ಕವಿ – ಸಿದ್ಧಲಿಂಗಯ್ಯ
ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಟಾಟಾ ಬಿರ್ಲಾ ಜೋಬಿಗೆ ಬಂತು
ಜನಗಳ ತಿನ್ನುವ ಬಾಯಿಗೆ ಬಂತು
ಕೋಟ್ಯಾಧೀಶನ ಕೋಣೆಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಬಡವನ ಮನೆಗೆ ಬರಲಿಲ್ಲ
ಬೆಳಕಿನ ಕಿರಣ ತರಲಿಲ್ಲ
ಗೋಳಿನ ಕಡಲನು ಬತ್ತಿಸಲಿಲ್ಲ
ಸಮತೆಯ ಹೂವನು ಅರಳಿಸಲಿಲ್ಲ
ಹಣವಂತರು ಕೈಸನ್ನೆ ಮಾಡಿದರೆ
ಕತ್ತಲೆಯಲ್ಲಿ ಬೆತ್ತಲೆಯಾಯಿತು
ಯಾರೂ ಕಾಣದ ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ
ಸಾವಿರಾರು ಜನ ಗೋರಿಯಾದರು
ಲಕ್ಷ ಲಕ್ಷ ಜನ ಗಲ್ಲಿಗೇರಿದರು
ರೈತ ಕಾರ್ಮಿಕರು ರಕ್ತವ ಕೊಟ್ಟರು
ಯಾರಿಗೆ ಬಂತು ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ
ಪೋಲೀಸರ ಬೂಟಿಗೆ ಬಂತು
ಮಾಲೀಕರ ಚಾಟಿಗೆ ಬಂತು
ಬಂದೂಕದ ಗುಂಡಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಪಾರ್ಲಿಮೆಂಟಿನ ಕುರ್ಚಿಯ ಮೇಲೆ
ವರ್ಷಗಟ್ಟಲೆ ಚರ್ಚೆಗೆ ಕೂತು
ಬಡವರ ಬೆವರು ರಕ್ತವ ಕುಡಿದು
ಏಳಲೇಇಲ್ಲ ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ
ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ?
ಸಾವಿರಾರು ಜನ ಗೋರಿಯಾದರು
ಲಕ್ಷ ಲಕ್ಷ ಜನ ಗಲ್ಲಿಗೇರಿದರು
ರೈತ ಕಾರ್ಮಿಕರು ರಕ್ತವ ಕೊಟ್ಟರು
ಯಾರಿಗೆ ಬಂತು ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ
ತಾಯ್ನಾಡ ಜನರ ನಾಳೆಗಾಗಿ ತಮ್ಮ ಸರ್ವಸ್ವವನ್ನೂ ತ್ಯಾಗಮಾಡಿದ ಅಸಂಖ್ಯಾತ ಜೀವಗಳಿಗೆ, ಈ ಸ್ವತಂತ್ರ ದಿನಾಚರಣೆಯ ಸಂದರ್ಭದಲ್ಲಿ, ನನ್ನ ಗೌರವಯುತ ನಮನಗಳು.
ಕವಿ ಶ್ರೀ ಸಿದ್ಧಲಿಂಗಯ್ಯನವರ ಮಾರ್ಮಿಕ ಪ್ರಶ್ನೆ, “ಯಾರಿಗೆ ಬಂತು, ಎಲ್ಲಿಗೆ ಬಂತು, ೪೭ರ ಸ್ವಾತಂತ್ರ್ಯ” ಪ್ರಶ್ನೆಯಾಗಿಯೇ ಉಳಿದಿದೆಯಲ್ಲವೆ?
ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು!
ಧನ್ಯವಾದಗಳು ಮನ. ನಿಮಗೂ ಸ್ವಾತಂತ್ಯ ದಿನದ ಶುಭಾಶಯಗಳು! 🙂
ತ್ರಿವೇಣಿಯವರೇ,
ಸ್ವಾತಂತ್ರ್ಯೋತ್ಸವದ ಶುಭಾಶಯಗಳು !
ಎಂತಹ ಅರ್ಥಪೂರ್ಣ ಪ್ರಶ್ನೆ…ಅಷ್ಟೆಲ್ಲಾ ಮಹನೀಯರು ರಕ್ತ ಹರಿಸು ಸ್ವಾತಂತ್ರ್ಯ ತಂದುಕೊಟ್ಟಿದ್ದು ಯಾವುದಕ್ಕೆ ??
