ಉದಯವಾಗಲಿ ಚೆಲುವ ಕನ್ನಡನಾಡು

ಕವಿ –  ಹುಯಿಲಗೋಳ ನಾರಾಯಣರಾವ್

ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು
ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು.

ರಾಜನ್ಯರಿಪು ಪರಶುರಾಮನಮ್ಮನ ನಾಡು
ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು
ಓಜೆಯಿಂ ಮೆರೆದರಸುಗಳ ಸಾಹಸದ ಸೂಡು
ತೇಜವನು ನಮಗೀವ ವೀರವೃಂದದ ಬೀಡು.

ಲೆಕ್ಕಿಗಮಿತಾಕ್ಷರರು ಬೆಳೆದು ಮೆರೆದಿಹ ನಾಡು
ಜಕ್ಕಣನ ಶಿಲ್ಪಕಲೆಯಚ್ಚರಿಯ ಕರುಗೋಡು
ಚೊಕ್ಕಮತಗಳ ಸಾರಿದವರಿಗಿದು ನೆಲೆವೀಡು
ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು.

ಪಾವನೆಯರಾ ಕೃಷ್ಣೆ ಭೀಮೆಯರ ತಾಯ್ನಾಡು
ಕಾವೇರಿ ಗೋದೆಯರು ಮೈದೊಳೆವ ನಲುನಾಡು
ಆವಗಂ ಸ್ಪೂರ್ತಿಸುವ ಕಬ್ಬಿಗರ ನಡೆಮಾಡು
ಕಾವ ಗದುಗಿನ ವೀರನಾರಾಯಣನ ಬೀಡು

6 thoughts on “ಉದಯವಾಗಲಿ ಚೆಲುವ ಕನ್ನಡನಾಡು”

  1. ಶ್ರೀ ಅವರೆ,
    ಕಾವೇರಿ ಗೋದೆಯರು ಮೈದಳೆವ ನಾಡು ಆಗಬೇಕಿತ್ತು.
    ಇರಲಿ, ಇಂದು ಈ ಪುಣ್ಯ ನದಿಗಳು ಕೂಡ ಪಾಪಿಷ್ಟರ ಪಾಪ ಕಳೆಯುತ್ತಾ, ತಮ್ಮ ಮೈತೊಳೆದುಕೊಳ್ಳಬೇಕಾದ ಸ್ಥಿತಿ ಇರೋದ್ರಿಂದ ನೀವು ಬರೆದಿದ್ದು ತಪ್ಪಲ್ಲ ಅನ್ಸುತ್ತೆ. 🙂

    ಅದಿರಲಿ,
    ಉದಯ ಆಗಲಿ ಚೆಲುವ ಅಂದಿದ್ದಾರಲ್ಲಾ… ಉದಯನೇಕೆ ಚೆಲುವ ಆಗಿಲ್ಲವೇ?
    (ಕನ್ನಡ ನಾಡು ಅಲ್ಲೇ ಇರುತ್ತೆ. ಕನ್ನಡಿಗರು ನವೆಂಬರ್‌ನಲ್ಲಿ ಹೆಸರು ಪಡೆಯುತ್ತಾರೆ…..)

  2. sritri says:

    ಅಸತ್ಯಾನ್ವೇಷಿಗಳೇ, ಅದು “ಮೈದಳೆವ” ಎಂದಿರಬೇಕಿತ್ತೇ? ಪಿ.ಕಾಳಿಂಗರಾಯರು ಹಾಡಿರುವ ಹಾಡಿನಲ್ಲಿ ಮೈದೊಳೆವ ಎಂದು ಕೇಳಿಸುತ್ತದೆ,  ಮತ್ತು ಇಲ್ಲೂ  ಹಾಗೇ ಇದೆಯಲ್ಲಾ? ಮತ್ತೊಮ್ಮೆ ಅನ್ವೇಷಣೆ ಮಾಡಿ,ಖಚಿತ ಪಡಿಸುತ್ತೀರಾ? 🙂

  3. “ರಾಜನ್ಯರಿಪು ಪರಶುರಾಮ ನಮ್ಮ ನಾಡು”
    ಈ ಸಾಲು “ರಾಜನ್ಯರಿಪು ಪರಶುರಾಮನಮ್ಮನ ನಾಡು” ಎಂದಾಗಬೇಕು.

    ಪರಶುರಾಮನ ಅಮ್ಮ ಅಂದರೆ ರೇಣುಕೆ ಕರ್ನಾಟಕದವಳು (ಸವದತ್ತಿಯವಳು?) ಎಂಬ ನಂಬಿಕೆ ಇದೆ.

  4. sritri says:

    ಧನ್ಯವಾದಗಳು ಜೋಶಿಯವರೆ.

