ಕಾಗೆಯೊಂದು ಹಾರಿಬಂದು….

ಹೆಸರೇ ಸುನೇತ್ರ! ಆದರೆ ಅವಳ ಸುಂದರ ಕಣ್ಣುಗಳು ತುಂಬಿಕೊಂಡಿರುತ್ತಿದ್ದುದೇ ಹೆಚ್ಚು. ಈ ಬಾರಿ ಆ ಕಣ್ಣೀರಿಗೆ ಹೆಚ್ಚಿನ ಬೆಲೆಯಿತ್ತು. ಅಲ್ಲಿ, ದೂರದಲ್ಲಿ ಅವಳ ಅಪ್ಪ ತೀರಿಕೊಂಡಿದ್ದರು. ಇಲ್ಲಿ ಅವಳನ್ನು ಶವ ನೋಡಲೂ ಹೋಗದಂತೆ ನಿರ್ಬಂಧದಲ್ಲಿರಿಸಲಾಗಿತ್ತು. ಕೊನೆಗೂ ಕೊಟ್ಟ ಮನೆಯ ಕಟ್ಟುಗಳನ್ನು ಬಿಚ್ಚಿಕೊಂಡು ಹುಟ್ಟಿದ ಮನೆಗೆ ಅವಳು ಕಾಲಿಡುವಹೊತ್ತಿಗೆ ಸುನೇತ್ರಳ ಅಪ್ಪ ಮಗಳಿಗೆ ಕಾಯದೆ ಕೊನೆಯ ಮನೆ ಸೇರಿಕೊಂಡಿದ್ದಾಗಿತ್ತು. ಆಗಿನಿಂದ ಸುನೇತ್ರಳ ಎದೆಯಲ್ಲಿ ಕೊರಗು ಮನೆಮಾಡಿತು. ಅಮ್ಮ ಅವಳನ್ನು ಅಪ್ಪಿ ಸಮಾಧಾನಿಸಿದ್ದಳು- ‘ಕಂದಾ, ಹೋಗಲಿಬಿಡೆ. ಮನಸ್ಸಿಗೆ ಹಚ್ಚಿಕೋಬೇಡ. ನಿನ್ನ ತಂದೆಗೆ ನಿನ್ನ ಕಷ್ಟ ಗೊತ್ತಾಗದಿರುತ್ತದಾ? ಸತ್ತವರಿಗೂ ದೇವರ ಥರ ಎಲ್ಲಾ ತಿಳಿವ ಶಕ್ತಿ ಬಂದಿರತ್ತಂತೆ ಕಣೆ.’ ಸುನೇತ್ರಳಿಗೂ ಹೌದೆನ್ನಿಸಿತ್ತು. ತಂದೆಯ ಕರ್ಮಾಂತರಗಳೆಲ್ಲ ಮುಗಿಸಿಕೊಂಡು ಸುನೇತ್ರ ಮನೆಗೆ ಮರಳಿದಳು. ತನ್ನ ದಿನಚರಿಯಲ್ಲಿ ಮುಳುಗಿಹೋದಳು. ಆಗೀಗ ಅಪ್ಪ ಅರಿವಿಗೆ ಕುಟುಕುತ್ತಿದ್ದ. ನಿಂತಲ್ಲಿ, ಕೂತಲ್ಲಿ, ಹೋದಲ್ಲಿ, ಬಂದಲ್ಲಿ ಅವಳಿಗೆ ಅಪ್ಪನನ್ನು ಕಂಡ ಭ್ರಾಂತಿಯಾಗುತ್ತಿತ್ತು. ಅಮ್ಮನ ಮಾತನ್ನು ನೆನೆದು ಅಪ್ಪನನ್ನು ಮರೆಯಲೆಳೆಸುತ್ತಿದ್ದಳು.

ಅಂದೇಕೊ ಮಕ್ಕಳಿಗೆ ಅಂಗಳದಲ್ಲಿಯೇ ಉಣ್ಣುವ ಉತ್ಸಾಹ ಬಂದಿತ್ತು. ‘ಬಿಸಿಲು… ಬೇಡಿರೋ’ ಎಂದು ಅಂಗಲಾಚಿದರೂ ಅಮ್ಮನನ್ನು ಕಾಡಿ ಅಲ್ಲೇ ತಿನ್ನುತ್ತಾ ಕುಳಿತವು. ಮಕ್ಕಳನ್ನು ಕಾಯುತ್ತಾ ಕುಳಿತ ಸುನೇತ್ರಳ ಕೈಯಲ್ಲಿ ಅಕ್ಕಿ ತುಂಬಿದ ಮೊರ. ಆರಿಸಲೆಂದು ತಂದವಳು ಅನ್ಯಮನಸ್ಕಳಾಗಿ ಮನದಲ್ಲೇನೋ ಹೆಣೆದುಕೊಳ್ಳುತ್ತಿದ್ದಳು. ಇದ್ದಕ್ಕಿದ್ದಂತೆ ಕಪ್ಪನೆ ಕಾಗೆಯೊಂದು ಹಾರಿ ಬಂದು ಅವಳ ಎದುರು ಬಂದು ಕುಳಿತಿತು. ಕೈಯಲ್ಲಿದ್ದ ಅಕ್ಕಿಯನ್ನು ಅದರಿಂದ ರಕ್ಷಿಸುವ ಸಲುವಾಗಿ ‘ಹಚ್ಯಾ…..’ ಎನ್ನಳು ಹೋದವಳು, ‘ಹಚ್ಯಾ……’ ಎನ್ನುವುದು ನಾಯಿಗಲ್ಲವೇ ಅನ್ನಿಸಿ ಸುಮ್ಮನಾದಳು. ಕಾಗೆ ಓಡಿಸುವುದು ಹೇಗೆ ಮತ್ತೆ?

ಸುನೇತ್ರಳಿಗೆ ಈಗ ನೆನಪಾಯಿತು. ‘ಹುಶ್…. ಹುಶ್’ ಎಂದು ಬರಿಗೈಯನ್ನು ಬೀಸಿದಳು. ಕಾಗೆ ಬೆಚ್ಚಲಿಲ್ಲ. ಬೆದರಲಿಲ್ಲ. ಸುನೇತ್ರಳ ಎದುರಿನಿಂದ ಕದಲಲಿಲ್ಲ. ಅವಳ ಕಡೆಗೆ ನಿಶ್ಚಲ ನೋಟ ಬೀರಲಾರಂಭಿಸಿತು. ಸುನೇತ್ರಳಿಗೆ ಭಯವಾಯಿತು. ಅವಳು ಕಾಗೆಯ ಕಣ್ಣುಗಳನ್ನು ಇಷ್ಟು ಹತ್ತಿರದಿಂದ ಎಂದೂ ನೋಡಿರಲೇ ಇಲ್ಲ. ಕಾಗೆ ಈಗ ಮಕ್ಕಳ ಕೈಯಲ್ಲಿದ್ದ ತಿನಿಸಿನ ಮೇಲೆ ಕಣ್ಣು ನೆಟ್ಟಿತ್ತು. ‘ಅಯ್ಯೋ, ತಿಂಡಿಯ ಆಸೆಗೆ ಮಕ್ಕಳಿಗೆ ಕುಕ್ಕಿದರೇನು ಗತಿ?’ ಕಂಗಾಲಾದಳು. ಕೈಯಲ್ಲಿದ್ದ ತಟ್ಟೆಯಿಂದ ಹಿಡಿ ಅಕ್ಕಿಯನ್ನು ಎತ್ತಿ ಕಾಗೆಯತ್ತ ತೂರಿದಳು. ಅವಳ ಈ ನಡೆಯನ್ನು ನಿರೀಕ್ಷಿಸದಿದ್ದ ಕಾಗೆ ವ್ಯಗ್ರವಾಯಿತು. ಪಟಪಟ ರೆಕ್ಕೆಗಳನ್ನು ಪಟಗುಟ್ಟಿಸಿ, ಸುನೇತ್ರಳನ್ನು ದುರುಗುಟ್ಟಿ ನೋಡಿ ಹಾರೇಹೋಯಿತು. ಸುನೇತ್ರ ನೋಡುತ್ತಲೇ ಇದ್ದಳು. ‘ಅಮ್ಮಾ, ಅಜ್ಜಿ ಹೇಳಿದ್ಳು ನಂಗೆ, ಸತ್ತವರು ಕಾಗೆಯ ರೂಪದಲ್ಲಿ ಬರುತ್ತಾರಂತೆ. ಹೌದೇನಮ್ಮಾ?’ ಪುಟ್ಟ ಮಗಳ ಪ್ರಶ್ನೆ ಸುನೇತ್ರಳ ಕಿವಿಗೆ ಬಡಿಯಿತು. ‘ಇಲ್ಲ ಪುಟ್ಟಿ, ಸತ್ತವರೆಲ್ಲ ಕಾಗೆಗಳಾಗುತ್ತಾರೆ ಅನ್ನೋದೆಲ್ಲ ಸುಳ್ಳು.’ ಎಂದಳು.

