deepa.gif

ಮನುಷ್ಯನಿಗಿರುವ ಹಲವಾರು ಮೂಲಭೂತವಾದ ಭಯಗಳಲ್ಲಿ ಒಂದು ಈ ಕತ್ತಲೆಯ ಭಯ. ಚಿಕ್ಕಮಕ್ಕಳಂತೂ ಕತ್ತಲೆಗೆ ಭಯಪಡುವಷ್ಟು ಇನ್ನು ಯಾವ ಗುಮ್ಮನಿಗೂ ಹೆದರುವುದಿಲ್ಲ. ಕತ್ತಲೆ ಎಂದರೆ ಭಯ, ಅಜ್ಞಾನಕ್ಕೆ ಸಂಕೇತವಾದರೆ, ಬೆಳಕು ನೆಮ್ಮದಿ, ಕ್ಷೇಮಭಾವಗಳಿಗೊಂದು ಸುಂದರ ರೂಪಕ. ಬೆಳಕು ಎಲ್ಲ ಒಳಿತುಗಳಿಗೊಂದು ಭವ್ಯ ಸಂಕೇತ! ಬೆಳಕು ಎಂದರೆ ಅರಿವು. ಬೆಳಕು ಎಂದರೆ ಆಸೆ. ಬೆಳಕೇ ಒಂದು ಸಂಭ್ರಮ. ಬೆಳಕು ಏನಲ್ಲ? ಬೆಳಕೇ ಎಲ್ಲಾ! ಅಂಧಕಾರದಲ್ಲಿ ಮುಳುಗಿದ ನಮ್ಮೆಲ್ಲರ ಮನಸ್ಸು ಆರ್ತವಾಗಿ ಮೊರೆಯಿಡುವುದು “ಕರುಣಾಳು ಬಾ ಬೆಳಕೇ, ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು” ಎಂದೇ. ಎಲ್ಲಾ ಧರ್ಮಗಳು, ವೇದವೇದಾಂತಗಳು ಅಂತಿಮವಾಗಿ ಬೋಧಿಸುವುದೂ ಅದನ್ನೇ- “ತಮಸೋಮಾ ಜ್ಯೋತಿರ್ಗಮಯ” ಎಂಬ ದಿವ್ಯಮಂತ್ರವನ್ನು!

ಈ ಅರಿವಿನ ಬೆಳಕು ಹೊರಗಿನಿಂದ ಬರುವುದಲ್ಲ, ಒಳಗೇ ಇರುವುದು. ನಮ್ಮೊಳಗಿರುವ ಅಜ್ಞಾನದ ಕತ್ತಲನ್ನು ಹೊಡೆದೋಡಿಸುವ ಈ ಜ್ಞಾನಜ್ಯೋತಿ ಆಗಾಗ, ತನ್ನ ಹೊಂಬೆಳಕನ್ನು ಕಳೆದುಕೊಂಡು ಮಸುಕಾಗುವುದುಂಟು. ಅದನ್ನು ವರುಷಕ್ಕೊಮ್ಮೆ ಹೊಸ ಎಣ್ಣೆ, ಬತ್ತಿಗಳಿಂದ ನವೀಕರಿಸಿಕೊಳ್ಳುವ ಹಬ್ಬವೇ ಈ ದೀಪಾವಳಿ. ಇದು ನಲಿವಿನ ಹಬ್ಬ. ಜನಮಾನಸದಲ್ಲಿ ನವೀನ ಕನಸುಗಳನ್ನು ಬಿತ್ತಿಬೆಳೆಯುವ ಗೆಲುವಿನ ಹಬ್ಬ. ಎಲ್ಲಾ ಹಬ್ಬಗಳು ಸಂತಸವನ್ನೇ ಹೊತ್ತು ತರುತ್ತವಾದರೂ, ದೀಪಾವಳಿ ಕೊಡುವ ಖುಷಿಯೇ ಬೇರೆ ರೀತಿಯದು. ದೀಪಾವಳಿ ಹಬ್ಬಗಳ ರಾಜ. ಅದು ವರುಷಕ್ಕೊಮ್ಮೆ ಬರುವ ಅರಸು ದೀಪಾವಳಿ!

