ಕವಿ – ಚನ್ನವೀರ ಕಣವಿ

ಹೆಸರಾಯಿತು ಕರ್ನಾಟಕ
ಉಸಿರಾಗಲಿ ಕನ್ನಡ
ಹಸಿಗೋಡೆಯ ಹರಳಿನಂತೆ
ಹುಸಿಹೋಗದ ಕನ್ನಡ

ಹೊಸೆದ ಹಾಗೆ ಹುರಿಗೊಳ್ಳುವ
ಗುರಿ ತಾಗುವ ಕನ್ನಡ
ಕುರಿತೋದದ ಪರಿಣತಮತಿ
ಅರಿತವರಿಗೆ ಹೊಂಗೊಡ

ಪಡುಗಡಲಿನ ತೆರೆಗಳಂತೆ
ಹೆಡೆ ಬಿಚ್ಚುತ ಮೊರೆಯುವ
ಸಹ್ಯಾದ್ರಿಯ ಶಿಖರದಂತೆ
ಬಾನೆತ್ತರ ಕರೆಯುವ

ಗುಡಿ ಗೋಪುರ ಹೊಂಗಳಸಕೆ
ಚೆಂಬೆಳಕಿನ ಕನ್ನಡ
ನಮ್ಮೆಲ್ಲರ ಮೈಮನಸಿನ
ಹೊಂಗನಸಿನ ಕನ್ನಡ

ತ್ರಿಪದಿಯಿಂದ ಸಾಸಿರಪದಿ
ಸ್ವಚ್ಚಂದದ ಉಲ್ಲಸ
ಭಾವಗೀತ ಮಹಾಕಾವ್ಯ
ವೀರ ವಿನಯ ಸಮರಸ

ಹಳ್ಳಿ-ಊರು ನಗರ-ಜಿಲ್ಲೆ
ಮೊಗೆದ ಹೊಗರು ಕನ್ನಡಿ
ಎಲ್ಲ ದಿಸೆಗು ಚೆಲ್ಲುವರೆದ
ಚೈತನ್ಯದ ದಾಂಗುಡಿ

ಹೆಸರಾಯಿತು ಕರ್ನಾಟಕ
ಉಸಿರಾಗಲಿ ಕನ್ನಡ
ಹಸಿಗೋಡೆಯ ಹರಳಿನಂತೆ
ಹುಸಿಹೋಗದ ಕನ್ನಡ

****

15 thoughts on “ಕರ್ನಾಟಕ – ಚನ್ನವೀರ ಕಣವಿ”

 1. ಡಾ.ರಾಜ್ ಅವರ ಧ್ವನಿಯಲ್ಲಿ ಎಷ್ಟು ಮಧುರವಾಗಿ ಮೂಡಿ ಬಂದಿದೆ ಈ ನಾಡಪ್ರೇಮ ಹಾಡು.
  ಚೆನ್ನವೀರ ಕಣವಿಯವರಿಗೊಂದು ನಮೋನಮಃ.
  ಈ ಸಾಹಿತ್ಯವನ್ನು ಹಾಕಿರುವ ತ್ರಿ ಅವರಿಗೆ ಧನ್ಯವಾದಗಳು 🙂

  ಚೆಂಬೆಳಕಿನ : ಹೀಗಂದರೇನು? “ಚೆಂದದ ಬೆಳಕಿನ” ಎಂದೇ?
  ಚಂಬೆಳಕಿನ ಎಂದಿದ್ದರೆ, “ಚಂದ್ರನ ಬೆಳಕಿನ” ಎಂದು ವ್ಯಾಖ್ಯಾನಿಸಬಹುದಿತ್ತು.

  ಸಾಸಿರಪದಿ ಎಂದರೇನು?

