇ ಹೋಯಿತು ಅಂದುಕೊಂಡಳು.  ಅವಳಿಗರಿವಿಲ್ಲದಂತೆ ಹಿಂದಕ್ಕೆ ಕುಸಿದು ಬಿದ್ದು, ಎಚ್ಚರ ತಪ್ಪಿದಳು.

*                         *
ಕವಿತಾ ತನ್ನ ಮಂಚದ ಮೇಲೆ ಕಣ್ಮುಚ್ಚಿ ಮಲಗಿದ್ದಳು. ತಂದೆ, ತಾಯಿಗಳು ಆಡುತ್ತಿರುವ ಮಾತುಗಳು ಅವಳ ಕಿವಿಯ ಮೇಲೆ ಅಸ್ಪಷ್ಟವಾಗಿ ಕೇಳಿಸುತ್ತಿದ್ದವು.  ಅಪ್ಪ, ಅಮ್ಮನ ಜೊತೆಗೆ ಮಾತನಾಡುತ್ತಿರುವ ಇನ್ನೊಂದು ಚಿರಪರಿಚಿತ ದನಿ.

ಆತಂಕ ತುಂಬಿದ ಧ್ವನಿಯಲ್ಲಿ ಅಮ್ಮ ಹೇಳುತ್ತಿದ್ದರು –

“ಏನನ್ನೋ ನೋಡಿ ಹೆದರಿದ್ದಾಳೆ ಅನ್ನಿಸುತ್ತದೆ. ಒಬ್ಬಳೇ ಕೆಳಗೆ ಮಲಗಬೇಡ ಎಂದು ಎಷ್ಟು ಹೇಳಿದರೂ ಕೇಳಲೇ ಇಲ್ಲ. ಮೊದಲೇ ಪರೀಕ್ಷೆಗೆಂದು ಹಗಲಿರುಳು ಓದಿ ಆಯಾಸಗೊಂಡಿದ್ದಳು. ಸ್ವಲ್ಪ ಜ್ವರವೂ ಇರುವ ಹಾಗಿದೆ”

“ಏನೂ ಆಗಿಲ್ಲ, ಸ್ವಲ್ಪ ರೆಸ್ಟ್ ತೊಗೊಂಡರೆ ಎಲ್ಲ ಸರಿಯಾಗುತ್ತದೆ, ಬಿಡು” –  ಅಮ್ಮನನ್ನು ಸಮಾಧಾನಿಸುತ್ತಿದ್ದರು ತಂದೆ.

ಕವಿತಾಳಿಗೆ ಈಗ ಚೆನ್ನಾಗಿ ಎಚ್ಚರವಾಯಿತು. ಮೆಲ್ಲಗೆ ಏಳಲು ಪ್ರಯತ್ನಿಸಿದಳು. ತಾಯಿ ಧಾವಿಸಿ ಬಂದು ದಿಂಬಿಗೆ ಒರಗಿ ಕುಳಿತುಕೊಳ್ಳಲು ಅವಳಿಗೆ ಸಹಾಯ ಮಾಡಿದರು. ಕವಿತಾ ಒಮ್ಮೆ ಸುತ್ತಲೂ ಕಣ್ಣಾಡಿಸಿದಳು.  “ಅರೆರೆ ಅಣ್ಣ ರಾಜೀವ! ಯಾವಾಗ ಬಂದ ಇವನು? ಅಣ್ಣ ಬಂದಿದ್ದು ತನಗೆ ಗೊತ್ತೇ ಆಗಲಿಲ್ಲವಲ್ಲ. ತುಂಬಾ ಹೊತ್ತು ಮಲಗಿಬಿಟ್ಟಿರಬೇಕು ನಾನು” – ಎಂದು ಮನದಲ್ಲೇ ಪೇಚಾಡಿಕೊಳ್ಳುತ್ತಾ – 

“ಅಣ್ಣ, ಡೆಲ್ಲಿಯಿಂದ ಯಾವಾಗ ಬಂದೆ? ನೀನು ಬರುವ ವಿಷಯವನ್ನು ನನಗೆ ಮೊದಲೇ ಯಾಕೆ ತಿಳಿಸಲಿಲ್ಲ?” – ಎಂದಳು ಹುಸಿ ಕೋಪದಿಂದ.

ಕವಿತಾಳ ಅಣ್ಣ ರಾಜೀವ ಮಿಲಿಟರಿ ಸೇವೆಯಲ್ಲಿದ್ದ. ಕವಿತಾಳನ್ನು ಕಂಡರೆ ಅವನಿಗೆ ಬಹಳ ಪ್ರೀತಿ. ಕವಿತಾಳಿಗೂ ಅಷ್ಟೆ. ಅಣ್ಣ ರಾಜೀವನಲ್ಲಿ ಬಹಳ ಸಲಿಗೆ.