`ಕರಿ ದಿನ’ದ ಬೆಳಗಿಗೆ

`ಯುಗಾದಿ’ ದಿನ ಗೆಳತಿಯಿಂದ ಬಂದಿದ್ದ ಶುಭಾಶಯ ಪತ್ರದಲ್ಲಿ ಬೇಂದ್ರೆಯವರ ಕವಿತೆಯ ಈ ಸಾಲುಗಳು ತಂಪಾದ ನಗು ಬೀರುತ್ತಿದ್ದವು.

ಪ್ರಾರ್ಥನೆ

ಲೇಸೆ ಕೇಳಿಸಲಿ ಕಿವಿಗೆ,
ನಾಲಿಗೆಗೆ ಲೇಸೆ ನುಡಿದು ಬರಲಿ.
ಲೇಸೆ ಕಾಣಿಸಲಿ ಕಣ್ಗೆ,
ಜಗದಲಿ ಲೇಸೆ ಹಬ್ಬುತಿರಲಿ.

ಲೇಸೆ ಕೈಗಳಿಂದಾಗುತಿರಲಿ.
ತಾ ಬರಲಿ ಲೇಸು ನಡೆದು.
ಲೇಸನುಂಡು, ಲೇಸುಸುರಿ,
ಇಲ್ಲಿರಲಿ ಲೇಸೆ ಮೈಯ್ಯ ಪಡೆದು.

-ಅಂಬಿಕಾತನಯದತ್ತ

(ಗಂಗಾವತರಣ ಕವನ ಸಂಕಲನದಿಂದ)

ಎಂಥಹ ಸುಂದರ ಆಶಯ ಹೊತ್ತ ಶುಭಾಶಯ! ಎಲ್ಲೆಡೆಯು ಲೇಸೇ ಲೇಸಾಗಿ ಮೆರೆಯುವಾಗ, ಕೆಟ್ಟತನಕ್ಕೆ ಹಾಸುವರಾರು ಕೆಂಪುಹಾಸು? ಎಲ್ಲರೂ ಒಳ್ಳೆಯ ಮಾತಾಡುತ್ತಾ, ಒಳ್ಳೆಯದನ್ನು ಮಾಡುತ್ತಾ, ಒಳ್ಳೆಯವರಾಗಿಹೋದರೆ ಕೆಟ್ಟವರಿಗಾದರೂ ಏನು ಕೆಲಸ? ಅವರು ಏನಾದರೂ ಸಿಗುವುದೋ ಎಂದು ಅತ್ತಿತ್ತ ನೋಡಿ, ಏನೂ ಸಿಗದೆ, ಹೊತ್ತು ಹೋಗದೆ, ಕೊನೆಗೆ ಒಳ್ಳೆಯವರೇ ಆಗಬೇಕೇನೊ – ಅಣ್ಣಾವ್ರ ಸಿನಿಮಾದಲ್ಲಿ ಚೆನ್ನಾಗಿ ಒದೆ ತಿಂದ ಮೇಲೆ ಒಳ್ಳೆಯವರಾಗುವ ಕೆಟ್ಟವರ ಹಾಗೆ.

ಹೊಸ ವರ್ಷ ನಿಮ್ಮೆಲ್ಲರಿಗೂ ಒಳಿತು ಮಾಡಲಿ, ಒಳಿತನ್ನೇ ನೀಡಲಿ. ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ ಎಂಬ ನಂಬಿಕೆ ನಿಜವಾಗುತ್ತಿರಲಿ. ಶುಭಾಶಯ ಕಳಿಸಿದ ಒಳ್ಳಯ ಮನಸಿನ ಗೆಳತಿಗೆ ಶುಭವಾಗಲಿ.

ಭೂಮಿಗೆ

www.theholidayspot.com

ಎದೆಯು ಬಿರಿದು ಪದವು ಕುಸಿಯೆ
ತಬ್ಬಿ ಹಿಡಿದ ತಾಯಿಯೆ
ಬೇರುಗಳಲಿ ಜೀವ ತುಂಬಿ
ಚಿಗುರ ಪೊರೆದ ಮಾಯೆಯೆ

ಹೂವು ಕೊಟ್ಟು ಹಣ್ಣು ಕೊಟ್ಟು
ಉಪಚರಿಸಿದ ಮಮತೆಯೆ
ಮುತ್ತು ರತ್ನ ವಜ್ರ ಖಚಿತ
ಖ್ಯಾತಿವೆತ್ತ ಘನತೆಯೆ

ಭೂರಮಣರೆಂದು ಮೆರೆದ ಸಾಮ್ರಾಟರ
ಹುಟ್ಟಗಿಸಿ ಹೊಟ್ಟೆಲಿಟ್ಟ ರಾಣಿಯೆ
ದೈತ್ಯ ವೃಕ್ಷ ಬಿಳಿಲುಗಳೇ
ನಿನ್ನ ಹರವಿಕೊಂಡ ವೇಣಿಯೆ?

ಕಾಡಿಬೇಡಿ ಬಂದವರಿಗೆ
ನೀಡಲೆಂದೇ ಅವತರಿಸಿದ ದಾನಿಯೆ
ಬೇಡಿದ್ದೆಲ್ಲ ಮೊಗೆದು ಕೊಟ್ಟು
ಬರಿಗೈಯಾದ ಮಾನಿಯೆ

ವಿಷದು ಉರಿಯ ಒಡಲೊಳಿಟ್ಟು
ಹಸಿರ ನಗುವ ಕರುಣೆಯೆ
ಕಣ್ಮನಗಳಿಗೆ ನಿತ್ಯ ಹಬ್ಬ ನಿನ್ನ ರೂಪ
ಹೂವಿನುಡುಗೆಯುಟ್ಟ ರಮ್ಯ ರಮಣಿಯೆ

ಕೋಟಿಕೋಟಿ ಬರಡು ಗ್ರಹದಿ
ಜೀವಧಾತೆ ನೀನೊಬ್ಬಳೇ ದೇವಿಯೇ
ಮೊಳಕೆ ತರಿಸಿ ಜೀವ ಪೊರೆಯೆ
ಇರುವುದೊಂದೇ ಭೂಮಿಯೇ!

ಮರೆಯಾದ ಮಾಣಿಕ್ಯ

‘ವಂಶವೃಕ್ಷ’ದಿಂದ ಕುಡಿಯೊಡೆಯಿತು
ವಿಷ್ಣು ಎಂಬ ಪ್ರತಿಭೆ
ಚಿತ್ರ ಪ್ರಪಂಚ ಪಾವನವಾಯಿತು
ಪ್ರತಿಫಲಿಸಿ ಅದರ ಪ್ರಭೆ

ಪುಟ್ಟಣ್ಣನವರ ದಕ್ಷ ನಿರ್ದೇಶನ
ಪುಟ ಪಡೆಯಿತು ಅಪ್ಪಟ ಚಿನ್ನ
‘ನಾಗರಹಾವಿನ’ ರಾಮಾಚಾರಿಯನ್ನ
ಎಂದಿಗಾದರೂ ಮರೆವುದುಂಟೇನಣ್ಣ?

