ಕರುಣಾಳು, ಬಾ, ಬೆಳಕೇ, ಮುಸುಕಿದೀ ಮಬ್ಬಿನಲಿ,
ಕೈ ಹಿಡಿದು ನಡೆಸೆನ್ನನು.
ಇರುಳು ಕತ್ತಲೆಯ ಗವಿ; ಮನೆ ದೂರ; ಕನಿಕರಿಸಿ,
ಕೈ ಹಿಡಿದು ನಡೆಸೆನ್ನನು.
ಹೇಳಿ ನನ್ನಡಿಯಿಡಿಸು; ಬಲು ದೂರ ನೋಟವನು
ಕೇಳೆನೊಡನೆಯೆ-ಸಾಕು ನನಗೊಂದು ಹೆಜ್ಜೆ.
ಮುನ್ನ ಇಂತಿರದಾದೆ; ನಿನ್ನ ಬೇಡದೆ ಹೋದೆ,
ಕೈ ಹಿಡಿದು ನಡೆಸು ಎನುತ.
ನನ್ನ ದಾರಿಯ ನಾನೆ ನೋಡಿ ಹಿಡಿದೆನು; – ಇನ್ನು,
ಕೈ ಹಿಡಿದು ನಡೆಸು ನೀನು.
ಮಿರುಗುಬಣ್ಣಕೆ ಬೆರೆತು, ಭಯಮರೆತು, ಕೊಬ್ಬಿದೆನು;
ಮೆರೆದಾಯ್ತು; ನೆನೆಯದಿರು ಹಿಂದಿನದನೆಲ್ಲ.
ಇಷ್ಟು ದಿನ ಸಲಹಿರುವೆ ಈ ಮೂರ್ಖನನು ನೀನು; ಮುಂದೆಯೂ
ಕೈ ಹಿಡಿದು ನಡೆಸದಿಹೆಯಾ?
ಕಷ್ಟದಡವಿಯ ಕಳೆದು, ಬೆಟ್ಟ ಹೊಳೆಗಳ ಹಾದು,
ಇರುಳನ್ನು ನೂಕದಿಹೆಯಾ?
ಬೆಳಗಾಗ ಹೊಳೆಯದೆ ಹಿಂದೊಮ್ಮೆ ನಾನೊಲಿದು
ಈ ನಡುವೆ ಕಳಕೊಂಡ ದಿವ್ಯ ಮುಖ ನಗುತ?
***
ಮೂಲ : John Henry Newman (1801-90), “The Pillar of the Cloud”
ಅನುವಾದ : ಬಿ.ಎಂ.ಶ್ರೀ