Diwali...Festival-of-Lights

ನಮ್ಮ ಹಬ್ಬಗಳ ವಿಶೇಷತೆ ಏನೆಂದರೆ, ಎಲ್ಲಾ ಹಬ್ಬಗಳಿಗೂ ಒಂದೊಂದು ಸುಂದರ ಹಿನ್ನಲೆ ಇರುತ್ತದೆ. ಆ ಹಬ್ಬದ ಆಚರಣೆಗೆ ಯಾವುದೋ ಪೌರಾಣಿಕ ಘಟನೆ ಕಾರಣವಾಗಿರುತ್ತದೆ. ಅಲ್ಲೊಂದು ರಮ್ಯ, ರೋಮಾಂಚಕ ಕಥೆ ಅಡಗಿರುತ್ತದೆ. ದೀಪಾವಳಿಯೂ ಇದಕ್ಕೆ ಹೊರತಲ್ಲ. ಈ ಹಬ್ಬದ ಜೊತೆಗೂ ಅನೇಕ ಕಥೆಗಳು ತಳುಕು ಹಾಕಿಕೊಂಡಿವೆ. ನರಕಾಸುರನೆಂಬ ರಾಕ್ಷಸನು ಶ್ರೀಕೃಷ್ಣನ ಕೈಯಿಂದ ಹತನಾದ ದಿನದಂದು ‘ನರಕ ಚತುರ್ದಶಿ’ ಆಚರಿಸುತ್ತೇವೆ. ‘ಬಲಿಪಾಡ್ಯ’, ಹೆಸರೇ ಸೂಚಿಸುವಂತೆ ಬಲಿಚಕ್ರವರ್ತಿಗೆ ಸಂಬಂಧಿಸಿದ್ದು.

ವಿಭೀಷಣನ ಮನೆಗೆ ಶ್ರೀರಾಮ ಬಂದಂತೆ, ವಿದುರನ ಮನೆಗೆ ಶ್ರೀಕೃಷ್ಣ ಬಂದಂತೆ, ಅಂದು ಬಲಿಯ ಮನೆಯ ಮುಂದೆ ವಾಮನ ಬಂದು ನಿಂತಿದ್ದಾನೆ. ಅದೂ ನೋಡಿದವರ ಮನದಲ್ಲಿ ಮುದ್ದು ಉಕ್ಕಿಸುವಂತಹ ಮೋಹಕ ರೂಪದಲ್ಲಿ. ವಟುರೂಪಿ ವಾಮನ ಬಲಿಯನ್ನು ಕೇಳಿಕೊಂಡಿದ್ದು ತನ್ನ ಪುಟ್ಟ ಪಾದಗಳಲ್ಲಿ ಮೂರು ಹೆಜ್ಜೆಗಳನ್ನು ಮಾತ್ರ. ನಂತರ ಗಿಡ್ಡ ವಾಮನ ದೊಡ್ಡ ತ್ರಿವಿಕ್ರಮನಾಗಿ ಬೆಳೆದು, ನೆಲಮುಗಿಲುಗಳನ್ನು ಆವರಿಸಿ ನಿಂತು ಬಲಿಯನ್ನು ಕೇಳುತ್ತಿದ್ದಾನೆ- “ಹೇಳೋ, ನನ್ನ ಮೂರನೆಯ ಹೆಜ್ಜೆಯನ್ನು ಈಗ ಎಲ್ಲಿಡಲಿ?” ಆಕಾಶ ಭೂಮಿಗಳನ್ನು ಏಕವಾಗಿಸಿ ನಿಂತಿರುವ ಶ್ರೀಹರಿಯ ಭವ್ಯರೂಪ ಕನಕದಾಸರ ಕಲ್ಪನೆಯಲ್ಲಿ, ಕನ್ನಡ ಮಣ್ಣಿಗೆ ಒಗ್ಗುವ, ಹಿಗ್ಗು ಕುಣಿತದ ಹಳ್ಳಿಹಾಡಾಗಿದೆ, ಹೀಗೆ-

ಹುಡುಗ ಹಾರುವನಾಗಿ ನಮ್ಮ ರಂಗ
ಬೆಡಗಿಲಿ ಮುಗಿಲಿಗೆ ಬೆಳೆದಾನ್ಮ್ಯ
ಬೆಡಗಿಲಿ ಮುಗಿಲಿಗೆ ಬೆಳೆದು ಬಲಿಯನ್ನು
ಅಡಿಯಿಂದ ಪಾತಾಳಕ್ಕೊತ್ತಾನ್ಮ್ಯ
ದೇವಿ ನಮ್ಮ ದ್ಯಾವರು ಬಂದರು
ಬನ್ನೀರೆ ನೋಡಬನ್ನೀರೆ