 2. ಚೆಂಬೆಳಕು ಅಂದರೆ ಚಂದದ ಬೆಳಕೇ ಇರಬೇಕೆಂದು ನಾನೂ ತಿಳಿದುಕೊಂಡಿದ್ದೇನೆ. ಕಣವಿಯವರಿಗೆ ಆ ಪದದ ಮೇಲೆ ತುಂಬಾ ವ್ಯಾಮೋಹ 🙂 ಅನೇಕ ಕಡೆ ಈ ಪದವನ್ನು ಬಳಸಿದ್ದಾರೆ.  ಅವರ ಒಂದು ಕವನ ಸಂಕಲನದ ಹೆಸರು ಚೆಂಬೆಳಕು, ಅವರ ಮನೆಯ ಹೆಸರು “ಚೆಂಬೆಳಕು” ಎಂದೇ ಓದಿದ ನೆನಪು.

  ಸಾಸಿರಪದಿ ಎಂದರೆ ಸಾವಿರ ಸಾಲುಗಳು.

 3. ಚೆಂ (ನಾ): ಕೆಂಪು, ಕೆಂಪಾದುದು
  ಕರ್ಮಧಾರಯ ಸಮಾಸದಲ್ಲಿ ಬರೋ ಇತರ ಪದಗಳೆಂದರೆ – ಚೆಂಗಣಗಿಲೆ, ಚೆಂಗದಿರ್, ಚೆಂಗಾವಿ, ಚೆಂದಳಿರ್, ಚೆಂದೆಂಗು, etc.

  ಸಾಸಿರ = ಸಾವಿರ, ಸಾಯಿರ, ಸಹಸ್ರ
  (ಕೃಪೆ: ಕಸಾಪ ಅರ್ಥಕೋಶ)

  (ಸಾಸಿರ ನಾಮದ ವೆಂಕಟರಮಣಾ ಅನೋದಿಲ್ವೇ ನೀವು?)

  ಮನ ಸ್ವಾಮಿ ಇನ್ನೂ ಸಪ್ತಪದಿ ತುಳಿದಿಲ್ವೇ? 🙂

 4. “ಚೆಂಬೆಳಕು” ಪದದ ವಿವರಣೆಗೆ ಧನ್ಯವಾದಗಳು “ಕಾಳೂ” (ಕಾಲೂ?)

  ಮನ ಸ್ವಾಮಿ ಇನ್ನೂ ಸಪ್ತಪದಿ ತುಳಿದಿಲ್ಲ ಅನ್ನಿಸುತ್ತದೆ 🙂

 5. kaaloo ಸ್ವಾಮಿ, ಚೆಂಬೆಳಕಿನ ಬಗ್ಗೆ ಬೆಳಕು ಹರಿಸಿದ್ದಕ್ಕೆ ಬಹಳ ಧನ್ಯವಾದಗಳು.
  ನಿಮ್ಮ ವಿವರಣೆ ನೋಡಿದ ನಂತರ ಚೆಂಗುಲಾಬಿ ಬಹಳವಾಗಿ ನೆನಪಾಯಿತು. ಹಾಗೊಂದು ಪದ್ಯವಿತ್ತು ನಮ್ಮ ಕಾಲದ ಪಠ್ಯದಲ್ಲಿ. ಬಹುಷ: ಕಣವಿಯರೇ ಬರೆದಿದ್ದರು ಅನ್ನಿಸುತ್ತದೆ. ಚೆಂಗುಲಾಬಿಯು, ಕೆಂಪು ಗುಲಾಬಿಯೆಂದು ತಿಳಿದಿದ್ದರೂ, ಅದೇ ವ್ಯಾಖ್ಯಾನವನ್ನು ಚೆಂಬೆಳಕಿಗೆ ಕಲ್ಪಿಸಿಕೊಳ್ಳಲಾಗಲಿಲ್ಲ.