ತುಂಟತನದಲಿ ಮಿನುಗುವ ಕಣ್ಣು
ಸಂಪಿಗೆ ಮೂಗು, ಕೆಂಪನೆ ಬಣ್ಣ
ಎಡಗೈ ಬೀಸುತ ನಡೆವುದೇ ಚೆನ್ನು
ಸಾಹಸಸಿಂಹನ ಬೆನ್ನ ಹಿಂದೆ ಅಭಿಮಾನಿ ಗಣ

ಮನೆಯೂ ಬೆಳಗಲು ಮನವೂ ಬೆಳಗಲು
ಕಾರಣಳಾದಳು ಚೆಲುವೆ ಸತಿ ಭಾರತಿ
‘ಹೃದಯ ಗೀತೆ’ಗೆ ಪಲ್ಲವಿ ಬರೆಯಲು
ನೆಪವಾದ ಚಿತ್ರವದು ‘ಭಾಗ್ಯಜ್ಯೋತಿ’

ನಿನ್ನದಲ್ಲದ ತಪ್ಪಿಗೆ ಹೊಗೆಯಾಡಿತು ವಿರಸ
‘ಗಂಧದಗುಡಿ’ಯ ವಿಷಮಯ ನಿಮಿಷ
ನಿರ್ಲಿಪ್ತತೆ ಧರಿಸಿ ಮರೆಸಿದೆ ರೋಷ
ವರುಷಗಳುರುಳಲು ಮಾಸಿತು ದ್ವೇಷ

ಹೊಂಬಿಸಿಲಿನ ಡಾ. ನಟರಾಜ
‘ಬಣ್ಣಾ ಬಣ್ಣಾ’ ಹಾಡಿದ ಪ್ರೇಮಿ ಹರೀಶ
ಸಿಂಗಾಪುರದಲಿ ಕುಳ್ಳನ ರಾಜ
ಆ ಪಾತ್ರಗಳ ನೆನೆವುದೇ ಬಲು ಹರುಷ

ಕನ್ನಡ ಚಿತ್ರರಂಗಕೆ ನೀ ‘ಯಜಮಾನ’
ಹೀರೊ ಎನ್ನಲು ನೀನೇ ಲಾಯಕ್ ‘ಸೂರಪ್ಪ’
ಕಣ್ಣೀರ್ ತರಿಸಿದ ನವಯುಗ ‘ಕರ್ಣ’
`ಕೋಟಿಗೊಬ್ಬ’, ನಿನಗೆ ಸರಿಸಮ ಯಾರಪ್ಪ?

ದುಗುಡವನೆಲ್ಲ ಎದೆಯಲೆ ಅಡಗಿಸಿ
ಕುಸಿಯಿತೇ ನಿನ್ನ ಮೆದು ಹೃದಯ?
ಆ ಯಮನೊಡನೆಯೂ ಹೋರಾಟಕಿಳಿಯದೆ
ಶರಣಾದೆಯೇಕೆ ಒಲವಿನ ಗೆಳೆಯ?

‘ಹೃದಯವಂತ’ನ ಹೃದಯವದೇಕೆ
ಮರೆಯಿತು ತನ್ನ ಮಿಡಿತವನು?
‘ಕಥಾನಾಯಕ’ನ ಕಥೆ ಮುಗಿಯಿತು ಏಕೆ?
ಮಗುಚಿದ ‘ದೇವ’ನು ಕಡತವನು

ನಿನ್ನ ಕಲೆಗೆ ನೀನೇ ಸಾಟಿ
ಮಾಡಿದೆ ಕನ್ನಡ ಜನಮನ ಲೂಟಿ
ಬರಲೇಬೇಕು ನೀ ಮತ್ತೊಮ್ಮೆ ಹುಟ್ಟಿ
ಕಾಯುತ್ತಿರುವುದು ಜನಕೋಟಿ

ಅಲ್ಲಮ, ಮುಕೇಶ್ ಮತ್ತು ಕಿಶೋರ್

ಬೆಟ್ಟಕ್ಕೆ ಚಳಿಯಾದಡೆ
ಏನ ಹೊದಿಸುವಿರಯ್ಯ !
ಬಯಲು ಬತ್ತಲೆಯಾದಡೆ
ಏನನುಡಿಸುವರಯ್ಯ ?
ಭಕ್ತನು ಭವಿಯಾದಡೆ
ಏನನುಪಮಿಸುವೆನಯ್ಯ – ಗುಹೇಶ್ವರ ?

ಅಲ್ಲಮ ಪ್ರಭುವಿನ ಈ ವಚನ ನನ್ನಲ್ಲಿ ಮೂಡಿಸಿರುವ ಬೆರಗು ಅಪಾರ. ಅಲ್ಲಮನ ಇತರ ವಚನಗಳಿಗಿಂತ ಸುಲಭವಾಗಿ ಅರ್ಥವಾಗುವಂತೆಯೇ ಇದೆ. ಬೆಟ್ಟಕ್ಕೆ ಚಳಿಯಾದರೆ ಹೊದಿಸುವುದೇನು? ಬಯಲಿನ ಬೆತ್ತಲೆ ಮುಚ್ಚಲು ಹೊಚ್ಚುವುದೇನು? ಎಲ್ಲಾ ತಿಳಿದ ಭಕ್ತನೇ ಭವಿಯಾಗಿ ಪರಿಣಮಿಸಿದಲ್ಲಿ ಅದಕ್ಕಿಂತ ಅನರ್ಥವೆಲ್ಲಿದೆ ಎಂಬುವ ಅರ್ಥವನ್ನು ಇದು ಹೊಮ್ಮಿಸುತ್ತದೆ. ಆದರೆ, ಈ ಅರ್ಥದ ಜೊತೆಗೇ, ಬೆಟ್ಟಕ್ಕೆ ಚಳಿಯಾಗುವುದಾಗಲೀ, ಬಯಲಿಗೆ ಬಟ್ಟೆಯುಡಿಸುವುದಾಗಲೀ, ಭಕ್ತ ಭವಿಯಾಗುವುದಾಗಲೀ ಎಂದಿಗೂ ಸಾಧ್ಯವಿಲ್ಲವೆಂಬ ಇನ್ನೊಂದು ಅರ್ಥವೂ ಇದೆ.

ಸಕಲ ಚರಾಚರ ವಸ್ತುಗಳಲ್ಲಿಯೂ ಜೀವವಿದೆಯೆಂದು ಭಾವಿಸುವ ನಾವು, ಬೆಟ್ಟಕ್ಕೆ ಚಳಿಯಾದರೆ ಏನು ಹೊದಿಸುವುದೆಂದು ಯೋಚಿಸುವುದಿರಲಿ, ಬೆಟ್ಟಕ್ಕೂ ಚಳಿಯಾಗಬಹುದೆಂಬ ಕಲ್ಪನೆಯೇ ನಮಗೆ ವಿಚಿತ್ರವಾಗಿ ಕಾಣುತ್ತದೆ. ನಮ್ಮ ವರ್ತನೆ ಇರುವುದೇ ಹಾಗೆ. ನಿತ್ಯ ಅವುಗಳಿಂದ ಉಪಯೋಗಪಡೆಯುತ್ತಿದ್ದರೂ ಅವುಗಳೆಡೆಗೆ ನಮ್ಮದು ಕೃತಜ್ಞತಾಹೀನ ನಡತೆಯೇ. ಅವು/ಅವರು ಇರುವುದೇ ನಮಗಾಗಿ ಎಂಬುವ ಟೇಕನ್ ಫಾರ್ ಗ್ರಾಂಟೆಡ್ ಮನೋಭಾವ. ಇರಲಿ, ಆ ಬಗ್ಗೆ ಇಲ್ಲಿ ಹೆಚ್ಚೇನೂ ಹೇಳುವುದಿಲ್ಲ. ಆದರೆ ಪ್ರತಿ ಬಾರಿ ಈ ವಚನದೊಡನೆ ನನಗೆ ನೆನಪಾಗುವ ಮುಖೇಶ್ ಮತ್ತು ಕಿಶೋರ್ ಕುಮಾರ್ ದನಿಯಲ್ಲಿರುವ ಎರಡು ಹಿಂದಿ ಗೀತೆಗಳ ಬಗ್ಗೆ ಹೇಳಬೇಕೆನಿಸುತ್ತಿದೆ. ಇದೂ ಒಂಥರ ‘ಎತ್ತಣ ಮಾಮರ? ಎತ್ತಣ ಕೋಗಿಲೆ?ಯಂತಹ ಸಂಬಂಧವೇ.

ಮೊದನೆಯದು:- (ಚಿತ್ರ : ಅನೋಖಿ ರಾತ್, ಗಾಯಕ: ಮುಕೇಶ್ ) ‘ಓಹ್ ರೆ ತಾಲ್ ಮಿಲೆ ನದಿ ಕೆ ಜಲ್ ಮೆ’ ಹಾಡು. ಅಲ್ಲಿ ಅಲ್ಲಮ ಬಳಸಿದ ಬೆಟ್ಟ, ಬಯಲಿಗೆ ಸರಿಸಾಟಿಯಾಗುವಂತೆ, ಇಲ್ಲಿಯೂ ಬೃಹತ್ ಪ್ರತಿಮೆ ಸಾಗರವಿದೆ. ‘ಸಣ್ಣ ಹಳ್ಳಗಳೆಲ್ಲ ತಮ್ಮ ಗಮ್ಯವನ್ನರಸಿ ನದಿಯತ್ತ ಓಡಿದರೆ, ಓಡುವ ನದಿ ಸಾಗರ ಸೇರಿತು. ಆದರೆ ಸಾಗರ ತನ್ನ ಎದೆಯಳಲನ್ನು ತೋಡಿಕೊಳ್ಳಲು ಮತ್ತಾರ ಆಸರೆ ಬಯಸಿ, ಅದೆಲ್ಲಿ ತಾನೇ ಹೋಗಲಾದೀತು?’

