ಜಗನ್ನಾಥದಾಸರ ರಚನೆ
ರಾಮನ ನೋಡಿರೈ ನಿಮ್ಮಯ ಕಾಮಿತ ಬೇಡಿರೈ || ಪ ||
ತಾಮರಸಸಖ ಸುವಂಶಾಬ್ಧಿಶರತ್ಸೋಮಾ ಕಮಲಧೀಮ ||ಅ.ಪ.||
ಧಾತನನುಜ್ಞದಿ ದೇವತ್ವಷ್ಟ್ರ ನಿರ್ಮಿಸಿದಾ ಅಜ ಪೂಜಿಸಿದಾ
ಜ್ಯೋತಿರ್ಮಯ ಜಾಬಾಲಿ ಮುನಿಯ ತಪವರಿದಾ ಕಾಮಿತ ನೆರೆದಾ
ಭೂತಾಧಿಪನ ಭವನದೊಳರ್ಚನೆಗೊಂಡಾ ದೃತಕೋದಂಡಾ
ಮಾತಂಗಾರಿ ವರೂಥಿಯ ಜನಕ ಮೇದಾಗಾರಕೆ ಪೋದಾ || ೧ ||
ಸೌಭರಿ ಮುನಿಪಗೆ ಸೌಖ್ಯವ ಕರುಣಿಸಿ ಕೊಟ್ಟ ಜಗಕತಿಧಿಟ್ಟ
ನಾಭಿಜನ್ಮನಿಹ ನಗವರ ಸ್ಥಾನಕೆ ಬಂದ ಶುಭಗುಣ ವೃಂದಾ
ವೈಭವದಿಂದಲಯೋಧ್ಯಾ ನಗರದಿ ಮೆರೆದಾ ಕಾಮಿತವೆರೆದಾ
ಸ್ವಾಭಿಮಾನದಲಿ ಸತಿಯಳಿಗಿತ್ತನು ವರವಾ ದೇವರ ದೇವಾ || ೨ ||
ಜಾಂಬವಂತನಿಗೆ ಜಾನಕಿರಮಣನು ಇತ್ತ ತನ್ನಯಧ್ಯಾತ
ಸಂಭ್ರಮದಲಿ ವೇದಗರ್ಭನೊಡನಾಡ್ದಾ ಮುಕ್ತಿಯ ನೀಡ್ದಾ
ಕುಂಭೀಶ್ವರನ ಸುಕೋಶದಿ ಬಹುದಿನ ವಾಸ ವೆಸಗಿದನೀಶಾ
ನಂಬಿ ತುತಿಸಿದ ನರಹರಿ ಮುನಿಪಗೆ ಒಲಿದಾ ಮೋದದಿ ನಲಿದ|| ೩ ||
ಅಲವಬೋಧಮುನಿ ಅತಿಮೋದದಲರ್ಚಿಸಿದ ಸಲೆ ಮೆಚ್ಚಿಸಿದ
ಇಳೆಯೊಳಗೆ ಬಹು ಯತಿಕರ ಪೂಜಿತನಾದ ಲೀ್ಲಾ ವಿನೋದ
ಬಲುನಂಬಿದ ಭಕುತರ ಕಲಿಮಲಗಳ ಕಳೆದ ಮನದೊಳು ಪೊಳೆದ
ಸುಲಲಿತ ಗುಣನಿಧಿ ವಸುಧೇಂದ್ರಾರ್ಯರ ಪ್ರೀಯ ಕವಿಜನಗೇಯ || ೪||
ವಾರಿಧಿಬಂಧನ ವಾನರ ನಾಯಕರಾಳ ದೈತ್ಯರ ಸೀಳ್ದಾ
ನಾರದ ಮುಖ ಮುನಿನಮಿತ ಪದಾಂಬುಜನೀತಾ ತ್ರಿಗುಣಾತೀತ
ಆರಾಧಿಪರಿಗೆ ಅಖಿಳಾರ್ಥಗಳನು ಕೊಡುವಾ ದುರಿತವ ತಡೆವ
ನೀರಜಾಕ್ಷ ಜಗನ್ನಾಥ ವಿಠ್ಠಲ ನಿಶ್ಚಿಂತಾ ಸೀತಾಕಾಂತ||೫||