  ಇಲ್ಲಾ, ನಾನಿನ್ನೂ ಈ ಜನ್ಮದಲ್ಲಿ ಸಪ್ತಪದಿ, ಸಾಸಿರಪದಿ ಯಾವ್ದೂ ತುಳಿದಿಲ್ಲ. :ಹ

 6. ಹಸಿಗೋಡೆಯ ಹರಳಿನಂತೆ
  ಹುಸಿಹೋಗದ ಕನ್ನಡ !

  ಆಹಾ! ಕಣವಿಯವರಿಗೆ ನಮನಗಳು..

  ಅವರು ನಾನು ಪಿಯುಸಿ ಓದುವಾಗ ನಮ್ಮ ಕಾಲೇಜ್ ಸಮಾರಂಭವೊಂದಕ್ಕೆ ಅತಿಥಿಗಳಾಗಿ ಬಂದಿದ್ದರು.ಅವರಿಂದ ಬಹುಮಾನ ಸ್ಪೀಕರಿಸಿದ ನೆನಪು!

  ಇಂತ ಸುಂದರ ಕವನ ನೆನಪಿಸಿದ್ದಕ್ಕೆ ನಿಮಗೆ ನಮನಗಳು!

 7. ಶಿವು, ಬಹುಮಾನ ತೆಗೆದುಕೊಂಡಿದ್ದಕ್ಕೆ -ಅದೂ ಕಣವಿಯವರಿಂದ! ಅಭಿನಂದನೆಗಳು!

 8. ಶ್ರೀ ತ್ರಿ ಅವರೆ,

  ಇಂಥ ಕವನಗಳನ್ನು ಶಾಲೆ-ಕಾಲೇಜುಗಳಲ್ಲಿ ಕಲಿಯುತ್ತಿರುವಾಗ ಬಹುಶಃ ಅರ್ಥವೇ ಆಗಿರಲಿಲ್ಲ. ಈಗ ಮತ್ತೊಮ್ಮೆ ಓದಿದಾಗಲಷ್ಟೇ ಅದರೊಳಗಿನ ಹೂರಣವನ್ನು ಅರ್ಥೈಸಿಕೊಳ್ಳಬಹುದಾಗಿದೆ.

  ಪರೀಕ್ಷೆಯಲ್ಲಿ ಬರೆಯುವುದಕ್ಕಾಗಿಯೇ ಉರು ಹೊಡೆಯುವಂತೆ ಅನಿವಾರ್ಯವಾಗಿಸುವ ಶಿಕ್ಷಣ ಪದ್ಧತಿಯನ್ನು ದೂರಿ ಪ್ರಯೋಜನವಿಲ್ಲ.

  “ಗುಡಿ ಗೋಪುರ ಹೊಂಗಳಸಕೆ
  ಚೆಂಬೆಳಕಿನ ಕನ್ನಡ
  ನಮ್ಮೆಲ್ಲರ ಮೈಮನಸಿನ
  ಹೊಂಗನಸಿನ ಕನ್ನಡ”
  ಊರಿನಿಂದ ದೂರವಿರುವವರಿಗೆ ಈ ಸಾಲುಗಳು ಹಿಡಿಸುತ್ತವೆ.

  ಅರ್ಥವತ್ತಾದ ಕವನವನ್ನು ಓದಿದಷ್ಟೂ ಹೊಸ ಹೊಸ ಅರ್ಥ ಕಲ್ಪಿಸುತ್ತದೆ.
  ಧನ್ಯವಾದಗಳು ಈ ಕವನದ ಬಗ್ಗೆ ಚಿಂತಿಸಲು ಅವಕಾಶ ಮಾಡಿಕೊಟ್ಟದ್ದಕ್ಕೆ..

 9. “ಗುಡಿ ಗೋಪುರ ಹೊಂಗಳಸಕೆ
  ಚೆಂಬೆಳಕಿನ ಕನ್ನಡ
  ನಮ್ಮೆಲ್ಲರ ಮೈಮನಸಿನ
  ಹೊಂಗನಸಿನ ಕನ್ನಡ” ಊರಿನಿಂದ ದೂರವಿರುವವರಿಗೆ ಈ ಸಾಲುಗಳು ಹಿಡಿಸುತ್ತವೆ.”