ಎರಡನೆಯದು:- (ಚಿತ್ರ : ಅಮರ ಪ್ರೇಮ್, ಗಾಯಕ: ಕಿಶೋರ್ ಕುಮಾರ್) “ಚಿಂಗಾರಿ ಕೋಯಿ ಬಢಕೆ, ಸಾವನ್ ಉಸೆ ಬುಝಾಯೆ” ಹಾಡು. ಮರಗಿಡಗಳಲ್ಲೇಳುವ ಸಣ್ಣಪುಟ್ಟ ಕಿಡಿಗಳನ್ನು ಶಮನಗೊಳಿಸುತ್ತದೆ ಮಳೆ. ಆದರೆ ಅದೇ ಮಳೆಯೇ ಬೆಂಕಿಯಾಗಿ ಸುರಿಯತೊಡಗಿದರೆ ಅದನ್ನು ಆರಿಸಬಲ್ಲವರು ಯಾರಿಹರು? ಚಳಿಗಾಲದಲ್ಲಿ ನಿರ್ಜೀವವಾಗಿ ತೋರುವ ಹಸಿರು ವಸಂತದಲ್ಲಿ ನಳನಳಿಸುತ್ತದೆ. ಆದರೆ ಅದೇ ವಸಂತವೇ ತೋಟವನ್ನು ನಾಶಪಡಿಸಿದರೆ ಆ ಹಸಿರನ್ನು ನಗಿಸುವವರು ಇನ್ನಾರು? ‘ಮನಮೀತ್ ಜೋ ಘಾವ್ ಲಗಾಯೆ, ಉಸೆ ಕೌನ್ ಮಿಟಾಯೆ?’ ಇದಂತೂ ಜಗತ್ತಿನ ನಿಷ್ಟುರ ಸತ್ಯಗಳಲ್ಲೊಂದು. ಅತಿಯಾಗಿ ಪ್ರೀತಿಸುವವರೇ ನಮ್ಮ ನೋವಿಗೂ ಕಾರಣರಾಗುವುದು ಪ್ರೀತಿಸುವವರ ಪಾಲಿನ ದೊಡ್ಡ ದುರಂತ!

“ಚಿಂಗಾರಿ ಕೋಯಿ ಬಢಕೆ” – ಗೀತೆಯ ಕೆಲವು ನುಡಿಗಳನ್ನು ಅನುವಾದಿಸಲು ಪ್ರಯತ್ನಿಸಿದ್ದೇನೆ. ಈ ಅವಸರದ ಅನುವಾದವನ್ನು ಮತ್ತಷ್ಟು ಉತ್ತಮಪಡಿಸಿಕೊಡಬಲ್ಲವರಿಗೆ ಸ್ವಾಗತ.

ಗಿಡಮರಗಳಿಂದ ಕಿಡಿಗಳುರಿಯೆ
ತಂಪಾಗುವುದು ಸುರಿದು ಮಳೆ
ಮಳೆಯೇ ಬೆಂಕಿಯಾಗಿ ಸುರಿಯೆ
ಮೊರೆಹೋಗುವುದು ಅದಾರನಿಳೆ?

ಶರದದಲಿ ಹಾಳು ಬೀಳುವ ವನ
ನಗಿಸುವುದದನು ವಸಂತನಾಗಮನ
ವಸಂತದಲೇ ಬೀಳಾಗಲು ಹಸಿರು
ತುಂಬುವರಾರು ಅದಕೆ ಉಸಿರು?

ಕೇಳದಿರು ನನ್ನ ಕೇಳದಿರು
ಸ್ವಪ್ನ ಸೌಧ ಕುಸಿದ ಕಥೆಯ
ಪರರೆದುರಲಿ ಹಂಚುವಂತಿಲ್ಲ
ಒಳಗೇ ಮರುಗಿ ನುಂಗಬೇಕಿದೆ ವ್ಯಥೆಯ

ವೈರಿಯೊಬ್ಬ ಇರಿಯೆ ಎದೆಯ
ಮರೆಸಿ ನೋವ ನಗಿಸಲಿರುವ ಗೆಳೆಯ
ಎದೆಯೊಲವೇ ಎದೆಯ ಗಾಯಗೊಳಿಸಲು
ಯಾರಿಂದಲಾದೀತು ಆ ನೋವ ಶಮನಗೊಳಿಸಲು?

*****************************

ಅಮ್ಮಾ, ನಾನು ಜಂಭ ಮಾಡ್ಲಾ?

’ಅಮ್ಮಾ, ನಾನು ಜಂಭ ಮಾಡ್ಲಾ?’ – ಮನೆಮಂದಿಯೊಡನೆ ಟಿವಿಯ ಯಾವುದೋ ಸಿನಿಮಾದಲ್ಲಿ ಮುಳುಗಿದ್ದ ನಾನು ಪುಟ್ಟ ಮಗಳ ವಿಚಿತ್ರ ಕೋರಿಕೆಗೆ ಬೆರಗಾದೆ. ಇದೇನು ಹೊಸ ಆಟ ಕಲಿತಿದೆ ಮಗು? ಎಂದು ಉಳಿದವರಿಗೂ ಕುತೂಹಲ. ‘ಸರಿ ಮಾಡು, ನೋಡೋಣ’ ಎಂದು ಎಲ್ಲರೂ ಅವಳು ತೋರಿಸಲಿರುವ ಜಂಭವನ್ನು ನೋಡಲು ಕುತೂಹಲದಿಂದ ಕಾದೆವು. ನಮ್ಮೆಲ್ಲರ ಗಮನ ತನ್ನತ್ತ ಇದೆ ಎಂದು ಖಚಿತಪಡಿಸಿಕೊಂಡ ನಮ್ಮನೆ ಪುಟಾಣಿ ಪುಟ್ಟಿ, ತುಟಿಯನ್ನು ತಿರುಚಿ, ಸೊಟ್ಟ ಮಾಡಿ, ಎಡಕ್ಕೊಮ್ಮೆ, ಬಲಕ್ಕೊಮ್ಮೆ ತಿರುಗಿಸಿ ಜಂಭ ಮಾಡಿದಳು! ಯಾವುದೋ ಸಿನಿಮಾ ನೋಡಿ ಕಲಿತಿದ್ದಿರಬಹುದಾದ ತನ್ನ ಹೊಸ ವಿದ್ಯೆ ಪ್ರದರ್ಶಿಸಿದ ಹೆಮ್ಮೆ ಅವಳಿಗೆ. ನಮಗೆಲ್ಲಾ ಆ ಬಲು ಮುದ್ದಾದ ಜಂಭ ನೋಡಿ ಇನ್ನಿಲ್ಲದ ನಗು. ‘ಎಲ್ಲಿ ಇನ್ನೊಂದ್ಸಲ ಜಂಭ ಮಾಡು’ ಎಂದು ಮಾಡಿಸಿ, ನೋಡಿನೋಡಿ ಖುಷಿಪಟ್ಟಿದ್ದೆವು. ಮನೆಗೆ ಬಂದ ಅತಿಥಿಗಳಿಗೂ ಪುಟ್ಟಿಯ ಜಂಭ ನೋಡುವ ಯೋಗ!

ವರ್ಷಗಳ ಹಿಂದಿನ ಘಟನೆ ಮತ್ತೆ ನೆನಪಾಗಿದ್ದು, ಕೆಲವು ದಿನಗಳ ಹಿಂದೆ ನಮ್ಮ ಮನೆಗೆ ಬಂದಿದ್ದ ಸ್ನೇಹಿತರ ಮಗುವಿನಿಂದಾಗಿ. ಆ ಮಗು ಕೂಡ ಅಂದು ಮಗಳು ಕೇಳಿದಷ್ಟೇ ಮುಗ್ಧವಾಗಿ, ಮುದ್ದಾಗಿ ‘ಆಂಟಿ, ನಾನು ಸಿಲ್ಲಿ ಫೇಸ್ ಮಾಡ್ಲಾ?’ ಎಂದು ಇಂಗ್ಲಿಷಿನಲ್ಲಿ ಕೇಳಿತು. ಸಿಲ್ಲಿಯಾಗಿ ಯೋಚಿಸುವುದು, ವರ್ತಿಸುವುದೂ ಗೊತ್ತು. ಇದೇನಪ್ಪಾ ಇದು ಸಿಲ್ಲಿ ಫೇಸ್ ಎಂದನ್ನಿಸಿ, ‘ಮಾಡು, ನೋಡ್ತೀನಿ’ ಅಂದೆ. ಆಗ ಮಗು, ಥೇಟ್ ಅಂದು ಮಗಳು ಮಾಡಿದಂತೆಯೇ ತುಟಿ ತಿರುಚಿ, ಸೊಟ್ಟ ಮಾಡಿ ‘ಸಿಲ್ಲಿ ಫೇಸ್’ ಮಾಡಿಯೇಬಿಡ್ತು! ಉಕ್ಕಿ ಬರುವ ನಗುವನ್ನು ನಿಯಂತ್ರಿಸಲೇ ಇಲ್ಲ ನಾನು!

