ಕವಿ –  ಹುಯಿಲಗೋಳ ನಾರಾಯಣರಾವ್

ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು
ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು.

ರಾಜನ್ಯರಿಪು ಪರಶುರಾಮನಮ್ಮನ ನಾಡು
ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು
ಓಜೆಯಿಂ ಮೆರೆದರಸುಗಳ ಸಾಹಸದ ಸೂಡು
ತೇಜವನು ನಮಗೀವ ವೀರವೃಂದದ ಬೀಡು.

ಲೆಕ್ಕಿಗಮಿತಾಕ್ಷರರು ಬೆಳೆದು ಮೆರೆದಿಹ ನಾಡು
ಜಕ್ಕಣನ ಶಿಲ್ಪಕಲೆಯಚ್ಚರಿಯ ಕರುಗೋಡು
ಚೊಕ್ಕಮತಗಳ ಸಾರಿದವರಿಗಿದು ನೆಲೆವೀಡು
ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು.

ಪಾವನೆಯರಾ ಕೃಷ್ಣೆ ಭೀಮೆಯರ ತಾಯ್ನಾಡು
ಕಾವೇರಿ ಗೋದೆಯರು ಮೈದೊಳೆವ ನಲುನಾಡು
ಆವಗಂ ಸ್ಪೂರ್ತಿಸುವ ಕಬ್ಬಿಗರ ನಡೆಮಾಡು
ಕಾವ ಗದುಗಿನ ವೀರನಾರಾಯಣನ ಬೀಡು

7 thoughts on “ಉದಯವಾಗಲಿ ಚೆಲುವ ಕನ್ನಡನಾಡು”

  1. ಶ್ರೀ ಅವರೆ,
    ಕಾವೇರಿ ಗೋದೆಯರು ಮೈದಳೆವ ನಾಡು ಆಗಬೇಕಿತ್ತು.
    ಇರಲಿ, ಇಂದು ಈ ಪುಣ್ಯ ನದಿಗಳು ಕೂಡ ಪಾಪಿಷ್ಟರ ಪಾಪ ಕಳೆಯುತ್ತಾ, ತಮ್ಮ ಮೈತೊಳೆದುಕೊಳ್ಳಬೇಕಾದ ಸ್ಥಿತಿ ಇರೋದ್ರಿಂದ ನೀವು ಬರೆದಿದ್ದು ತಪ್ಪಲ್ಲ ಅನ್ಸುತ್ತೆ. 🙂

    ಅದಿರಲಿ,
    ಉದಯ ಆಗಲಿ ಚೆಲುವ ಅಂದಿದ್ದಾರಲ್ಲಾ… ಉದಯನೇಕೆ ಚೆಲುವ ಆಗಿಲ್ಲವೇ?
    (ಕನ್ನಡ ನಾಡು ಅಲ್ಲೇ ಇರುತ್ತೆ. ಕನ್ನಡಿಗರು ನವೆಂಬರ್‌ನಲ್ಲಿ ಹೆಸರು ಪಡೆಯುತ್ತಾರೆ…..)

  2. ಅಸತ್ಯಾನ್ವೇಷಿಗಳೇ, ಅದು “ಮೈದಳೆವ” ಎಂದಿರಬೇಕಿತ್ತೇ? ಪಿ.ಕಾಳಿಂಗರಾಯರು ಹಾಡಿರುವ ಹಾಡಿನಲ್ಲಿ ಮೈದೊಳೆವ ಎಂದು ಕೇಳಿಸುತ್ತದೆ,  ಮತ್ತು ಇಲ್ಲೂ  ಹಾಗೇ ಇದೆಯಲ್ಲಾ? ಮತ್ತೊಮ್ಮೆ ಅನ್ವೇಷಣೆ ಮಾಡಿ,ಖಚಿತ ಪಡಿಸುತ್ತೀರಾ? 🙂

  3. “ರಾಜನ್ಯರಿಪು ಪರಶುರಾಮ ನಮ್ಮ ನಾಡು”
    ಈ ಸಾಲು “ರಾಜನ್ಯರಿಪು ಪರಶುರಾಮನಮ್ಮನ ನಾಡು” ಎಂದಾಗಬೇಕು.

    ಪರಶುರಾಮನ ಅಮ್ಮ ಅಂದರೆ ರೇಣುಕೆ ಕರ್ನಾಟಕದವಳು (ಸವದತ್ತಿಯವಳು?) ಎಂಬ ನಂಬಿಕೆ ಇದೆ.

  4. ಧನ್ಯವಾದಗಳು ಜೋಶಿಯವರೆ.

    ದಟ್ಸ್ ಕನ್ನಡದಲ್ಲಿ “ಪರಶುರಾಮನಮ್ಮನ ನಾಡು” ಅಂತ ಇರುವುದನ್ನು ನೋಡಿದೆ. ಆದರೆ ಅದರ ಅರ್ಥ ಹೀಗಿರಬಹುದು ಎಂದು ತಿಳಿದಿರಲಿಲ್ಲ. ಇಲ್ಲಿಯವರೆಗೂ “ಪರಶುರಾಮ ನಮ್ಮ ನಾಡು” ಎಂದೇ ತಿಳಿದಿದ್ದೆ.  ಹೊಸ ಅರ್ಥದಿಂದ ಈ ಕವನ ಹೊಸದಾಗಿ ಕಾಣುತ್ತಿದೆ!

  5. “ರಾಜನ್ಯರಿಪು” ಅಂದರೆ ಏನು? ನಾನು ಪಿ. ಕಾಳಿಂಗರಾಯರ ಹಾಡನ್ನ ಕೇಳುವಾಗ ಅದು “ಅಜನ್ಯರಿಪು” ಅಂತ ಅಂದುಕೊಂಡಿದ್ದೆ. ಆದರೆ, ರಾಜನ್ಯರಿಪು ಇದೆ ಅಂತ ಇತ್ತೀಚೆಗೆ ಅಷ್ಟೇ ಗೊತ್ತಾಗಿದ್ದು.

    1. ‘ರಾಜನ್ಯ’ ಎಂದರೆ ನಾ ತಿಳಿದಂತೆ ಕ್ಷತ್ರಿಯ, ದೊರೆ ಎನ್ನುವ ಅರ್ಥವಿದೆ. ರಿಪು = ಶತ್ರು . ಪರಶುರಾಮ ಕ್ಷತ್ರಿಯರ ವೈರಿಯಾಗಿ, ಹಲವಾರು ಬಾರಿ ದಂಡಯಾತ್ರೆ ಮಾಡಿ ಅವರನ್ನು ಸದೆಬಡಿದಿದ್ದರಿಂದ, ‘ರಾಜನ್ಯರಿಪು’ ಎಂಬುದನ್ನು ವಿಶೇಷಣದಂತೆ ಬಳಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.