ದೇವದಾನವರೆಲ್ಲ ಉಸಿರು ಬಿಗಿಹಿಡಿದು, ಕಣ್ಣೆವೆ ಇಕ್ಕದಂತೆ ನೋಡನೋಡುತ್ತಿದ್ದಂತೆಯೇ ನಡೆದೇಹೋಯಿತು, ಭರತಖಂಡದ ಜನಮನದಲ್ಲಿ ಅಜರಾಮರವಾಗಿ ಉಳಿದುಹೋಗಬಹುದಾದಂತಹ ಮಹಾ ಬಲಿದಾನ! ಭಲೇ! ಭಲೇ! ಬಲಿರಾಯ! “ನಿನ್ನ ದಾನವೇ ನಿನ್ನ ಕಾಯಿತಯ್ಯಾ!”

ಬಲಿ ನಾವು ಕೇಳಿ ತಿಳಿದ ಇತರ ದಾನವರಂತೆ ಲೋಕಕಂಟಕನಲ್ಲ. ಆದರೆ ಇಂದ್ರ ಪದವಿಯನ್ನು ಬಯಸಿದ್ದ ಮಹತ್ವಾಕಾಂಕ್ಷಿ. ಅಲ್ಪಸ್ವಲ್ಪ ಗರ್ವ, ಅಹಂಕಾರಗಳಿದ್ದರೂ, ಅದೇನೂ ಬಲಿಯ ಸ್ವಯಾರ್ಜಿತವಲ್ಲ. ಅದು ತಲೆಮಾರುಗಳಿಂದ ಹರಿದುಬಂದಿದ್ದ ಆಸ್ತಿ. ಏಕೆಂದರೆ ಬಲಿ ಅಹಂಕಾರದ ಪ್ರತಿರೂಪವಾದ ಹಿರಣ್ಯಕಶಿಪುವಿನ ವಂಶದಲ್ಲಿ ಹುಟ್ಟಿಬಂದವನು. ಆ ಅಳಿದುಳಿದ ಕಳಂಕವನ್ನೂ ವಾಮನನಿಂದ ಕಳೆದುಕೊಂಡು, ಬಲಿ ಈಗ ಶುದ್ಧಾತ್ಮನಾಗಿ ಹೋದ. ತ್ಯಾಗ, ದಾನಕ್ಕೊಂದು ಅನುಪಮ ಉಪಮಾನವಾಗಿ ಹೋದ. ತಲೆಯಿಂದ ಇಳಿದುಬಂದಿದ್ದ ದುರಭಿಮಾನ, ತಲೆಯಿಂದಲೇ ಇಳಿದುಹೋದ ಆ ಅಮೃತ ಘಳಿಗೆಯನ್ನು ಬಣ್ಣಿಸುತ್ತಾ, ಕವಿ ಶಿವರುದ್ರಪ್ಪನವರು ಸುಂದರವಾಗಿ ಬರೆಯುತ್ತಾರೆ-

ಇದ್ದೊಂದು ಅಭಿಮಾನ
ತಲೆಯಿಂದ ಇಳಿದಿತ್ತು
ಹರಿಪಾದ ಸ್ವರ್ಶದಲಿ ಪಾತಾಳಕೆ!