‘ಅರೆ, ಜಂಭ ಮಾಡುವುದೇ ಸಿಲ್ಲಿ!’ ಎಂದು ತಿಳಿಯಲು ಇಷ್ಟು ವರ್ಷ ಬೇಕಾಯಿತೇ ನನಗೆ?

ದಿಗ್ವಿಜಯ ಸಾಧಿಸಿದ ನಮ್ಮ ‘ಕಂಪತಿಗಳು’

ಬರಹಗಾರ ಮಿತ್ರ ಶ್ರೀನಾಥ್ ಭಲ್ಲೆಯವರು, ಕೆಲವು ತಿಂಗಳ ಹಿಂದೆ ಸಂಪದದಲ್ಲಿ ತಮ್ಮ ‘ಕಂಪತಿಗಳು’ ನಾಟಕವನ್ನು ಪ್ರಕಟಿಸಿದ್ದರು. ಬಹಳ ದಿನಗಳಿಂದ, ಚಿಕ್ಕ-ಚೊಕ್ಕದಾಗಿದ್ದು ಸುಲಭವಾಗಿ ಆಡಬಹುದಾದಂತಹ, (ನಿರ್ದೇಶಕರಿಗೆ ಹೆಚ್ಚು ಕಷ್ಟಕೊಡದ) ನಕ್ಕುನಗಿಸುವ ಹಾಸ್ಯ ನಾಟಕಕ್ಕಾಗಿ ಹುಡುಕುತ್ತಿದ್ದ ನನಗೆ, ಅರಸುತ್ತಿದ್ದ ಬಳ್ಳಿ ಕಾಲಿಗೆ ಎಡರಿದಂತಾಯಿತು. ಅದನ್ನು ಓದಿ ಮುಗಿಸುತ್ತಿದ್ದಂತೆಯೇ ಸಂಪದದಲ್ಲೇ ಇರುವ ಖಾಸಗಿ ಸಂದೇಶ ಕಳಿಸುವ ಅನುಕೂಲವನ್ನು ಉಪಯೋಗಿಸಿಕೊಂಡು ಲೇಖಕರ ಅನುಮತಿ ಕೋರಿ ಪತ್ರ ಬರೆದೆ. ನನ್ನ ಕಾಮಿಡಿ ಟೈಮ್ ಅಲ್ಲಿಂದಲೇ ಆರಂಭವಾಯಿತು ಎನ್ನಬಹುದು. ಏಕೆಂದರೆ, ನಾನು ಪತ್ರ ಬರೆದಿದ್ದು ನಾಟಕವನ್ನು ಅಲ್ಲಿ ಪೋಸ್ಟ್ ಮಾಡಿದ್ದ ಲೇಖಕ ಶ್ರೀನಾಥ್ ಭಲ್ಲೆಯವರಿಗಲ್ಲ, ಆ ಪೋಸ್ಟಿಗೆ ಕಾಮೆಂಟ್ ಮೂಲಕ ಉತ್ತರಿಸಿದ್ದ ‘ರಾಘವ’ ಎನ್ನುವ ಸಂಪದಿಗರಿಗೆ. ಸದ್ಯ, ಹಿಂದುಮುಂದು ಒಂದೂ ತಿಳಿಯದ ಆ ಸಂದೇಶ ನೋಡಿ ತಬ್ಬಿಬ್ಬಾಗದೆ ರಾಘವ ಅವರು, ‘ಶ್ರೀನಾಥರ ಒಪ್ಪಿಗೆ ಸಿಗ್ಲಿ, ನಾಟ್ಕ ಆಡ್ಸೋಹಾಗಾಗ್ಲಿ, ಚೆನ್ನಾಗಾಗ್ಲಿ’ ಎಂದುತ್ತರಿಸಿ, ನಮ್ಮ ನಾಟ್ಕಕ್ಕೆ ವಿಷ್ ಮಾಡಿದವ್ರ ಲಿಸ್ಟ್ನಲ್ಲಿ ಫಸ್ಟಾಗೋದ್ರು.

ಶ್ರೀನಾಥ್ ಅವರಿಗೆ ಪತ್ರ ಬರೆದರೆ, ಅವರು ಒಪ್ಪಿಗೆ ನೀಡಿದರು, ಆದರೆ ಭಾರಿ ಸಂಭಾವನೆ ಕೇಳಿಬಿಟ್ರು. ಏನೂಂತೀರಾ? ಆಗ ನನ್ನ ಬ್ಲಾಗಿನಲ್ಲಿ ರಾರಾಜಿಸುತ್ತಿದ್ದ ಗರಿಗರಿ ಕೋಡುಬಳೆ ನೋಡಿ ಪ್ರಭಾವಿತರಾಗಿದ್ರು ಅಂತ ಕಾಣಿಸುತ್ತೆ. ‘ನನಗೆ ಸಂಭಾವನೆ ರೂಪದಲ್ಲಿ ಒಂದು ಡಬ್ಬಿ ಕೋಡುಬಳೆ ಮಾಡಿಕೊಡಿ ಸಾಕು’ ಎಂದು ಗ್ರೀನ್ ಸಿಗ್ನಲ್ ನೀಡಿದರು. ಆಮ್ಯಾಕೆ, ನಂಗೆ ಪರಿಚಯವಿರುವ ವಿದ್ಯಾರಣ್ಯದ ರಂಗೋತ್ಸಾಹಿಗಳ ಗುಂಪಿಗೆ-ರಣೋತ್ಸಾಹಿ ಅಂತ ಓದಿಕೋಬೇಡಿ ಮತ್ತೆ- ‘ಹೀಗೊಂದು ನಗೆನಾಟಕ ಸಿಕ್ಕಿದೆ. ಇದನ್ನೋದುವಾಗ ನಾನಂತೂ ತುಂಬಾ ನಕ್ಕೆ. ನಿಮಗೆ ಆಸಕ್ತಿ ಇದ್ದರೆ ಹೇಳಿ, ನಾಟಕ ಆಡೋಣ’ ಎಂದು ಮೈಲ್ ಕಳಿಸಿದೆ. ತಕ್ಷಣದ ಉತ್ತರದ ನಿರೀಕ್ಷೆಯಲ್ಲೇನೂ ಇರದಿದ್ದ ನಾನು, ‘ನನಗೆ ಆಸಕ್ತಿ ಇದೆ. ನನಗೊಂದು ಪಾರ್ಟು ಕೊಡಿ’ ಎಂದು ಕೂಡಲೇ ಬಂದ ಉತ್ತರಗಳನ್ನು ನೋಡಿ ಪುಳಕಿತಳಾದೆ. ಇರುವ ಕೆಲವೇ ಪಾರ್ಟುಗಳನ್ನು ಹಂಚಿಮುಗಿಸಿದ ಮೇಲೂ ಒಬ್ಬರು, ‘ಹೇಗೂ ನಾಟಕದಲ್ಲಿ ಡಾಕ್ಟ್ರು, ಕಾಂಪೌಂಡರ್ರು ಇದ್ದಾರೆ ಅಂದ್ರಲ್ಲಾ, ರೋಗಿ ಪಾರ್ಟು ನೀವೇ ಸೃಷ್ಟಿಸಿ, ಅದನ್ನು ನನಗೆ ಕೊಡಿ’ ಎಂದು ತಮಾಷೆಯಾಗಿ ಒತ್ತಾಯಿಸಿದರು. ಇನ್ನೊಬ್ಬರು ಇನ್ನೂ ಮುಂದುವರೆದು, ‘ನನಗೆ ಡೈಲಾಗೇ ಬೇಡಬಿಡಿ, ಡೆಡ್ ಪೇಷಂಟ್ ರೋಲ್ ಆದ್ರೂ ಸಾಕು, ಮಾಡಿ ಬಿಸಾಕ್ತೀನಿ’ ಎಂದು ಉದಾರತೆ ಮೆರೆದರು.

