ರಚನೆ: ಕೆ.ಎಸ್. ನರಸಿಂಹಸ್ವಾಮಿ
ಚಳಿಗಾಲ ಬಂದಾಗ ‘ಎಷ್ಟು ಚಳಿ?’ ಎಂದರು
ಬಂತಲ್ಲ ಬೇಸಿಗೆ, ‘ಕೆಟ್ಟಬಿಸಿಲ್ ‘ ಎಂದರು
ಮಳೆ ಬಿತ್ತೊ, ‘ಬಿಡದಲ್ಲ ಶನಿ!’ ಎಂಬ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!
ಚಿಗುರ ಚಿನ್ನದ ನಡುವೆ ಹೂವ ಬಯಸುವರು
ಹೂಗಳ ಕಾಲದಲ್ಲಿ ಹಣ್ಣ ಹೊಗಳುವರು;
‘ಹಣ್ಣಿನ ಗಾತ್ರ ಪೀಚು’ ಎಂದಿವರ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!
ನಿಂತವರ ಕೇಳುವರು: ನೀನೇಕೆ ನಿಂತೆ ?
ಮಲಗಿದರೆ ಗೊಣಗುವರು: ನಿನಗಿಲ್ಲ ಚಿಂತೆ!
ಓಡಿದರೆ ಬೆನ್ನ ಹಿಂದೆಯೆ ಇವರ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!
ಓದಿದರೆ ಹೇಳುವರು: ಮತ್ತೊಮ್ಮೆ ಬರಿಯೊ
ಬರೆದಿಡಲು ಬೆದಕುವರು: ಬರವಣಿಗೆ ಸರಿಯೊ?
ಇವರ ಬಯಕೆಗಳೇನೊ! ಇವರದೇ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!
***
ಶ್ರೀ ತ್ರಿ ಅವರೆ,
“ಓದಿದರೆ ಹೇಳುವರು: ಮತ್ತೊಮ್ಮೆ ಬರಿಯೊ
ಬರೆದಿಡಲು ಬೆದಕುವರು: ಬರವಣಿಗೆ ಸರಿಯೊ?
ಇವರ ಬಯಕೆಗಳೇನೊ! ಇವರದೇ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!”
ಅಂತ ನೀವು ನೇರವಾಗಿ ನಮ್ಮನ್ನೇ ತರಾಟೆಗೆ ತೆಗೆದುಕೊಳ್ಳುತ್ತಿದ್ದೀರಾ ಹೇಗೆ?

ಬಹಳ ಸೊಗಸಾದ ಕವನ. ನಾನು ಇದನ್ನು ಓದಿರಲೇ ಇಲ್ಲ.
ವಂದನೆಗಳು ಮೇಡಂ.
ಕೆ.ಎಸ್.ನ ಅವರ ಪ್ರೇಮಗೀತೆಗಳನ್ನು ಓದಿದ್ದೆ.ಅವರ ಈ ರೀತಿಯ ಕವನವನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.
ಅವರು ಬಹುಷಃ ಆಫೀಸ್ನಲ್ಲಿರುವ ಮ್ಯಾನೇಜರ್-ಬಾಸ್ಗಳನ್ನು ನೋಡಿ ಈ ರೀತಿ ಬರೆದಿರಬಹುದೇ !
ಅವರು ಬಹುಷಃ ಆಫೀಸ್ನಲ್ಲಿರುವ ಮ್ಯಾನೇಜರ್-ಬಾಸ್ಗಳನ್ನು ನೋಡಿ ಈ ರೀತಿ ಬರೆದಿರಬಹುದೇ !
ಯಾಕೆ? ಇಂತಹ ಜನ ಆಫೀಸಿನಲ್ಲಿಯೇ ಇರಬೇಕು ಎಂದೇನಿಲ್ಲವಲ್ಲಾ?