ಬಲಿಗೆ ಭುವಿಯ ಮೇಲಿದ್ದ ತನ್ನ ಸಾಮ್ರಾಜ್ಯದ ಮೇಲೆ ಇನ್ನಿಲ್ಲದ ವ್ಯಾಮೋಹ. ಪ್ರತಿ ದೀಪಾವಳಿಯಂದು ತನ್ನ ರಾಜ್ಯವನ್ನು ನೋಡಲು, ಸುಖ ಸಮೃದ್ಧಿಯಿಂದಿರುವಂತೆ ಹರಸಿ ಹೋಗಲು, ಅವನು ಭೂಮಿಗೆ ಬರುತ್ತಾನಂತೆ. ಅವನ ಆಗಮನದಿಂದ ಭೂತಾಯಿಗೂ ಪರಮಾನಂದ. ಆಗ ಕಟ್ಟದೆಯೂ ಕಪಿಲೆ ಕರೆಯುತ್ತದಂತೆ, ಬಿತ್ತದೆಯೂ ಭೂಮಿ ಬೆಳೆಯುತ್ತದಂತೆ. ಬಲಿ ಶೂರ, ಸುಂದರ, ಮಹಾ ಅಭಿಮಾನಿ. ತನ್ನ ಸಾಮ್ರಾಜ್ಯಕ್ಕೆ ಭೇಟಿ ಕೊಡಲು ಬರುವಾಗ, ಅವನು ಹೇಗೆಲ್ಲ ಅಲಂಕರಿಸಿಕೊಂಡು ಜರ್ಬಾಗಿ ಬರಬಹುದು? ನಮ್ಮ ಜನಪದರು ಬಲಿಯ ಗತ್ತು, ಗೈರತ್ತುಗಳನ್ನು ತಮ್ಮ ಮುಗ್ಧ ಕಣ್ಣುಗಳಿಂದ ಕಂಡಿದ್ದು ಹೀಗೆ-

ಪಟ್ಟೆಯ ಧೋತ್ರವನುಟ್ಟು
ಮುತ್ತಿನಂಚಿನ ಕೊಡೆ ಹಿಡಿದು
ಬೆಳ್ಳಿ ಕುದುರೆಯನೇರಿ
ಬಲಿ ಬಂದನೆ ಅರಮನೆಗೆ

ಇಷ್ಟೆಲ್ಲಾ ಸಿಂಗಾರಗೊಂಡು ಬರುವ ಸೊಗಸುಗಾರ ಬಲಿಚಕ್ರವರ್ತಿಯನ್ನು ಎದುರುಗೊಳ್ಳಲು ನಿಂತಿರುವವರಾದರೂ ಯಾರು? ಇನ್ನು ಯಾರು, ಅವನೇ! “ಹೂವ ತರುವರ ಮನೆಗೆ ಹುಲ್ಲ ತರುವೆ” ಎಂದು ಕಟಿಬದ್ಧನಾಗಿ ನಿಂತಿರುವ ಸಾಕ್ಷಾತ್ ಶ್ರೀಕೃಷ್ಣ, ತನ್ನ ಪರಮಭಕ್ತನಾದ ಬಲಿಯನ್ನು ಸ್ವಾಗತಿಸಲು, ದ್ವಾರಪಾಲಕನಂತೆ ಬಾಗಿಲಿನಲ್ಲಿ ಕಾದುಕೊಂಡು ನಿಂತಿರುತ್ತಾನಂತೆ! ಭಕ್ತವತ್ಸಲನೆಂಬ ಬಿರುದು ಹೊತ್ತ ಮೇಲೆ ಅಷ್ಟೂ ಮಾಡದಿದ್ದರೆ, ಆ ಬಿರುದು ಉಳಿಯುವುದಾದರೂ ಇನ್ನು ಹೇಗೆ?

ಶ್ರೀ ಮಹಾ ಭಕ್ತನೆಂದೆನಿಸಿ
ಧರೆಯ ರಕ್ಷಿಪ ದೊರೆಯೆನಿಸಿ
ಶ್ರೀರಮಣ ಬಾಗಿಲು ಕಾಯ್ದ
ಬಲಿ ಬಂದನೆ ಅರಮನೆಗೆ!