ಪಯಣಿಸಿ ಗುರಿ ಸೇರುವುದಕ್ಕಿಂತ, ಪಯಣದ ಹಾದಿಯ ಅನುಭವವೇ ಹೆಚ್ಚು ಖುಷಿ ಕೊಡತ್ತೆ ಅಂತಾರಲ್ಲಾ ಹಾಗೆ, ನಾಟಕ ಆಡುವುದಕ್ಕಿಂತ ಅದರ ತಯಾರಿಯಲ್ಲಿಯೇ ಮಜ ಹೆಚ್ಚು. ಕಾಮಿಡಿ ಅಭ್ಯಾಸದ ವೇಳೆಯಲ್ಲಿ ಹುಟ್ಟಿಕೊಳ್ಳುವ ಕಾಮಿಡಿಗಳಿಗೇನು ಬರ? ಉದಾಹರಣೆಗೆ ಹೇಳ್ತಿದೀನಿ, ಈ ನಾಟಕದಲ್ಲಿ ಒಂದು ಪಾತ್ರ ಹೇಳತ್ತೆ ‘ನನ್ನ ಕಥೆ ಸ್ವಲ್ಪ ಡಿಫೆರೆಂಟು. ಇವಳ ಅಜ್ಜಿ ನನಗೆ ಇಂಟರ್ವ್ಯೂ ಮಾಡಿದ್ದು!’ ಎಂದು, ಅದಕ್ಕೆ ಉತ್ತರವಾಗಿ ಇನ್ನೊಂದು ಪಾತ್ರ, ಮಧ್ಯೆ ಬಾಯಿ ಹಾಕಿ ‘ನೀನು ಹುಡುಗೀನ್ನೇ ಮದುವೆ ಆದಿ ತಾನೇ?’ ಎಂದು ಕೇಳಬೇಕು. ಈ ಸಂಭಾಷಣೆ ನುಡಿಯುವಾಗ ಪಾತ್ರಧಾರಿ ಗಿರೀಶ್ ಸಾಹುಕಾರ್ ಬಾಯಿತಪ್ಪಿ ‘ನೀನು ಅಜ್ಜೀನೆ ಮದುವೆ ಆದಿ ತಾನೆ?’ ಎಂದು ಕೇಳಿ ನಗುವಿನ ಸುನಾಮಿ ಸೃಷ್ಟಿಸಿದ್ದರು. ಅಷ್ಟೇ ಅಲ್ಲ, ಪ್ರತಿ ಅಭ್ಯಾಸದಲ್ಲಿಯೂ ಈ ಮಾತು ಬಂದಾಗ, ಅಲ್ಲಿ ನಗಲಿಕ್ಕೆಂದು ಒಂದು ಕಡ್ಡಾಯ ನಿಲುಗಡೆ. ಪ್ರತಿವಾರದ ರಿಹರ್ಸಲ್ ನೆಪದಲ್ಲಿ ವಾರಕ್ಕೊಂದು ಮನೆಯಲ್ಲಿ ಪುಷ್ಕಳ ಭೋಜನ. ಅಭ್ಯಾಸ ಮೂವತ್ತು ನಿಮಿಷಗಳಾದರೆ ಹೆಚ್ಚು. ಉಳಿದೆರಡು-ಮೂರು ಘಂಟೆಗಳು ತಿಂಡಿ-ಕಾಫಿ-ಊಟ-ಹರಟೆಗೆ ಮೀಸಲು!

(ಡಾಕ್ಟರ್ ಯಮಸುತನಾಗಿ ಶ್ರೀನಿವಾಸರಾವ್ ಮತ್ತು ಕಾಂಪೌಂಡರ್ ಆಗಿ ಜಯಸಿಂಹ) (`ಕಂಪತಿಗಳು’ ಬಳಗ)

ಅಭ್ಯಾಸದ ಕಥೆ ಹೀಗಾದರೆ, ರಂಗಸಜ್ಜಿಕೆಗೆ ಪರಿಕರ ಹೊಂದಿಸಿದ್ದೇ ಇನ್ನೊಂದು ಕಥೆ. ಮೊದಲೆರದು ದೃಶ್ಯ ಮನೆಯ ಪರಿಸರವಾದ್ದರಿಂದ ನಮಗೇನೂ ಕಷ್ಟವಾಗಲಿಲ್ಲ. ಮೂರನೆಯ ದೃಶ್ಯದ್ದೇ ಫಜೀತಿ. ಅದು ಡಾಕ್ಟರು ಶಾಪು. ನಮ್ಮ ತಂಡದಲ್ಲಿ ಒಬ್ಬರಾದರೂ ವೈದ್ಯವೃತ್ತಿಯವರಿಲ್ಲ, ಇದ್ದವರಲ್ಲಿ ಕಂಪತಿ ನಾಟಕಕ್ಕೆ ಹೇಳಿಮಾಡಿಸಿದ ಕಂಪ್ಯೂಟರ್ ಟೆಕ್ಕಿಗಳೇ ಹೆಚ್ಚು. ಆ ದೃಶ್ಯ ‘ಕ್ಲಿನಿಕ್’ ಎಂದು ಪ್ರೇಕ್ಷಕರಿಗೆ ತಿಳಿಯಲು, ಡಾಕ್ಟರಿಗೆ ಕನಿಷ್ಠ ಒಂದು ಸ್ಟೆಥಾಸ್ಕೊಪ್, ಗೋಡೆಯ ಮೇಲೆ ಮಾನವ ದೇಹದ ಭಾಗಗಳಿರುವ ಕೆಲವು ಚಿತ್ರಪಟಗಳನ್ನಾದರೂ ತೂಗುಬಿಡೋಣವೆಂದುಕೊಂಡೆ. ಒಂದಿಬ್ಬರು ವೈದ್ಯ ನೆಂಟರಿಷ್ಟರಿರುವ ಸ್ನೇಹಿತರಲ್ಲಿಯೂ ಈ ಬಗ್ಗೆ ವಿನಂತಿಸಿಕೊಂಡಿದ್ದೆ. ನನ್ನ ಗ್ರಹಚಾರಕ್ಕೆ ನಾಟಕದ ದಿನ ಹತ್ತಿರ ಬಂದರೂ ಒಂದೂ ಕೈಸೇರಲಿಲ್ಲ. ಸ್ಟೆಥಾಸ್ಕೋಪ್‍ಗಾಗಿ ಮಕ್ಕಳ ಆಟಿಕೆಗಳಿರುವ ಅಂಗಡಿ, ವಾಲ್‍ ಗ್ರೀನ್, ಅಲ್ಲಿಇಲ್ಲಿ ಹುಡುಕಿ ಅಲೆದಿದ್ದೇ ಬಂತು. ಯಾರೋ ‘ಡಾಲರ್ ಶಾಪಿನಲ್ಲಿ ಸಿಗಬಹುದು ನೋಡಿ’ ಎಂದರು. ಇನ್ನ್ಯಾರೋ ‘ಹ್ಯಾಲೊವಿನ್ ಶಾಪಿನಲ್ಲಿ ನೋಡಿ’ ಅಂದರು. ಡಾಲರ್ ಸ್ಟೆಥಾಸ್ಕೋಪು ಧರಿಸುವ ವೈದ್ಯರ ಕರ್ಮಕ್ಕೆ ಮರುಗುತ್ತಲೇ ಅಲ್ಲಿಗೂ ಹೋದೆ. ಸಿಕ್ಕಲಿಲ್ಲ.