ಕವಿಯ ಮಾತು ಹಚ್ಚ ಹಸಿರು. ಸ್ವಾತಂತ್ರ್ಯ ಬಂದಿದ್ದು ಭ್ರಷ್ಟಾಚಾರಿ ರಾಜಕಾರಣಿಗಳಿಗೇ ಹೊರತು ಜನ ಸಾಮಾನ್ಯನಿಗಲ್ಲ.
ಅವಿನಾಶ್, ಶಿವು ಧನ್ಯವಾದಗಳು (ಕಾಳು ಸುತ್ತ ಮುತ್ತ ಎಲ್ಲೂ ಇಲ್ಲ ತಾನೇ? ನನಗೆ ಹೇಳಲಿಲ್ಲ ಅಂತ ತಗಾದೆ ತೆಗೆದಾರು 🙂 )
ಸ್ವಾತಂತ್ರ್ಯ ದಿನ, ಸಂಭ್ರಮಕ್ಕಿಂತ , ಎಲ್ಲರಲ್ಲೂ ಒಂದು ರೀತಿಯ ಭ್ರಮ ನಿರಸನ ಉಂಟು ಮಾಡಿದಂತಿದೆ. ಸ್ವಾತಂತ್ಯ ದಿನದ ಹಿಂದಿನ ಎರಡು,ಮೂರು ದಿನದ ಪತ್ರಿಕೆಗಳಲ್ಲಿಯೂ ಇದೇ ಛಾಯೆ ಇದೆ. ವಿಜಯ ಕರ್ನಾಟಕದಲ್ಲಿ ವಿಶ್ವೇಶ್ವರ ಭಟ್ ಬರೆದಿರುವ ಲೇಖನವಂತೂ ಇಂದಿನ ಪರಿಸ್ಥಿತಿಯನ್ನು ಚೆನ್ನಾಗಿ ಬಿಂಬಿಸುತ್ತಿದೆ – ” ಬ್ರಿಟೀಷರ ಗುಂಡಿಗೆ ಎದೆಯೊಡ್ಡಿ ನಾವು ಸಂಪಾದಿಸಿದ ಸ್ವಾತಂತ್ಯ ಇವತ್ತು ಎಲ್ಲಿಗೆ ಬಂದಿದೆಯೆಂದರೆ, ಕೆಂಪು ಕೋಟೆ ಮೇಲೆ ನಿಂತು ಮಾತಾಡುವ ಪ್ರಧಾನಿ ಬುಲೆಟ್ ಪ್ರೂಫ್ ತೆರೆ ಹಿಂದೆ ಅಡಗಿ ನಿಲ್ಲಬೇಕಾದ ಪರಿಸ್ಥಿತಿ ಬಂದಿದೆ” – ಈ ಮಾತು ಎಷ್ಟು ನಿಜ ಅಲ್ವಾ?
ನೀರಸ ದನಿಯಲ್ಲಿ ಈ ಪ್ರಧಾನಿ ಭಾಷಣ ಮಾಡದಿದ್ದರೆ ತಾನೇ ಏನಾಗತ್ತೆ? 🙂
ವೇಣಿ, ಒಳ್ಳೆಯ ಕವನಕ್ಕಾಗಿ ಧನ್ಯವಾದಗಳು. ಇಂತಹ ಉತ್ತಮ ಕವನದ ಒಳಾರ್ಥ ತಿಳಿಯದ ನಮ್ಮ ರಾಜಕಾರಿಣಿಗಳಿಗೆ, ಅವರ ಬೆಂಬಲಿಗ-`ಕುರಿ’ಗಳಾದ ನಮಗೆ ಸ್ವಾಭಿಮಾನ ಇದೆಯೇ? ಸ್ವಾತಂತ್ರ್ಯದ ಅರ್ಥ ಕಳೆದುಹೋಗಿದೆ ಎಂದೆನ್ನುವ ಸ್ವಾತಂತ್ರ್ಯವನ್ನೂ ಕಳೆದುಕೊಂಡಿರುವ ದೀನಜನಾಂಗ ನಾವಾಗಿದ್ದೇವೆ. ಹುತಾತ್ಮರಾದ ಮಹಾತ್ಮರೆಲ್ಲ ಮತ್ತೆ ಬಂದು ಈಗಿನ ಭಾರತ ನೋಡಿದರೆ ಗುಂಡಿಲ್ಲದೇ ಎದೆಯೊಡೆದು ಸತ್ತಾರು. ಸಾರ್ವಕಾಲಿಕ ಪ್ರಶ್ನೆ- ಯಾರಿಗೆ ಬಂತು ಸ್ವಾತಂತ್ರ್ಯ? ಎಲ್ಲಿಗೆ ಬಂತು ಸ್ವಾತಂತ್ರ್ಯ? ಉತ್ತರ ಯಾರಲ್ಲಿದೆ? ಯಾರು ಹೇಳಬೇಕು? ಯಾರಿಗೆ ಬೇಕು?