ದೀಪಾವಳಿಯ ವಿಶೇಷವೆಂದರೆ ತೈಲಾಭ್ಯಂಜನ (ಎಣ್ಣೆಸ್ನಾನ). ತಲೆಗೆ ಮೂರು ಬೊಟ್ಟು ಎಣ್ಣೆ ಒತ್ತಿಕೊಂಡು, ಎರೆದುಕೊಂಡ ಶಾಸ್ತ್ರ ಮಾಡುವ ನಗರ ಪ್ರದೇಶದವರಿಗೆ ಈ ಅಭ್ಯಂಜನದ ವೈಭವ ಗೊತ್ತಿರಲಾರದು. ಅಭ್ಯಂಜನದ ಸೊಗಸು ಏನೆಂಬುದನ್ನು ಅನುಭವಿಸಲು ನೀವು ನಮ್ಮ ಮಲೆನಾಡಿಗೇ ಬರಬೇಕು. ಅಂದಿನ ದಿನ ಉಣ್ಣುವ ಊಟದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ನಡೆಯುತ್ತದೆ. ಅಭ್ಯಂಜನದಲ್ಲಿ ಮಾತ್ರ ಕಿಂಚಿತ್ತೂ ವ್ಯತ್ಯಯವಾಗುವಂತಿಲ್ಲ. ಕುವೆಂಪುರವರ “ಅಜ್ಜಯ್ಯನ ಅಭ್ಯಂಜನ” ಪ್ರಬಂಧವನ್ನು ಓದಿದ್ದವರಿಗೆಲ್ಲ ತಿಳಿದೇ ಇರುತ್ತದೆ- ಮಲೆನಾಡಿಗರ ಅಭ್ಯಂಜನ ಪ್ರೇಮ! ಮದುವೆಯಾಗಿ ಮೊದಲ ವರ್ಷ ಹಬ್ಬಕ್ಕೆ ಅಳಿಯ ಬರುವ ಪದ್ಧತಿ ಇದೆ. ಹೀಗೆ ಬಂದ ಅಳಿಯಂದಿರು ಬಾಯಿಲರ್, ಬಕೀಟುಗಳಲ್ಲಿ ಸ್ನಾನ ಮಾಡಿಕೊಂಡು, ನಯ ನಾಜೂಕಿನಲ್ಲಿ ಬೆಳೆದು ಬಂದ ಸಿಟಿಯವರಾಗಿದ್ದರೆ, ಭಾವ-ಮೈದುನಂದಿರ ಕೈಯಲ್ಲಿ ಎಣ್ಣೆಸ್ನಾನಕ್ಕೆ ಸಿಕ್ಕಿಕೊಳ್ಳುವ ಅವರ ಪಾಡು ದೇವರಿಗೇ ಪ್ರೀತಿ!

ದೀಪಾವಳಿ ವಿವಾಹಿತರ ಪಾಲಿಗೆ ಜೀವನ ಪರ್ಯಂತ ಸುಂದರ ನೆನಪಾಗಿ ಕಾಡುವ ಹಬ್ಬ. ನಮ್ಮ ಬಹುಪಾಲು ಹಬ್ಬಗಳನ್ನು ಗಂಡನ ಮನೆಯಲ್ಲೇ ಆಚರಿಸುವ ಸಂಪ್ರದಾಯವಿದ್ದರೆ, ಮೊದಲನೆಯ ದೀಪಾವಳಿಗೆ ಮಾತ್ರ ತವರೂರ ತಣ್ಣನೆಯ ನೆರಳು! ಅತ್ತೆಮನೆಯ ಕಟ್ಟುಪಾಡುಗಳಿಂದ ಮುಕ್ತವಾಗಿ ತಂದೆ, ತಾಯಿ, ಅಕ್ಕ, ಅಣ್ಣಂದಿರ ವಾತ್ಸಲ್ಯದ ವಜ್ರಕವಚದೊಳಗೆ ನಡೆಯುವ ಹಬ್ಬದಲ್ಲಿ ವಿನೋದ, ವಿಲಾಸವಲ್ಲದೆ ಮತ್ತಾವ ಅಹಿತ ಭಾವನೆಗೆ, ಅಸಮಾಧಾನಕ್ಕೆ ಅವಕಾಶವಿದ್ದೀತು?