    ದಟ್ಸ್ ಕನ್ನಡದಲ್ಲಿ “ಪರಶುರಾಮನಮ್ಮನ ನಾಡು” ಅಂತ ಇರುವುದನ್ನು ನೋಡಿದೆ. ಆದರೆ ಅದರ ಅರ್ಥ ಹೀಗಿರಬಹುದು ಎಂದು ತಿಳಿದಿರಲಿಲ್ಲ. ಇಲ್ಲಿಯವರೆಗೂ “ಪರಶುರಾಮ ನಮ್ಮ ನಾಡು” ಎಂದೇ ತಿಳಿದಿದ್ದೆ.  ಹೊಸ ಅರ್ಥದಿಂದ ಈ ಕವನ ಹೊಸದಾಗಿ ಕಾಣುತ್ತಿದೆ!

  5. “ರಾಜನ್ಯರಿಪು” ಅಂದರೆ ಏನು? ನಾನು ಪಿ. ಕಾಳಿಂಗರಾಯರ ಹಾಡನ್ನ ಕೇಳುವಾಗ ಅದು “ಅಜನ್ಯರಿಪು” ಅಂತ ಅಂದುಕೊಂಡಿದ್ದೆ. ಆದರೆ, ರಾಜನ್ಯರಿಪು ಇದೆ ಅಂತ ಇತ್ತೀಚೆಗೆ ಅಷ್ಟೇ ಗೊತ್ತಾಗಿದ್ದು.

    1. sritri says:

      ‘ರಾಜನ್ಯ’ ಎಂದರೆ ನಾ ತಿಳಿದಂತೆ ಕ್ಷತ್ರಿಯ, ದೊರೆ ಎನ್ನುವ ಅರ್ಥವಿದೆ. ರಿಪು = ಶತ್ರು . ಪರಶುರಾಮ ಕ್ಷತ್ರಿಯರ ವೈರಿಯಾಗಿ, ಹಲವಾರು ಬಾರಿ ದಂಡಯಾತ್ರೆ ಮಾಡಿ ಅವರನ್ನು ಸದೆಬಡಿದಿದ್ದರಿಂದ, ‘ರಾಜನ್ಯರಿಪು’ ಎಂಬುದನ್ನು ವಿಶೇಷಣದಂತೆ ಬಳಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಕನ್ನಡ ಪದಗಳು – ಜಿ.ಪಿ.ರಾಜರತ್ನಂಕನ್ನಡ ಪದಗಳು – ಜಿ.ಪಿ.ರಾಜರತ್ನಂ

ಕವನ -ಕನ್ನಡ ಪದಗಳು ಕವಿ – ಜಿ. ಪಿ. ರಾಜರತ್ನಂ ಹಾಡು ಕೇಳಿ – ಯೆಂಡ ಯೆಡ್ತಿ ಕನ್ನಡ ಪದಗೊಳ್   ಅಂದ್ರೆ ರತ್ನಂಗ್ ಪ್ರಾಣ ! ಬುಂಡೇನ್ ಎತ್ತಿ ಕುಡುದ್ಬುಟ್ಟಾಂದ್ರೆ-   ತಕ್ಕೋ ! ಪದಗಳ್ ಬಾಣ !   

ಇಷ್ಟುಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ…ಇಷ್ಟುಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ…

ಕವಿ – ಎಚ್. ಎಸ್. ವೆಂಕಟೇಶಮೂರ್ತಿ ಗಾಯಕಿ – ಪಲ್ಲವಿ ಅರುಣ್ ಹಾಡು ಕೇಳಿ ಇಷ್ಟುಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ ಅರಿತೆವೇನು ನಾವು ನಮ್ಮ ಅಂತರಾಳವ? ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ ನೀರಿನಾಳ ತಿಳಿಯಿತೇನು ಹಾಯಿದೋಣಿಗೆ? ಸದಾಕಾಲ ತಬ್ಬುವಂತೆ ಮೇಲೆ

ನಿಜದ ಸಂತಸದಲ್ಲಿ – ಕೆ.ಎಸ್.ನರಸಿಂಹಸ್ವಾಮಿನಿಜದ ಸಂತಸದಲ್ಲಿ – ಕೆ.ಎಸ್.ನರಸಿಂಹಸ್ವಾಮಿ

ಹಾಡು ಕೇಳಿ ನಿಜದ ಸಂತಸದಲ್ಲಿ ಬಿರಿದ ಮಲ್ಲಿಗೆಯಿಂದ ಬರುವ ಕಂಪಿನ ಹೆಸರು ಪ್ರೇಮವೆಂದು ನೀಲಾಂತರಿಕ್ಷದಲಿ ಹೊಳೆವ ನಕ್ಷತ್ರಗಳ ಕಣ್ಣಸನ್ನೆಯ ಹೆಸರು ಪ್ರೇಮವೆಂದು ಹಸಿರು ಬಯಲಿಗೆ ಇಳಿದ ಬಿಳಿಬಿಳಿಯ ಹಕ್ಕಿಗಳ ದೂರದಿಂಪಿನ ಹೆಸರು ಪ್ರೇಮವೆಂದು ಮಾಲಗಣ್ಣಿನ ಹೆಣ್ಣೆ ನಿನ್ನ ತುಟಿಯಿಕ್ಕೆಲದಿ ಮಂದಹಾಸದ ಹೆಸರು