  – ಅವಿನಾಶ್, ನಿಮ್ಮ ಈ ಮಾತು ಬಹಳ ನಿಜ.  ಅಲ್ಲೇ ಇರುವವರಿಗೆ ಬೆಲೆ ತಿಳಿಯುವುದಿಲ್ಲ.

  ತುಳಸಿವನದ ಹೊಸ ಅತಿಥಿ ನೀವು. ಸುಸ್ವಾಗತ! 🙂

 10. ಏನು ಬರೆಯೋದು ಕಾಳಪ್ಪನವರೆ, ಬರೆಯೋದಕ್ಕಿಂದ ನೀವೆಲ್ಲ ಬರೆಯೋದನ್ನು ಓದೋದೆ ಇಷ್ಟ ಆಗತ್ತೆ 🙂

 11. ಅಯ್ಯೋ ಶಿವ್ನೇ ನಮ್ಮುನ್ನೆಲ್ಲ ಬರಾಗಾರ್ರು ಅಂದು ಬಿಟ್ರಲ್ಲ, ನಿಮ್ ಬರಹದ್ ಮುಂದೆ ನಮ್‍ದೇನೂ ಇಲ್ಲ ಬಿಡಿ!

  ‘ಅವಿ’ ಅವ್ರಿಗೆ ಒಂದು ಸುಸ್ವಾಗತಾನಾದ್ರೂ ಸಿಕ್ತು, ನಮಗ್ ಅದೂ ಸಿಗ್ಲಿಲ್ಲ್‌ವಲ್ಲಾ 🙁

 12. ಅಯ್ಯೋ.ಬೇಜಾರು ಮಾಡಿಕೊಳ್ಳಬೇಡಿ. ನಿಮಗೆ ಸುಸ್ವಾಗತ ಹೇಳೋ ಹೊತ್ತಿಗೆ ನೀವು ತುಳಸಿವನಕ್ಕೆ ಬಹಳ ಪರಿಚಿತರೇ ಆಗಿಹೋಗಿದ್ದಿರಿ. ಈಗ ನಿಮಗೆ ಡಬಲ್ ಸುಸ್ವಾಗತ ತೊಗೊಳ್ಳಿ. 🙂

 13. ಶ್ರೀ ತ್ರೀ ಅವರೆ,
  ಹಿಂದಿನ ಪೋಸ್ಟಲ್ಲಿ ನೀವು ಪಾರ್ವತಮ್ಮನವರು ಎಲ್ಲಿ ಅಂತ ಕೇಳಿದ್ದೀರಿ.
  ಈಗ ನಾವು ಶ್ರೀತ್ರೀಯಮ್ಮನೋರು ಎಲ್ಲಿ ಅಂತ ಕೇಳೋಕೆ ಹೊರಟಿದ್ದೀವಿ…

  ಅವರೆ ಕಾಳು ಅವರೂ ಇದನ್ನೇ ಹೇಳಿದ್ದು
  🙂 😀

 14. ಅಸತ್ಯಾನ್ವೇಷಿಗಳೇ, ನಾನು ಎಲ್ಲೂ ಹೋಗಿಲ್ಲ . ಇಲ್ಲೇ ಇದೀನಿ. ಅವರೆಕಾಳನ್ನು ಕರೆದುಕೊಂಡು ಅನ್ವೇಷಣೆಗೆ ಹೊರಡಬೇಡಿ. ಮೊದಲೇ ಬೇಳೆಯ ಬೆಲೆ ಗಗನಕ್ಕೇರಿ ಕಂಗಾಲಾಗಿದ್ದೇವೆ. ಕಾಳನ್ನೂ ಇಲ್ಲದ ಹಾಗೆ ಮಾಡಬೇಡಿ 🙂

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.