ರಾಜೀವ ಸೋಫಾದಿಂದ ಎದ್ದು ಬಂದು ತಂಗಿಯ ಬಳಿ ಕುಳಿತ. ಅವನ ಮುಖದಲ್ಲಿ ತುಂಟ ನಗೆಯೊಂದು ತೇಲುತ್ತಿತ್ತು.

“ನಾನು ನಿನ್ನೆ ರಾತ್ರಿನೇ ಬಂದೆ. ಅದೇ ಒಂದು ಭೂತ ಬಂದು ನಿನ್ನ ಕುತ್ತಿಗೆಯನ್ನು ಹಿಸುಕುತ್ತಿತ್ತಲ್ಲಾ ಆಗ” ಎಂದ ಕೀಟಲೆಯ ಧ್ವನಿಯಲ್ಲಿ.

ಕವಿತಾಳಿಗೆ ಏನೂ ಅರ್ಥವಾಗದೆ ಅಣ್ಣನ ಮುಖವನ್ನೇ ಪ್ರಶ್ನಾರ್ಥಕವಾಗಿ ನೋಡಿದಳು.

ರಾಜೀವ ಹೇಳಿದ –

“ನನಗೆ ಒಂದು ತಿಂಗಳು ರಜ ಸಿಕ್ಕಿತ್ತು. ನಿಮಗೆಲ್ಲಾ ಆಶ್ಚರ್ಯ ಉಂಟು ಮಾಡಬೇಕು ಎಂದು ಇಲ್ಲಿಗೆ ಬರುವ ವಿಷಯ ಮೊದಲೇ ತಿಳಿಸಲಿಲ್ಲ. ನಾನು ನಿನ್ನೆ ಮಧ್ಯರಾತ್ರಿ ಇಲ್ಲಿಗೆ ಬಂದಾಗ ನಿನ್ನ ಕೋಣೆಯಲ್ಲಿ ದೀಪ ಉರಿಯುತ್ತಿದ್ದುದನ್ನು ಕಿಟಕಿಯಿಂದ ನೋಡಿದೆ. ಆಮೇಲೆ ನೀನು ನೀರಿನ ಬಾಟಲಿಯೊಡನೆ ಅಡಿಗೆ ಮನೆಯತ್ತ ನಡೆದಿದ್ದನ್ನು ನೋಡಿ, ಒಂದು ಸಣ್ಣ ನಾಟಕ ಮಾಡಿದೆ ಅಷ್ಟೆ.  ಯಾವಾಗಲೂ ನೀನು  “ನಾನು ತುಂಬಾ ಧೈರ್ಯವಂತೆ, ಯಾರಿಗೂ ಭಯ ಪಡುವುದಿಲ್ಲ ಎಂದು ಜಂಭ ಕೊಚ್ಚಿಕೊಳ್ಳುತ್ತಿದ್ದೆ. ಇವತ್ತು ನಿನ್ನ ಧೈರ್ಯ ಎಷ್ಟಿದೆ ಎಂದು ಪರೀಕ್ಷೆ ಮಾಡಿದಂತಾಯಿತು”  – ಎಂದು ಜೋರಾಗಿ ನಕ್ಕ ರಾಜೀವ.

ಕವಿತಾಳಿಗೆ ಈಗಲೂ ಅಣ್ಣನ ಮಾತಿನ ಮೇಲೆ ನಂಬಿಕೆ ಬರಲಿಲ್ಲ – “ಮತ್ತೆ ಆ ಬಿಳಿ ಸೀರೆ? ಗೆಜ್ಜೆ ಸದ್ದು?”

“ಓ ಅದಾ? ನೀನು ಅಡಿಗೆ ಮನೆ ಕಡೆಗೆ ಹೊರಟ ಕೂಡಲೇ ನಾನು ಹಿತ್ತಲಿನ ಕಾಂಪೋಂಡ್ ಹಾರಿ ಒಳ ಬಂದೆ. ಅಲ್ಲಿ ತಂತಿಯ ಮೇಲೆ ಒಣಗಲು ಹಾಕಿದ್ದ ಅಮ್ಮನ ಹಳೆಯ ಬಿಳಿ ಸೀರೆ ಕಾಣಿಸಿತು.  ಅದನ್ನು ತೆಗೆದುಕೊಂಡು ಸುಮ್ಮನೆ ಹಾಗೆ ಸುತ್ತಿಕೊಂಡೆ.  ಇನ್ನು ಗೆಜ್ಜೆ ಸದ್ದಿಗೆ ಉತ್ತರ ನೋಡು ಇಲ್ಲಿದೆ” – ಎನ್ನುತ್ತಾ ಜೇಬಿನಿಂದ ಹೊಸದಾದ ಒಂದು ಜೊತೆ ಗೆಜ್ಜೆಯನ್ನು ಹೊರತೆಗೆದ.