ನಾಟಕದ ಹಿಂದಿನ ದಿನ ನನಗೆ ದಂತವೈದ್ಯರಲ್ಲಿಗೆ ಹೋಗುವುದಿತ್ತು. ಸ್ಟೆಥಾಸ್ಕೋಪ್ ಸಿಕ್ಕದ ಚಿಂತೆಯಲ್ಲಿ ಡಾಕ್ಟರ್ ಮುಂದೆ ಬಾಯೆ ತೆರೆದುಕೂತಿದ್ದ ನನಗೆ ಇದ್ದಕ್ಕಿದ್ದಂತೆ ಮೆದುಳಿನಲ್ಲಿ ಬಲ್ಬ್ ಹೊತ್ತಿದಂತಾಯಿತು. ಸ್ಕ್ರೂ ಡ್ರೈವರು, ಕಟ್ಟಿಂಗ್ ಪ್ಲೇಯರು ಮುಂತಾದ ಹತಾರಗಳನ್ನು ಅವರು ಹೊರತೆರೆದು ಬಾಯಿ ತೆರವಾಗುತ್ತಿದ್ದಂತೆಯೆ, ‘ಡೆಂಟಿಸ್ಟ್ ಹತ್ರ ಸ್ಟೆಥಾಸ್ಕೋಪ್ ಇರಲಾರದು ಕಣೆ’ ಎಂದಿದ್ದ ಗೆಳತಿ ಜ್ಯೋತಿಯ ಸಂಶಯವನ್ನೂ ನಿರ್ಲಕ್ಷಿಸಿ (ಉಸಿರಾಡ್ತಿರೋ ರೋಗಿಗಳಿಗೆ ಮಾತ್ರ ಹಲ್ಲಿನ ಚಿಕಿತ್ಸೆಯ ಅಗತ್ಯವೆಂಬ ನನ್ನದೇ ಲಾಜಿಕ್ಕಿನಿಂದ), “ಡಾಕ್ಟ್ರೇ, ನಮ್ಮ ನಾಟಕಕ್ಕೆ ಸ್ಟೆಥಾಸ್ಕೋಪ್ ಬೇಕಿತ್ತು. ಇದ್ದರೆ ದಯವಿಟ್ಟು ಕೊಡ್ತೀರಾ? ಏನು ಹಾಳುಮಾಡದೆ ಜೋಪಾನವಾಗಿ ತಂದುಕೊಡ್ತೀನಿ” ಎಂದು ಕೇಳಿಯೇಬಿಟ್ಟೆ ಭಂಡಧೈರ್ಯದಿಂದ. ‘ಅಲ್ರೀ, ಯಾರಾದ್ರೂ ನಾಟಕಕ್ಕೆ ಬೇಕೂಂತ ಡಾಕ್ಟರನ್ನೇ ನಿಜವಾದ ಸ್ಟೆಥಾಸ್ಕೋಪ್ ಕೇಳ್ತಾರೇನ್ರೀ, ನಿಮಗೇನು ಬುದ್ಧಿ ಇಲ್ವಾ?’ ಎಂದೆಲ್ಲಿ ಬೈತಾರೋ ಎಂದು ಹೆದರಿಕೊಂಡು ಕೂತಿದ್ದೆ. ಸದ್ಯ, ಕಂಪತಿಗಳ ಮೇಲೆ ಅವರಿಗೂ ಸಿಂಪತಿ ಬಂತೂಂತ ಕಾಣತ್ತೆ. ಡಾಕ್ಟ್ರು, ಗೋಡೌನಿನಂತಿದ್ದ ತಮ್ಮ ರೆಕಾರ್ಡ್ ರೂಮಿನೊಳಗೆ ನುಗ್ಗಿ ಒಂದು ಸ್ಟೆಥಾಸ್ಕೋಪ್ ಹುಡುಕಿ ತಂದೇ ಬಿಟ್ಟಾಗ ನನಗಾದ ಆನಂದ, ಆಂಜನೇಯ ಸಂಜೀವಿನಿ ಪರ್ವತ ಹೊತ್ತುತಂದಾಗ ರಾಮನಿಗಾದ ಆನಂದಕ್ಕಿಂತ ಒಂದೆರಡು ಔನ್ಸ್ ಹೆಚ್ಚೇ ಇರಬಹುದು.

ಅದೇ ಖುಷಿಯಲ್ಲಿ ಸಾಯಂಕಾಲವಿದ್ದ ಸ್ಟೇಜ್ ರಿಹರ್ಸಲ್ ಕೂಡ ಮುಗಿಸಿದೆ. ಆದರೆ ಮಾನವ ಅಂಗಗಳ ಪಟ ಇನ್ನೂ (ಅನಾಟಮಿ ಚಾರ್ಟ್) ಸಿಕ್ಕಿರಲಿಲ್ಲ. ವೈದ್ಯಾಲಯಗಳಲ್ಲಿ ನೋಡಿದ್ದ, ಮನುಷ್ಯನ ದೇಹದಲ್ಲೆಲ್ಲೂ ಹರಡಿರುವ ನರವ್ಯೂಹವಿರುವ ಚಿತ್ರವೊಂದನ್ನು ನಾನು ಬಯಸಿದ್ದೆ. ಅದೇ ಗುಂಗಿನಲ್ಲಿ ದಾರಿಯಲ್ಲಿ ಕಂಡುಬಂದ ವಾಲ್ ಮಾರ್ಟ್ ಹೊಕ್ಕೆವು. ನಾವು ಹುಡುಕಿ ಸಿಗದಾಗ ಅಲ್ಲೇ ಇದ್ದ ಉದ್ಯೋಗಿಯೊಬ್ಬಳಲ್ಲಿ ವಿಚಾರಿಸಿದೆವು. ಆ ಚಾರ್ಟಿಗೆ ಏನೆನ್ನಬೇಕಿತ್ತೋ, ಅದರ ತಾಂತ್ರಿಕ ಹೆಸರೇನೋ ತಿಳಿಯದೆ ನಾವೇನು ಕೇಳಿದೆವೋ, ಅವಳಿಗೆ ಅದಾವ ಕಹಿ ನೆನಪು ಕಾಡಿತೋ, ಅವಳು ಸಹಾಯ ಮಾಡುವ ಬದಲು ಅಲ್ಲೇ ಸುಳಿದಾಡುತ್ತಿದ್ದ ಪೋಲಿಸಿನವನನ್ನು ಕರೆದುಬಿಟ್ಟಳು. ಅವನ ಪ್ರಶ್ನೆಗಳಿಗೆ ಒಪ್ಪುವಂಥ ಉತ್ತರ ಕೊಟ್ಟು ‘ಬದುಕಿದೆಯಾ ಬಡಜೀವವೇ!’ ಎಂದು ಬರಿಗೈಯಲ್ಲಿ ಹಿಂತಿರುಗಿದೆವು. ಅಲ್ಲಾ, ಅವಳದಾದರೂ ಏನು ತಪ್ಪು? ಅರ್ಧ ರಾತ್ರಿಯಲ್ಲಿ, ‘ಕಂದುಬಣ್ಣದ’ ದಂಪತಿಗಳಾದ ನಾವು ‘ಮನುಷ್ಯ ಬಾಡಿ ಪಾರ್ಟ್ಸ್’ ಇರುವ ಚಾರ್ಟಿಗಾಗಿ ಪೆದ್ದುಪೆದ್ದಾಗಿ ಹುಡುಕುತ್ತಿದ್ದರೆ ಅವಳಿಗಾದರೂ ಅನುಮಾನ ಬರದಿದ್ದೀತೇ? ಅದೂ ಅಲ್ಲದೆ, ಅಂದಿನ ತಾರೀಖು ೯/೧೧ ಬೇರೆ!

ಕೊನೆಗೆ, ನಮ್ಮ ವಿದ್ಯಾರಣ್ಯದ ಅಧ್ಯಕ್ಷೆ ಉಷಾ ಅವರ ಪುಟ್ಟ ಮಗ ಅಂಕುಶ್ ಶಾಲೆಯ ಪ್ರಾಜೆಕ್ಟಿಗಾಗಿ ಮಾಡಿದ ಎರಡು ಚಿತ್ರಗಳನ್ನು ತಂದುಕೊಟ್ಟರು. ಸಮಯದಲ್ಲಿ ನೆರವಾದ ಉಷಾ ಅವರಿಗೆ ಧನ್ಯವಾದಗಳು. ಅದಕ್ಕೇ ಪುಷ್ ಪಿನ್ ಚುಚ್ಚಿ ಡಾಕ್ಟರ್ ಶಾಪಿನ ಗೋಡೆಗೆ ಅಂಟಿಸಿದೆವು. ಅದು ತುಂಬಾ ಹಳೆಯದಾದ್ದರಿಂದ, ಪಾಪ! ಆ ಕಾಗದದ ಮನುಷ್ಯನಿಗೆ ಎಡಗೈ ಇತ್ತು, ಬಲಗೈ ಇರಲೇ ಇಲ್ಲ. ‘ಒಕ್ಕಲಿಲ್ಲದ ಊರಿಗೆ ಬಂದರು ಮೂವರು ಕುಂಬಾರರು ಇಬ್ಬರು ಚೊಂಚರು ಒಬ್ಬಗೆ ಕೈಯೇ ಇಲ್ಲ’ ಎಂದು ಹಾಡಿದ ದಾಸರಾಯರು ನೆನಪಾದರು. ನಾಟಕದ ಪ್ರದರ್ಶನಕ್ಕೆ ಕೆಲವೇ ನಿಮಿಷಗಳಿದ್ದರೂ, ನಮ್ಮ ನಾಟಕದ ಪಾತ್ರಧಾರಿಗಳಲ್ಲೊಬ್ಬರು, ಸ್ವತಃ ಉತ್ತಮ ಕಲಾಕಾರರೂ ಆಗಿರುವ ಅರುಣ್ ಮೂರ್ತಿಯವರು ‘ಏನೂ ಪರವಾಗಿಲ್ಲ ಬಿಡಿ. ಎಲ್ಲಾದರೂ ಒಂದು ಕಾಗದ ಸಿಕ್ಕರೆ ಇನ್ನೊಂದು ಕೈ ಮಾಡೇಬಿಡ್ತೀನಿ’ ಎಂದರು ಉತ್ಸಾಹದಿಂದ. ಅವರಿಗಿದ್ದ ಹುಮ್ಮಸ್ಸು ನನಗಿಲ್ಲದ ಕಾರಣ, ಭೋಜನ ವಿರಾಮಕ್ಕೆ ಹೋಗಿದ್ದ ಜನರೆಲ್ಲರು ಊಟ ಮುಗಿಸಿಕೊಂಡು ಬರುವ ಹೊತ್ತಿಗೆ ನಮ್ಮೆಲ್ಲಾ ತಯಾರಿ ಮುಗಿಯಬೇಕಾಗಿದ್ದರಿಂದ, “ಏನೂ ಬೇಡ, ಹೇಗೂ ತಿಕ್ಕಲು ಡಾಕ್ಟರ್ ತಾನೇ? ನಡೆಯತ್ತೆ ಬಿಡಿ.” ಎಂದು ಚೆನ್ನಾಗಿದ್ದ ಇನ್ನೊಂದು ಕೈಯನ್ನೂ ಹಿಂದೆ ಮಡಿಸಿ ಪಿನ್ ಹಾಕಿಸಿದೆ. ವೈದ್ಯಾಲಯಕ್ಕೆ ಸಂಬಂಧಿಸಿದ ಒಂದೆರಡು ಫಲಕಗಳನ್ನು ಅರುಣ್ ಅವರೇ ಬರೆದು ಅಂಟಿಸಿದ ಮೇಲೆ, ಸುಮಾರಾಗಿ ‘ಇದು ಕ್ಲಿನಿಕ್ ಇದ್ದರೂ ಇರಬಹುದು’ ಅನ್ನಿಸುವ ವಾತಾವರಣ ಮೂಡಿತು.

