ಮಾವು ನಾವು, ಬೇವು ನಾವು – ಕೆ. ಎಸ್. ನರಸಿಂಹಸ್ವಾಮಿ

ಕವಿ – ಕೆ.ಎಸ್.ನರಸಿಂಹಸ್ವಾಮಿ

ಮಾವು ನಾವು, ಬೇವು ನಾವು;
ನೋವು ನಲಿವು ನಮ್ಮವು.
ಹೂವು ನಾವು, ಹಸಿರು ನಾವು,
ಬೇವು ಬೆಲ್ಲ ನಮ್ಮವು.

ಹೊಸತು ವರುಷ, ಹೊಸತು ಹರುಷ-
ಹೊಸತು ಬಯಕೆ ನಮ್ಮವು
ತಳಿರ ತುಂಬಿದಾಸೆಯೆಲ್ಲ,
ಹರಕೆಯೆಲ್ಲ ನಮ್ಮವು.

ಬಂಜೆ ನೆಲಕೆ ನೀರನೂಡಿ
ಹೊಳೆಯ ದಿಕ್ಕು ಬದಲಿಸಿ
ಕಾಡ ಕಡಿದು ದಾರಿ ಮಾಡಿ
ಬೆಟ್ಟ ಸಾಲ ಕದಲಿಸಿ.

ಹಿಮಾಚಲ ನೆತ್ತಿಯಲಿ
ಧ್ವಜವನಿಟ್ಟು ಬಂದೆವು;
ಧ್ರುವಗಳಲ್ಲಿ ಹೆಜ್ಜೆಯೂರಿ
ಹೊಸನೆಲೆಗಳ ಕಂಡೆವು.

ಬಾನಸೆರೆಯ ಕಲ್ಪಲತೆಗೆ
ನಮ್ಮ ಕಿಡಿಯ ಮುತ್ತಿಗೆ.
ಮುಗಿಯಬಹುದು ನಾಳೆಯೊಳಗೆ
ದೇವತೆಗಳ ಗುತ್ತಿಗೆ!

ಹುಟ್ಟು ಬೆಂಕಿ ನಮ್ಮ ತಾಯಿ;
ಉಟ್ಟ ಸೀರೆ ಸಾಗರ.
ಅವಳ ಮುಗಿಲ ತುರುಬಿನಲ್ಲಿ
ಹೆಡೆಯ ತೆರೆದ ನಾಗರ.

ಅವಳ ಪ್ರೀತಿ ನಮಗೆ ದೀಪ;
ಅವಳ ಕಣ್ಣು ಕಾವಲು.
ಬಿಸಿಲ ತಾಪ, ಮಳೆಯ ಕೋಪ-
ಸಂತೋಷವೇ ಆಗಲೂ.

ಹೆಜ್ಜೆಗೊಂದು ಹೊಸ ಯುಗಾದಿ-
ಚೆಲುವು ನಮ್ಮ ಜೀವನ!
ನಮ್ಮ ಹಾದಿಯೋ ಅನಾದಿ,
ಪಯಣವೆಲ್ಲ ಪಾವನ.

1 thought on “ಮಾವು ನಾವು, ಬೇವು ನಾವು – ಕೆ. ಎಸ್. ನರಸಿಂಹಸ್ವಾಮಿ”

  1. Sunaath says:

    ಯುಗಾದಿಯ ಹಾರ್ದಿಕ ಶುಭಾಶಯಗಳು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

“ಪ್ರಥಮ ರಾಜನಿಗೆ” – ಕೆ.ಎಸ್.ನ“ಪ್ರಥಮ ರಾಜನಿಗೆ” – ಕೆ.ಎಸ್.ನ

ಕವಿ – ಕೆ.ಎಸ್.ನರಸಿಂಹಸ್ವಾಮಿ ಗಾಯಕಿ – ಎಸ್.ಜಾನಕಿ ಸಂಗೀತ – ಸಿ.ಅಶ್ವಥ್  ಹಾಡು ಕೇಳಿ ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬೆಳಕು ಕಡಲೂ ನಿನ್ನದೆ ಹಡಗೂ ನಿನ್ನದೆ ಮುಳುಗದಿರಲಿ ಬದುಕು ಬೆಟ್ಟವು ನಿನ್ನದೇ ಬಯಲೂ ನಿನ್ನದೇ ಹಬ್ಬಿ ನಗಲಿ ಪ್ರೀತಿ

ಜಡೆ – ಜಿ. ಎಸ್. ಶಿವರುದ್ರಪ್ಪಜಡೆ – ಜಿ. ಎಸ್. ಶಿವರುದ್ರಪ್ಪ

ಕವನ – ಜಡೆ ಕವಿ – ಜಿ. ಎಸ್. ಶಿವರುದ್ರಪ್ಪ ಲಲನೆಯರ ಬೆನ್ನೆನೆಡೆ ಹಾವಿನೊಲು ಜೋಲ್ವ ಜಡೆ ಕಾಳಿಂದಿಯಂತಿಳಿದು, ಕೊರಳೆಡೆಗೆ ಕವಲೊಡೆದು ಅತ್ತಿತ್ತ ಹರಿದ ಜಡೆ! ಚೇಳ್ ಕೊಂಡಿಯಂಥ ಜಡೆ, ಮೋಟು ಜಡೆ, ಚೋಟು ಜಡೆ, ಚಿಕ್ಕವರ ಚಿನ್ನ ಜಡೆ !

ಯುಗಾದಿ ಮರಳಿ ಬರುತಿದೆ – ಬೇಂದ್ರೆಯುಗಾದಿ ಮರಳಿ ಬರುತಿದೆ – ಬೇಂದ್ರೆ

  ಕವನ : ಯುಗಾದಿ ಕವಿ : ಅಂಬಿಕಾತನಯ ದತ್ತ (ದ.ರಾ.ಬೇಂದ್ರೆ) ಹಾಡು ಕೇಳಿ  ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ಹೊಂಗೆ ಹೂವ ತೊಂಗಲಲ್ಲಿ ಭೃಂಗದ ಸಂಗೀತ ಕೇಲಿ ಮತ್ತೆ