1-IMG_4876

ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ ;
ಮಡದಿ ಮಗು ಮನೆ – ಮಾರು ರಾಜ್ಯ – ಗೀಜ್ಯ
ಹೊತ್ತಿರುವ ಉರಿಯಲಿ ಆಯಿತಾಜ್ಯ
ಹಿಂದೆ ಬಿದ್ದವು ಎಲ್ಲೋ ಕುದುರೆ ಕಾಲಾಳು
ಬಿಚ್ಚಿ ಉದಿರಿತು ಎಲ್ಲೋ ಮನದ ಬಾಳು
ಹೊರಟ ಹೊರಟೇ ಹೊರಟ, ಹೊರಟನೆತ್ತೋ
ಸಾಹಸಿಯ ಗೊತ್ತುಗುರಿ ಅವಗು ಗೊತ್ತೋ !

ಕಾಮ – ಕ್ರೋಧವ ದಾಟಿ, ಮದ – ಮತ್ಸರವ ತುಳಿದು
ಮೋಹ – ಲಾಭವ ಮೆಟ್ಟಿ ಅಡಿ ಕಿತ್ತಿ ಇಟ್ಟ,
ಇದೊ ತಗ್ಗು, ಅದೊ ಗುಡ್ಡ, ಆಗೋ ಮಲೆಯ ಬೆಟ್ಟ
ನೆಲ ತೆಳಗೆ ಬಿಟ್ಟ.

ಏರಿದೆರಿದನೇರಿ ಗಾಳಿಗುದುರೆ ಸವಾರಿ
ಚಂದ್ರಕಿರಣವ ಮೀರಿ ಸೂರ್ಯ ಸೇರಿ
ಬೆಳಕನ್ನೆ ಹಿಂದೊಗೆದು ತಮದ ಬಸಿರನೆ ಬಗೆದು
ಅಸ್ಪರ್ಶ ಅವಕಾಶದಲ್ಲಿ ಇದ್ದ.
ಬುದ್ಧ-ಬುದ್ಧ-ಬುದ್ಧ
ಶಬ್ದ-ನಾದ-ದ್ವನಿಯ ಸದ್ದ ಮೀರಿದ್ದ.
ಇಲ್ಲ ಎಂಬುವ ಕೊನೆಗೆ ಆತ್ಮ ಶುದ್ದ
ಇದ್ದರೆನಿಲದಿದ್ದರೇನೆನಲು ಗೆದ್ದ.

ಅಲ್ಲಿಂದ ಇಲ್ಲಿವರೆ ಹೊರಳಿ ನೋಡಿ
ಇದ್ದುದಿದ್ದಂತಿತ್ತು ಜನನ-ಮರಣದ ಜೋಡಿ
ಗೆದ್ದುದೇನೆಂದೆನುತ ಮರಳಿ ಜಿಗಿದ
ಭೂತಜಾತದ ಎದೆಯ ಸೀಳಿ ಸಿಗಿದ
ಅದೇ ತನ್ನ ಮನೆಯಂದು ಸಿದ್ಧ ಬಗೆದ.

ಬುದ್ಧನೆಂಬುವ ಒಬ್ಬ ಎಂದೊ ಇದ್ದ
ಎನುವಂತೆ ಇಂದಿಗೂ ಇಲ್ಲೇ ಇಲ್ಲ
ಬುದ್ಧ ಹುಟ್ಟಿದ ಮೇಲೆ ಹಳೆ ಜಗವು ಸತ್ತು
ಇದ್ದು ಇಲ್ಲದ ಹಾಗೆ, ಹಾಗೆ ಇತ್ತು.
ಬುದ್ಧ ಸತ್ತನು ಎಂದು ಯಾರೆಂದರೂ
ಬುದ್ಧನ ಜಯಂತಿಗಿದೆ ಜಯವೆಂದಿಗೂ
ಬುದ್ಧನ ಸಮಾಧಿಯದು ಮಾನವನ ಹೃದಯ
ಅದುವೆ ಕಾಯುತ್ತಲಿದೆ ಕಲ್ಕಿ ಉದಯ.

(“ಗಂಗಾವತರಣ” ಕವನಸಂಕಲನದಲ್ಲಿ ಪ್ರಕಟಿತ.)

4 thoughts on “ಜಗವೆಲ್ಲ ಮಲಗಿರಲು – ದ.ರಾ.ಬೇಂದ್ರೆ”

  1. ಕವನದ ಕನ್ನಡಿಯಲ್ಲಿ ಬುದ್ಧನ ಮಹಾನ್ ವ್ಯಕ್ತಿತ್ವವನ್ನು ಬೇಂದ್ರೆಯವರು ಪ್ರತಿಬಿಂಬಿಸಿದ್ದಾರೆ. ಬುದ್ಧಪೂರ್ಣಿಮೆಯಂದು ನೆನಪಿಸಿದ ನಿಮಗೆ ಧನ್ಯವಾದಗಳು.

  2. ಒಂದು ಮಹಾನ್ ವ್ಯಕ್ತಿತ್ವನ್ನು ಮಹಾ ಕವಿಯು ಚಿತ್ರಿಸಿಕೊಟ್ಟದು ಬಹು ನೆಚ್ಚಿಗೆಯಾಯಿತು.

  3. ಈ ಹಾಡನ್ನು ಕಾಳಿಂಗ ರಾಯರು ಚೆನ್ನಾಗಿ ಹಾಡಿದ್ದಾರೆ. The recording can be accessed here:

    http://www.hungama.com/search-tracks/da-ra-bendre#/music/song-buddha-jagavella/2174033

    ಹಾಗೆ, ನೀವು ಬಹಳ ಹಿಂದೆ “ತಿಲ್ಲಾಣ” ಪದ್ಯವನ್ನು ಇಲ್ಲಿ ಪ್ರಕಟಿಸಿದಾಗ ಅದರಿದ ಹಾಡು ಬಗ್ಗೆ ಕೇಳಿದ್ದಿರಿ. I do not know if you found the version you were looking for, but one version of it can be accessed here under the title of “Idava Haadu.” So too can a number of other songs of Bendre’s. As far as I know, this is the one of the best collections of Bendre’s songs there is.

    http://www.hungama.com/search-tracks/da-ra-bendre

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.