ನಲವತ್ತೇಳರ ಸ್ವಾತ್ಯಂತ್ರ್ಯ ಯಾರಿಗೆ ಬಂತು? ಅಂತ ಅವರೇನೋ ಪ್ರಶ್ನೆ ಕೇಳಿ ಸುಮ್ಮನಾಗಿ ಬಿಟ್ರು, ಅವರ ಚಳವಳಿ ಎಲ್ಲಿಗೆ ಬಂತು ಅಂತ ನಾನ್ ಕೇಳೋದಕ್ಕೆ ಒಂದ್ ಪದ್ಯಾ ಅಂತ ಬರೆಯೋಕ್ ಹೋದೆ ನೋಡಿ, ಅದು ಅಲ್ಲಿಗೇ ನಿಂತ್ ಹೋಗಿ ಬಿಡ್ತು!
ಸುಮ್ಕೆ ಪ್ರಶ್ನೆ ಕೇಳಿಬಿಟ್ರೆ ಆಗ್ತದಾ, ನಾವೂ-ನೀವೂ ಅದಕ್ಕೇನಾದ್ರೂ ಮಾಡ್ಬ್ಯಾಡವಾ?
ಕಾಳು , ಒಗಟಿನಂತೆ ಮಾತಾಡದೆ, ಸ್ವಲ್ಪ ಬಿಡಿಸಿ ಹೇಳಿ. ಅವರ ಚಳುವಳಿ ಅಂದರೆ ಸಿದ್ಧಲಿಂಗಯ್ಯನವರದ್ದೇ? ಅದು ಯಶಸ್ವಿಯಾಗಿ, ಅವರಿಗೂ ಯಾವುದೋ ಒಂದು ಅಧಿಕಾರ (ಪ್ರಾಧಿಕಾರ?) ಸಿಕ್ಕಿರಬೇಕು ಅಲ್ಲವೇ? 🙂
ಅಲ್ಲಾ ಮೆಡಮ್,
ಇವ್ರು ಅದೇ ‘ಗೆಳತಿ ಓ ಗೆಳತಿ…’, ಪದ್ಯದಲ್ಲಿ ‘ಮೇಲುಕೀಳಿನ ಬೇಲಿ ಜಿಗಿ’ಯೋಕೆ ಹೋದ ದಸಂಸಂ ಸಿದ್ಧಲಿಂಗಯ್ಯನವರಲ್ಲವೇ? ಅವರ ಸಂಘರ್ಷಗಳು (ಸರಿಯೋ ತಪ್ಪೋ, ಯಾರ ಜೊತೆಯಾದ್ರೂ ಇರಲಿ, ಅದು ಬೇರೆ ಪ್ರಶ್ನೆ) ಅವು ಎಲ್ಲೀವರೆಗೆ ಬಂದ್ವು ಅಂದೆ.
ನಲವತ್ತೇಳರ ಸ್ವಾತಂತ್ರ್ಯ ಅದರ ಜೊತೆ ಇರೋ ಸಂಘರ್ಷಗಳು ಮುಂದ್ ಹೋಗ್ದೇ ಬರೀ ಅದೊಂದೇ ಹೇಗೆ ಮತ್ತು ಎಲ್ಲಿಗೆ ಹೋಗೋಕ್ ಸಾಧ್ಯಾ ಇದೆ ನೀವೇ ಹೇಳಿ.