ಚಿತ್ರ – ನಂಜುಂಡಿ (೨೦೦೩)
ಸಾಹಿತ್ಯ ಮತ್ತು ಸಂಗೀತ – ಹಂಸಲೇಖ
ಗಾಯಕರು – ಮಧು ಬಾಲಕೃಷ್ಣ,ನಂದಿತ

ಹಾಡು ಕೇಳಿ

ದೀಪದಿಂದ ದೀಪವ ಹಚ್ಚಬೇಕು ಮಾನವ
ಪ್ರೀತಿಯಿಂದ ಪ್ರೀತಿ ಹಂಚಲು
ಮನಸಿನಿಂದ ಮನಸನು ಬೆಳಗಬೇಕು ಮಾನವ
ಮೇಲು ಕೀಳು ಭೇದ ನಿಲ್ಲಲು
ಭೇದವಿಲ್ಲ ಬೆಂಕಿಗೆ ದ್ವೇಷವಿಲ್ಲ ಬೆಳಕಿಗೆ ನೀ ತಿಳಿಯೋ ||ಪ||

ಆಸೆ ಹಿಂದೆ ದುಃಖವೆಂದರು
ರಾತ್ರಿ ಹಿಂದೆ ಹಗಲು ಎಂದರು
ದ್ವೇಷವೆಂದು ಹೊರೆ ಎಂದರು
ಹಬ್ಬವದಕೆ ಹೆಗಲು ಎಂದರು
ಎರಡು ಮುಖದ ನಮ್ಮ ಜನುಮದ ವೇಷಾವಳಿ
ತಿಳಿದು ಹಾಲ್ಬೆಳಕ ಕುಡಿವುದೇ ದೀಪಾವಳಿ ||೧||

ಮಣ್ಣಿನಿಂದ ಹಣತೆಯಾದರೆ
ಬೀಜದಿಂದ ಎಣ್ಣೆಯಾಯಿತು
ಅರಳೆಯಿಂದ ಬತ್ತಿಯಾದರೆ
ಸುಡುವ ಬೆಂಕಿ ಜ್ಯೋತಿಯಾಯಿತು
ನಂದಿಸುವುದು ತುಂಬ ಸುಲಭವೋ ಹೇ ಮಾನವ
ಆನಂದಿಸುವುದು ತುಂಬ ಕಠಿಣವೋ ಹೇ ದಾನವ||೨||

*             *                    *

7 thoughts on “ನಂಜುಂಡಿ – ದೀಪದಿಂದ ದೀಪವ- Deepadinda Deepava”

 1. “ಆಸೆ ಹಿಂದೆ ದು:ಖವೆಂದರು
  ರಾತ್ರಿ ಹಿಂದೆ ಹಗಲು ಎಂದರು
  ದ್ವೇಷವೆಂದು ಹೊರೆ ಎಂದರು
  ಹಬ್ಬವದಕೆ ಹೆಗಲು ಎಂದರು
  ಎರಡು ಮುಖದ ನಮ್ಮ ಜನುಮದ ವೇಷಾವಳಿ
  ತಿಳಿದು ಹಾಲ್ಬೆಳಕ ಕುಡಿವುದೇ ದೀಪಾವಳಿ”

  ‘ಆಸೆ-ದುಃಖ’ ಬರೆದ ಮೇಲೆ ‘ಹಗಲು-ರಾತ್ರಿ’ ಬರಬೇಕಿತ್ತು ಅನ್ನಿಸ್ತು.
  ‘ಹಬ್ಬವದಕೆ ಹೆಗಲು’ ಅಂದ್ರೆ ಏನೂ ಅಂತ ಅರ್ಥ ಆಗ್ಲಿಲ್ಲ.
  ‘ಎರಡು ಮುಖದ…ಜನ್ಮಕ್ಕೆ’ ಏನಾದ್ರೂ ಸಿನಿಮಾದ ಕಾಂಟೆಕ್ಸ್ಟ್ ಇದ್ದಿರಬೇಕು.

  `ಸುಡುವ ಬೆಂಕಿ ಜ್ಯೋತಿಯಾಯಿತು…’ ಪರವಾಗಿಲ್ಲ, ಆದ್ರೂ ‘ಬೀಜ-ಎಣ್ಣೆ’ಯಷ್ಟು ವಾಸ್ತವ ಅನ್ನಿಸಲಿಲ್ಲ.

 2. ‘ಹಬ್ಬವದಕೆ ಹೆಗಲು’ ಅಂದ್ರೆ ….. ಬಹುಶ: ಹಿಂದಿನ ಸಾಲಿನ “ದ್ವೇಷವೆಂದು ಹೊರೆ ಎಂದರು” ಸಾಲಿನೊಂದಿಗೆ ಓದಬೇಕು ಅನ್ನಿಸತ್ತೆ. ದ್ವೇಷದ ಹೊರೆಯನ್ನು ಹಬ್ಬವೆಂಬ ಹೆಗಲು ಹೊತ್ತು ಕಡಿಮೆ ಮಾಡಲಿ ಅಂತ ಅರ್ಥ ಮಾಡಿಕೊಳ್ಳಬಹುದೇನೋ 🙂

 3. ನಂದಿಸುವುದು ಸುಲಭ
  ಆನಂದಿಸುವುದು ಕಠಿಣ
  ಎಂಬ ಮಾತು ದಾನವರಿಗೋ ಶ್ರೀತ್ರಿ ಅವರೆ? 🙂

 4. ಆಹಾ ಆಹಾ ಇದೆಂತಹ ಮಾತುಗಳು

  ಮಣ್ಣಿನಿಂದ ಹಣತೆಯಾದರೆ
  ಬೀಜದಿಂದ ಎಣ್ಣೆಯಾಯಿತು
  ಅರಳೆಯಿಂದ ಬತ್ತಿಯಾದರೆ
  ಸುಡುವ ಬೆಂಕಿ ಜ್ಯೋತಿಯಾಯಿತು

  ಬಹಳ ಒಳ್ಳೆಯ ಸಾಹಿತ್ಯವನ್ನೊದಗಿಸಿದ್ದಕ್ಕೆ ವಂದನೆಗಳು ಮೇಡಂ.

 5. ಸುಂದರವಾದ ಶುಭಾಶಯಕ್ಕಾಗಿ ಧನ್ಯವಾದಗಳು,ತ್ರಿವೇಣಿಯವರೆ!ದೀಪಾವಳಿ ನಿಮಗೆ ಹಾಗು ತುಳಸಿವನದ ಸಂದರ್ಶಕರೆಲ್ಲರಿಗೂ ಹರುಷ ತರಲಿ.

 6. ತುಳಸೀವನದ ಓದುಗರಿಗೆಲ್ಲ
  ದೀಪಾವಳಿಯ ಶುಭಾಶಯಗಳು:

  ಹಬ್ಬಗಳ ಹಾರದಲಿ ಪದಕ ದೀವಳಿಗೆ,
  ದೀಪಗಳ ಬೆಳಕಿನಲಿ ನಗುವಿರಲಿ ಜೊತೆಗೆ;
  ಎಲ್ಲ ಮನೆಗಳ ತುಂಬ ಸುಖಶಾಂತಿಯಿರಲಿ,
  ನಮ್ಮ ಹಾರೈಕೆಗಳು ನಿಮ್ಮೊಡನೆ ಬರಲಿ.

  ನಿಮ್ಮೆಲ್ಲರಿಗೂ ಬೆಳಕಿನ ಹಬ್ಬ ಸಂತಸ ತರಲಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.