ಆದರೆ ನಮ್ಮ ಪಡಿಪಾಟಲು ಏನೇ ಇರಲಿ, ನಾಟಕ ಮಾತ್ರ ಅದ್ಭುತವಾಗಿ ಮೂಡಿ ಬಂದಿತು. ಇದರಲ್ಲಿಯ ನಗೆ ಸಂಭಾಷಣೆಗಳಿಗೆ ಸ್ಪಂದಿಸುವ ಮೂಲಕ ವಿದ್ಯಾರಣ್ಯದ ಸದಸ್ಯರು ಉತ್ತಮ ಪ್ರತಿಕ್ರಿಯೆ ನೀಡಿದರು. ನಾಟಕಕ್ಕೆ ಪ್ರೇಕ್ಷಕರು ನೀಡಿದ ಪ್ರೋತ್ಸಾಹದಿಂದ ನಟರು ಮೈದುಂಬಿ, ಮನದುಂಬಿ ನಟಿಸಿದರು. ಅಲ್ಲಿಗೆ ನಮ್ಮೆಲ್ಲರ ಪ್ರಯತ್ನಕ್ಕೆ ಪೂರ್ಣ ಪ್ರತಿಫಲ ಸಂದಾಯವಾಗಿತ್ತು. ಈವರೆಗೆ ಕೆಲವು ನಾಟಕಗಳಲ್ಲಿ ನಟಿಸಿದ ಅನುಭವವಿದ್ದ ನನಗೆ ನಿರ್ದೇಶಕಿಯಾಗಿ ಇದೇ ಮೊದಲ ತೊದಲು. ಆದರೆ, ನಮ್ಮ ತಂಡದಲ್ಲಿದ್ದ ಪ್ರತಿಭಾವಂತ ನಟ-ನಟಿಯರಿಗೆ ನಿರ್ದೇಶನದ ಅಗತ್ಯವೇ ಇರಲಿಲ್ಲವೆನ್ನಿ.

ಒಟ್ಟಿನಲ್ಲಿ, ಒಂದು ನಾಟಕ ಯಶಸ್ಸು ಗಳಿಸಿದರೆ ಅದು ಕೊಡುವ ಸಂತಸ, ಆತ್ಮವಿಶ್ವಾಸ ಬಹುಕಾಲ ಉಳಿಯುವಂತದ್ದು. ಈ ಸಾರ್ಥಕ ಕ್ಷಣಗಳನ್ನು ನನ್ನ ಬದುಕಿಗೆ ತಂದುಕೊಟ್ಟ ನಮ್ಮ ತಂಡದ ಎಲ್ಲಾ ಕಲಾವಿದರಿಗೂ (ಅರುಣ್, ಶ್ರೀನಿ, ಕಿರಣ್, ಗಿರೀಶ್, ಜಯಸಿಂಹ, ಆಶಾ, ಚಿತ್ರ, ಉಮಾ) ನಾನು ಋಣಿ. ನಮಗೆಲ್ಲರಿಗೂ ನಾಟಕದ ಹುಚ್ಚು ಹಚ್ಚಿಸಿ, ಆ ಕಿಚ್ಚು ಆರದಂತೆ ಆಗೀಗ ನಾಟಕಗಳನ್ನು ಆಡಿಸುತ್ತಾ ಬಂದಿರುವ, ಈವರೆಗೆ ಹಲವಾರು ಉತ್ತಮ ನಾಟಕಗಳನ್ನು ರಂಗಕ್ಕೆ ತಂದಿರುವ ವಿದ್ಯಾರಣ್ಯದ ಪ್ರಕಾಶ್ ಹೇಮಾವತಿಯವರೇ ಈ ನಾಟಕ ಆಡಿಸಲು ನನಗೆ ಸ್ಪೂರ್ತಿ. ತೆರೆಯ ಮುಂದೆ ಬರದೆ, ಹಿಂದೆಯೇ ಉಳಿಯಬಯಸುವ ಅವರ ಸೌಜನ್ಯಭರಿತ ವರ್ತನೆ ಬಹಳ ಕಡಿಮೆ ಜನರಲ್ಲಿ ಮಾತ್ರ ಕಂಡುಬರುವಂಥದ್ದು.

ಶ್ರೀನಾಥ್ ಭಲ್ಲೆಯವರೆ, ನಿಮಗೆ ಈ ಮೂಲಕ ಮತ್ತೊಮ್ಮೆ ಹೃತ್ಪೂರ್ವಕ ಧನ್ಯವಾದ. ನೀವು ಇನ್ನಷ್ಟು ಇಂತಹ ಭರಪೂರ ಕಾಮಿಡಿಗಳನ್ನು ಬರೆದುಕೊಡಿ. ಆಡಲು ನಮ್ಮ ವಿದ್ಯಾರಣ್ಯದ ಉತ್ಸಾಹಿ ತಂಡ ಸಿದ್ಧವಾಗಿದೆ. ಅದೇ ನಿಮ್ಮ ಸಂಭಾವನೆ…. ಕೋಡುಬಳೆ ತಾನೇ? ಕೊಡೋಣಂತೆ ಬಿಡಿ. ಯಾವಾಗ ಅಂತ ಕೇಳಬೇಡಿ ಅಷ್ಟೆ. 🙂

ಕೊನೆಯದಾಗಿ ಮತ್ತು ಮುಖ್ಯವಾಗಿ,

‘ರೆಕ್ಕೆ ಇದ್ದರೆ ಸಾಕೇ?
ಹಕ್ಕಿಗೆ ಬೇಕು ಬಾನು
ಬಯಲಲಿ ತೇಲುತ ತಾನು
ಮ್ಯಾಲೆ ಹಾರೋಕೆ’ –

ಎನ್ನುವ ಎಚ್ಚೆಸ್ವಿಯವರ ಕವನದಂತೆ, ನಮ್ಮೆಲ್ಲರ ಉತ್ಸಾಹ, ಆಸೆ, ಕನಸುಗಳನ್ನು ಸಾಕಾರಗೊಳಿಸಲು ಸುಂದರ ವೇದಿಕೆ ಒದಗಿಸಿಕೊಡುವ ನಮ್ಮ ವಿದ್ಯಾರಣ್ಯ ಕನ್ನಡ ಕೂಟಕ್ಕೆ ಜೈ ಹೋ!

ಕಂಪತಿಗಳು – ಚಿತ್ರ ಸಂಪುಟ

(ಬಾಲ, ಪ್ರಶಾಂತ, ನಳನಾಗಿ ಗಿರೀಶ್ ಸಾಹುಕಾರ್, ಅರುಣ್ ಮೂರ್ತಿ ಮತ್ತು ಕಿರಣ್ ರಾವ್) (ಇಳಾ, ಮಾಲಾ, ಶಾಂತರಾಗಿ ಉಮಾ, ಆಶಾ, ಚಿತ್ರ)