ಕವನ – ದೈತ್ಯ ನರ್ತನ
ಕವಯಿತ್ರಿ – ಸುಪ್ತದೀಪ್ತಿ (ಜ್ಯೋತಿ ಮಹಾದೇವ್)

ದೈತ್ಯನ ವಿಕಾರ ಕನಸು
ಸಾಕಾರಗೊಂಡ ನರಕ,
ಭೂತ-ಭವಿಷ್ಯಗಳ ತಾಕಲಾಟ
ಅಲ್ಲಿ ನರಳಿದ ವರ್ತಮಾನ,
ಒಂದೊಂದೇ ದಿನ ಅಳಿದು
ಕರಗಿದ ಕಬ್ಬಿಣದರಗಿನ ಕಿರೀಟ,
ವೈರ-ಯಜ್ಞಕ್ಕೆ ನೇರ ಆಜ್ಯ
ಧೂಳಿನ ಬೆವರು-ನೆತ್ತರು;
ಲೆಕ್ಕವಿರದ ಕಣ್ಣೀರು.

ನೆರೆಮರೆಯ ಹಾವಿನ ಬೇಟೆಗೆ
ಕುಂಕುಮ ಲೇಪಿತ ಆಮಂತ್ರಣ,
ಹಿರಿಯಣ್ಣನಾಟಕ್ಕೆ ಕಿರಿಯರು
ದಾಳ, ಗಾಳ, ಹಿಮ್ಮೇಳ;
ಪರಮಕಾರ್ಯ ದಂಡಿನವರ
ಎದೆಯೊಡೆದ ಮುಮ್ಮೇಳ;
ಬಣ್ಣ ಬಣ್ಣದ ವೇಷ
ಹಗಲು ದರೋಡೆಗೆ ಭಾಷ್ಯ,
ಗೆದ್ದೆತ್ತಿನಾಟದಲ್ಲಿ ಬಿದ್ದ ಶ್ರೀಸಾಮಾನ್ಯ.
ಹರಿಹರಿದು ಮಡುಗಟ್ಟುವ ಕೋಟಿಹನಿಗೆ
ಬಾನಬಟ್ಟಲೊಂದೆ ತಾಣ.

(೧೧-ಸೆಪ್ಟೆಂಬರ್-೨೦೦೬ )

*               *             *

3 thoughts on “ದೈತ್ಯ ನರ್ತನ – ಸುಪ್ತದೀಪ್ತಿ”

 1. ಧನ್ಯವಾದಗಳು ಜ್ಯೋತಿ.

  ದೈತ್ಯನ ವಿಕಾರ ಕನಸು, ಸಾಕಾರಗೊಂಡ ನರಕ….ಈ ಎರಡೇ ಸಾಲುಗಳು ಸಾಕು. ಅಂದು ನಡೆದ ಆ ದುರ್ಘಟನೆಯನ್ನು ಮತ್ತೊಮ್ಮೆ ಕಣ್ಮುಂದೆ ತಂದು ನಿಲ್ಲಿಸಲು. 🙁 

  ಆದರೆ “ದಶಕಾರ್ಧದ ಕೋಟಿಹನಿಗೆ” – ಇಲ್ಲಿ ದಶಕಾರ್ಧ ಅನ್ನುವ ಪದ ಘಟನೆ ನಡೆದು ಐದು ವರ್ಷಗಳಾಗಿರುವುದಕ್ಕಿರಬಹುದು  ಎಂದು ಅರ್ಥ ಮಾಡಿಕೊಂಡೆ. ಸರಿಯೇ?

 2. ಹೌದು, ಈ ಐದು ವರ್ಷಗಳಲ್ಲಿ ಹರಿದ ಕಣ್ಣೀರೆಷ್ಟೋ! ಮಿಡಿದ ಎದೆಗಳೆಷ್ಟೋ! ಅವರುಗಳಿಗಾಗಿ ಈ ಕವನ!

 3. ಹಿರಿಯಣ್ಣನಾಟಕ್ಕೆ ಹಿಮ್ಮೇಳ ಹಾಕುವ ಕಿರಿಯಣ್ಣರಿರುವಾಗ ನೆಲಕ್ಕೆ ಬಿದ್ದ” ಶ್ರೀಸಾಮಾನ್ಯನ” ಕಣ್ಣೀರು
  ನೋಡುವವರಾರು????????????

  ಒಳ್ಳೆ ಕವನ.ಜ್ಯೋತಿ ಮತ್ತು ಶ್ರೀತ್ರೀ ಇಬ್ಬರಿಗೂ ಕವನಕ್ಕಾಗಿ ಥ್ಯಾಂಕ್ಸ್

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.