ಕರುಳಿಗೆ ಅಂಟಿಕೊಂಡ ಈ ಎಲ್ಲಾ ನಂಟುಗಳ ಜೊತೆಯಲ್ಲಿ, ಆಗಷ್ಟೇ ಹೃದಯಕ್ಕೆ ಬೆಸೆದುಕೊಂಡಿರುವ ಹೊಸನೆಂಟ- ಅವನು! ಮದುವೆಯಾಗಿ ಇನ್ನೂ ವರ್ಷ ಕೂಡ ತುಂಬಿರುವುದಿಲ್ಲವಾದ್ದರಿಂದ ಹೊಸತನ, ಅಪರಿಚಿತ ಭಾವ ಪೂರ್ತಿ ಮಾಯವಾಗಿರುವುದಿಲ್ಲ. ಹೊಸ ಮದುಮಕ್ಕಳ ನಡುವೆ ಆತ್ಮೀಯ ಬಂಧವೊಂದನ್ನು ಬೆಸೆಯುವುದು ಕೂಡ ಈ ಹಬ್ಬದ ಉದ್ದೇಶವಿರಬಹುದೇನೊ. ಚಿನಕುರಳಿ ಮಾತು, ಹೂಬಾಣ ನೋಟಗಳ ನಡುನಡುವೆ ಹೊತ್ತಿ ಉರಿಯುವ ಕಿರುನಗೆಯ ಮತಾಪುಗಳು! ಸಿಹಿಯೂಟ, ಸವಿನೋಟದೊಡನೆ ಮೂರು ದಿನದ ಹಬ್ಬ ಮೂರೇ ಕ್ಷಣದಂತೆ, ಸುಂದರ ಸ್ವಪ್ನವೊಂದರಂತೆ ಸರಿದು ಹೋಗಿರುತ್ತದೆ. ಬದುಕೆಂಬ ಸುವರ್ಣ ಸಂಪುಟದ, ಮೊದಲ ಅಧ್ಯಾಯದ, ಮಧುರ ಪುಟಗಳಾಗಿ ಸೇರಿಹೋಗುವ ಈ ದೀಪಾವಳಿ, ಬಾಳಿನಲ್ಲಿ ಎಂದೆಂದಿಗೂ ಮರೆಯದ ದೀಪಾವಳಿ!

ಈ ಬದುಕು ಕೆಲವರ ಪಾಲಿಗೆ ಮಾತ್ರ ಹೂವು ಚೆಲ್ಲಿದ ಹಾದಿಯಾದರೆ, ಮತ್ತೆ ಹಲವರ ಪಾಲಿಗೆ ನೋವು ತುಂಬಿಕೊಂಡ ಕತ್ತಲ ಬೀದಿ. ಈ ದಾರಿಯಲ್ಲಿ ಕಣ್ಣು ಕಾಣದೆ ತಡವರಿಸಿ ಬೀಳುತ್ತಿರುವಾಗ, ಆಸೆಯ ಬೆಳಕು ಬೀರುವ ಕಿರುದೀಪವೊಂದು ಜೊತೆಯಲ್ಲಿದ್ದರೆ, ಆಗ ಬದುಕು ಅಷ್ಟೊಂದು ಭಾರವೆನಿಸುವುದಿಲ್ಲ. ಕಗ್ಗತ್ತಲ ರಾತ್ರಿ ಕಳೆದ ಮೇಲೆ ಮುಂದೆ ಬರಬೇಕಾಗಿರುವುದು ಶುಭ ಸೂರ್ಯೋದಯವೇ ಅಲ್ಲವೆ?

“ಬಾಳು ಎಂದರೇನು? ನಾಳೆಗಳ ಧ್ಯಾನ. ನಾಳೆಯೆಂದರೇನು? ನಿನ್ನೆಗಳ ಮೌನ.”- ಅನ್ನುತ್ತದೆ ಒಂದು ಹಾಡು. ಈ ಮಾತು ಅದೆಷ್ಟು ನಿಜ! ನಿನ್ನೆ, ನಾಳೆಗಳ ನಡುವೆ ಕ್ಷಣಕ್ಷಣಗಳಾಗಿ ಉರುಳಿ, ಕೊನೆಗೆಲ್ಲೊ ಮುಕ್ತಾಯವಾಗಿ ಹೋಗುವ ಈ ಜೀವನಯಾನದಲ್ಲಿ, ಭರವಸೆಯ ಬೆಳಕೊಂದು ಮುಂದಿನ ದಾರಿಯನ್ನು ನಮಗೆ ನಿಚ್ಚಳವಾಗಿ ತೋರುತ್ತಿರಲಿ, ಅಷ್ಟು ಸಾಕು!

ಈ ದೀಪಾವಳಿ ನಮ್ಮೆಲ್ಲರ ನಾಳೆಗಳಿಗೆ ಅಂತಹದೊಂದು ನಂಬಿಕೆಯನ್ನು, ನೆಮ್ಮದಿಯನ್ನು ಪ್ರೀತಿಯಿಂದ ಕರುಣಿಸಿ ಬಿಡಲಿ!
***
ನವೆಂಬರ್, ೧೦ ,೨೦೦೪ – ದಟ್ಸ್ ಕನ್ನಡ `ತುಳಸಿವನ’

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.