“ಇದರ ಡಿಸೈನ್ ತುಂಬಾ ಚೆನ್ನಾಗಿದೆ ನೋಡು.  ಈ ತರದ ಗೆಜ್ಜೆ ಇಲ್ಲಿ ಸಿಗುವುದಿಲ್ಲ. ಇದನ್ನು ನಿನಗೆ ಕೊಡಲೆಂದು ತೆಗೆದುಕೊಂಡು ಬಂದಿದ್ದೆ. ತೆಗೆದುಕೋ” ಎಂದು ಗೆಜ್ಜೆಯನ್ನು ಕವಿತಾಳಿಗೆ ಕೊಟ್ಟ. ಅವನ ಕಣ್ಣುಗಳಲ್ಲಿ ವಾತ್ಸಲ್ಯ ಜಿನುಗುತ್ತಿತ್ತು.

“ನನ್ನ ಕುತ್ತಿಗೆಯನ್ನು ಯಾರೋ ಬಿಗಿಯಾಗಿ ಅದುಮಿ ಹಿಡಿದ ಅನುಭವವಾಯಿತು. ಅದು ಹೇಗೆ?” – ಮತ್ತೊಂದು ಪ್ರಶ್ನೆ ಎದುರಾಯಿತು ಕವಿತಾಳಿಂದ.

“ನಾನು ನಿನ್ನ ಕುತ್ತಿಗೆಯನ್ನು ಮೆಲ್ಲನೆ ಮುಟ್ಟಿದೆ ಅಷ್ಟೆ.  ನಿನ್ನ ಮನಸ್ಸಿನಲ್ಲಿ ತುಂಬಿದ್ದ ಭೂತದ ಭಯ ನಿನ್ನಲ್ಲಿ ಆ ಭ್ರಾಂತಿಯನ್ನು ಉಂಟು ಮಾಡಿರಬೇಕು. ನನ್ನ ಮುದ್ದು ತಂಗಿಯ ಕುತ್ತಿಗೆಯನ್ನು ನಾನು ಹಿಸುಕುವುದುಂಟೇ?” – ರಾಜೀವ ಉತ್ತರಿಸಿದ.

ರಾಜೀವ-ಕವಿತಾರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಇಂದಿರಮ್ಮ –

“ರಾಜೀವ, ನಿನ್ನದೇನೋ ಇದೆಲ್ಲಾ ಕಿತಾಪತಿ? ನಿನ್ನದು ತುಂಬಾ ಅತಿಯಾಯಿತು. ಪಾಪ ಎಷ್ಟು ಹೆದರಿ ಬಿಟ್ಟಿದ್ದಾಳೆ ನೋಡು. ಅವಳು ಸುಧಾರಿಸಿಕೊಳ್ಳಲು ಇನ್ನೂ ಒಂದು ವಾರವಾದರೂ ಬೇಕು,  ಇನ್ನು ಮುಂದೆ ಇಂತಹ ತಮಾಷೆಗಳನ್ನು ಮಾಡಬೇಡಪ್ಪಾ ನೀನು” ಎಂದು ಮಗನನ್ನು ಗದರಿದರು.

ಅವಳಿಗೆ ಏನೂ ಆಗಿಲ್ಲಮ್ಮ. ಈಗ ನಾನು ಬಂದಿದೀನಲ್ಲಾ, ಸರಿಯಾಗುತ್ತಾಳೆ ನೋಡ್ತಿರು. ಅವಳು ತಾನು ತುಂಬಾ ಧೈರ್ಯವಂತೆ ಎಂದು ಗರ್ವ ಪಡುತ್ತಿದ್ದಳು. ಈಗ ಅದನ್ನು ಸ್ವಲ್ಪ ಕಡಿಮೆ ಮಾಡಿದ್ದೇನೆ ಅಷ್ಟೆ” – ಎಂದ ಕವಿತಾಳನ್ನು ಕೆಣಕುವ ಧ್ವನಿಯಲ್ಲಿ.

ರಾತ್ರಿಯ ಘಟನೆ ಮತ್ತೊಮ್ಮೆ ಕಣ್ಮುಂದೆ ಬಂದಂತಾಗಿ ಭಯದಿಂದ ನಡುಗಿದಳು ಕವಿತಾ. ಅವಳಲ್ಲಿ ಧೈರ್ಯ ತುಂಬುವವಂತೆ ರಾಜೀವ ಕವಿತಾಳ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡ.

***